ಬೆಂಬಲಿಗರು

ಶನಿವಾರ, ಮೇ 7, 2022

ಪಂಜಾಜೆ ರಾಮ ಭಟ್

                              


                                     ಜನನ   22.01.1934                   ನಿಧನ  02.05.2022

                                                 



                                               ಅವಳ ಉಡುಗೆ ಇವಳಿಗಿಟ್ಟು ನೋಡಬಯಸಿದೆ,
                                               ಇವಳ ತೊಡುಗೆ ಅವಳಿಗಿಟ್ಟು ಹಾಡಬಯಸಿದೆ.”

            ಎಂಟನೇ ತರಗತಿಯಲ್ಲಿ ಇರಬೇಕು .ಬಿ ಎಂ ಶ್ರೀ ಅವರ ಮೇಲಿನ  ಸಾಲುಗಳು ಇರುವ ಕವನ ದ  ಅರ್ಥ ವಿಶ್ಲೇಷಣೆ ಮಾಡಲು ಪರೀಕ್ಷೆಯಲ್ಲಿ ಪ್ರಶ್ನೆ ಕೇಳಿದ್ದರು . ನಮಗೆ ಪಾಠಕ್ಕೆ ಇಲ್ಲದ (ಪಠ್ಯ ಪುಸ್ತಕ ದಲ್ಲಿ ಇಲ್ಲದ )ಒಂದು ಕವನ ದ  ಬಗ್ಗೆ ಒಂದು ಪ್ರಶ್ನೆ ಎಲ್ಲಾ ಪರೀಕ್ಷೆಯಲ್ಲಿಯೂ ಕೇಳುತ್ತಿದ್ದರು . ನನಗೆ ಆಗ ಇದರ ತಲೆ ಬುಡ ಗೊತ್ತಾಗಲಿಲ್ಲ ಮತ್ತು ಪ್ರಾಮಾಣಿಕವಾಗಿ  ನನಗೆ ಅರ್ಥ ಆಗಿಲ್ಲ ಎಂದೇ ಬರೆದೆ .ನಮ್ಮ ಕನ್ನಡ ಮಾಸ್ಟ್ರು ಪ್ರಸಿದ್ಧ ರಾದ ಪಂಜಾಜೆ ಶಂಕರ ಭಟ್ ಅವರು . ನನ್ನ ಉತ್ತರ ಪತ್ರಿಕೆ ಓದಿ ,ಈ ಹೊಸ (ನವೋದಯ )ಕವಿತೆಗಳು ನನಗೂ ಸರಿ ಅರ್ಥ ವಾಗುವುದಿಲ್ಲ ಎಂದರು . ಒಂದರಿಂದ ಪಿ ಯು ಸಿ ವರೆಗೆ ನನ್ನ ಸಹಪಾಠಿ ಮಿತ್ರ ಪಂಜಾಜೆ ನರಸಿಂಹ ಭಟ್ .(ಈಗ ಬೆಂಗಳೂರಿನಲ್ಲಿ ನೆಲಸಿದ್ದಾರೆ )ಅವರ ಚಿಕ್ಕಪ್ಪ  ರಾಮ ಭಟ್ . ಅವರ ಮೂಲಕ ಮೇಲಿನ ಪದ್ಯದ  ನಿಜ  ಭಾವಾರ್ಥ ನನಗೆ ತಿಳಿಯಿತು . 

