ಬೆಂಬಲಿಗರು

ಬುಧವಾರ, ಏಪ್ರಿಲ್ 21, 2021

ಹುಬ್ಬಳ್ಳಿಯ ನೆನಪುಗಳು 4

 ಹುಬ್ಬಳ್ಳಿಯ ನೆನಪುಗಳು ೪ 

ಮೊದಲೇ ತಿಳಿಸಿದಂತೆ ನನಗೆ ಹಾಸ್ಟೆಲ್ ನಲ್ಲಿ ರೂಮ್ ಸಿಗದ ಕಾರಣ  ಕಾಲೇಜು ಸಮೀಪ ಒಂದು ರೂಮು ಹಿಡಿದೆ .ನಮ್ಮ ಊರಿನವರೇ ಆದ  ಕಡೆ೦ಬಿಲ  ಶ್ರೀಪತಿ ನನ್ನ ರೂಮ್ ಮೇಟ್  ಆಗಿ ಸಿಕ್ಕಿದರು .ಸರಳ ಜೀವಿ . 

ಊಟಕ್ಕೆ   ಆಗ ಜನಪ್ರಿಯ ಆಗಿದ್ದ ಮಲ್ಲಿಕಾರ್ಜುನ ಖಾನಾವಳಿ ಗೆ ಹಚ್ಚಿದೆನು .ಅಲ್ಲಿ ತುಂಬಾ ವಿದ್ಯಾರ್ಥಿಗಳು ಬರುತ್ತಿದ್ದ ಕಾರಣ ಮೊದಲು ನಿರಾಕರಿಸಿದರೂ ನನ್ನ ಸಹಪಾಠಿ ವಿವೇಕ ವಾಣಿ (ಅಲ್ಲಿಯೇ ರೂಮಿನಲ್ಲಿ  ಇದ್ದವರು )ಯವರ ಶಿಫಾರಸು ಮೇರೆಗೆ ನನ್ನನ್ನು ಸೇರಿಸಿ ಕೊಂಡರು . ಬೆಳಿಗ್ಗೆ  ಹತ್ತೂವರೆಗೆ ಊಟ ಶುರು ಆಗುತ್ತಿತ್ತು .ಊಟಕ್ಕೆ ಜೋಳದ ರೊಟ್ಟಿ(ಒಂದು ಹೊತ್ತು ಚಪಾತಿ ) ,ಒಂದು ಕಾಳು (ಮಡಿಕೆ ಕಾಳು ಜನಪ್ರಿಯ ),ಒಂದು ಸೊಪ್ಪು ,ಒಂದು ತರಕಾರಿ ಪಲ್ಯ ,ಗುರೆಳ್ಳು ಹಿಂಡಿ  ಚಟ್ನಿಪುಡಿ ,ಅನ್ನ ,ಸಾರು ಮತ್ತು ಮೊಸರು . ಎಷ್ಟು ಬೇಕಾದರೂ ತಿನ್ನ ಬಹುದು . ಅಲ್ಲಿಯ ವಿಭೂತಿ ಧಾರೀ ನೌಕರರು ಮತ್ತು ಜೋಳ ರೊಟ್ಟಿ ತಟ್ಟುವ ಶಬ್ದ ಈಗಲೂ ನೆನಪಿಗೆ ಬರುತ್ತಿದೆ . 

   ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮ ಇಲ್ಲದಿದ್ದ ಕಾರಣ  ಬೆಳಗ್ಗೆ ಕಾಪಿ ಚಾ ತಿಂಡಿ ತೆಗೆದು ಕೊಳ್ಳದೆ ಖಾಲಿ ಹೊಟ್ಟೆಯಲ್ಲಿ ಕ್ಲಾಸ್ ಗೆ ಹೋಗುತ್ತಿದ್ದೆ .ಹತ್ತು ಗಂಟೆಗೆ ವಿರಾಮ ಸಮಯದಲ್ಲಿ ಮೆಸ್ಸಿಗೆ ನಾಗಾಲೋಟ .ಅಲ್ಲಿ ಹೊಟ್ಟೆ ತುಂಬಾ ತಿಂದು ಮತ್ತೆ ರಾತ್ರೆಯ ಊಟ . ಹೀಗೆ ಕೆಲವು ಸಮಯ ನಡೆಯಿತು .ನಡುವೆ ಶ್ರೀಪತಿಯವರಿಗೆ ಹಾಸ್ಟೆಲ್ ರೂಮ್ ಸಿಕ್ಕಿ ಅವರು ಅಲ್ಲಿಗೆ ಹೋದರು .ನಾನು ಖೋಲಿ ಬದಲಿಸಿ ಉಣಕಲ್ ಗುಡ್ಡದ ಕೆಳಗೆ ಕಡಿಮೆ ಬಾಡಿಗೆಯ ಜಾಗಕ್ಕೆ ಬದಲಿಸಿದೆ .ಅಲ್ಲಿ ನನ್ನೊಡನೆ ಮತೊಬ್ಬ ಸಹಪಾಠಿ ಒಬೇದುಲ್ಲಾ ಸೇರಿ ಕೊಂಡರು .ಅವರು ಅಫಘಾನಿ ಸ್ಥಾನದವರು .. ಭಾರತ ಸರಕಾರದ ಕೋಟಾ ದಲ್ಲಿ ಬಂದವರು . ಬುದ್ದಿವಂತ ಮತ್ತು  ಸಜ್ಜನ .ಪಸ್ತುನ್ ಭಾಷೆಯ ಪ್ರಭಾವವಿದ್ದ ಇಂಗ್ಲಿಷ್ ಮಾತನಾಡುತ್ತಿದ್ದನು . ಕ್ಲಾಸ್ ನಲ್ಲಿ ಮುಂದಿನ ಬೆಂಚ್ ನಲ್ಲಿ ಕುಳಿತು , ಆಸಕ್ತಿಯಿಂದ ಪಾಠ ಕೇಳುವನು .ಅರ್ಥವಾಗದಿದ್ದರೆ ಎದ್ದು ಪ್ರಶ್ನೆ ಕೇಳುವನು . ದುರದೃಷ್ಟ ವಶಾತ್ ರಜೆಯಲ್ಲಿ ಊರಿಗೆ ಹೋದವನು ಅಲ್ಲಿ ನಡೆದ ಕ್ರಾಂತಿಯಲ್ಲಿ ಸಿಕ್ಕು ಕೊಂಡಿರಬೇಕು ;ಹಿಂತಿರುಗಿ ಬರಲಿಲ್ಲ . 

ಅಷ್ಟರಲ್ಲಿ ನನಗೆ ಆನಂದ ಹಾಸ್ಟೆಲ್ ನಲ್ಲಿ ರೂಮ್ ಸಿಕ್ಕಿತು .ರೂಮ್ ನಂಬರ್ ೩ .ನನ್ನ ರೂಮ್ ಮೇಟ್  ಜೋಸ್ ಚೆರಿಯನ್ .ಇವರು ಕೂಡಾ ಭಾರತ ಸರಕಾರದ ಕೋಟಾ ದಲ್ಲಿ ಬಂದವರು .ಮಲಯಾಳಿ ,ತಂದೆ ಅಂಡಮಾನ್ ನಲ್ಲಿ ಅರಣ್ಯ ಅಧಿಕಾರಿ ಆಗಿದ್ದರು . ತುಂಬಾ ಒಳ್ಳೆಯವರು  ಮತ್ತು ಸಾಧು . ನಮ್ಮ ಎದುರಿನ ರೂಮ್ ನಲ್ಲಿ ಮಲೇಷ್ಯಾ ದಿಂದ ಬಂದ  ಭಾರತ ಮೂಲದ ರಾಮನಾಥನ್ ,ಭಗವಾನ್ ಸಿಂಗ್ ಮತ್ತು ಮಾರಿಷಿಯಸ್ ನ  ಕಸ್ರತ್ ಸಿಂಗ್ ಎಂಬವರು ಇದ್ದರು . ಭಗವಾನ್ ಸಿಂಗ್ ಮುಂದೆ ಕ್ಲಿನಿಕಲ್  ಪೋಸ್ಟಿಂಗ್ ನಲ್ಲಿ ನನ್ನ ಬ್ಯಾಚ್ ಮೇಟ್  ಆಗಿದ್ದು ಒಳ್ಳೆಯ ಸ್ನೇಹಿತರು ,ಸರಸಿಗಳು .ಈಗಲೂ ಸಂಪರ್ಕ ಇಟ್ಟುಕೊಂಡಿದ್ದು ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿರುವೆನು . 

