ಬೆಂಬಲಿಗರು

ಸೋಮವಾರ, ಮೇ 2, 2022

ಡಾ ಸುಬ್ಬರಾಯರ ನೆನಪು

ಖ್ಯಾತ ಯಕ್ಷಗಾನ ಕಲಾವಿದ ಶ್ರೀ ಸೂರಿ ಕುಮೇರು ಗೋವಿಂದ ಭಟ್ ಅವರ ಎಪ್ಪತ್ತು ತಿರುಗಾಟಗಳು ಸಮೀಪದಲ್ಲಿ ಓದಿದ್ದೆ . ಬಾಲ್ಯದಲ್ಲಿ ಅನ್ನ ಸಂಪಾದನೆಗಾಗಿ ಮೇಳ ಸೇರಿದ ತನಗೆ ಒಂದು ವರ್ಷ ತಿರುಗಾಟ ಮುಗಿದ ಮೇಲೆ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಬಂದಾಗ  ಮಂಜೇಶ್ವರ ದ  ಡಾ ಸುಬ್ಬ ರಾವ್ ಅವರ ಮನೆಯಲ್ಲಿ ಆಶ್ರಯ ಸಿಕ್ಕಿದ ಬಗ್ಗೆ ,ಡಾಕ್ಟರು ಮತ್ತು ಅವರ ಶ್ರೀಮತಿ ಮನೆಯ ಮಗನಂತೆಯೇ ತನ್ನನ್ನು ನೋಡಿಕೊಂಡುದು ಮತ್ತು ತಮ್ಮ ಮಕ್ಕಳಿಗೆ ನಾಟ್ಯ ಕಲಿಸುವಾಗ ತಮ್ಮನ್ನೂ ಸೇರಿ ಕೊಳ್ಳುವಂತೆ ಹೇಳಿದುದ ಬಗ್ಗೆ ಕೃತಜ್ಞತಾ ಪೂರ್ವಕ ಬರೆದಿದ್ದಾರೆ . 

ಅವರ ಮಾತುಗಳಲ್ಲಿಯೇ ಹೇಳುವುದಾದರೆ 

"ಕೂಡ್ಲು ಮೇಳದ ಆರಂಭದ ದಿನ ಡಾ ಸುಬ್ಬರಾಯರಿಗೆ ,ಅವರ ಹೆಂಡತಿಗೆ  ನಮಸ್ಕರಿಸಿ ಹೊರಡುವಾಗ ಇಪ್ಪತ್ತೈದು ರೂಪಾಯಿ ಮತ್ತು  ಒಂದು ಜತೆ ಅಂಗಿ ಚಡ್ಡಿಯನ್ನು ಕೊಟ್ಟು ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಹರಸಿದರು .ನಾನೊಂದು ವರ್ಷ ಅಲ್ಲಿಯೇ ಇದ್ದರೆ ಒಬ್ಬ ಕಮ್ಯುನಿಸ್ಟ್ 'ಆಗುತ್ತಿದ್ದೆನೇನೋ .ಆಗೆಲ್ಲಾ ಕಮ್ಯೂನಿಸಂ ಎಂದರೆ ಏನೆಂದು ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ .ಆದರೆ ಬಡವ -ಶ್ರೀಮಂತ ಎಂಬ ಆರ್ಥಿಕ ತಾರತಮ್ಯದ ಬಿಸಿ ನನಗೆ ತಟ್ಟಿತ್ತು .ಯಾಕೆಂದರೆ ಆ ಕಾಲದಲ್ಲಿ ಮನುಷ್ಯನಿಗೆ ಸ್ಥಾನಮಾನ ಬೆಲೆ ಸಿಗುತ್ತಿತ್ತುದು ಅವನ ಸಾಮಾಜಿಕ ಸ್ಥಾನ ಮಾನದಿಂದಾಗಿ .ಮನುಷ್ಯನನ್ನು ಅಳೆಯುತ್ತಿದ್ದಿದುದೇ ಅವನ ಆರ್ಥಿಕ ಸ್ಥಿತಿ ಗತಿಯನ್ನು ನೋಡಿ .ಹೀಗಾಗಿ ಶೋಷಣೆಯನ್ನು ಒಪ್ಪದ ,ಖಾಸಗಿ ಒಡೆತನವನ್ನು ನಿರಾಕರಿಸುವ .ಸಮಾಜದ ಅಸ್ತಿ ಎಂಬು'ದು ಎಲ್ಲ ಸಮುದಾಯಕ್ಕೂ ತಲುಪಲಿ ಎಂಬ ಮೂಲ ಆಶಯದ ಕಮ್ಯೂನಿಸಂ ಬಗ್ಗೆ ನನಗೆ ಬೆರಗು ಹುಟ್ಟಿದ್ದು ಸುಳ್ಳಲ್ಲ .ಇಂದು ಕಮ್ಯೂನಿಸಂ ನ್ನು  ಅರ್ಥೈ ಸುವ ರೀತಿಯೇ ಬೇರೆ .ಕಮ್ಯೂನಿಸಂ ನ್ನ ಅರ್ಥವನ್ನು ಸರಿಯಾಗಿ ತಿಳಿಯದೆ .ಕಮ್ಯೂನಿಸಂ ನ್ನು ಓದದೇ ,ಕಮ್ಯುನಿಸ್ಟರೆಂದರೆ ದೇವರು -ಧರ್ಮವನ್ನು ಒಪ್ಪದ ನಾಸ್ತಿಕರೆಂದೋ ಭಾವಿಸಲಾಗಿದೆ .ಆದರೆ ಭಾರತೀಯ ಅನೇಕ ನಿಜ ಕಮ್ಯೂನಿಸ್ಟರು ಗಾಢ ಆಧ್ಯಾತ್ಮಿಕ ಒಲವುಳ್ಳವರು ಎಂಬ ಸಂಗತಿ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ .'ನನ್ನ ಹಾಗೆ ಎಲ್ಲರೂ 'ಎಂದು ಭಾವಿಸ ಬೇಕೆಂದು ಹೇಳುವ ಕಮ್ಯೂನಿಸಂ ನಲ್ಲಿ ಏನು ದೋಷವಿದೆಯೆಂದು ನನಗೆ ಗೊತ್ತಿಲ್ಲ ..'ನನ್ನ ನೋವು ಸಮಾಜದ ನೋವು 'ಎಂದು ತಿಳಿಯುವದಕ್ಕಿಂತ ದೊಡ್ಡ ಅಧ್ಯಾತ್ಮ ಏನಿದೆ ?"