ರಾಮ ಭಟ್ ಮೊದಲು ಶಿರಂಕಲ್ಲು ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು . ಆಮೇಲೆ ಪಂಡಿತ ಪರೀಕ್ಷೆ ಉತ್ತೀರ್ಣರಾಗಿ ಪುತ್ತೂರು ವಿಕ್ಟರ್ಸ್ ಹೆಣ್ಣು ಮಕ್ಕಳ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ  ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದರು . ಇವರ ವಿಶೇಷ ಎಂದರೆ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಅತೀವ ಆಸಕ್ತಿ ಇದ್ದವರು .ಯಾವಾಗಲೂ  ಒಳ್ಳೆಯ ಪುಸ್ತಕ ಹಿಡಿದು ಗೋಡೆಗೆ ಒರಗಿ  ಕುಳಿತು ಓದಿಕೊಂಡು ಇರುತ್ತಿದ್ದರು ಎಂದು ಮಿತ್ರ  ನರಸಿಂಹ ಹೇಳುವರು . ರಾಮ ಭಟ್ ಅವರ ಅಣ್ಣ  ಶಂಕರ ಭಟ್ ನರಸಿಂಹನ ತಂದೆ .  ನಿವೃತ್ತಿ ನಂತರ ಸುಮಾರು ಏಳು ವರ್ಷ ಬೆಂಗಳೂರಿನಲ್ಲಿ ಅಣ್ಣನ ಜತೆ ಇದ್ದು ಅವರು ತೀರಿ ಕೊಂಡ ಮೇಲೆ ಹರಹರದ ತಮ್ಮ ಮಗನ ಮನೆಗೆ ಹೋಗಿ ಇದ್ದರು .  ಇವರ ಶ್ರೀಮತಿಯವರು ಎಳವೆಯಲ್ಲಿಯೇ ತೀರಿಕೊಂಡ ಆಘಾತವನ್ನು ಕೂಡು ಕುಟುಂಬ  ಸಹನೀಯ ಮಾಡಿತು ಎನ್ನ ಬಹುದು . ಶಂಕರ ಭಟ್ ಮತ್ತು ರಾಮ ಭಟ್ ರಾಮ ಲಕ್ಷ್ಮಣ ರಂತೆ ಇದ್ದವರು . ಬಹಳ ಸಾರಿ  ಮಂಗಳೂರಿನ ಅತ್ರಿ ಬುಕ್ ಸೆಂಟರ್ ನಲ್ಲಿ ನಾನೂ ರಾಮ ಭಟ್ಟರೂ ಮುಖಾ ಮುಖಿ ಆದದ್ದು ಇದೆ ಎಂದರೆ ಎಷ್ಟು ಪುಸ್ತಕ ಪ್ರಿಯರು ಎಂದು ಊಹಿಸ ಬಹುದು . ಅವರ ಮನೆಗೆ ಕರ್ಮವೀರ ಮತ್ತು ಕಸ್ತೂರಿ  ಆ ಕಾಲದಲ್ಲಿಯೇ ನಿಯತವಾಗಿ ಬರುತ್ತಿತ್ತು .

ರಾಮ ಭಟ್ ಅವರದು ಗೌರವ ವರ್ಣ ,ಬಹಳ ಚಂದದ ನಗು ಮುಖ ,ಅಷ್ಟೇ ಆಕರ್ಷಕ ಅವರ ಮಾತು . ಅವರ ತರಗತಿಗಳು ಎಂದರೆ ವಿದ್ಯಾರ್ಥಿಗಳಿಗೆ ಹಬ್ಬಗ ಎಂದು ಅನೇಕರು ನೆನಪಿಸಿ ಕೊಳ್ಳುತ್ತಾರೆ . 

ಅಣ್ಣ ಶಂಕರ ಭಟ್  ಮೃದುಭಾಷಿ  ,ಸಜ್ಜನ .ಕೃಷಿಯೊಡನೆ ಕನ್ಯಾನದಲ್ಲಿ ಕರೋಪಾಡಿ ಸೊಸೈಟಿಯ ರೇಷನ್ ಅಂಗಡಿ ಉಸ್ತುವಾರಿ  ನೋಡಿ ಕೊಳ್ಳುತ್ತಿದ್ದು  ಆಮೇಲೆ  ಅಕ್ಕಿ ಮಿಲ್ ಕೂಡಾ ನಡೆಸುತಿದ್ದರು  ಎಂದು ನೆನಪು .ಕೆಲವು ವರ್ಷಗಳ ಹಿಂದೆ ತೀರಿ ಕೊಂಡರು

ಬಾಲಂಗೋಚಿ :ಈಗ ವೃತ್ತಿಗಾಗಿ ಕನ್ನಡ ಆರಿಸಿ ಕೊಳ್ಳುವವರು (ಎಂಎ  ಪಿ ಎಚ್ ಡಿ ಇತ್ಯಾದಿ ಇದ್ದವರೂ ಸೇರಿ )ಕೆಲಸಕ್ಕೆ ಸೇರಿದ ಮೇಲೆ ಭಾಷೆ ಮತ್ತು ಸಾಹಿತ್ಯದಲ್ಲಿ ತೋರುವ ಅನಾಸ್ಥೆ  ಕಂಡಾಗ ಬೇಸರ ಆಗುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