ನಾನು ರೂಮಿನಲ್ಲಿ ಹೆಚ್ಚು ಓದುತ್ತಿದ್ದುದುದು ಕಡಿಮೆ .ಸಂಜೆ ಕಾಲೇಜು ಲೈಬ್ರರಿ ಯಲ್ಲಿ ಸ್ವಲ್ಪಮಟ್ಟಿನ ಪಠಣ .ತರಗತಿಯಲ್ಲಿ ಮೊದಲನೇ ಬೆಂಚ್ ನಲ್ಲಿ ಕುಳಿತು ಕೊಳ್ಳುತ್ತಿದ್ದ ಕಾರಣ  ಎಟೆಂಟಿವ್  ಆಗಿರ ಬೇಕಿತ್ತು . ಹುಬ್ಬಳ್ಳಿಯಲ್ಲಿ ಇದ್ದ ಸಾರ್ವಜನಿಕ ವಾಚನಾಲಯ ಗಳಿಗೆ ಸದಸ್ಯನಾಗಿ ಕತೆ ಕಾದಂಬರಿ ಇತ್ಯಾದಿ ತಂದು ಓದುತ್ತಿದ್ದೆ . 

ಅದೃಷ್ಟಕ್ಕೆ ನಮಗೆ ಮೊದಲನೇ ಎಂ ಬಿ ಬಿ ಎಸ (ಒಂದೂವರೆ ವರ್ಷ )ಒಳ್ಳೆಯ ಪ್ರಾಧ್ಯಾಪಕರು ಇದ್ದರು . ಅನಾಟಮಿ ಯಲ್ಲಿ ಡಾ  ಥಕ್ಕರ್ ನಾಯ್ಕ್ ,ಡಾ ಪಾರ್ಥಸಾರಥಿ ಎಂಬ ಪ್ರೊಫೆಸ್ಸರ್ ಇದ್ದರು . ಥಕ್ಕರ ನಾಯ್ಕ್  ಎಂಬ್ರಿಯಲಾಗಿ ತಜ್ಞರು ,ಕೋಟ್ ಟೈ ಕಟ್ಟಿ ಬರುವರು , ಆಗಾಗ ವಾಟ್ ಐ ಶೇ ಎಂದು ಟೈ ಮುಟ್ಟಿಕೊಳ್ಳುವರು . ಪಾರ್ಥಸಾರಥಿ  ನಿವೃತ್ತಿ ನಂತರ ಪುನರ್ನೇಮಕ ಗೊಂಡು ಬಂದವರು ,ಅವರಿಗೆ ಮೊಣಕಾಲಿನ ಸಂಧಿ ವಾತ ಇತ್ತು . ಬೋರ್ಡ್ ನಲ್ಲಿ  ಸುಂದರವಾಗಿ ಚಿತ್ರ ಬರೆದು ಪಾಠ ಮಾಡುವರು . ಅನಾಟಮಿ ಡಿಸ್ಸೆಕ್ಷನ್ ಕ್ಲಾಸ್ ಗೆ ಹಲವು ಟ್ಯೂಟರ್ ಗಳು ಬರುತ್ತಿದ್ದರು .

