ಬೆಂಬಲಿಗರು

ಗುರುವಾರ, ಸೆಪ್ಟೆಂಬರ್ 16, 2021

ದೊಡ್ಡಪ್ಪ ಗಣಪತಿ ಭಟ್

                             ದೊಡ್ಡಪ್ಪ ಗಣಪತಿ ಭಟ್ 

                           

                                     

Ganapathi Bhat M.A. | Antru Kanda Mugam

MA.Ganapathi Patt-White Subbaiah-Savithri-Aayiram Rupai 1964-2                                         

 ನನ್ನ ದೊಡ್ಡಪ್ಪನ ಹೆಸರು ಗಣಪತಿ ಭಟ್ ಎಂ ಎ . ಎಂ ಎ  ಪದವಿ  ವಿಶ್ವ ವಿದ್ಯಾಲಯದಲ್ಲಿ ಕಲಿಯದೇ (ಜಗವೆಂಬ ವಿದ್ಯಾಲಯದಲ್ಲಿ ಕಲಿತವರು )ಬಂದುದು . ಎಂ ಎಂದರೆ ಮಹಾಬಲ (ತಂದೆ )ಎ  ಎಂದರೆ ಅಂಗ್ರಿ . 

ಅಜ್ಜನ ಮಕ್ಕಳಲ್ಲಿ ದೊಡ್ಡವರು .ಹಿರಿಯರು  ಮಾಡಿದ ಸಾಲಕ್ಕೆ  ಅಂಗ್ರಿ ಅಸ್ತಿ ಏಲಂ ಆಗಿ ಹೋಯಿತು . ಅಜ್ಜ ಅಜ್ಜಿ ಮಕ್ಕಳು ಅಜ್ಜಿಯ ತವರು ಮನೆ ಚೆಕ್ಕೆಮನೆಗೆ ಆಶ್ರಯ ಬೇಡಿ ಹೋದರು . ದೊಡ್ಡಪ್ಪ ಜೀವನಕ್ಕೆ ಏನಾದರೂ ಬೇಕೆಂದು ಸ್ವಲ್ಪ ಕಾಲ ಬಸ್ ಏಜೆಂಟ್ ಆಗಿ ಕೆಲಸ  ಮಾಡಿದರು .ಆಮೇಲೆ  ಜೀವನ ಅರಸಿ ಮದ್ರಾಸ್ ನಗರಕ್ಕೆ ಹೋದರು .ಅಲ್ಲಿ ಅದೂ  ಇದೂ ಮಾಡಿ ಹೊಟ್ಟೆ ಹೊರೆಯುತ್ತಿದ್ದಾಗ ಇವರ ಸುಂದರ ಮುಖವನ್ನು ಕಂಡು ನಾಟಕದಲ್ಲಿ  ಸ್ತ್ರೀ ವೇಷಕ್ಕೆ ಹೊಂದುತ್ತಾರೆ ಎಂದು ಆಯ್ಕೆ ಮಾಡಿದರು ಎಂದು ಕಾಣುತ್ತದೆ .  ಆಗಿನ ಹೆಚ್ಚಿನ ಸಿನಿಮಾ ನಟರಂತೆ ಅಲ್ಲಿಂದ ಸಿನಿಮಾ ನಟನೆಗೆ ಕಾಲಿಟ್ಟು ,ಪೋಷಕ ಮತ್ತು  ಹಾಸ್ಯ ನಟರಾಗಿ ಕನ್ನಡ ,ತಮಿಳು ,ತೆಲುಗು ಮತ್ತು ಹಿಂದಿಯ ನೂರಾರು ಚಿತ್ರಗಳಲ್ಲಿ  ಅಭಿನಯಿಸಿದರು .೧೯೪೩ ರಲ್ಲಿ ಬಂದ  ಸತ್ಯ ಹರಿಶ್ಚಂದ್ರ ಇವರ ಮೊದಲ ಕನ್ನಡ ಚಿತ್ರ ಇರಬೇಕು .೧೯೭೨ ರ ಬಂಗಾರದ ಮನುಷ್ಯ ಕೊನೇ  ಚಿತ್ರ ..ನಡುವೆ ಗುಣಸುಂದರಿ ,ಗೌರಿ ,ಚಂದವಳ್ಳಿಯ ತೋಟ ,ಬೆಟ್ಟದ ಹುಲಿ ,ಬೆಳ್ಳಿಮೋಡ ,ಅನ್ನಪೂರ್ಣ ,ಹಸಿರು ತೋರಣ ,ಭಲೇ ಜೋಡಿ ,ಸಿಗ್ನಲ್ ಮ್ಯಾನ್ ಸಿದ್ದಪ್ಪ ,ಶರ ಪಂಜರ ,ಹೃದಯ ಸಂಗಮ ಮುಂತಾದ  ಯಶಸ್ವೀ ಚಿತ್ರಗಳಲ್ಲಿ ಅಭಿನಯ . ವಾತ್ಸಲ್ಯ ಚಿತ್ರದಲ್ಲಿ ಅವರ ಜತೆ  ,ಅವರ ಮಗ ಅಣ್ಣ ಸದಾಶಿವ ಕೂಡಾ ನಟಿಸಿದ್ದರು . ನವಭಾರತ ಪೇಪರ್ ನ ಸಿನೆಮಾ  ವಾರ್ತೆಯಲ್ಲಿ ಅವರ ಫೋಟೋ ,ವಾರ್ತೆ ಮತ್ತು ವಿಟ್ಲ ,ಪುತ್ತೂರು ಟಾಕೀಸ್ ಗಳ ನೋಟಿಸ್ ಗಳಲ್ಲಿ ಅವರ ಹೆಸರು ನೋಡಿದಾಗ ನಮಗೆ ಭಾರೀ ಹೆಮ್ಮೆ .

