ಬೆಂಬಲಿಗರು

ಮಂಗಳವಾರ, ಏಪ್ರಿಲ್ 27, 2021

ಹುಬ್ಬಳ್ಳಿ ದಿನಗಳು 11

  ಹುಬ್ಬಳ್ಳಿ ದಿನಗಳು 11

ನಮ್ಮ ಫೈನಲ್ ಎಂ ಬಿ ಬಿ ಎಸ್ 1980 -81 ರಲ್ಲಿ ಆಗಿದ್ದು ನಿರ್ಣಾಯಕ ಆಗಿತ್ತು .ನಾವೆಲ್ಲ ಅದರ  ತಯಾರಿಯಲ್ಲಿ ಇದ್ದೆವು . 

ಅದೇ ವರ್ಷ ಕೆಲವು ಪ್ರಮುಖ ಘಟನೆಗಳು ನಡೆದವು .

ಒಂದು ಗೋಕಾಕ ಚಳುವಳಿ .ಕರ್ನಾಟಕದಲ್ಲಿ ಶಾಲೆಗಳಲ್ಲಿ ಕನ್ನಡವೇ ಒಂದನೇ ಭಾಷೆ ಆಗಿರಬೇಕು ಎಂಬ ಡಾ ವಿ ಕೃ ಗೋಕಾಕ ಸಮಿತಿ ಕೊಟ್ಟ ತೀರ್ಮಾನ ಜ್ಯಾರಿಗೆ ತರಲು ಆಗ ಮುಖ್ಯ ಮಂತ್ರಿ ಆಗಿದ್ದ  ಶ್ರೀ ಗುಂಡೂ ರಾವು ಸರ್ಕಾರ ಮೀನ ಮೇಷ ನೋಡಿದಾಗ ರಾಜ್ಯದಾದ್ಯಂತ ನಡೆದ ಚಳುವಳಿ . ವರನಟ ಡಾ ರಾಜ್ ಕುಮಾರ್ ಕೂಡಾ ಭಾಗವಸಿದ್ದುದು ವಿಶೇಷ .ಕೊನೆಗೆ ಸರಕಾರ ಮಣಿಯಿತು .