  ಅನಾಟಮಿ  ಡಿಸೇಕ್ಷನ್ ಹಾಲ್ ಗೆ ಮೊದಲು ಪ್ರವೇಶಿಸುವಾಗ ವಿಚಿತ್ರ ಅನುಭವ ,ಎಲ್ಲರಂತೆ ಜೀವನ ಸಾಗಿಸಿ ಮೃತ ಹೊಂದಿದ ಗಂಡು ಮತ್ತು ಹೆಣ್ಣು ಶರೀರಗಳ ಸಾಲಾಗಿ ಮಲಗಿಸಿದ ಶವಗಳನ್ನು ಕಂಡಾಗ ಮೊದಲು 'ಮನುಜ ಶರೀರವಿದೇನು ಸುಖ ಇದ ನೆನೆದರೆ ಘೋರವಿದೇನು ಸುಖ' ;'ಮಾನವಾ ನೀ ಮೂಳೆ ಮಾಂಸದ ತಡಿಕೆ ' ಇತ್ಯಾದಿ ಹಾಡುಗಳು ನೆನಪಾಗುತ್ತಿದ್ದವು . ಫೋರ್ಮಾಲಿನ್ ಘಾಟು ನಾಸಿಕದಲ್ಲಿ  ಹೊಕ್ಕು ದಿನವಿಡೀ ಅದರ ನೆನಪು ತರುವುದು . ಇಲ್ಲಿ ಒಂದು ವಿಷಯ ಜ್ನಾಪಕ ಬರುತ್ತದೆ ಅನಾಟಮಿ ಯ  ಹಳೆಯ ಅಟೆಂಡರ್ ಗಳು (ಡೇವಿಡ್ ಅಂತ ಒಬ್ಬರು ) ಅಂಗ ರಚನಾಶಾಸ್ತ್ರದಲ್ಲಿ ನಿಪುಣರಾಗಿದ್ದು  ಹಲವು ನರ ,ಮಾಂಸ ಖಂಡ ಗಳ ಹೆಸರು ,ಅವುಗಳನ್ನು ನೆಪಪಿಡುವ ನಿಮೋನಿಕ್ಸ್ ಮತ್ತು ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು ಅವರಿಗೆ ಕರತಾಮಲಕ ಆಗಿದ್ದವು . ವಿದ್ಯಾರ್ಥಿಗಳಿಗೆ ಅವರು ಸ್ವಚ್ಛ ಮಾಡಿದ ಎಲುಬು ತಲೆ ಬುರುಡೆ ಇತ್ಯಾದಿ ಮಾರಾಟ ಮಾಡುತ್ತಿದ್ದು  ಒಸ್ಟಿಯಾಲಜಿ  ತರಗತಿಗೆ ಅವುಗಳನ್ನು ಹೊತ್ತುಕೊಂಡು ಹೋಗುವಾಗ  ಮಾಟ ಮಂತ್ರ ಮಾಡುವ ತಾಂತ್ರಿಕರಂತೆ ಕಾಣುತ್ತಿದ್ದೆವು . 

