ಬೆಂಬಲಿಗರು

ಮಂಗಳವಾರ, ಏಪ್ರಿಲ್ 27, 2021

ಹುಬ್ಬಳ್ಳಿ ದಿನಗಳು 7

                      ಹುಬ್ಬಳ್ಳಿ ದಿನಗಳು7

ನಮಗೆ  ಆಸ್ಪತ್ರೆ ಪೋಸ್ಟಿಂಗ್ ಜತೆಗೆ ಔಷಧ ಶಾಸ್ತ್ರ (Pharmacology) ,ರೋಗ ನಿದಾನ ಶಾಸ್ತ್ರ  (Pathology),ಸೂಕ್ಷ್ಮಾಣು ಜೀವಿ ಶಾಸ್ತ್ರ (Microbiology)ಮತ್ತು ಅಪರಾಧ ಪತ್ತೆ ವೈದ್ಯ ಶಾಸ್ತ್ರ (Forensic medicine) ಕಲಿಯಬೇಕಿತ್ತು .ಪ್ಯಾಥಾಲಜಿ ಯಲ್ಲಿ  ಡಾ ಗೊರವಲಿಂಗಪ್ಪ ,ಡಾ ಮಹಾಲೆ ಮತ್ತು ಡಾ ನಾಡಿಗ್ ಪ್ರಾಧ್ಯಾಪಕರಾಗಿದ್ದು ಕೊನೆಯವರು ಮೈಕ್ರೋಬಯಾಲಜಿ ವಿಭಾಗದ ಪ್ರಭಾರಿ ಆಗಿದ್ದು ಡಾ ಮೀರಾ ಮೇವುಂಡಿ ಅವರೊಡನೆ ಇದ್ದರು . ಫೋರೆನ್ಸಿಕ್ ಮೆಡಿಸಿನ್ ಗೆ  ಡಾ ಭಾಸ್ಕರ್ ಕೆಲವು ತಿಂಗಳುಗಳ ನಂತರ ಬಂದರು . 

ಫಾರ್ಮಕಾಲಜಿ ಪ್ರೊಫೆಸರ್ ಡಾ ಕಂದ ಸ್ವಾಮಿ ಹಿಂದಿ ಸಿನಿಮಾ ದ  ಪ್ರಾಣ್ ತರಹ ಇದ್ದು  ಅವರ ಡೈಲಾಗ್ ಡೆಲಿವರಿ ಮತ್ತು ಪಾಠ ಮಾಡುವ ಕ್ರಮ  ವಿಶಿಷ್ಟ ಆಗಿತ್ತು . ನಮಗೆ ಪರೀಕ್ಷೆಗೆ ಇಲ್ಲದಿದ್ದರೂ ಪ್ರಾಯೋಗಿಕ ಔಷಧ ಶಾಸ್ತ್ರಕ್ಕೆ  ಹೆಚ್ಚು ಒತ್ತು ನೀಡುತ್ತಿದ್ದರು . ಔಷಧ ಶಾಸ್ತ್ರ  ವೈದ್ಯರಿಗೆ ಬಹಳ ಮುಖ್ಯ  . ಯಾವುದೇ ಔಷಧಿ ಬರೆಯುವ ಮೊದಲು ,ಅದರ ರಚನೆ ,ಇತರ ಔಷಧಿಗಳಿಗೆ ಅದರ ಪ್ರತಿಕ್ರಿಯೆ ,ಅಡ್ಡ ಪರಿಣಾಮಗಳು ,ಅದು ಶರೀರದಿಂದ ವಿಸರ್ಜನೆ ಆಗುವ ವಿಧಾನ , ಡೋಸ್ ಇತ್ಯಾದಿ ತಿಳಿದಿರಬೇಕು . ಪ್ರಸಿದ್ಧ ನೆಫ್ರೊಲೊಜಿಸ್ಟ್ ಡಾ ಎಂ ಕೆ ಮಣಿ ತಮ್ಮ ಗುರು ಡಾ ಈಶ್ವರಯ್ಯ  ಹೇಳುತ್ತಿದ್ದ  ಕಿವಿ ಮಾತು ಆಗಾಗ ನೆನಪಿಸಿ ಕೊಳ್ಳುವರು . 