ತಮ್ಮ ದುಡಿಮೆಯಿಂದ ದೊಡ್ಡಪ್ಪ ಕುಟುಂಬಕ್ಕೆ ಕಷ್ಟ ಕಾಲದಲ್ಲಿ ಊರು ಗೋಲಾಗಿ ನಿಂತರು .ಮುಂದೆ ಅವರ ಮೈನರ್ ಹಕ್ಕಿನ ಸಹಾಯದಿಂದ  ಆಸ್ತಿಯೂ ವಾಪಸು ಸಿಕ್ಕಿತು .

   ಖ್ಯಾತ ಸಂಡೀತ ವಿದ್ವಾನ್ ಗುತ್ತು  ಗೋವಿಂದ ಭಟ್ ಅವರ ಮಗಳು ನನ್ನ ದೊಡ್ಡಮ್ಮ .          ದೊಡ್ಡಪ್ಪ ಅಂಗ್ರಿಗೆ ವರ್ಷಕ್ಕೊಮ್ಮೆ ಏನಾದರೂ ಕಾರ್ಯಕ್ರಮ ಇದ್ದರೆ ಬರುವರು . ತುಂಬಾ ಸೌಮ್ಯ ಸ್ವಭಾವ ,ಮೃದು ಮಾತು ಮತ್ತು ಮಕ್ಕಳೆಂದರೆ ಪ್ರೀತಿ .ತಮ್ಮನ ಮಕ್ಕಳಾದ ನಾವು  ಚೆನ್ನಾಗಿ ಓದಿ ಉಷಾರು ಎಂದು ಯಾವಾಗಲೂ ಬೆನ್ನು ತಟ್ಟಿ  ಆಶೀರ್ವದಿಸುವರು . ಮದ್ರಾಸ್ ನಲ್ಲಿ  ಮೈಲಾಪುರ ದಲ್ಲಿ ಮನೆ ಮಾಡಿದ್ದರು .ಊರಿನಿಂದ ಅಲ್ಲಿಗೆ ಹೋದವರನ್ನು ಚೆನ್ನಾಗಿ ಉಪಚರಿಸುವರು .ಸಿನೆಮಾ ಶೂಟಿಂಗ್ ಇದ್ದರೆ  ಕರೆದು ಕೊಂಡು ಹೋಗಿ ತೋರಿಸುವರು . ಮೊನ್ನೆ ನಾನು ಓದಿದ  ಶಿಂಗಣ್ಣ  ಶ್ರೀ ಕನ್ನೆ ಪ್ಪಾಡಿ ರಾಮಕೃಷ್ಣ  (ದೊಡ್ಡಮ್ಮನ ಭಾವ )ತನಗೆ  ಕಲ್ಕಿ ಪತ್ರಿಕೆ ಸೇರಲು ಗಣಪತಿ ಭಟ್ ಪ್ರೋತ್ಸಾಹಿಸಿದ ಬಗ್ಗೆ ಹೇಳಿಕೊಂಡಿದ್ದಾರೆ . 