ಡಿಸ್ಸೆಕ್ಷನ್ ನಲ್ಲಿ ನನ್ನ ಬ್ಯಾಚ್ ನಲ್ಲಿ  ಸೊರಬದ ಡಾ ಪರಿಮಳ (ಉತ್ತಮ ಗಾಯಕಿ ,ಈಗ  ಬೆಂಗಳೂರು ಬನ್ನೇರುಘಟ್ಟ ರೋಡ್ ನಲ್ಲಿ ಇರುವ ಪರಿಮಳ ಆಸ್ಪತ್ರೆಯ ಒಡತಿ  ,),ಈಗ ಮುಂಬೈನ ಮುಲುಂಡ್ ನಲ್ಲಿ ಪ್ರಸಿದ್ಧ ಈ ಏನ್ ಟಿ ತಜ್ಞರಾಗಿರುವ  ಬಾರಕೂರು ಮೂಲದ ಡಾ ಜೀವನ್ ರಾಮ ಶೆಟ್ಟಿ ಇದ್ದು . ಶರೀರದ  ಇನ್ನೊಂದು ಪಾರ್ಶ್ವ ದಲ್ಲಿ (ನಮ್ಮ ಎದುರುಗಡೆ )ಈಗ ಬೆಂಗಳೂರಿನ ಮಲ್ಲೇಶ್ವರದಲ್ಲಿ ಪ್ರಸಿದ್ಧ ಗೈನಕೊಲೊಜಿಸ್ಟ್  ಆಗಿರುವ ಡಾ ನಂದಿನಿ ದೇವಿ ,ಅಮೇರಿಕಾ ದಲ್ಲಿ ಆಸ್ಪತ್ರೆ ನಡೆಸುತ್ತಿರುವ  ಡಾ ಕಲ್ಪನಾ ,ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಅರಿವಳಿಕಾ ವಿಭಾಗದ ಮುಖ್ಯಸ್ಥರಾಗಿದ್ದ ಡಾ ರಾಘವೇಂದ್ರ ರಾವ್ ಮತ್ತು ಪ್ರಸ್ತುತ ತಿರುವನಂತಪುರ ರೀಜನಲ್ ಕ್ಯಾನ್ಸರ್ ಸೆಂಟರ್ ನಲ್ಲಿ ಹಿರಿಯ ತಜ್ಞರಾಗಿರುವ ಡಾ ರೇಚಲ್ ಇದ್ದರು.ಪ್ರಸಿದ್ದಿ ಪಡೆಯದವನು ನಾನು ಮಾತ್ರ ಎಂಬ ಬೇಸರ ಇಲ್ಲ .ನಾವು ಮೂವರು ಗ್ರಾಮಾಂತರ ಪ್ರದೇಶ ದಿಂದ ಕನ್ನಡ ಮಾಧ್ಯಮ ಶಾಲೆಯಿಂದ ಬಂದವರು .ಅವರೆಲ್ಲ ಇಂಗ್ಲಿಷ್ ಮೀಡಿಯಂ ನವರು .ಆದರೂ ಒಳ್ಳೆಯ ಮಿತ್ರರಾದರು .(ಮೊದ  ಮೊದಲು ಕನ್ನಡ ಮೀಡಿಯಂ ನವರು ನಾವು toe ಎಂಬುದನ್ನು ಟೊಯೀ  ಎಂದು ಓದುತ್ತಿದ್ದೆವು ). 

ಅನಾಟಮಿ  ಡಿಸ್ಸೆಕ್ಷನ್ ಗೆ  ಕನಿಂಗ್ ಹ್ಯಾಮ್ ಬರೆದ ಎಂಬ ಮೂರು ಸಂಪುಟದ ಕೈಪಿಡಿ ಮತ್ತು ಪಠ್ಯ ಪುಸ್ತಕ ಗ್ರೇ ಅನಾಟಮಿ .ಇದು ಬೃಹತ್ ಗ್ರಂಥ ಆಗಿದ್ದು ಹೊರಲಾಗದೆ ತುಂಡು ತುಂಡು ಮಾಡಿ ಕೊಂಡು ಓದುತ್ತಿದ್ದೆವು .ನೂರಾರು ನರಗಳು,ಮಾಂಸ ಖಂಡಗಳು.ರಕ್ತ ನಾಳಗಳು,ಮೂಳೆಗಳು ,ರಂದ್ರಗಳು ಮತ್ತು ಅಂಗೋಪಾಂಗಗಳು ಇವುಗಳ ನಾಮ ಸ್ಮರಣೆ ಮಾಡಿ ಸೋತು ಸುಣ್ಣ ಆಗುತ್ತಿದ್ದೆವು .ಈಗ ಅದನೆಲ್ಲಾ  ಹೃಸ್ವ ಗೊಳಿಸಿದ್ದಾರೆ .