"ವೈದ್ಯಕೀಯ ದಲ್ಲಿ  ಮೂರೂ ಪ್ರಾಥಮಿಕ ವಿಷಯಗಳು . ಫಿಸಿಯೋಲಾಜಿ (ಸಾಮಾನ್ಯ ಶರೀರ ಕಾರ್ಯ ಶಾಸ್ತ್ರ ),ಪ್ಯಾಥಾಲಜಿ (ರೋಗ ಶಾಸ್ತ್ರ )ಮತ್ತು ಫಾರ್ಮಕಾಲಜಿ (ಔಷಧ ಶಾಸ್ತ್ರ ).ಫಾರ್ಮಕಾಲಜಿ ಚೆನ್ನಾಗಿ ಕಲಿತರೆ ಪ್ಯಾಥಾಲಜಿ ಯನ್ನು ಫಿಸಿಯೋಲಾಜಿ ಮಾಡುವಿರಿ ,ಇಲ್ಲದಿದ್ದರೆ ಫಿಸಿಯೋಲಾಜಿ ಪ್ಯಾಥಾಲಜಿ ಆಗುವುದು ."

ಪ್ಯಾಥಾಲಜಿ ಯಲ್ಲಿ  ರೋಗ ಪೀಡಿತ ಅಂಗಗಳ  ಸ್ಲೈಡ್ ಗೆ ಬಣ್ಣ ಹಾಕಿ ಮೈಕ್ರೋಸ್ಕೋಪ್ ನಲ್ಲಿ ನೋಡಿ ರೋಗ ಗುರುತಿಸ ಬೇಕು . ಅದೇ ರೀತಿ ರಕ್ತವನ್ನೂ . ನಮಗೆ ತರಗತಿಯಲ್ಲಿ ಕೊಡುತ್ತಿದ್ದ ಸ್ಲೈಡ್ ಪರೀಕ್ಷೆಗೂ ಇಡುತ್ತಿದ್ದು ವಿದ್ಯಾರ್ಥಿಗಳು ಕೆಲವು ಕಷ್ಟದ ಸ್ಲೈಡ್ ಗಳನ್ನು  ಮೂಲೆ ತುಂಡಾದ ಸ್ಲೈಡ್ ಲಿವರ್ ಕ್ಯಾನ್ಸರ್ ,ಸ್ಲೈಡ್ ನ ಬದಿಯಲ್ಲಿ  ನೊಣದ ರೆಕ್ಕೆ ತರಹ ಇದ್ದರೆ  ಥೈರಾಯಿಡ್ ಕಾಯಿಲೆ ಇತ್ಯಾದಿ ನೆನಪು ಇಟ್ಟುಕೊಳ್ಳುತ್ತಿದ್ದೆವು . ಇದಲ್ಲದೆ ರೋಗ ಪೀಡಿತ ಅಂಗಗಳನ್ನು   ಸ್ಪೆಸಿಮೆನ್  ಅಂತ ಕಲಿಸುತ್ತಿದ್ದರು .ಆಸ್ಪತ್ರೆಯ ಆಪರೇಷನ್ ಥೀಯೇಟರ್ ನಿಂದ ಬಂದ  ಈ ಅಂಗಗಳನ್ನು  ಫಾರ್ಮಲಿನ್ ಇರುವ ಗಾಜಿನ ಜಾರಿನಲ್ಲಿ ಇಡುವರು . ವೈದ್ಯಕೀಯ ವಲಯದಲ್ಲಿ ಪ್ರಚಲಿತ ವಿರುವ ಒಂದು ಜೋಕ್ . 

