ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 13, 2021

ಹೊಟೇಲ್ ತಿಂಡಿ

                      ಹೋಟೆಲ್ ತಿಂಡಿ 

                  
Potato Bun Mix - Manufacturer & Exporter of Potato Bun Premixನಮ್ಮ ಹಳ್ಳಿ ಹೋಟೆಲ್ ಗಳಲ್ಲಿ ದಿನವಿಡೀ ಸಿಗುತ್ತಿದ್ದ ತಿಂಡಿ ಬ್ರೆಡ್.ಹಿಂದೆ ಬ್ರೆಡ್ ಉಳಿದ ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ವಿಟ್ಲ ಪುತ್ತೂರಿನಂತಹ ಪೇಟೆಯಲ್ಲಿ ಒಂದು ಬೇಕರಿ ಇದ್ದು ಅಲ್ಲಿ ಸಿಗುತ್ತಿತ್ತು . ಹಳ್ಳಿಯ ಹೋಟೆಲ್ ಗಳಿಗೆ ಸೈಕಲ್   ಮೇಲೆ ಮರದ ಪೆಟ್ಟಿಗೆಯಲ್ಲಿ ಎಲ್ಲಿಂದಲೋ ತಂದು ಕೊಡುತ್ತಿದ್ದರು . ಬ್ರೆಡ್ ಮಾಡುವವರು ಮೈದಾ ಹಿಟ್ಟನ್ನು ಕಾಲಿನಲ್ಲಿ ಕಲಸುತ್ತಿದ್ದರು ಎಂಬ ನಂಬಿಕೆ ವ್ಯಾಪಕ ಆಗಿತ್ತು . ಬನ್ ಆಕಾರದ ಬ್ರೆಡ್ ಮಾತ್ರ ಸಿಗುತ್ತಿದ್ದು ಈಗಿನ ಲೋಫ್ ಇರಲಿಲ್ಲ . ಆ ಬ್ರೆಡ್ಡೋ  ನಾರು ನಾರಾಗಿ ಇರುತ್ತಿದ್ದು ಹಾಗೆಯೇ ತಿನ್ನಲು ಸಾಧ್ಯವೇ ಇರಲಿಲ್ಲ .ದೊಡ್ಡ ಲೋಟದಲ್ಲಿ ಚಹಾ ತರಿಸಿ ಅದ್ದಿ ಅದ್ದಿ ತಿನ್ನುವದು . 

                  ಕನ್ಯಾನದಲ್ಲಿ  ಆಗ ಇದ್ದ ಹೋಟೆಲ್ ಒಂದೇ .ಅದು ಕೋಡಿ  ಭಟ್ಟರ  ಹೋಟೆಲ್ .ನಮ್ಮ  ಶಾಲೆಯ ಎದುರು ಗಡೆಯೇ ಇದ್ದು ನಮಗೆ ಒಂದು ಕೈಗೆ ಸಿಗದ ಆಕರ್ಷಣೆ ಆಗಿತ್ತು . ನಾವು ಮಕ್ಕಳು  ಹಿರಿಯರ ಅನುಮತಿ ಯಿಲ್ಲದೆ  ಹೋಟೆಲ್ ಗೆ ಹೋಗುವುದಕ್ಕೆ  ಅನುಮತಿ ಇರಲಿಲ್ಲ .ನಮ್ಮ  ಕಿಸೆಯಲ್ಲಿ  ಸ್ವಲ್ಪ  ಉಳಿತಾಯದ  ಹಣ ಇದ್ದರೂ ಕೃಷಿಕರ  ಸ್ವಂತ  ಜಮೀನಿನ ಒಳಗೆ ಇದ್ದರೂ  ತೇಗ,ಬೀಟಿ ಇತ್ಯಾದಿ ಮರ ಕಡಿಯಲು ಸರ್ಕಾರದ ಅನುಮತಿ ಇಲ್ಲದೆ ಕಡಿಯುವಂತೆ ಇಲ್ಲದ ಹಾಗೆ ಅದನ್ನು ಸ್ವತಂತ್ರವಾಗಿ  ವಿನಿಯೋಗಿಸುವ ಹಕ್ಕು ನಮಗೆ ಇರಲಿಲ್ಲ .ಇನ್ನು  ಗುಟ್ಟಾಗಿ  ಹೋಗುವಾ ಎಂದರೆ  ಅಣ್ಣ ತಮ್ಮಂದಿರು ,ಅಕ್ಕ ತಂಗಿಯರ  ಕಣ್ಣು ತಪ್ಪಿಸಿ ಸಾಧ್ಯವೇ  ಇರಲಿಲ್ಲ .ಮನೆಯಲ್ಲಿ  ಹೇಳದೇ ಇರಲು  ಲಂಚದ ಆಮಿಷ ತೋರಿಸುವಾ ಎಂದರೆ ಬಹಳ ಮಂದಿ ಇದ್ದಾರೆ . 