  ಫಿಸಿಯೋಲಾಜಿ  ಪ್ರೊಫೆಸ್ಸರ್ ಡಾ ನಾರಾಯಣ ಶೆಟ್ಟಿ ನಾನು ಕಂಡ ಅತ್ಯುತ್ತಮ ಗುರುಗಳಲ್ಲಿ ಒಬ್ಬರು .ಅವರ ಕ್ಲಾಸ್ ಎಂದರೆ ನಮಗೆ ಹಬ್ಬ . ನರ ಮಂಡಲ ಅವರ ಮೆಚ್ಚಿನ  ವಿಷಯ .ಕಬ್ಬಿಣದ ಕಡಲೆಯಂತೆ ಇರುವ ಅದನ್ನು ಕಳೆದ ಬಾಳೆಯ ಹಣ್ಣಿನಂದದಿ ಮಾಡುತ್ತಿದ್ದರು . ಕಲ್ಲಚ್ಚಿನ ಅವರ ನೋಟ್ಸ್ ವಿದ್ಯಾರ್ಥಿಗಳಲ್ಲಿ ಜನಪ್ರಿಯ ವಾಗಿತ್ತು . ಅವರು ನೋಡಲು ಗಂಭೀರ ;ತಾವು ನಗದೇ ಜೋಕ್ ಮಾಡುವರು . ಗಂಭೀರವಾದ ತರಗತಿಯ ಅಂತ್ಯದಲ್ಲಿ" Now you can relax but not your sphincters"( ಭಾವಾರ್ಥ :ಈಗ ನೀವು ವಿಶ್ರಮಿಸಿ ಆದರೆ ನಿಮ್ಮ ಮಲ ಮೂತ್ರ ವನ್ನು  ಹೊರ ಹೋಗದಂತೆ ಹಿಡಿವ ಮಾಂಸಖಂಡಗಳನ್ನು ಅಲ್ಲ ).ಅವರ ಸ್ಲೈಡ್ ಶೋ ದಲ್ಲಿ ಯಾವಾಗಲೂ ಒಂದು ಖಾಲಿ ಸ್ಲೈಡ್ ಕೊನೆಗೆ ಇರುತ್ತಿದ್ದು ನಿಮ್ಮ ಮೆದುಳಿನ ಸ್ಥಿತಿ ಈಗ ಹೀಗೆ ಇದೆ ಎನ್ನುವರು . ಮೆದುಳಿನ ಫಿಸಿಯೋಲಾಜಿ ಪಾಠ ಮಾಡುವಾಗ "ನಾನು  ಅನಾಟಮಿ ಪ್ರೊಫೆಸರ್ ಗೆ  ಏಕಕಾಲಕ್ಕೆ ಮೆದುಳಿನ ಅನಾಟಮಿ ಪಾಠ ಕೂಡಾ ಮಾಡಿರಿ .ಆಗ ವಿದ್ಯಾರ್ಥಿಗಳಿಗೆ ಸುಲಭ ಆಗುವುದು ಎಂದುದಕ್ಕೆ "We don't have enough brains (read brain specimens )"ಎಂದು ಪನ್  ಮಾಡುತ್ತಿದ್ದರು 

ಡಾ ನಾರಾಯಣ ಶೆಟ್ಟಿ ಯವರ ಬಗ್ಗೆ   ಇನ್ನೊಂದು ನೆನಪು .ಆಗ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ  ಸರ್ಕಾರದ ಆದೇಶದಂತೆ ಮುಂಜಾನೆ ಸ್ಪೆಷಲ್ ಕ್ಲಾಸ್ ನಡೆಸುತ್ತಿದ್ದರು . ನಮ್ಮ ಈ ಗುರುಗಳು  ಈ ತರಹ ವಿದ್ಯಾರ್ಥಿಗಳನ್ನು ವಿಂಗಡಿಸಿದರೆ ಚೆನ್ನಾಗಿ ಇರುವುದಿಲ್ಲ ಮತ್ತು  ಇಂತಹ ವಿದ್ಯಾರ್ಥಿ ಈ ಪಂಗಡದವನು ಎಂದು ಜಾಹೀರು ಆಗುವುದು ಎಂದು ಎಲ್ಲಾ ಮಕ್ಕಳನ್ನೂ ವಿಶೇಷ ತರಗತಿಗೆ ಬರಬಹುದು ,ಹಾಜರಿ ಇಲ್ಲ ಎಂದು ಹೇಳುವರು .ಒಬ್ಬನೂ ಬಿಡದೆ ಆ ಕ್ಲಾಸ್ ಗಳಿಗೂ ಹೋಗುವರು . ಅವರ  ಪ್ರವಚನದ ಮಟ್ಟ ಮತ್ತು ಆಕರ್ಷಣೆ ಹಾಗಿತ್ತು . 