ಒಂದು  ಪ್ರಾಯೋಗಿಕ ಪರೀಕ್ಷೆ .ವಿದ್ಯಾರ್ಥಿ ಹುಡುಗ ಮತ್ತು  ಗಂಡು ಎಕ್ಸಾಮಿನರ್ . ಗರ್ಭ ಕೋಶದ ಸ್ಪೆಸಿಮೆನ್  ಇಟ್ಟಿದ್ದರು .ಇದು ಏನು ?ಎಂದು ಕೇಳಿದರು ಪರೀಕ್ಷಕ .ವಿದ್ಯಾರ್ಥಿ  ಮೇಲಿಂದ ಕೆಳಗೆ ಅಂಗವನ್ನು ನೋಡಿ ಕಿಡ್ನಿ ಅಂದ .  Is it kidney ?ಸರಿಯಾಗಿ ನೋಡು . ಸಾಮಾನ್ಯ ವಾಗಿ  ಆತ್ಮ ವಿಶ್ವಾಸ ಇಲ್ಲದ ವಿದ್ಯಾರ್ಥಿ ಮಾಡುವಂತೆ 'ಅಲ್ಲ ಅಲ್ಲ ಸಾರೀ ಸರ್ ಅದು ಲಿವರ್ ಎಂದು ಅಂದಾಜಿಗೆ ಗುಂಡು ಬಿಟ್ಟ . ಪರೀಕ್ಷಕರು ಒಳ್ಳೆಯಕಲರ್ಡ್ ವರು .ಅವನನ್ನು ಹೇಗಾದರೂ ಪಾಸ್ ಮಾಡುವಾ ಎಂದು "ನೋಡಪ್ಪಾ ಈ ಅಂಗ ನನ್ನಲ್ಲೂ ಇಲ್ಲ ,ನಿನ್ನಲ್ಲೂ ಇಲ್ಲ ,ಯೋಚಿಸಿ ಹೇಳು "ಎಂದರು .ಹುಡುಗ ತಟ್  ಎಂದು "ಗೊತ್ತಾಯಿತು ಸರ್ ಮೆದುಳು "ಎಂದು ಬಿಡುವುದೇ ?

ರೋಗ ಶಾಸ್ತ್ರದಲ್ಲಿ ಹಲವು ಆಹಾರ ವಸ್ತುಗಳ ಹೆಸರುಗಳನ್ನು  ರೋಗಗಳ ಜತೆ ತಳುಕು ಹಾಕಿ ಹೆಸರು ಇಟ್ಟಿದ್ದು ಊಟ ಮಾಡುವಾಗ ಅದರ ನೆನಪು ಆಗುವುದು .ಉದಾ ಕಾಲರಾ ದಲ್ಲಿ ರೈಸ್ ವಾಟರ್ (ಗಂಜಿ )ಮತ್ತು ಟೈಫಾಯಿಡ್ ನಲ್ಲಿ  ಶೇಂಗಾ ಸೂಪ್ ಭೇದಿ ,ಇದೇ  ರೀತಿ ಕೋಲಾ ಕಲರ್ಡ್ ಮೂತ್ರ ,ಜಾಯಿಕಾಯಿ ಲಿವರ್ ,ಸ್ಟ್ರಾಬೆರಿ  ಪಿತ್ತಕೋಶ ,ಬ್ರೆಡ್ ಅಂಡ್ ಬಟರ್ ಅಪಿಯರೆನ್ಸ್ , ಎಂಕೋವಿ (ಮೀನು)ಸಾಸ್ ಕೀವು ಇತ್ಯಾದಿ ಹಲವು ಇವೆ

  ಫೋರೆನ್ಸಿಕ್ ಮೆಡಿಸಿನ್  ತರಗತಿಗಳು ರಂಜಕ .ನಮ್ಮ ಪ್ರಾಧ್ಯಾಪಕರಾಗಿದ್ದ ಡಾ ಭಾಸ್ಕರ್ ಸಿಗಾರ್ ಪೈಪ್ ಇಟ್ಟುಕೊಂಡು ಬರುವರು ,ಅವರಿಗೆ ಒಳ್ಳೆಯ ಹಾಸ್ಯ ಪ್ರಜ್ಞೆ ಇದ್ದು ,ಹಲವು ಪತ್ತೇದಾರಿ ಕಥೆಗಳನ್ನು ತಮ್ಮ ಅನುಭವದಿಂದ ಹೇಳುವರು . ಮರಣೋತ್ತರ ಪರೀಕ್ಷೆಗಳನ್ನು ನಾವು ಅಟೆಂಡ್ ಮಾಡಬೇಕಿತ್ತು . ಇದು ಕಷ್ಟದ ವಿಷಯ ಅಲ್ಲದಿದ್ದರೂ ನಮ್ಮ ಫೈನಲ್ ಪರೀಕ್ಷೆಯಲ್ಲಿ ಭಾರೀ ಅನ್ಯಾಯ ಆಯಿತು .ಡಾ ಭಾಸ್ಕರ್  ಒಳ್ಳೆಯವರು .ಆದರೆ ಪರೀಕ್ಷೆಗೆ ನಮಗೆ ಆಂತರಿಕ ಪರೀಕ್ಷಕರು ಇರಲಿಲ್ಲ .ಹೊರಗಿನಿಂದ ಬಂದವರು ಪೂರ್ವಾಗ್ರಹ ಪೀಡಿತರಾಗಿ ಬಂದಂತ್ತಿತ್ತು .ನಮ್ಮ ತರಗತಿಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಫೇಲ್ ಮಾಡಿ ಹೋದರು . ಆಗ ಈ ತರಹ ಅಲ್ಲಲ್ಲಿ ನಡೆಯುತ್ತಿತ್ತು . ಪ್ರಾಧ್ಯಾಪಕರ ಮರ್ಜಿಯ ಮೇಲೆ ವಿದ್ಯಾರ್ಥಿಯ ಭವಿಷ್ಯ .. ವಿದ್ಯಾರ್ಥಿ ಎಷ್ಟು ಪ್ರಾಮಾಣಿಕ ,ಬುದ್ದಿವಂತ ಆಗಿದ್ದರೂ ಸಾಲದು ,ಗುರುವಿನ ಗುಲಾಮ ಆಗುವ ತನಕ ದೊರೆಯದಣ್ಣ ಮುಕುತಿ .ಆದರೆ ಇಂತಹವರು ಅಪರೂಪಕ್ಕೆ ಕೆಲವರು ಇದ್ದು ಬಹುತೇಕ ಅಧ್ಯಾಪಕರು ಒಳ್ಳೆಯವರು ಆಗಿದ್ದರು . 