ಇನ್ನೊಂದು ನರಗುಂದದ ರೈತ ಬಂಡಾಯ . ನರಗುಂದ ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ಅಲ್ಲಿಯ ಅರಸ ಬಾವು ಸಾಹೇಬ ಬಾವೆ ಸಾರಿದ ಬಂಡಾಯದಿಂದ ಪ್ರಸಿದ್ದವಾದ ಸ್ಥಳ . ಇಲ್ಲಿಯ ರೈತರು ಮಲಪ್ರಭಾ ನೀರಾವರಿ ತೆರಿಗೆ ಎಂದು ಕಟ್ಟಿದರೂ ಸಾಕಷ್ಟು ನೀರು ಸಿಗುವುದಿಲ್ಲ ಎಂದು ಚಳವಳಿ ಮಾಡುತ್ತಿದ್ದರೂ ಸರಕಾರ ಕ್ಯಾರೇ ಎನ್ನಲಿಲ್ಲ .
ಅಂದು 1980ರ ಜುಲೆ 21, ಆಗಿನ ತಹಸೀಲ್ದಾರ ವರೂರ ಅವರು ಕಚೇರಿಗೆ ಬಂದರು. ರೈತರು ಕಚೇರಿ ಬಾಗಿಲು ಮುಚ್ಚಿ, ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಅರೆಬೆತ್ತಲೆಯಾಗಿ ಅಡ್ಡ ಮಲಗಿದರು. ಹೋಗುವುದಾದರೆ ನಮ್ಮನ್ನು ತುಳಿದುಕೊಂಡ ಹೋಗಿ ಎಂದು ಎಚ್ಚರಿಸಿದರು. ತಹಸೀಲ್ದಾರ  ಪ್ರತಿಭಟನಾ ನಿರತ ಅರೆಬೆತ್ತಲೆ ರೈತರನ್ನು ತುಳಿದುಕೊಂಡು ಕಚೇರಿ ಪ್ರವೇಶಿಸಿದ್ದು ರೆತರನ್ನು ಕೆರಳಿಸಿತು. ಆವೇಶ ಭರಿತ ರೈತರು ತಹಸೀಲ್ದಾರರನ್ನು ಹೊರಗೆಳೆದು ಥಳಿಸಿದರು. ಕಚೇರಿ ಒಳಗೆ ನುಗ್ಗಿದ ರೈತರು ಸಿಕ್ಕಿದ್ದನ್ನು ಕಿತ್ತೆಸೆದರು. ಕಿಟಕಿ,ಬಾಗಿಲು ಪುಡಿಪುಡಿಯಾದವು, ಅಲ್ಲಿಯೆ ಇದ್ದ ಅಬಕಾರಿ ಇಲಾಖೆಯಲ್ಲಿನ ಸರಾಯಿ ಟ್ಯಾಂಕಗಳನ್ನು ಒಡೆದು ಅದರಿಂದಲೆ ಕಚೇರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟರಲ್ಲಿ ಬೆರಳೆಣಿಕೆಯಲ್ಲಿದ್ದ ಪೊಲೀಸರು ರೈತರ ಮೇಲೆ ಲಾಠಿ ಬೀಸಿದರು. ಆದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ರೈತರ ಮೇಲೆ ಪಿಎಸ್‌ಐ ಗುಂಡು ಹಾರಿಸಿದನು. ಆಗ ಚಿಕ್ಕನರಗುಂದ ಗ್ರಾಮದ ಯುವ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿಗೆ ಬಲಿಯಾದರು. ರೈತನ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಕ್ರೋಶಗೊಂಡ ರೈತರು ಸಿಕ್ಕ ಸಿಕ್ಕ ಪೋಲಿಸರನ್ನು ಮನಬಂದಂತೆ ಥಳಿಸಿ ಸಾಯಿಸಿದರು. ಈ ದುರ್ಘಟನೆ ಸುದ್ದಿ ನವಲಗುಂದಕ್ಕೂ ಹಬ್ಬಿದಾಗ ಪ್ರತಿಭಟನಾ ರೈತರು ಪೊಲೀಸರ ವಿರುದ್ಧ ಬಂಡಾಯ ಎದ್ದರು. ಅಲ್ಲಿಯೂ ಓರ್ವ ರೈತ ಗುಂಡಿಗೆ ಬಲಿಯಾಗುವ ಮೂಲಕ ರೈತ ಕ್ರಾಂತಿಯೇ ನಡೆಯಿತು. 

ನಾವು ಆಗ ಸರ್ಜರಿ ಫೈನಲ್ ವರ್ಷದ ಪೋಸ್ಟಿಂಗ್ ನಲ್ಲಿ ಇದ್ದು ನೂರಾರು ಗಾಯಾಳುಗಳನ್ನು  ಕೆ ಎಂ ಸಿ ಆಸ್ಪತ್ರೆಗೆ ತಂದಿದ್ದರು ,ಹಗಲೂ ರಾತ್ರಿ ವೈದ್ಯರು ,ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.ರಕ್ತ ದಾನ ಮಾಡಿದರು .ತಲೆಗೆ ಏಟು ಬಿದ್ದು ಪ್ರಜ್ನಾಹೀನ ರಾದ ಪೋಲೀಸು ಮತ್ತು ರೈತರ ತಲೆಯೊಳಗೆ ಏನಾಗಿದೆ ಎಂದು ತಿಳಿಯಲು ಆಗ ಸಿ ಟಿ ಸ್ಕ್ಯಾನ್ ಇರಲಿಲ್ಲ .ತಲೆ ಬುರುಡೆ  ಓಪನ್ ಮಾಡಿಯೇ ತಿಳಿಯ ಬೇಕಿತ್ತು .ಬುರುಡೆ ಕಟ್ ಮಾಡಲು ಈಗಿನ ಪರಿಷ್ಕೃತ  ಉಪಕರಣಗಳೂ ಇರಲಿಲ್ಲ . ಸುಧಾರಿತ ಉಳಿ ಮತ್ತು ಚಮ್ಮಟಿ ಉಪಯೋಗಿಸುತ್ತಿದ್ದ ನೆನಪು . 