ನಾನು ಅವರ ತರಗತಿಯಲ್ಲಿ ಮುಂದಿನ ಬೆಂಚ್ ನಲ್ಲಿ ಕುಳಿತು ಕೊಳ್ಳುತ್ತಿದ್ದು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೆ . ನಾನು ಜಾಣ ಹುಡುಗ ಎಂದು ಅವರು ತಿಳಿದಿದ್ದರ ಬೇಕು .ಅಂತಿಮ ಪರೀಕ್ಷೆಯಲ್ಲಿ ಅವರು ಇಂಟರ್ನಲ್ ಎಕ್ಸಾಮಿನರ್ . ವೈವಾ ದಲ್ಲಿ  (ಈ ಹುಡುಗ ಜಾಣ )ನೀವೇ ಪ್ರಶ್ನೆ ಕೇಳಿರಿ ಎಂದು ಹೊರಗಿನಿಂದ ಬಂದ  ಪರೀಕ್ಷಕರಲ್ಲಿ ಕೇಳಿಕೊಂಡರು .ಅವರು ಕೇಳಿದ ಮೊದಲ ಸರಳ ಪ್ರಶ್ನೆಗೇ  ನಾನು ಸರಿಯಾಗಿ ಉತ್ತರಿಸಲಿಲ್ಲ . ಗುರುಗಳು ನನ್ನ ಮೇಲೆ ಇಟ್ಟ  ವಿಶ್ವಾಸ ಉಂಟು ಮಾಡಿದ ಉದ್ವೇಗ ಕಾರಣ ಇರ ಬಹುದು . ಪರೀಕ್ಷೆಯಲ್ಲಿ ನಾನು ಒಳ್ಳೆಯ ದರ್ಜೆಯಲ್ಲಿ ಪಾಸ್ ಆದರೂ ಇಂದಿಗೂ ನನ್ನ ಪ್ರಾಧ್ಯಾಪಕರ ನಿರೀಕ್ಷೆ  ಹುಸಿ ಮಾಡಿದೆನಲ್ಲಾ ಎಂದು ಅಜ್ಜನಿಗೆ ಬೆಲ್ಲ ಕೊಡದೆ ಮುಂದೆ ಮರುಗಿದ ಮಾಸ್ತಿ ಯವರಂತೆ ನನ್ನ ಮನಸಿನಲ್ಲಿ ಈಗಲೂ ಇದೆ .. 

  ಇನ್ನು  ಫಿಸಿಯೋಲಾಜಿ  ವಿಭಾಗದಲ್ಲಿ ಡಾ ದ್ರು ರುವನಾರಾಯಣ ,ಡಾ ಪಾರ್ವತಿ ಮತ್ತು ಡಾ ಅಮೃತಾ ರೈ  ಎಂಬ  ಪ್ರಾಧ್ಯಾಪಕರೂ ಇದ್ದು ಎಲ್ಲರೂ ಅಧ್ಯ ಯನಶೀಲರು   ,ಮತ್ತು  ವಿದ್ಯಾರ್ಥಿ ಸ್ನೇಹಿ ಆಗಿದ್ದು ಡಿಪಾರ್ಟ್ಮೆಂಟ್ ನ ಘನತೆ ಹೆಚ್ಚಿಸಿದ್ದರು . 

