ಬೆಂಬಲಿಗರು

ಗುರುವಾರ, ಏಪ್ರಿಲ್ 16, 2015

ಹುಬ್ಬಳ್ಳಿ ನೆನಪುಗಳು 9

                  ಹುಬ್ಬಳ್ಳಿ ನೆನಪುಗಳು 9
 
ಅಜ್ಞಾನ ತಿಮಿರಾಂಧಸ್ಯ  ಜ್ನಾನಾಂಜನ ಶಲಾಕಾಯ

ಚಾಕ್ಷುರುನ್ಮಿಲೀತಮ್  ಯೇನ ತಸ್ಮೈ ಶ್ರೀ ಗುರುವೇ ನಮಃ
 ನಮಗೆ  ಸರ್ಜರಿ ವಿಭಾಗದಲ್ಲಿ ಕೆ ಜಿ ನಾಯಕ್ ಎಂಬ ಪ್ರಾಧ್ಯಾಪಕರು ಇದ್ದರು.ಅವರ ಪತ್ನಿ ಶೀಲಾ ನಾಯಕ್ ಅನಾಟಮಿ ಪ್ರೊಫೆಸರ್ .ಇಬ್ಬರೂ ನಿವೃತ್ತಿ ನಂತರ ಸುಳ್ಯ ದ ಕೆ ವಿ ಜಿ‌ ಮೆಡಿಕಲ್ ಕಾಲೇಜ್ ನಲ್ಲಿ  ಕೆಲಸ ಮಾಡುತ್ತಿದ್ದರು.ಕೆ  ಜಿ‌ ನಾಯಕ್ ಅವರ ಒಂದು ಪಾದ ಸ್ವಲ್ಪ ಊನ ಆಗಿದ್ದರೂ ಬಹಳ ಕ್ರಿಯಾಶೀಲ .ಟೆನ್ನಿಸ್ ಕೂಡಾ ಆಡುತ್ತಿದ್ದರು . ನಾನು ವಿದ್ಯಾರ್ಥಿಯಾಗಿ ಮತ್ತು ಇಂಟರ್ನ್ ಆಗಿ ಅವರ (ಪ್ರೊ ಕೌಲ್ಗುಡ್ ಯೂನಿಟ್ )ಯೂನಿಟ್ ನಲ್ಲಿಯೇ ಇದ್ದೆ.ಅವರಿಗೆ ಕಲಿಸುವುದು ಅಚ್ಚು ಮೆಚ್ಚು .ಮಂಗಳೂರು ಕನ್ನಡದಲ್ಲಿ ಬೈಯ್ಯುವರು (ಪ್ರೀತಿಯಿಂದ ).ನನ್ನ ಉತ್ತರ ಅವರಿಗೆ ಸಮಾಧಾನ ಆಗದಿದ್ದರೆ 'ಏನಾ ಭಟ್ ಬಾಯಿಗೆ ಬಂದ ಹಾಗೆ ಏನಾದರೂ ಹೇಳುತ್ತಿ ,ಸರಿಯಾಗಿ ಓದುವುದಿಲ್ಲ," ನಮ್ಮ ಬ್ಯಾಚ್ ನಲ್ಲಿ ಇದ್ದ ಭಗವಾನ್ ಸಿಂಗ್ ಎಂಬ ಸರ್ದಾರ್ ನನ್ನು ಅವರು ಸಿಂಗು ಎಂದು ಕರೆಯುವರು .ವಾಟ್ ಸಿಂಗು ವಾಟ್ ಈಸ್ ಯುವರ್ ಫೈಂಡಿಂಗ್ ?ಇತ್ಯಾದಿ .ಪರೀಕ್ಷೆ ಗೆ ಮೊದಲು ಒಂದು ಸ್ಪೆಷಲ್ ಕ್ಲಾಸ್ ಸರಣಿ ತೆಗೆದು ಕೊಳ್ಳುವರು .ಅವರ ಹಿಂದಿನ ಶಿಷ್ಯ ಮತ್ತು ಈಗಿನ ಸಹೋದ್ಯೋಗಿ ಡಾ ಗಿರಿ ಗೌಡ ಕೂಡಾ ತೆಗೆದುಕೊಳ್ಳುವರು .ಹಾಗೆ ಶಸ್ತ್ರ ಚಿಕಿತ್ಸಾ ವಿಷಯ ನಮಗೆ ಕಳೆದ ಬಾಳೆಯ ಹಣ್ಣಿನಂದದಿ ,ಸುಲಿದ ಚಿಗುರಿನ ಕಬ್ಬಿನಂದದಿ ಆಗಿ ಹೋಯಿತು .




