ಬೆಂಬಲಿಗರು

ಸೋಮವಾರ, ಮೇ 9, 2022

ಕೆಲ ವೈದ್ಯಕೀಯ ಪರೀಕ್ಷಾ ಕ್ರಮಗಳು

 ವೈದ್ಯಕೀಯ ಪರೀಕ್ಷಣ ದಲ್ಲಿ  ಕೆಲವು ನಿಯಮಗಳು ಇವೆ . ಉದಾಹರಣೆಗೆ  ಬಲ ಬಾಗದ ಕೆಳ ಹೊಟ್ಟೆ ನೋವು ಎಂದು ಬಂದರೆ ನಾವು  ಕೈಯಿಂದ ಮುಟ್ಟಿ ಪರೀಕ್ಷೆ  ಮಾಡುವಾಗ ನೋವು ಇಲ್ಲದ ಭಾಗದಿಂದ ಆರಂಬಿಸಿ ಕೊನೆಗೆ ನೋವು ಇರುವ ಜಾಗಕ್ಕೆ ಬರುತ್ತೇವೆ . ಹಲವು ರೋಗಿಗಳು ಇವರು ನನಗೆ ಬಲ ಬದಿಯಲ್ಲಿ ನೋವು ಇದ್ದರೆ ಎಡ ಬದಿ ಯಾಕೆ ಪರೀಕ್ಷೆ ಮಾಡುತ್ತಿದ್ದಾರೆ ಎಂದು ತಪ್ಪು ತಿಳಿಯುವರು . ನೋವು ಇರುವ ಕಡೆ ಮೊದಲೇ ಮುಟ್ಟಿದರೆ ಉಳಿದ ಕಡೆ ಮುಟ್ಟುವಾಗಲೂ ಹೊಟ್ಟೆಯ ಮೇಲ್ಮೈ ಯ  ಮಾಂಸ ಖಂಡದಳು  ರೋಗಿಯ ಅರಿವಿಲ್ಲದಂತೆಯೇ ಸಂಕುಚನ ಗೊಂಡು (Contracting ) ಗಟ್ಟಿಯಾಗಿ ನಮಗೆ  ಒಳಗಿನ ಅಂಗಗಳ ಬಗ್ಗೆ ತಿಳಿಯುವುದು ಕಷ್ಟವಾಗುವುದು . 

ಇನ್ನು ವೈದ್ಯ ಶಾಸ್ತ್ರದಲ್ಲಿ ಯಾವುದೇ ಉದರ  ಪರೀಕ್ಷೆ ಯು  ಹರ್ನಿಯಾ ಉಂಟಾಗುವ ತಾಣಗಳ (ಉದಾ ತೊಡೆ ಬುಡ )ಮತ್ತು ಗಂಡಸರಲ್ಲಿ ವೃಷಣ ಪರೀಕ್ಷೆ  ಹೊರತಾಗಿ ಅಪೂರ್ಣ ವೆನಿಸುವುದು ಎಂಬ ನಿಯಮ ಇದೆ .ಬಹಳ ವೇಳೆ  ರೋಗಿ ಗೆ ಸಂಕೋಚ ಉಂಟು ಮಾಡುವುದು ಯಾಕೆಂದು ಇದನ್ನು ಬಿಟ್ಟು ಬಿಡುವುದು ಸಾಮಾನ್ಯ .ಕೆಲವೊಮ್ಮೆ  ಇದರಿಂದ ರೋಗ ಪತ್ತೆ ಕೈ ತಪ್ಪುವುದು . 

ಇನ್ನು  ಗುದದ್ವಾರದ ಮತ್ತು ಸುತ್ತಲಿನ ರೋಗ ಲಕ್ಷಣಗಳಿಂದ ಬರುವ ರೋಗಿದಳ ಗುದನಾಳದ ಒಳ ಭಾಗವನ್ನು ತೋರು ಬೆರಳಿನ ಮೂಲಕ ಪರೀಕ್ಷೆ ಮಾಡ ಲೇ  ಬೇಕು ಎಂದು ಶಸ್ತ್ರ ಚಿಕಿತ್ಸಾ ಶಾಸ್ತ್ರದಲ್ಲಿ ಕಲಿಸುವರು . ಆ ಶಾಸ್ತ್ರದ ಜನಪ್ರಿಯ ಪಠ್ಯ ಪುಸ್ತಕ ಬೈಲಿ ಮತ್ತು ಲವ್ ನಲ್ಲಿ If you don’t put your finger in, you might put your foot in it’ ಎಂಬ ಹೇಳಿಕೆ ಇದೆ . 

ಹಿಂದೆ  ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೇಲಿನ ಪರೀಕ್ಷಣಗಳನ್ನು ಮಾಡದ ಕಾರಣ  ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಿದ ನಿದರ್ಶನಗಳು ಇವೆ . 

ಹೊಟ್ಟೆಯ ಕಾಯಿಲೆಗಳು ಎದೆಯಲ್ಲಿಯೂ ಮತ್ತು ಎದೆಯ ಕಾಯಿಲೆ ಹೊಟ್ಟೆಯಲ್ಲಿಯೂ ರೋಗ ಲಕ್ಷಣ ಉಂಟು ಮಾಡಬಲ್ಲವು . ಆದುದರಿಂದ ವೈದ್ಯರು ರೋಗಿ ಹೇಳದಿದ್ದರೂ ಎರಡನ್ನೂ ಪರೀಕ್ಷೆ ಮಾಡುವರು .

