ಬೆಂಬಲಿಗರು

ಶನಿವಾರ, ಮೇ 14, 2022

ನನ್ನ ಕೆಲ ವೈದ್ಯಕಿಯೇತರ ಅಧ್ಯಯನ

 ಮಂಗಳೂರಿನಲ್ಲಿ ಪ್ರಸಿದ್ದ ಭಾರತೀಯ ವಿದ್ಯಾ ಭವನ ಸ್ಥಾಪನೆಗೆ ಪ್ರಾತಃ ಸ್ಮರಣೀಯ ಡಾ ಎಂ ಪಿ ಪೈ ಕಾರಣ ಎಂದು ತಿಳಿದು ಕೊಂಡಿದ್ದೇನೆ .  ತನ್ನ ಸ್ವಂತ ಕಟ್ಟಡ ಆಗುವುದಕ್ಕಿಂತ ಮೊದಲು ಅದರ ಕಾರ್ಯಕ್ರಮಗಳು ಕೆ ಎಂ ಸಿ ಮಂಗಳೂರು ಸಭಾ ಭವನದಲ್ಲಿ ನಡೆಯುತ್ತಿದ್ದು ಆಮೇಲೆ ಈಗ ಪಾಂಡೇಶ್ವರದಲ್ಲಿ ಇರುವ ಸೌಧಕ್ಕೆ ಖಾಯಂ ಆಗಿ ಸ್ಥಳಾಂತರ ಆಯಿತು . ಆರಂಭದಲ್ಲಿ  ಸಾಂಸ್ಕೃತಿಕ  ಕಾರ್ಯಕ್ರಮಗಳು ಮತ್ತು ಸಂಗೀತ ತರಬೇತಿ ಗೆ ಸೀಮಿತ ವಾಗಿದ್ದ  ಚಟುವಟಿಕೆಗಳು ಕ್ರಮೇಣ ವಿಸ್ತರಿಸಿ ಕೊಂಡವು . ಶ್ರೀಮತಿ ಶಾರದಾ(ಸರೋಜಾ?) ಆಚಾರ್ ಎಂಬ ಹಿರಿಯರು ಸಂಗೀತ ಕಲಿಸುತ್ತಿದ್ದರು .ಆಗ ಅದು ಉಚಿತ ವಾಗಿದ್ದು ಖರ್ಚು ವೆಚ್ಚ ಕೇಂದ್ರವೇ ವಹಿಸುತ್ತಿತ್ತು . ನಾನು ಕೂಡಾ ಒಂದು ವರ್ಷ ಸಂಗೀತ ಕಲಿಯುವ ಹಂಬಲದಿಂದ ಒಂದು ವರ್ಷ ಹೋಗಿದ್ದೆ . ತರಗತಿಯಲ್ಲಿ ಹುಡುಗ ನಾನೊಬ್ಬನೇ ಇದ್ದು ಉಳಿದವರು ಎಲ್ಲಾ ಹುಡುಗಿಯರು. ಮೇಡಮ್ ಮತ್ತು ವಿದ್ಯಾರ್ಥಿನಿಯರಿಗೆಲ್ಲಾ ನನ್ನ ಮೇಲೆ ಅನುಕಂಪ .ಆದರೆ ಜತೆಯಾಗಿ ಅಭ್ಯಾಸ ಮಾಡುವಾಗ ಕೋಗಿಲೆಗಳ ನಡುವೆ ನನ್ನದೊಂದು ಕಾಗೆಯ ಸ್ವರದಂತೆ ಎದ್ದು ಕೇಳುತ್ತಿತ್ತು . ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮ ಗಳಲ್ಲಿ ಹೊರ್ಮೋನಿಯಂ ಪೆಟ್ಟಿಗೆ ಹೊತ್ತು ಕೊಂಡು ಹೋಗಲು ಮುಂತಾದ ಕಾರ್ಯಗಳಿಗೆ ನಾನೊಬ್ಬ ಹುಡುಗ ಇದ್ದುದು ಅವರಿಗೆ ಅನುಕೂಲ ಕೂಡಾ ಇದ್ದುದರಿಂದ ನನ್ನ ಪ್ರಗತಿ ಅಷ್ಟು ಇಲ್ಲದಿದ್ದರೂ ಹುರಿದುಂಬಿಸಿ ನಾನು ಅರ್ಧಕ್ಕೆ ಬಿಡದಂತೆ ನೋಡಿಕೊಂಡರು .ಆದರೆ ಪಿ ಯು ಸಿ ಮುಗಿಸಿ ಎಂ ಬಿ ಬಿ ಎಸ್ ಗೆ ನಾನು ಹುಬ್ಬಳ್ಳಿಗೆ ಹೋದುದರಿಂದ ಸಂಗೀತ ಅಭ್ಯಾಸ ಅಲ್ಲಿಗೇ ನಿಂತಿತು . ಆದರೂ ನನ್ನ ಶಾಸ್ತ್ರೀಯ ಸಂಗೀತ ಅಭಿರುಚಿ ಗಟ್ಟಿ ಮಾಡಿತು .

