ಬೆಂಬಲಿಗರು

ಭಾನುವಾರ, ಏಪ್ರಿಲ್ 25, 2021

ಹುಬ್ಬಳ್ಳಿ ನೆನಪುಗಳು 6 ಕ್ಲಿನಿಕಲ್ ಪೋಸ್ಟಿಂಗ್

              ಹುಬ್ಬಳ್ಳಿ ನೆನಪುಗಳು 6   ಆಸ್ಪತ್ರೆ ಕಲಿಕೆ (ಕ್ಲಿನಿಕಲ್ ಪೋಸ್ಟಿಂಗ್ )

 He who studies medicine without books sails an uncharted sea, but he who studies medicine without patients does not go to sea at all. William Osler.

   

ಒಂದೂವರೆ ವರ್ಷದ ಧೀರ್ಘ ಅಧ್ಯಯನ ಬಳಿಕ ನಾವು ಕ್ಲಿನಿಕಲ್ ವಿದ್ಯಾರ್ಥಿಗಳಾದೆವು. ಆಸ್ಪತ್ರೆ ಒಳಗೆ ನಮಗೆ ಪ್ರವೇಶ . ಉರಗ ಭೂಷಣ ಶಿವನಂತೆ ಸ್ಟೇಥೋಸ್ಕೋಪ್ ಧರಿಸಿ ,ಕೋಟ್ ನ ಪಾಕೆಟ್ ನಲ್ಲಿ  ಒಂದು ಮೊಣಕಾಲ ಚಮ್ಮಟಿ (knee hammer),ಪೆನ್ ಟಾರ್ಚ್,ಅಳೆಯುವ ಟೇಪ್ ಧಾರಿಗಳಾಗಿ ಬಲಗಾಲು ಒಳಗಿಟ್ಟು ಆಸ್ಪತ್ರೆ ಪ್ರವೇಶಿಸುವಾಗ ಆಗಲೇ ವೈದ್ಯರಾದ ಸಂತೋಷ . 

ಆದರೆ ಜ್ಯೂನಿಯರ್  ಮೆಡಿಕೊ ಗಳಾದ ನಮ್ಮನ್ನು ವಾರ್ಡ್ ನರ್ಸ್ ಗಳು ಕನಿಕರದಿಂದ ಮತ್ತು ಬಹಳಷ್ಟು ರೋಗಿಗಳು ಅನುಮಾನದಿಂದ ನೋಡಿದಾಗ ನಮಗೆ ನಾವು ನಡೆಯಲಿರುವ ದಾರಿ ಹೂವ ಹಾಸು ಅಲ್ಲ ಮತ್ತು ಬಲು ದೂರ ಎಂಬ ವಾಸ್ತವ ಬಹು ಬೇಗ ಮನವರಿಕೆ ಆಯಿತು . ಮೆಡಿಸಿನ್ ಪೊಸ್ಟಿಂಗ್ಸ್ ನಲ್ಲಿ  ಕನ್ನಿ0ಗ್ ಹ್ಯಾಮ್ ವಿರಚಿತ ಕೈಪಿಡಿ  ಮತ್ತು ಸರ್ಜರಿ ಯಲ್ಲಿ ಡಾ ದಾಸ್ ಅವರದ್ದು .

ಬಹಳ ಜನರು  ಆ ಆಸ್ಪತ್ರೆ ಬೇಡ ,ಅಲ್ಲಿ ಕಲಿಯುವ ಡಾಕ್ಟರರು ,ಹೌಸ್ ಸರ್ಜನ್ ,ಪಿ ಜಿ ಗಳು ಮದ್ದು ಕೊಡುವುದು ,ಆಪರೇಷನ್ ಮಾಡುವುದು ಎಂದು ಮೂಗು ಮುರಿಯುವರು .ಅಮೆರಿಕಾ ದೇಶದಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ ಇಂತಹ ಅಸ್ಪ್ತ್ರೆಗಳಲ್ಲಿ ಯೇ (ನುರಿತ ವೈದ್ಯರು ಮಾತ್ರ ಇರುವ ಆಸ್ಪತ್ರೆಗಳಿಗೆ ಹೋಲಿಸಿದರೆ )ಮರಣ ಪ್ರಮಾಣ ಕಡಿಮೆ ಮತ್ತು ಗುಣಮುಖ ರಾಗುವವರ  ಸಂಖ್ಯೆ ಅಧಿಕ ಎಂದು ಕಂಡು ಬಂದಿದೆ . ಯಾಕೆಂದರೆ ಬಹಳಷ್ಟು ವಿದ್ಯಾರ್ಥಿ ವೈದ್ಯರು ತಮ್ಮ ಅನನುಭವದಿಂದ ತೊಂದರೆ ಬರದಂತೆ ವಿಶೇಷ ಅಧ್ಯಯನ ಮಾಡುವರಲ್ಲದೆ  ಚಿಕಿತ್ಸೆಗೆ ರೋಗಿಯ ಸ್ಪಂದನೆ ಬಗ್ಗೆ ಹೆಚ್ಕು ಬಾರಿ ಅವಲೋಕನ ನಡೆಸುವರು .