 ಡಾ ಸುಬ್ಬರಾವ್ ೧೯೧೯ ರಲ್ಲಿ ಜನಿಸಿದರು .ಅವರ ತಂದೆ ಡಾ ಕೃಷ್ಣಯ್ಯ . ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಇದ್ದ ಡಾ ಸುಬ್ಬ ರಾವ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧಿಸಲ್ಪಟ್ಟು ಮೂರು ವರ್ಷ  ಆಲಿ ಪೂರ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದರು . ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದ ಇವರು ವೈದ್ಯಕೀಯ ವೃತ್ತಿಯೊಡನೆ ಸಮಾಜ ಮುಖಿ ಕಾರ್ಯಗಳಲ್ಲಿ ಕೂಡಾ ತೊಡಗಿಸಿ ಕೊಂಡಿದ್ದರು ..ಮಂಜೇಶ್ವರ ಸಹಕಾರಿ ಸಂಘ ಮತ್ತು ಬೀಡಿ ನೌಕರರ ಸಹಕಾರಿ ಸಂಘದ ಅಧ್ಯಕ್ಷರೂ ಆಗಿದ್ದರು .ಕಾರ್ಮಿಕ ಮತ್ತು ರೈತ ಸಂಘಟನೆ ಯಲ್ಲಿ ಸಿದ್ದ ಹಸ್ತರಾಗಿದ್ದ ಇವರು "ಜನತಾ ರಂಗ ಭೂಮಿ "ಎಂಬ ಸಾಂಸ್ಕೃತಿಕ ಕೂಟದ ರೂವಾರಿ ಆಗಿದ್ದರು ..೧೯೫೮ ರಿಂದ ೧೯೬೪ ವರೆಗೆ ರಾಜ್ಯ ಸಭಾ ಸದಸ್ಯ ರಾಗಿದ್ದರು 25-1-1980 ರಿಂದ  20-10-1981 ವರೆಗೆ  ಈ ಕೆ ನಾಯನಾರ್ ಮಂತ್ರಿ ಮಂಡಲ ದಲ್ಲಿ ಮಂತ್ರಿ ಯಾಗಿದ್ದು , ೬ ಮತ್ತು ೭ ನೇ ಕೇರಳ ವಿಧಾನ ಮಂಡಲದಲ್ಲಿ ಮಂಜೇಶ್ವರ ಮಂಡಲದಿಂದ  ಶಾಸಕ ರಾಗಿ ಆಯ್ಕೆ ಆಗಿದ್ದರು . ಕಲ್ಲಿಕೋಟೆ ವಿಶ್ವ ವಿದ್ಯಾಲಯ ಸೆನೆಟ್ ನಲ್ಲಿ ಭಾಷಾ ಅಲ್ಪ ಸಂಖ್ಯಾತ ರನ್ನು ಪ್ರತಿನಿಧಿಸಿ ಕಾಸರಗೋಡು ಪ್ರದೇಶ ದಲ್ಲಿ ಕನ್ನಡ ಭಾಷೆ ಭೋಧನೆ ಗೆ  ಪ್ರೋತ್ಸಾಹ ಸಿಗುವಂತೆ ನೋಡಿಕೊಂಡರು . ಮಂಜೇಶ್ವರ ಗೋವಿಂದ ಪೈ ಕಾಲೇಜ್ ಸ್ಥಾಪನೆ ಇವರ ಕಾಲದಲ್ಲಿಯೇ ಆಯಿತು .ಕ್ಷೇತ್ರದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ದುಡಿದ ವ್ಯಕ್ತಿ ಎಂದು ಜನರು ಈಗಲೂ ನೆನಪಿಸಿ ಕೊಳ್ಳುತ್ತಾರೆ .

      14.9.2003 ರಲ್ಲಿ ನಿಧನ ಹೊಂದಿದರು .
                                                        



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