. ಗಿರಿ ಗೌಡರು ಅತೀ ಸರಳ ಆದರೆ ಜನಪ್ರಿಯ ಮತ್ತು ಅಧ್ಯಯನ ಶೀಲ ಗುರುಗಳು
ಅವರು ತರಗತಿ ಆರಂಭಿಸುವ ಮೊದಲು ಕಣ್ಣು ಮುಚ್ಚಿ  ತಮ್ಮ ಗುರುಗಳಾದ
ಡಾ ಅರ್ ಎಚ್ ಏನ್ ಶೆಣಯ್ ಮತ್ತು ,ಡಾ ಕೆ ಜಿ ನಾಯಕ್  ರವನ್ನು  ವಂದಿಸಿ 
ತರಗತಿ ಆರಂಭಿಸುತ್ತಿದ್ದರು .

ಗಿರಿ ಗೌಡರು ಉತ್ತಮ ಅಧ್ಯಾಪಕ ರಾದರೂ  ಒಳ್ಳೆಯ ಶಸ್ತ್ರ ಚಿಕಿತ್ಸಾ 
ನಿಪುಣರಾಗಿರಲಿಲ್ಲ ,ಅವರಿಗೆ ಅನಾರೋಗ್ಯದಿಂದ ಸ್ವಲ್ಪ ಕೈ ನಡುಕ ಇತ್ತು .
ಸ್ತನದ ಗಡ್ಡೆಗಳ ಬಗ್ಗೆ  ಪಾಠ ಆರಂಭಿಸುವಾಗ ಅವರು  'ಈ ಅಂಗವು ಶಿಶು , ಕವಿ 
ಪ್ರೇಮಿಗಳಿಗೆ ಅಪ್ಯಾಯಮಾನವಾಗಿ ಇರುವಂತೆ ಕ್ಯಾನ್ಸರ್ ರೋಗಕ್ಕೂ '
ಎನ್ನುತ್ತಿದ್ದರು . ಪರೀಕ್ಷೆಯಲ್ಲಿ ಯಾವುದೊ  ಒಂದು  ವಿಷಯ ರೋಗಿಯನ್ನು 
ಪರೀಕ್ಷಿಸುವಾಗ ಮರೆತು ಹೋದರೆ ಏನಾಗುವುದು ? ಎಂದು ಕೇಳುವರು ,ನಾವು 
ಹೆದರಿ ಉತ್ತರ ನಿರೀಕ್ಷಿಸುತ್ತಿರುವಾಗ  ನಿರುಮ್ಮಳವಾಗಿ   ಏನೂ ಸಂಭವಿಸದು  
ಎನ್ನುವರು .ಅದು ಅವರು ವಿಶ್ವಾಸ ಹುಟ್ಟಿಸುತ್ತಿದ್ದ ರೀತಿ .

   ಅಲ್ಪಾಯುವಿನಲ್ಲಿ  ತೀರಿ ಕೊಂಡರೂ  ವಿದ್ಯಾರ್ಥಿಗಳ ಹೃದಯ ದಲ್ಲಿ  ಜ್ಞಾನ 
ರೂಪಿಯಾಗಿ ನೆಲೆಸಿದ್ದಾರೆ .ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ ಜ್ಞಾನ ವಾಹಿನಿ  ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ  ದಾರಿ ತೋರಿ ಕಾಪಾಡುತ್ತಿದೆ .

ಎಂದರೋ ಮಹಾನು ಭಾವುಲು ಅಂದರಿಕಿ ವಂದನಮುಲು --ತ್ಯಾಗರಾಜ 



2 ಕಾಮೆಂಟ್‌ಗಳು:



  1. ನಮ್ಮ ಶರೀರದಲ್ಲಿ ತಂದೆ ತಾಯಿಯರ ರಕ್ತ , ಇಂತಹ ಗುರು ವರೇಣ್ಯರ

    ಜ್ಞಾನ ವಾಹಿನಿ ಹರಿದಾಡುತ್ತಿದೆ.ನಮ್ಮನ್ನು ಕಾಲ ಕಾಲಕ್ಕೆ ದಾರಿ ತೋರಿ


    ಕಾಪಾಡುತ್ತಿದೆ .
    There isn't any better descripcton about what we are today and feel about our teachers.
    Thanks, Bhat you made my day today!!

    ಪ್ರತ್ಯುತ್ತರಅಳಿಸಿ