  ವಾರ್ಡ್ ನಲ್ಲಿ ನಾವು ರೋಗಿಯ ರೋಗ (ಈಗಿನ ಮತ್ತು ಹಿಂದಿನ )ಚರಿತ್ರೆ ,ಕುಟುಂಬ ರೋಗ ಮತ್ತು ಚಿಕಿತ್ಸಾ ವಿವರ ಎಲ್ಲಾ  ಹಾಕಿ ಅದರ ಆಧಾರದ ಮೇಲೆ ಅಂಗಾಂಗಗಳ ಪರೀಕ್ಷೆಯ ಆದ್ಯತೆ ನಿರ್ಧರಿಸುವೆವು .ಉದಾಹರಣೆಗೆ ಹೊಟ್ಟೆ ನೋವು ಮತ್ತು ವಾಂತಿ ಎಂದು ಬಂದರೆ ಉದರ ಪರೀಕ್ಷೆ .ಆದರೆ ಎಲ್ಲಕ್ಕೂ ಮೊದಲು ಸಾಮಾನ್ಯ ಶರೀರ ಪರೀಕ್ಷೆ ಮತ್ತು ಕೊನೆಗೆ ಸರ್ವಾಂಗ ಪರೀಕ್ಷೆ ಮಾಡಬೇಕು .

ಸಾಮಾನ್ಯ ಪರೀಕ್ಷೆಯ ವಿವರ ಈ ರೀತಿ ಇರುವುದು . "ಮಧ್ಯ ವಯಸ್ಸಿನ ಸಾಮಾನ್ಯ ಮೈಕಟ್ಟು ಮತ್ತು ಬಡ  ಆಹಾರ ಪೋಷಣೆ ಇರುವ ವ್ಯಕ್ತಿ ,ನಾಡಿ  ನಿಮಿಷಕ್ಕೆ ೭೪ ,ನಿಯಮಿತ ,ಸರಿಯಾದ ಪರಿಮಾಣ ,ಮತ್ತು ಎಲ್ಲಾ ನಾಡಿಗಳು ಸಮನಾಗಿ ಸಿಗುವವು ,ಉಷ್ಣತೆ ೯೮.೬  ಫೆ ., ರಕ್ತಹೀನತೆ ಮತ್ತು ಕಾಮಾಲೆ ಇಲ್ಲ ,ಕೈಕಾಲ ಬೆರಳಲ್ಲಿ ಉಗುರ ಬಾಗುವಿಕೆ ಅಥವಾ ತಟ್ಟೆಯಾಕಾರ ಇಲ್ಲ . ಶರೀರದಲ್ಲಿ ಗಣನೀಯ ದುಗ್ಧ ಗ್ರಂಥಿಗಳ  ಊತ ಇಲ್ಲ "

ಮುಖ್ಯ ಅಂಗ ಪರೀಕ್ಷೆ ನಿರೀಕ್ಷಣೆ ,ಸ್ಪರ್ಶ ,ಮರ್ದನ ಮತ್ತು ಶ್ರವಣ ಈ ಆರ್ಡರ್ ನಲ್ಲಿಯೇ ನಡೆಸ ಬೇಕು .. ನಿರೀಕ್ಷಣೆಗೆ ಕಣ್ಣು ಮತ್ತು ಮೆದುಳು (ಮನವರಿಯದುದ ಕಣ್ಣು ನೋಡದು Eyes don't  see what mind doesn't know ಎಂಬುದು ವೈದ್ಯ ಶಾಸ್ತ್ರದ ಪ್ರಸಿದ್ಧ ನುಡಿಗಟ್ಟು ),ಸ್ಪರ್ಶಕ್ಕೆ ಅಂಗೈ ,ಮರ್ದನಕೆ ಬೆರಳುಗಳು ,ಶ್ರವಣಕ್ಕೆ ಸ್ಟೆಥೋಸ್ಕೋಪ್ .. 