ಈ ಚಳುವಳಿ ಗುಂಡೂ ರಾಯರಿಗೆ ರಾಜಕೀಯವಾಗಿ ವಾಟರ್ಲೂ ಆಗಿ ಮುಂದಿನ ಚುನಾವಣೆ ಯಲ್ಲಿ ಸೋತವರು ಮೇಲೆ ಎಳಲೇ ಇಲ್ಲ.

ಮೂರನೆಯದು ಸರ್ಕಾರಿ ವೈದ್ಯಕೀಯ ವಿದ್ಯಾರ್ಥಿಗಳ ಚಳುವಳಿ .

ನಾನು ಹಿಂದೆಯೇ ಬರೆದಂತೆ ಸರಕಾರ ತಾನು  ನಡೆಸುತ್ತಿರುವ ಮೆಡಿಕಲ್ ಕಾಲೇಜ್ ಗಳ ಸ್ಥಿತಿ ದಿನೇ ದಿನೇ ಚಿಂತಾ ಜನಕ ಆಗುತ್ತಿದ್ದರೂ ಅದರ ಸುಧಾರಣೆಗೆ ಗಮನ ಕೊಡದೆ ಹೊಸ ಖಾಸಗಿ ವೈದ್ಯಕೀಯ  ಕೋಲೇಜುಗಳಿಗೆ ಅನುಮತಿ ಕೊಡಲು ಪ್ರಾರಂಭಿಸಿತ್ತು.ಕೆ ಎಂ ಸಿ ಹುಬ್ಬಳ್ಳಿ ಯಂತಹ ಉತ್ತರ ಕರ್ನಾಟಕದ ಹೆಮ್ಮೆಯ ಏಕಮೇವ ಸಂಸ್ಥೆಯಲ್ಲಿಯೇ ಪ್ರಿನ್ಸಿಪಲ್ ಇಲ್ಲ ,ಮೆಡಿಸಿನ್ ನಂತಹ ಮುಖ್ಯ ವಿಭಾಗದಲ್ಲಿ ಅಧ್ಯಾಪಕರಿಲ್ಲ .ಇನ್ನು ಖಾಸಗಿ ಕಾಲೇಜ್ ಆರಂಭ ಆದರೆ ಅಲ್ಲಿಗೂ ಇಲ್ಲಿಂದ ಕೆಲವರನ್ನು ಎರವಲು ಕೊಡುವರು .ಇಲ್ಲಿಯ ಅನೇಕ ಗುರುಗಳು ತಮ್ಮ ಊರಿಗೆ ಸಮೀಪ ಎಂದು ಇಲ್ಲಿ ಬಿಟ್ಟು ಅಲ್ಲಿಗೆ ಹೋಗುವರು . ಇಂದಿಗೂ ಕೂಡ ಕೇರಳ ಮತ್ತು ತಮಿಳುನಾಡಿನ ಸರಕಾರಿ ವೈದ್ಯಕೀಯ ಕಾಲೇಜ್ ಗಳು  ನಮ್ಮ ಸಂಸ್ಥೆಗಳಿಗಿಂತ ತುಂಬಾ ಮುಂದುವರಿದಿವೆ .

ಇದರ ವಿರುದ್ದ ನಾವು ಮನವಿ ಸಲ್ಲಿಸಿದೆವು . ಆದರೆ ಸರಕಾರ ಸ್ಪಂದಿಸಲಿಲ್ಲ .ನಾವು ಮುಷ್ಕರ ಮಾಡಿದರೆ ಫೈನಲ್ ವರ್ಷದಲ್ಲಿ ಇರುವ ನಮಗೆ ನಷ್ಟ ,ಆದರೂ ಸುಮ್ಮನಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು ಎಂದು  ಚಳುವಳಿ ಆರಂಬಿಸಿದೆವು . ಸರ್ಕಾರ ತಾನೇ ಮೆಡಿಕಲ್ ಕಾಲೇಜ್ ಗಳನ್ನು ಸ್ಥಾಪಿಸಲಿ ,ಅರ್ಹ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕ್ಕೆ ಕ್ಷೇಮ ಎಂಬುದೂ ನಮ್ಮ ಬೇಡಿಕೆಯಲ್ಲಿ ಸೇರಿತ್ತು .

