ಬೆಂಬಲಿಗರು

ಭಾನುವಾರ, ಮೇ 22, 2022

ತವರು ಭೇಟಿ

 ಮೊನ್ನೆ ಶನಿವಾರ ರಾತ್ರಿ ಮಡಿಯಾಲ  ಗೋಪಾಲಕೃಷ್ಣ ದೇವಸ್ಥಾನ ಸಂಭಾಂಗಣ ಕ್ಕೆ ಗೆಳೆಯ ವರದ ರಾಜ ಚಂದ್ರಗಿರಿ ಜತೆ ಹೋಗಿದ್ದೆ . ಸಂಧರ್ಭ ಮಡಿಯಾಲ  ಬಾಲಕೃಷ್ಣ ರಾವ್ ಅವರ ಮಗ ಅತುಲ್ ಅವರ ವಿವಾಹ ವಧೂ ಗೃಹ ಪ್ರವೇಶ ಮುನ್ನಾ ದಿನ . ಮದುವೆ ಇತ್ಯಾದಿ ಸಮಾರಂಭಗಳಿಗೆ ಅದೇ ದಿನ ಊಟದ ಸಮಯಕ್ಕೆ ಸರಿಯಾಗಿ ಹೋದರೆ ಯಾರನ್ನೂ ಮಾತನಾಡಿಸಲು ಆಗುವುದಿಲ್ಲ ;ಬರೀ ಯಾಂತ್ರಿಕ ಎನಿಸುತ್ತದೆ . ಹಿಂದಿನ ದಿನ ಹೋದರೆ ನೆಂಟರಿಷ್ಟರ ಜತೆ ಬೆರೆತು ಸಂತೋಷ ಆಗುವುದು . 

           ಬಾಲಕೃಷ್ಣ ರಾವ್ ಅವರ ಮನೆ ಕಿರಿಂಚಿ ಮೂಲೆ . ಅವರ ತಂದೆ ಶ್ರೀನಿವಾಸ ರಾವ್ ಮತ್ತು ಅಣ್ಣ ಶ್ರೀಪತಿ ರಾವ್ ನನ್ನ ಅಧ್ಯಾಪಕರು .ಬಾಲಕೃಷ್ಣ ರಾಯರಿಗೂ . ಬಾಲಕೃಷ್ಣ ಜೂನಿಯರ್ ಕಾಲೇಜು ಗಳಲ್ಲಿ ಅಧ್ಯಾಪನ ನಡೆಸಿ ,ಬೆಟ್ಟಂಪಾಡಿ ಜೂನಿಯರ್ ಕಾಲೇಜು ಪ್ರಿನ್ಸಿಪಲ್ ಆಗಿ ನಿವೃತ್ತಿ ಹೊಂದಿದವರು . ಅವರು  ಶಾಲೆಯಲ್ಲಿ ನನ್ನಿಂದ ಒಂದು ವರ್ಷ ಜೂನಿಯರ್ .ನಾವೆಲ್ಲ ಜತೆಗೆ ನಡೆದು ಕೊಂಡು ಶಾಲೆಗೆ ಹೋದವರು .ಅವರ ಅಣ್ಣ ಸುರೇಶ ನನ್ನ ಒಂದು ವರ್ಷ ಸೀನಿಯರ್ . 

  ನಾನು ಸ್ವಲ್ಪ ಬೇಗ ಪುತ್ತೂರಿನಿಂದ ತೆರಳಿ ಚಂದ್ರಗಿರಿ ಅವರಿಗೆ ನಮ್ಮ ಊರು ಸ್ವಲ್ಪ ದರ್ಶನ ಮಾಡಿಸ ಬೇಕು ಎಂದಿದ್ದೆ .ಆದರೆ ಅವರು ತಮ್ಮ ಕೆಲಸದಲ್ಲಿ ತುಂಬಾ ಬ್ಯುಸಿ ಯಾಗಿದ್ದುದರಿಂದ ಹೊರಡುವಾಗಲೇ ರಾತ್ರಿ ಆಗಿತ್ತು . ವಿಟ್ಲ ,ಪಡಿಬಾಗಿಲು ಮೂಲಕ ಅಳಿಕೆ ಗೆ ಹೋದೆವು . ಅಳಿಕೆ ಜೂನಿಯರ್ ಕಾಲೇಜು ಇರುವ ಜಾಗಕ್ಕೆ ಹಿಂದೆ ಓಟೆ ತಿಮಾರು ಎಂದು ಕರೆಯಯುತ್ತಿದ್ದರು . ಈಗ ಪ್ರೈಮರಿ ಶಾಲೆ ಇರುವ ಸ್ಥಳ ಅಳಿಕೆ . ಹಿಂದೆ  ಇಲ್ಲಿ ಕಾಲು ದಾರಿ ಮಾತ್ರ ಇದ್ದು ನಾವು  ಕಾಸರಗೋಡು ಕಡೆ ಬಸ್ ಹಿಡಿಯಲು ನನ್ನ ಹುಟ್ಟೂರು ಅಂಗ್ರಿ ಯಿಂದ ಮೂರು ಮೈಲು ನಡೆದು ಪಡಿ ಬಾಗಿಲಿಗೆ ಬರುತ್ತಿದ್ದೆವು . 