ಈ ಅನ್ಯಾಯದ ಬಗ್ಗೆ ಆಗ  ಇಲ್ಲಿಯ ಅತ್ಯಧಿಕ ಪ್ರಸಾರ ಇದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮುಖ ಪುಟದ ಲೇಖನ ಬಂದಿತು . ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತೂ  ನಾಜೂಕು ಆಯಿತು .ನಮ್ಮವರೇ ಪತ್ರಿಕೆಗೆ ಸುದ್ದಿ ಕೊಟ್ಟದ್ದು ಎಂದು ತಿಳಿದು ಮುಂದಿನ ಪರೀಕ್ಷೆಯಲ್ಲಿಯೂ ಅದೇ ಪರೀಕ್ಷಕರು ಅಥವಾ ಅವರ ಮಿತ್ರರು ಬಂದರೆ ಬಹಳ ಕಷ್ಟ ವಾದೀತು  ಎಂದು ನಾವೆಲ್ಲಾ ಪತ್ರಿಕೆಯ ಆಫೀಸ್ ಗೆ ದೌಡಾಯಿಸಿದೆವು ..ಸಂಪಾದಕರು ನಿಮಗೆ ಆದ ಅನ್ಯಾಯ ಪುನಃ ಮರುಕಳಿಸ ಬಾರದು ಎಂಬುದುದಷ್ಟೇ ನಮ್ಮ ಉದ್ದೇಶ ಎಂದು ಸಮಾಧಾನ ಮಾಡಿ ಕಳುಹಿಸಿದರು . ನಮ್ಮ ಅದೃಷ್ಟಕ್ಕೆ ಮುಂದಿನ ಪರೀಕ್ಷೆಗೆ ವಿಶ್ವವಿದ್ಯಾನಿಲಯ ದವರು ಡಾ ಭಾಸ್ಕರ್ ಜತೆಗೆ ರಾಜ್ಯದ ಹೊರಗಿನಿಂದ ಪರೀಕ್ಷಕರನ್ನು ತರಿಸಿದರು ಮತ್ತು ಅನ್ಯಾಯವಾಗಿ  ಅನುತ್ತೀರ್ಣರಾದ ಎಲ್ಲರೂ ಉನ್ನತ ದರ್ಜೆಯಲ್ಲಿ ಪಾಸ್ ಆದರು  

ಬಾಲಂಗೋಚಿ : ಔಷಧಿ ಶಾಸ್ತ್ರದಲ್ಲಿ ಮದ್ಯಪಾನ ಮತ್ತು ಲೈಂಗಿಕತೆ ಯ  ಬಗ್ಗೆ ಶೇಕ್ಸ್ ಪಿಯರ್ ನ ಮಾಕ್ಬೆತ್ ನಾಟಕದ ಒಂದು ಉಕ್ತಿಯನ್ನು ಕೋಟ್ ಮಾಡುವರು " It provokes the desire, but it takes away the performance"

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