ನಾನು ಎಂ ಬಿ ಬಿ ಎಸ್  ಉತ್ತೀರ್ಣ ನಾಗಿ ಎರಡು ವರ್ಷ ನಂತರ ರೈಲ್ವೇ ವೈದ್ಯಕೀಯ ಸೇವೆಗೆ ಸೇರಿದೆ . ಈ ಹುದ್ದೆಯಲ್ಲಿ ಮಂಗಳೂರಿಗೆ 1989 ರಲ್ಲಿ ಪೋಸ್ಟ್ ಆಯಿತು . ಸಂಜೆ ಐದು ಗಂಟೆಯಿಂದ ನಾನು ಫ್ರೀ ಇರುತ್ತಿದ್ದೆ .ನಮ್ಮ  ವಸತಿ ಗೃಹ ಸಮೀಪದಲ್ಲಿಯೇ  ಭಾರತೀಯ ವಿದ್ಯಾ ಭವನ ಮಂಗಳೂರು ಕೇಂದ್ರ ಪಾಂಡೇಶ್ವರ ದಲ್ಲಿ ಇತ್ತು . ಅವರು ಆಗ ಸಂಗೀತ ,ನೃತ್ಯ ದೊಡನೆ  ಮ್ಯಾನೇಜ್ಮೆಂಟ್ ಕೋರ್ಸ್ ಕೂಡಾ  ನಡೆಸುತ್ತಿದ್ದರು . ಅದು ಸಂಜೆ ಇದ್ದು ನಾನೂ ಸೇರಿ ಕೊಂಡೆ .ಮಂಗಳೂರು ವಿಶ್ವ ವಿದ್ಯಾಲಯದ ಕಾಮರ್ಸ್ ಪ್ರೊಫೆಸರ್  ಪೋದುವಾಳ್ ,ಎಸ್ ಡಿ ಎಂ ಕಾಲೇಜ್ ನ ಶ್ರೀ ದೇವರಾಜ್ ಮತ್ತು  ಕಾರ್ಮಿಕ ಕಾನೂನಿನಲ್ಲಿ ಪ್ರಸಿದ್ದ ರಾದ ಶ್ರೀ ಚಂದ್ರಶೇಖರ ಹೊಳ್ಳ ಮತ್ತು ಇನ್ನೂ ಕೆಲವರು ಅಲ್ಲಿ ಕಲಿಸಲು ಬರುತ್ತಿದ್ದರು . ಮಂಗಳೂರಿನ ವಿವಿಧ ರಂಗಗಳಲ್ಲಿ ಪ್ರಸಿದ್ದರಾದ ಶ್ರೀ ಶೇಖರ ಪೂಜಾರಿ ,ಜಯನಾಥ ಕೋಟ್ಯಾನ್ ನನ್ನ ಸಹಪಾಠಿ ಗಳು . ವರ್ಕ್ಸ್ ಮನ್ಸ್ ಕಂಪೆನ್ಸಷನ್ ಆಕ್ಟ್ ,ಮಿನಿಮಲ್ ವೇಜ್ ಆಕ್ಟ್ ,ಬೋನಸ್ ಆಕ್ಟ್ ಇತ್ಯಾದಿ ಕಲಿತ ನೆನಪು .(ಬೋನಸ್ ಐಸ್ ಡಿಫರ್ಡ್ ವೇಜ್ ಇತ್ಯಾದಿ ). ತರಗತಿಯಲ್ಲಿ ಸಣ್ಣ ಹುಡುಗರಿಂದ ಹಿಡಿದು ಮಧ್ಯ ವಯಸ್ಕರ ವರೆಗೆ ಹೆಣ್ಣು ಗಂಡು ವಿದ್ಯಾರ್ಥಿಗಳು ಇದ್ದು ನಾನು ವೈದ್ಯನಾದ ಕಾರಣ ಮತ್ತು ನನ್ನಲ್ಲಿ  ಹಾಸ್ಯ ಪ್ರಜ್ಞೆ ಇದ್ದ ಕಾರಣ  ಪ್ರೀತಿ ಗೌರವದಿಂದ ನಡೆದು ಕೊಳ್ಳುತ್ತಿದ್ದರು . ವರ್ಷಾಂತ್ಯದಲ್ಲಿ ಪರೀಕ್ಷೆ ನಡೆದು ನನಗೆ ಡಿಪ್ಲೊಮಾ ಇನ್ ಪರ್ಸನಲ್ ಮ್ಯಾನೇಜ್ಮೆಂಟ್ (ದ್ವಿತೀಯ ದರ್ಜೆ )ಉಪಾಧಿ ಸಿಕ್ಕಿತು .ಆದರೆ ನನ್ನ ಮ್ಯಾನೇಜ್ಮೆಂಟ್  ಸ್ಕಿಲ್ ಇದರಿಂದ ಏನಾದರೂ ಉತ್ತಮವಾದ ಹಾಗೆ ಕಾಣೆ . ಕೆಲ ಒಳ್ಳೆಯ ಮಿತ್ರರು ಸಿಕ್ಕಿದರು . 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