ಇದೇ  ರೀತಿ ತಲೆ ನೋವು ಎಂದು ಬಂದವರ ಕಾಲು ಕೂಡಾ ಪರೀಕ್ಷೆ ಮಾಡ ಬೇಕಾಗಿ ಬರ ಬಹುದು . ವೈದ್ಯರನ್ನು ತಪ್ಪು  ತಿಳಿಯ ಬಾರದು . 

ಬಾಲಂಗೋಚಿ :ವೈದ್ಯಕೀಯ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ  ರೋಗಿಯನ್ನು ಕೊಟ್ಟು ಪರೀಕ್ಷೆ  ಮಾಡಿ ಡಯಗ್ನೋಸಿಸ್  ಮಾಡಲು ಹೇಳುವರು  . ಇಲ್ಲಿ ರೋಗದ ಇತಿಹಾಸ ಪಡೆದು ಕೊಳ್ಳುವ ರೀತಿ , ಪರೀಕ್ಷಾ ವಿಧಾನ ,ಮತ್ತು  ರೋಗ ನಿಧಾನ ಎಲ್ಲದಕ್ಕೂ  ಅಂಕಗಳು ಇವೆ . ಮೊದಲು ಪರೀಕ್ಷೆ  ಆದ ವಿದ್ಯಾರ್ಥಿಗಳಿಂದ ಕೆಲವು  ಕ್ಲ್ಯೂ  ನಂತರದವರು  ಕೇಳಿ  ತಿಳಿಯುವರು ,ಏನು  ಕೇಸ್ ಇಟ್ಟಿದ್ದಾರೆ   ಏನೇನು ಪ್ರಶ್ನೆ ಕೇಳುತ್ತಾರೆ ಇತ್ಯಾದಿ . ಒಂದು ಪರೀಕ್ಷೆ ಯಲ್ಲಿ  ಮುಖ್ಯ ಕೇಸ್  ಮೆದುಳಿನಲ್ಲಿ  ರಕ್ತ ಹೆಪ್ಪುಗಟ್ಟುವುಕೆ ಯಿಂದ  ಬಲ ಭಾಗದ ಪಾರ್ಶ್ವ  ವಾಯು ಆಗಿದ್ದ ರೋಗಿ .ಅವನಿಗೆ  ಕಾಕತಾಳೀಯವಾಗಿ   ವೃಷಣ ಚೀಲದ ನೀರು (Hydrocele ) ಕೂಡಾ ಇತ್ತು .ಸಾಮಾನ್ಯವಾಗಿ ಇಂತಹ ಕೇಸ್ ನಲ್ಲಿ ನಾವು ವೃಷಣ ಪರೀಕ್ಷೆ ಮಾಡುವುದಿಲ್ಲ . ಮೊದಲು ಪರೀಕ್ಷೆ ಆದ  ವಿದ್ಯಾರ್ಥಿಗಳು ಅಲ್ಲಿ ಬಲ ಬದಿ ಪ್ಯಾರಾಲಿಸಿಸ್  ಕೇಸ್ ಇಟ್ಟಿದ್ದಾರೆ ,ಅವನಿಗೆ ಹೈಡ್ರೋಸೀಲ್ ಕೂಡಾ ಇದೆ ,ನೋಡಲು ಮರೀ  ಬೇಡ ಜಾಗ್ರತೆ ಎಂದು ನಂತರ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ  ಎಚ್ಚರಿಸುತ್ತಾರೆ . ಮರುದಿನ  ಆ ರೋಗಿಯನ್ನು ಬದಲಿಸಿ ಬೇರೆ ವ್ಯಕ್ತಿಯನ್ನು ಇಟ್ಟಿದ್ದರು,ಅವನಿಗೂ  ಬಲ  ಬದಿ ಪಾರ್ಶ್ವ ವಾತ .ನರಾಂಗದ ಮುಖ್ಯ ಪರೀಕ್ಷೆ ಆದ  ಮೇಲೆ ಮರೆಯದೇ  ವೃಷಣ ಪರೀಕ್ಷೆ ಮಾಡಿದ  ಹುಡುಗನಿಗೆ ಅಲ್ಲಿ  ನೀರು ತುಂಬಿದ್ದು ಕಾಣದೆ ನಿರಾಶೆ .  ಪರೀಕ್ಷಕರು  ಅವನ ಪ್ರೆಸೆಂಟೇಷನ್ ಎಲ್ಲಾ  ಕೇಳಿ ವಾಟ್ ಐಸ್ ಯುವರ್ ಡೈಗನೊಸಿಸ್ ?ಎಂದು ಕೇಳಲು ಸರ್ It is a case of stroke with right hemipareris (ಬಲಬದಿ ಪಾರ್ಶ್ವವಾತ) without hydrocele ಎಂದುಉತ್ತರಿಸಿದಾಗ ಪರೀಕ್ಷಕರು ತಬ್ಬಿಬ್ಬು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