ನಮ್ಮ ತಂದೆ ಕನ್ಯಾನ ಪೇಟೆಗೆ ಬರುತ್ತಿದ್ದುದು  ಕಡಿಮೆ .ಅಪರೂಪಕ್ಕೆ ಬಂದಾಗ ಹೋಟೆಲ್ ನಲ್ಲಿ ತಿಂಡಿ ಕೊಡಿಸುತ್ತಿದ್ದರು . ಇಡ್ಲಿ ಸಾಂಭಾರ್  ಆಗ ತುಂಬಾ ಇಷ್ಟ .ಅದನ್ನು ಚಮಚದಲ್ಲಿ  ತುಂಡು ಮಾಡಿ  ಸಾಂಭಾರ್ ನಲ್ಲಿ  ಅದ್ದಿ ತಿಂದು ಸಂತೋಷ ಪಡುತ್ತಿದ್ದೆವು .ಇಲ್ಲಿ ತಿಂಡಿ ಗಿಂತಲೂ  ಚಮಚದಲ್ಲಿ ತಿನ್ನುವುದು ಆಕರ್ಷಣೆ ಇದ್ದಂತೆ ತೋರುತ್ತದೆ . 

ಸಂಜೆ ಹೊತ್ತು  ನೀರುಳ್ಳಿ ಬಜೆ ಮಾಡುತ್ತಿದ್ದು ನಮ್ಮ ಆಟದ ಮೈದಾನಕ್ಕೆ ಅದರ ಪರಿಮಳ ಬಂದು ನಮ್ಮ ಬಾಯಿಯಲ್ಲಿ ನೀರು ಬರುತ್ತಿತ್ತು .ಮುಂದೆ ದೊಡ್ಡವನಾಗಿ ದೊಡ್ಡ  ಕೆಲಸಕ್ಕೆ ಸೇರಿ ಬೇಕಾದಷ್ಟು  ನೀರುಳ್ಳಿ ಬಜೆ ತಿನ್ನ ಬೇಕು ಎಂದು ಕನಸು ಕಾಣುತ್ತಿದ್ದೆವು. ಇನ್ನು ಹೋಟೆಲ್ ನಲ್ಲಿ ಲಭ್ಯವಿದ್ದ ಇತರ ತಿಂಡಿಗಳು ಗೋಳಿ ಬಜೆ ,ಬನ್ಸ್ ,ಕಡಲೆ ,ಸಜ್ಜಿಗೆ ಮತ್ತು ಅವಲಕ್ಕಿ .ಆಗ  ಮನೆಗಳಲ್ಲಿ  ಗೋಳಿಬಜೆ ,ಬನ್ಸ್ ಇತ್ಯಾದಿ ಮಾಡುತ್ತಿರಲಿಲ್ಲವಾಗಿ ಅವನ್ನು ಸವಿಯಲು ಹೋಟೆಲ್ಲನ್ನೇ ಆಶ್ರಯಿಸ ಬೇಕಿತ್ತು .ಆದರೆ ಈಗ ಎಲ್ಲಾ ಮನೆಗಳಲ್ಲಿಯೂ ಮಾಡದ ತಿಂಡಿಗಳಿಲ್ಲ . 