ಅಳಿಕೆ ಪೇಟೆಗೆ ತಾಗಿ ಪಶ್ಚಿಮಕ್ಕೆ  ಮಡಿಯಾಲ ಗೋಪಾಲಕೃಷ್ಣ ದೇವಸ್ಥಾನ ಇದೆ . ಅಲ್ಲಿಂದ ಪಶ್ಚಿಮಕ್ಕೆ ಒಂದು ಗುಡ್ಡೆ ಹತ್ತಿ ಇಳಿದರೆ(ಅರ್ಧ ಮೈಲು ) ನಮ್ಮ ಅಂಗ್ರಿ ಮನೆ . ನಮ್ಮ ಮನೆಯಲ್ಲಿ ದನ ಕರು ಹಾಕಿ ಶುದ್ಧದ ದಿನ ಮೊದಲ ಕರೆವಿನ ಹಾಲು ಈ ದೇವಸ್ಥಾನಕ್ಕೆ ಕೊಟ್ಟು ಮತ್ತೆ ಮನೆಯಲ್ಲಿ ಉಪಯೋಗ  ಮಾಡುತ್ತಿದ್ದೆವು . 

 ಅದಿರಲಿ ;ನಾವು ಕಲ್ಯಾಣ ಮಂಟಪ ಹೊಕ್ಕೊಡನೆ ಎಲ್ಲಾ ನನ್ನ ಬಾಲ್ಯದ ಒಡನಾಡಿಗಳು .ನನ್ನ ಕಿವಿಗೆ ಗಾಳಿ ಹೊಗ್ಗಿದ ಹಾಗೆ ಆಯಿತು .ಕಿರಿಂಚಿ ಮೂಲೆ ಚೀನಣ್ಣ ನ ಮಗ ನಾರಾಯಣ ರಾವ್ (ನನ್ನ ಅಕ್ಕನ ಕ್ಲಾಸ್ ),ಹಿಂದೆ ವಿವೇಕಾನಂದ ಕಾಲೇಜು ಜೆ ಓ ಸಿ ಯಲ್ಲಿ ಪ್ರಾಧ್ಯಾಪಕ ರಾಗಿ ಇದ್ದವರು ಮೊದಲು ಸಿಕ್ಕಿದರು .ಅವರೂ ನಮ್ಮ ಶಾಲಾ ಪಾಟಿ ,ಅವರ ಅಣ್ಣ ಶ್ರೀಧರ ರಾವ್ ನನ್ನ ಅಧ್ಯಾಪಕರು .ಅಣ್ಣ ಸೀತಾರಾಮ ಕಿರಿಂಚಿಮೂಲೆ ಯಲ್ಲಿ ಭಂಡ ಸಾಲೆ ಇಟ್ಟಿದ್ದರು .ಈಗ ಇಲ್ಲ .ಅವರ ಮಗ ಆಮೇಲೆ ಪರಿಚಯ ಆಯಿತು . ನನ್ನ ಕ್ಲಾಸ್ ಮೇಟ್ ಲಕ್ಷ್ಮಿ ನಾರಾಯಣ ಉರುಫ್ ರಾಜಣ್ಣ (,ಈಗ ಕನ್ಯಾನ ದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ ),ನ ಭೇಟಿ . ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡೆವು . 

ಬಾಲಕೃಷ್ಣ ರಾವ್ ಅವರ ಅಣ್ಣ ಶ್ರೀಪತಿ ರಾವ್ ,ಸುರೇಶ ಮತ್ತು ಅವರ ಕುಟುಂಬ .ಅವರ ಸಹೋದರಿಯರು ಎಲ್ಲಾ ಬಹಳ ಖುಷಿ ಯಿಂದ ಮಾತನಾಡಿಸಿದರು . ಸಣ್ಣ ಸಂಗೀತ ಕಾರ್ಯಕ್ರಮ ,ನಂತರ ರುಚಿಯಾದ ಊಟ .ಮನೆಗೆ ಮರಳುವಾಗ ಹೊಟ್ಟೆಯೊಡನೆ ಮನಸೂ ಸಂತೋಷದಿಂದ ತುಂಬಿತ್ತು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