ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 8, 2021

ವಧು ಪರೀಕ್ಷೆ

                             ವಧು ಪರೀಕ್ಷೆ

ನಾವು  ಎದುರಿಸುವ ಅತ್ಯಂತ ಕಠಿಣ ಪರೀಕ್ಷೆ ವಧು ಅಥವಾ ವರ ಪರೀಕ್ಷೆ .ಹಿಂದೆ  ವಧುವಿನ ಜಾತಕ ನೋಡಿ ಸರಿಯೆನಿಸಿದರೆ (ಇದನ್ನು ಹುಡುಗಿ ಕಡೆಯವರಿಗೆ ಹೇಳಲು ಇಲ್ಲ )ಒಂದು ದಿನ ಹುಡುಗಿ ನೋಡಲು ಬರುತ್ತೇವೆ ಎಂದು ತಿಳಿಸಿ ,ಒಂದು ದೊಡ್ಡ ಇನ್ಸ್ಪೆಕ್ಷನ್ ಟೀಮ್ ಬರುವುದು .ಹುಡುಗನ ತಂದೆ  ಸೋದರ ಮಾವ ,ಅಕ್ಕ ತಂಗಿ (ಇವರಿಗೆ ಒಂದು ಕೋಡು  ಜಾಸ್ತಿ .ಹುಡುಗನ ಪೈಕಿ ಎಂದು ಸೇಲೆ )ಮತ್ತು ಇತ್ತಂಡಕ್ಕೂ ಪರಿಚಯದ ಒಬ್ಬರು . ಕಾರಿನಲ್ಲಿ ಬರುವುದಿದ್ದರೆ ದೂರದಿಂದಲೇ ಹಾರ್ನ್ ಮಾಡುವರು . ಬಂದ್ರು ಬಂದ್ರು ಎಲ್ಲರೂ ಅಲರ್ಟ್ ಆಗುವರು . ಹುಡುಗಿ ಇನ್ನೊಮ್ಮೆ ಕನ್ನಡಿ ನೋಡಿ  ಪೌಡರ್ ಮೆತ್ತಿ ಕೊಳ್ಳುವಳು . ತಂಡ  ಅಂಗಳಕ್ಕೆ ಆಗಮಿಸಿದೊಡನೆ ಕೈಕಾಲಿಗೆ ನೀರು ಬೈರಾಸು .ಹುಡುಗ ಕೊಂಚವೂ ನಗದೆ  ಗಂಭೀರವಾಗಿ ಇರುವನು (ಮತ್ತು ಇರ ಬೇಕು ). ಮನೆಯ ಅಜ್ಜಿ ಮತ್ತು ಇತರ ರು  ಗಿಳಿವಾಗಿಲ ದಳಿಯೊಳಗಿಯಿಂದ  ವರ  ಮಹಾಶಯನ  ಸೌಂದರ್ಯ ಕಣ್ತುಂಬಿ ಕೊಂಡು ಕೃತಾರ್ಥರಾಗುವರು . 

ಬಂದವರೇ ಉಭಯ ಕುಶಲೋಪರಿ .ಮಳೆ ,ಬೆಳೆ ಮತ್ತು ಸೆಖೆ ಇತ್ಯಾದಿ ಬಗ್ಗೆ . ಇನ್ಸ್ಪೆಕ್ಷನ್ ಟೀಮ್ ಮೂಲೆ ಮೂಲೆಗೆ ಕಣ್ಣಾಡಿಸುವುದು . ನಡುವೆ ಹುಡುಗಿ  ಸೀರೆ ಉಟ್ಟುಕೊಂಡು  ಕೊಡಪಾನ ಸಹಿತ ಮನೆ ಮುಂದಿನ ಬಾವಿಗೆ ಹೋಗಿ ನೀರು ಸೇದಿ ತರಬೇಕು . ಅವಳ ಕೈಕಾಲು ಸರಿ ಇದೆಯೇ ,ಊನ  ಏನಾದರೂ ಉಂಟೋ ಎಂದು ತಿಳಿಯುವ ವಿಧಾನ .ಈಗಿನ ಬ್ಯೂಟಿ ಕಂಟೆಸ್ಟ್ ಗಳ  ಕ್ಯಾಟ್ ವಾಕ್ ನಂತೆ .ಒಂದೇ ವ್ಯತ್ಯಾಸ ಎರಡನೆಯದರಲ್ಲಿ ವಸ್ತ್ರವು ಮುಚ್ಚುವುದಕ್ಕಿಂತ ತೋರಿಸುವುದು ಹೆಚ್ಚು . 

ಮುಂದಿನ  ಕಾರ್ಯಕ್ರಮ ತಿಂಡಿ ಕಾಪಿ (ಅಥವಾ ಶರಬತ್ )ಕೊಡುವುದು . ಹುಡುಗಿ ಗಡ ಗಡ  ನಡುಗಿ ಕೊಂಡು , ಮುಖ ಎಲ್ಲಾ ನಾಚಿಕೆಯಿಂದ ಕೆಂಪೇರಿಸಿ  ರಂಗಸ್ಥಳಕ್ಕೆ ಬರುವಳು . ಹುಡುಗನೂ ನೋಡದ ಹಾಗೆ ಮಾಡಿ ನೋಡುವ ಪ್ರಯತ್ನ ಮಾಡುವನು . 