ಹೋಟೆಲ್ ನಲ್ಲಿ  ಅಡುಗೆ ಕಟ್ಟಿಗೆ ಒಲೆಯಲ್ಲಿಯೇ ಮಾಡುತ್ತಿದ್ದರು .ಗ್ಯಾಸ್ ಇರಲಿಲ್ಲ . ಕೆಂಡದ ಅಡ್ಯೆ ಅಪರೂಪಕ್ಕೆ ಮಾಡುತ್ತಿದ್ದರು.ಈಗಅದು ಗ್ಯಾಸ್ಅಡ್ಯೆ ಆಗಿದೆ.

ಆಗ  ಹೊಟೇಲ್ ನ  ಚಹಾ ಗ್ಲಾಸ್ ದೊಡ್ಡದು ಇರುತ್ತಿತ್ತು .ಹೊಟೇಲ್  ಭಟ್ಟರು  ಎರಡು  ಕೈಪಾಟೆಯಲ್ಲಿ ಎತ್ತರದಿಂದ ಚಹಾ  ಮಗುಚುವುದು  ಒಂದು ಸರ್ಕಸ್ ನಂತೆ ತೋರುತ್ತಿತ್ತು . ನನ್ನ ತಂದೆಯವರು  ಆ ಕಾಲದಲ್ಲಿಯೇ  ತಿಂಡಿ  ಆರ್ಡರ್ ಮಾಡುವಾಗ  ಎರಡು ಲೋಟ ಚಹಾ ಕ್ಕೆ ಹೇಳುವರು  .ಹೊಟೇಲ್   ಲೋಟ ಸಣ್ಣದೆಂದು,ಗಂಟಲು  ಇಳಿಯುವಷ್ಟರಲ್ಲಿ ಮುಗಿದು ಹೋಗುವುದು ಎಂದು .ಈಗಿನ ಬೆಂಗಳೂರಿನ  ಹೊಟೇಲ್ ಗಳಲ್ಲಿ ಆದರೆ ನಾಲ್ಕು ಕಪ್ ಹೇಳುತ್ತಿದ್ದರೋ ಏನೋ ?

ನನ್ನ  ಮಗ ನಾಲ್ಕು ವರ್ಷದವನು ಇದ್ದಾಗ ಕದ್ರಿ ಪಾರ್ಕ್ ಗೆ ಕರೆದು ಕೊಂಡು ಹೋಗಿದ್ದೆ .ಅಪ್ಪಾ ಹಸಿವೆ ಆಗುತ್ತಿದೆ ದೋಸೆ ಬೇಕು ಎಂದ .ಮನೆಗೆ ಹೋಗೋಣ ತಡಿ ಅಮ್ಮ ಮಾಡಿಕೊಡುವರು ಎಂದೆ.ಅಮ್ಮನ ದೋಸೆ ರುಚಿಯೇ ಇಲ್ಲ ,ಹೊಟೇಲ್ ನದ್ದು ಒಳ್ಳೆದಾಗುತ್ತದೆ ಎಂದ.ಮುಂದೆ  ನಾವು ಚೆನ್ನೈ ನಲ್ಲಿ  ಇದ್ದಾಗಲೂ  ಪುರುಶ್ವಾಕಮ್ ಗೆ ಸಾಮಾನು ಕೊಳ್ಳಲು ಹೋದಾಗ  ಶರವಣ  ಭವನ ಸಮೀಪಿಸಿದೊಡನೆ  ಅವನಿಗೆ  ಜೋರು ಹಸಿವೆ ಮತ್ತು ಬಾಯಾರಿಕೆ ಆಗುವುದು .

 
ಮಂಗಳೂರು ಸ್ಪೆಷಲ್ ನೀರುಳ್ಳಿ ಬಜೆ ❤॥Mangalore special neerulli baje/eerulli  bajji/onion pakoda recipe॥ - YouTubeMangalore bonda | Goli baje recipe | Udupi recipe — Crunchy Kitchen

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