(ಮುಂದೆ ಹಲವು ದಶಕ ಗಳ ನಂತರ ಡಾ ವಿ ಎಸ್ ಆಚಾರ್ಯ ರು  ವೈದ್ಯಕೀಯ ಶಿಕ್ಷಣ ಮಂತ್ರಿ ಆಗಿದ್ದಾಗ ಜಿಲ್ಲಾ ಕೇಂದ್ರಗಳಲ್ಲಿ ಸರಕಾರಿ ವೈದ್ಯಕೀಯ ಕಾಲೇಜ್ ಗಳನ್ನು ಆರಂಬಿಸುವ ಕೆಲಸ ಆರಂಬಿಸಿದ್ದು ಈಗ ಮುಂದುವರಿದಿದೆ .ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅದರಿಂದ ಆದ ಪ್ರಯೋಜನ ಅಳೆಯಲಾರದ್ದು .)

ಈ ಚಳುವಳಿಯ ಅಂಗವಾಗಿ ನಾವು ನೂರಾರು ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿ ನ್ಯಾಯಾಧೀಶರು ಜಾಮೀನು ಕೊಡುತ್ತೇನೆ ಎಂದರೂ ತಿರಸ್ಕರಿಸಿ ಜೈಲಿಗೆ ಹೋದೆವು .ನಾನು ಹುಬ್ಬಳ್ಳಿ ಸಬ್ ಜೈಲಿನಲ್ಲಿ ಹತ್ತು ದಿನ ಬಂಧಿಯಾಗಿ ಇದ್ದೆನು .ಇನ್ನೊಂದು ದೊಡ್ಡ ತಂಡ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ.ನಮಗೆ ಹಾಸ್ಟಲ್ ನಿಂದ ಊಟ ಉಪಾಹಾರ ಸರಬರಾಜು ಆಗುತ್ತಿತ್ತು ಮತ್ತು ಕಾಲೇಜ್ ಹಿಂದೆ ಇರುವ ಪೈ ಹೊಟೇಲ್ ನವರು ಪ್ರೀತಿಯಿಂದ ವಿಶೇಷ ಆಹಾರ ಉಚಿತ ವಾಗಿ ತಂದು ಕೊಡುತ್ತಿದರು . ನಮ್ಮ ಗುರುಗಳಿಗೆ (ಅವರು ಜೈಲಿಗೂ ಬಂದಿದ್ದರು)ಮತ್ತು ಸಾರ್ವಜನಿಕರಿಗೆ ನಮ್ಮ ಮೇಲೆ ಸಹಾನುಭೂತಿ ಇತ್ತು . ಎಸ್ ಆರ್ ಬೊಮ್ಮಾಯಿ ,ಜೋರ್ಜ್ ಫೆರ್ನಾಂಡಿಸ್ ಮುಂತಾದ ನಾಯಕರು ನಮ್ಮನ್ನು ಕಂಡು ಬೆಂಬಲ ಸೂಚಿಸಿದ್ದರು .ನನ್ನ ಅತ್ತೆ ಮಗ ಸುಬ್ರಹ್ಮಣ್ಯ ಇಂಜಿನಿಯರಿಂಗ್ ವಿದ್ಯಾರ್ಥಿ ದಿನಾಲೂ ನನ್ನನ್ನು ಜೈಲ್ ನಲ್ಲಿ ಬಂದು ಕಾಣುತ್ತಿದ್ದ .ಇಲ್ಲಿಯ ಜೈಲರುಗಳಿಗೆ ಇದು ಒಂದು ಹಬ್ಬ ಆಗಿತ್ತು .