ಅವರಿಗೆ  ಇಬ್ಬರು ಮಕ್ಕಳು ..ಪುಷ್ಪ ಲತಾ ಮತ್ತು ಮಹಾಬಲ (ಸದಾಶಿವ -ಬಂಗಾರು ). ಪುಷ್ಪಕ್ಕ ಒಳ್ಳೆಯ ಹಾಡುಗಾರ್ತಿ . ಉಡುಪಿಯಲ್ಲಿ ನೆಲೆಸಿದ್ದಾರೆ . ನಮ್ಮ ಅಜ್ಜನ ಹೆಸರು ಮಹಾಬಲ ಎಂದು .ಅವರ ಮೂವರು ಮಕ್ಕಳ ಮೊದಲ ಮಗನಿಗೆ ಅದೇ ಹೆಸರು .ಅಜ್ಜನ ಹೆಸರು ಅಜ್ಜಿ ,ಸೊಸೆಯಂದಿರು ಹೇಳಬಾರದುದಕ್ಕೆ ಬಂಗಾರು(ಸದಾಶಿವ ) ,ಮಾಣಿ ,ಶಿವ ಎಂದು ಕ್ರಮವಾಗಿ ಕರೆಯುತ್ತಿದ್ದರು . 

ದೊಡ್ಡಪ್ಪ ಸಿನೆಮಾ ಕ್ಕೆ  ಬಿಡುವು ಇದ್ದಾಗ ನಾಟಕದಲ್ಲಿಯೂ ಅಭಿನಯಿಸುತ್ತಿದ್ದು ಕಲ್ಯಾಣ ಕುಮಾರ್ (ಚಿತ್ರನಟ )ಅವರ ತಂಡದ "ಚಿಕ್ಕಮ್ಮ "ನಾಟಕ ತಂಡ ಮಂಗಳೂರಿನ ಪುರಭವನದಲ್ಲಿ ಹಲವು ಪ್ರದರ್ಶನ ನೀಡಿತು .ಆಗ ನಟ ನಟಿಯರು ಅಂಗ್ರಿಗೆ ಬಂದು ನಮ್ಮ ಆತಿಥ್ಯ ಸವಿದು ಸಂತೋಷ ಪಟ್ಟರು .ನಾವು ಮನೆಯವರೂ ಒಂದು ದಿನ ಜೊತೆಯಾಗಿ ನಾಟಕ ನೋಡಿ ಬಂದೆವು . 

ದೊಡ್ಡಪ್ಪನಿಗೆ ಡಾ ರಾಜ್ ಕುಮಾರ್ ಮೇಲೆ ಭಾರೀ ಪ್ರೀತಿ ಮತ್ತು ಗೌರವ. ಕೊನೆ ಕೊನೆಗೆ ಗಣಪತಿ ಭಟ್ ಅವರ ಅರೋಗ್ಯ ಕೈಕೊಟ್ಟಾಗ ತಮ್ಮ ಚಿತ್ರಗಳಲ್ಲಿ ಒಂದು ಸಣ್ಣ ಪಾತ್ರವಾದರೂ ದೊಡ್ಡಪ್ಪನವರಿಗೆ ಸಿಗುವಂತೆ ಮಾಡಿದ ಹೃದಯವಂತ ಮೇರು ನಟ ಅಣ್ಣಾವರು . 

ಬಂಗಾರದ ಮನುಷ್ಯ ದೊಡ್ಡಪ್ಪನ ಕೊನೆ ಚಿತ್ರ . ಹೃದಯಾಘಾತ ದಿಂದ ತೀರಿ ಕೊಂಡ ಅವರ ಅಂತ್ಯ ಕ್ರಿಯೆ ಅಂಗ್ರಿಯಲ್ಲಿಯೇ ನಡೆಯಿತು . ರಾಜಕುಮಾರ್ ,ಎಂ ಜಿ ಆರ್ ಆದಿಯಾಗಿ ಸಹನಟರು ಕಂಬನಿ ಮಿಡಿದರು .ಅನೇಕ ಸಾಂತ್ವನ  ಪತ್ರಗಳು ಅಂಗ್ರಿಗೆ  ಬರುತ್ತಿದ್ದವು . ರಾಜಕುಮಾರ್ ನಾಯಕರಾಗಿ ನಟಿಸಿದ ಹೃದಯ ಸಂಗಮ ಚಿತ್ರ ಅವರ ನಿಧನದ ನಂತರ ತೆರೆಗೆ ಬಂದಿದ್ದು ಅದರ ಆರಂಭದಲ್ಲಿ  ಎಂ ಎ ಗಣಪತಿ ಭಟ್ ಅವರಿಗೆ  ಶ್ರದ್ದಾಂಜಲಿ ಅರ್ಪಿಸಿಸಿದ್ದರು .

 (ಚಿತ್ರಗಳ ಮೂಲಗಳಿಗೆ ಆಭಾರಿ )

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