ಫಿಸಿಯೋಲಜಿ  ಪ್ರಾಕ್ಟಿಕಲ್ಸ್ ನಲ್ಲಿ ಸ್ಟಾರ್ಲಿಂಗ್  ಶೆರ್ರಿಂಗ್ಟನ್ ಡ್ರಮ್ ಎಂಬ ಮಸಿ ಬಳಿದ  ಡ್ರಮ್ ನಲ್ಲಿ ಕಪ್ಪೆಯ ಮಾಂಸ ಖಂಡಗಳಿಗೆ ವಿದ್ಯುತ್ ಪ್ರಚೋದನೆ ಕೊಟ್ಟು ಅವುಗಳ ಸಂಕುಚನ ವಿಕಸನ ರೆಕಾರ್ಡ್ ಮಾಡುವದು ಇತ್ತು .ಇದಕ್ಕೆದೊಡ್ಡ  ಜೀವಂತ ಕಪ್ಪೆಗಳನ್ನು  ನಮ್ಮ ಕೈಗೆ ಕೊಡುತ್ತಿದ್ದು ,ಅದರ ಕುತ್ತಿಗೆಗೆ ಸೂಜಿಯಲ್ಲಿ ಚುಚ್ಚಿ ಪ್ರಜ್ಞೆ ತೆಗೆಯುತ್ತಿದ್ದೆವು .ಇದು ಬಹಳ ಸಂಕಟದ ಕಾರ್ಯ ಆಗಿದ್ದು ಅಟೆಂಡರ್ ಗಳಿಗೆ ಹಾಗೆ ಮಾಡಿಕೊಡಲು ದುಂಬಾಲು ಬೀಳುತ್ತಿದ್ದೆವು . ಮಸಿ ಡ್ರಮ್ ನಿಂದ ನಮ್ಮ ಬಿಳಿ ಏಪ್ರಾನ್ ಗೆ  ಕರಿ ಹಿಡಿದು ಹಿಂದಿನ ಕಾಲದ ಅಡಿಗೆ ಮನೆಯಿಂದ ಬಂದವರಂತೆ ಕಾಣುತ್ತಿದ್ದೆವು 

ಇನ್ನು  ಬಯೋ ಕೆಮಿಸ್ಟ್ರಿ ಗೆ ಡಾ ಅನಂತ ಪದ್ಮನಾಭ (ಅಲ್ಲ ಸುಬ್ಬ ರಾವ್ ಸರೀ ನೆನಪಿಲ್ಲ )ರಾವ್ ಎಂಬ ಪ್ರಾಧ್ಯಾಪಕರು ,,ಸರಸಿಗಳು ,ಜೋಕ್ ಮಾಡುತ್ತಾ ನಗಿಸುವರು ..  

ಹುಡುಗಿಯರಿಗೆ ಆಗ ಕಾಲೇಜಿನಲ್ಲಿ ಅನಧಿಕೃತ  ಡ್ರೆಸ್ ಕೋಡ್ ಇದ್ದು ಸೀರೆ ರವಿಕೆ ಕಡ್ಡಾಯ ಇತ್ತು .ಸಣ್ಣ ಸಣ್ಣ ಹುಡುಗಿಯರು ಕೂಡಾ ಕಷ್ಟ ಪಟ್ಟು   ಸೀರೆ ಉಟ್ಟು ಬರುತ್ತಿದ್ದು , ವೈದ್ಯ ವೃತ್ತಿಯ ಗಾಂಭೀರ್ಯ ಪಡೆಯುತ್ತಿದ್ದರು . ನಮ್ಮ ತರಗತಿಯಲ್ಲಿ ಎರಡು ಸಾಲು ಹುಡುಗರು ಮತ್ತು ಒಂದು ಸಾಲು ಹುಡುಗಿಯರು ಇದ್ದರು .ಹಲವು ವರ್ಷಗಳ ನಂತರ ನಾನು ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕನಾದಾಗ  ಈ ದಾಮಾಶಯ  ಉಲ್ಟಾ ಆಗಿ ಹುಡುಗಿಯರೇ ಹೆಚ್ಚು ಇರುತ್ತಿದ್ದರು ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