ಕ್ರಿಮಿನಲ್ ಚಟುವಟಿಕೆಯವರೆ ಹೆಚ್ಕು ಬರುತ್ತಿದ್ದವರನ್ನು ನೋಡಿ ನಮ್ಮಂತಹ ಹುಡುಗ ಹುಡುಗಿಯರನ್ನು ನೋಡಿದ ಮೇಲೆ .ಹಲವರು ಆ ಮೇಲೂ ಆಸ್ಪತ್ರೆಯಲ್ಲಿ ಬಂದು ನಮ್ಮನ್ನು ಕಾಣುತ್ತಿದ್ದು ನಾವೂ ನೃಪತುಂಗ ಬೆಟ್ಟಕ್ಕೆ ವಾಕಿಂಗ್ ಹೋಗುವಾಗ ಜೈಲ್ ವಸತಿಗೆ ಭೇಟಿ ಕೊಡುತ್ತಿದ್ದೆವು .ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಯಾಗಿದ್ದ (ಮತ್ತು ನನ್ನ ಆತ್ಮೀಯರೂ ಆಗಿದ್ದ )ಅನಂತಕುಮಾರ್  ಕ್ರಿಯಾತ್ಮಕವಾಗಿ ನಮ್ಮೊಡನೆ ಸಹಕರಿಸಿದ್ದರು .ಅವರ ತಂದೆ ರೈಲ್ವೇ ನೌಕರರಾಗಿ ಹುಬ್ಬಳ್ಳಿಯಲ್ಲಿ ಇದ್ದರು .ತಾಯಿ ಹುಬ್ಬಳ್ಳಿ ಧಾರವಾಡ ಕಾರ್ಪೊರೇಷನ್  ಉಪ ಮೇಯರ್ ಆಗಿದ್ದರು ಎಂದು ನೆನಪು .ಮುಂದೆ ಅವರು ಎಂ ಪಿ ,ಮಂತ್ರಿ ಆದಮೇಲೆ ಸಂಪರ್ಕ ಬಿಟ್ಟು ಹೋಯಿತು . ಇದೇ ಚಳುವಳಿಯ ಅಂಗವಾಗಿ ಆಗ ಮಂತ್ರಿಗಳಾಗಿದ್ದ  ಶ್ರೀ ಎಂ ವೀರಪ್ಪ ಮೊಯಿಲಿಯವರನ್ನು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಘೇರಾವೋ ಮಾಡಿದಾಗ ಲಾಟಿ ಚಾರ್ಜ್ ಆಯಿತು .ಆ ದಿನ ನಾನು ಊರಿನಲ್ಲಿ ಇದ್ದರೂ ಕೇಸ್ ನಲ್ಲಿ ನನ್ನ ಹೆಸರನ್ನೂ ಸೇರಿಸಿದ್ದರು . ಮುಂದೆ ರಾಮಕೃಷ್ಣ ಹೆಗ್ಡೆ ಸರಕಾರ ರೈತರು ಮತ್ತು ವಿದ್ಯಾರ್ಥಿಗಳ ಮೇಲಿನ ಕೇಸ್ ಗಳನ್ನು ಹಿಂಪಡೆಯಿತು .ಆದರೂ ಸರಕಾರಿ ವೈದ್ಯಕೀಯ ಕಾಲೇಜ್ ಗಳ ಸ್ಥಿತಿ ಹೆಚ್ಚು ಸುಧಾರಣೆ ಕಾಣಲಿಲ್ಲ ,ಅವುಗಳನ್ನು ಸ್ವಾಯತ್ತ ಸಂಸ್ಥೆ ಗಳನ್ನಾಗಿ ಮಾಡಿದರೂ .ಇದರಲ್ಲಿ ಅಧ್ಯಾಪಕ ವೈದ್ಯರ ಪಾಲೂ ಇದೆ ಎಂದು ಹೇಳಲು ವಿಷಾದ ಪಡುತ್ತೇನೆ .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