ಉದರ ಪರೀಕ್ಷಾ ವರದಿ ಈ ಪರಿ ಇರುವುದು . ಹೊಟ್ಟೆಯ ಆಕಾರ ಸಾಮಾನ್ಯ ವಾಗಿದ್ದು ಉಸಿರಾಟದೊಡನೆ  ಎಲ್ಲಾ  ಭಾಗಗಳೂ ಒಂದೇ ತರನಾಗಿ ಮೇಲೆ ಕೆಳಗೆ ಹೋಗುತ್ತಿವೆ .ಹೊಕ್ಕುಳು ಮಧ್ಯ ಭಾಗದಲ್ಲಿ ಇದ್ದು ,ಉದರದ ಮೇಲ್ಮೈ ಯಲ್ಲಿ ಅಭಿಧಮನಿ ಗಳು (ಸಾಮಾನ್ಯರ ಭಾಷೆಯಲ್ಲಿ ನರ )ಉಬ್ಬಿ ಕಾಣುವುದಿಲ್ಲ ಮತ್ತು ಕರುಳಿನ ಚಲನೆ  ಕಾಣುವುದಿಲ್ಲ . ಉದರದ ಸುತ್ತಳತೆ --- ಇಷ್ಟು ಇದೆ 

ಮುಟ್ಟಿ ನೋಡಿದಾಗ ಲಿವರ್ ಪಕ್ಕೆಲುಬಿನಿಂದ ಎರಡು ಇಂಚು ಕೆಳಗೆ ಕೈಗೆ ಸಿಗುವುದು ,ಗಟ್ಟಿಯಾಗಿದ್ದು ,ಸ್ಪರ್ಶಿಸಿದಾಗ ವೇದನೆ ಇದೆ . 

ಮರ್ದನದಲ್ಲಿ ಲಿವರಿನ  ಅಳತೆ ---- ಇಷ್ಟು ಇದೆ . ದ್ರವಶೇಖರಣೆ ಲಕ್ಷಣಗಳು ಇಲ್ಲ . 

ಶ್ರವಣದಲ್ಲಿ  ಸಾಮಾನ್ಯ ಕರುಳಿನ ಚಲನಾ  ದನಿ ಕೇಳಿಸುವುದು .ಲಿವರ್ ನ ಮೇಲೆ ಅನ್ಯ ಶಬ್ದಗಳು ಇಲ್ಲ . 

ಹೆರ್ನಿಯಾ ಉಂಟಾಗ ಬಲ್ಲ ಸ್ಥಳಗಳು ಸಾಮಾನ್ಯ ವಾಗಿ ಇದ್ದು ವೃಷಣ ಮತ್ತು ವೃಷಣ ಚೀಲಗಳು ನಾರ್ಮಲ್ ಇವೆ . ಉದರ ಪರೀಕ್ಷೆ   ಜನನಾಂಗ ಮತ್ತು ತೊಡೆ ಬುಡ ಪರೀಕ್ಷೆಯ ಹೊರತು ಪೂರ್ಣವಾಗದು ಎಂದು ಪುನಃ ಪುನಃ ಕಲಿತು ,ಕಲಿಸಿದ್ದರೂ ಈಗಲೂ ಬೇರೆ ಬೇರೆ ಕಾರಣಗಳಿಂದ ಅದು ಬಿಟ್ಟು ಹೋಗುವುದು .ಬಹಳ ವಿದ್ಯಾರ್ಥಿಗಳು ಈ ಲೋಪಕ್ಕಾಗಿ  ಅನುತ್ತೀರ್ಣ ಆದದ್ದುಂಟು . 

ಆಮೇಲೆ  ಶ್ವಾಸ ಕೋಶ ,ಹೃದಯ ,ನರಾಂಗ ಪರೀಕ್ಷೆಯಲ್ಲಿ ವಿಶೇಷವೇನೂ ಕಂಡು ಬರುವುದಿಲ್ಲ . 

ನನ್ನ  ಪೂರ್ವಭಾವೀ  ರೋಗ ನಿದಾನ (ಡಯ ಗ್ನೋಸಿಸ್ ) ಅಮೀಬಿಕ್ ಲಿವರ್ ಕಾಯಿಲೆ . 

ಮಾಡಬೇಕಾದ  ಪರೀಕ್ಷೆಗಳು . 

ಆಗೆಲ್ಲಾ ಸ್ಕ್ಯಾನ್ ಇರಲಿಲ್ಲ ,ನಮ್ಮ ಅನುಭವ ಮತ್ತು ರೋಗಿಯ ಕೂಲಂಕುಷ ಪರೀಕ್ಷೆಗೆ ಹೆಚ್ಚಿನ ಮಹತ್ವ ಇತ್ತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