ಕೇಸರಿ ಬಾತ್ ಕಾಪಿ ಸೇವನೆ ಆಗುವದು . ಹುಡುಗಿಗೆ ಹಾಡಲು ಬರುವದೋ ?ಒಂದೆರಡು ದೇವರ ನಾಮ ಹಾಡಿಸುವರು . ಮಾತು ಸರಿ ಬರುತ್ತದೆ ಎಂದು ಪರೀಕ್ಷಿಸುವ  ಪರಿ . ಕನ್ಯೆ ಧರಣಿ ಮುಖಿಯಾಗಿ ಹಾಡುವಳು

ಎಂಥ ಚೆಲುವಗೆ ಮಗಳನು ಕೊಟ್ಟನುಗಿರಿರಾಜನು ನೋಡಮ್ಮಮ್ಮ |

ಕಂತುಹರಶಿವ ಚೆಲುವನೆನ್ನುತ ಮೆಚ್ಚಿದನೇ ನೋಡಮ್ಮಮ್ಮ||

ಮನೆಯೆಂಬುದು ಸ್ಮಶಾನವು ನೋಡೇಗಜಚರ್ಮಾಂಬರವಮ್ಮಮ್ಮ |
ಹಣವೊಂದೆಂಬುದು ಕೈಯೊಳಗಿಲ್ಲವುಕಪ್ಪರವಿದೆ ನೋಡಮ್ಮಮ್ಮ ||

ಮೋರೆಗಳೈದು-ಮೂರು ಕಣ್ಣಗಳುವಿಪರೀತವ ನೋಡಮ್ಮಮ್ಮ
ಘೋರವಾದ ರುಂಡಮಾಲೆಉರಗಭೂಷಣವನು ನೋಡಮ್ಮಮ್ಮ ||

ಭೂತ ಪ್ರೇತ-ಪಿಶಾಚಿಗಳೆಲ್ಲಾ ಪರಿವಾರವು ನೋಡಮ್ಮಮ್ಮ |
ಈತನ ನಾಮವು ಒಂದೇ ಮಂಗಳಕರವುಹರನ ನೋಡಮ್ಮಮ್ಮ ||

ತಲೆಯೆಂಬುದು ನೋಡಿದರೆ ಜಡೆಯುಹೊಳೆಯುತಿದೆ ನೋಡಮ್ಮ
ಮ್ಮಹಲವು ಕಾಲದ ತಪಸಿ ರುದ್ರನಮೈಬೂದಿಯು ನೋಡಮ್ಮಮ್ಮ ||

ನಂದಿವಾಹನನ ನೀಲಕಂಠನ ನಿರ್ಗುಣನನು ನೋಡಮ್ಮಮ್ಮ
ಇಂದಿರೆರಮಣನ ಪುರಂದರವಿಠಲನಹೊಂದಿದವನ ನೋಡಮ್ಮಮ್ಮ|

ಸಂಗೀತದ ಗಂಧ ಗಾಳಿ ಇಲ್ಲದಿದ್ದರೂ ಹುಡುಗನ ತಾಯಿ ,ಸಹೋದರಿ ಗಂಭೀರವಾಗಿ ತಲೆ ಆಡಿಸುವರು . ಇಲ್ಲಿಗೆ ಕಾರ್ಯಕ್ರಮ ಮುಕ್ತಾಯ . ಹುಡುಗ ಗಂಭೀರವಾಗಿ ಎದ್ದು ಕರ ವಸ್ತ್ರದಿಂದ  ಮುಖ ಒರಸಿಕೊಳ್ಳುವನು . ಗಂಡಿನ ಕಡೆಯವರು ಅಂಗಳದ ತುದಿಗೆ ಹೋಗಿ ಗುಸು ಗುಸು ಮಾತನಾಡಿ ಆಮೇಲೆ ತಿಳಿಸುವೆವು ಎಂದು ಮರಳುವರು .. 

 ಅಜ್ಜಿ ಹುಡುಗಿಯೊಡನೆ ಹುಡುಗ ಇಷ್ಟವಾಯಿತೇ ಎಂದು ಕಣ್ಣು ಮಿಟಿಕಿಸಿದಾಗ ಮೊಮ್ಮಗಳು ಥೂ ಹೋಗಜ್ಜಿ ಎಂದು ಹುಸಿ ನಾಚಿಕೆ ತೋರಿಸಿದರೆ ಇಷ್ಟವಾಗಿದೆ ಎಂದು ಅರ್ಥ ,ಮಾತನಾಡದೇ ಇದ್ದರೆ ಇಲ್ಲ ಎಂದು ಸೂಚನೆ .

ಹುಡುಗ ಹುಡುಗಿ ಮಾತನಾಡುವ ಪದ್ಧತಿ ಆಗ ಇರಲಿಲ್ಲ . ಆಗಿನ ನಾಚಿಕೆ ಎಲ್ಲಾ ಈಗ ಯಕ್ಷಗಾನದ ಸ್ತ್ರೀ ವೇಷಗಳಲ್ಲಿ ಮಾತ್ರ ಕಾಣಬಹುದು ,

ನಾನು ಮದುವೆಯಾದ  ಹುಡುಗಿ ನೋಡಲು ಮೊದಲು ಒಬ್ಬನೇ  ಹೇಳದೇ ಹೋದೆನು . ಹುಡುಗಿ ದನದ ಹಟ್ಟಿಯಲ್ಲಿ  ತುಂಟ ಕರುವನ್ನು ಕಟ್ಟಲು ಪ್ರಯಾಸ ಪಡುತ್ತಿದ್ದಳು(ಮುಂದೆ ನನ್ನನ್ನು ಸಂಸಾರವೆಂಬ ಗೂಟಕ್ಕೆಬಂದಿಸುವ ಮುನ್ಸೂಚನೆ )  . ನೋಡಲು ಬಂದುದನ್ನು ತಿಳಿದು ಓಡಿ ಹೋಗಿ ಮುಖ ತೊಳೆದು ,ಬಟ್ಟೆ ಬದಲಿಸಿ ಬಂದಳು .ಆ ಕಾಲಕ್ಕೆ ಹುಡುಗ ಹುಡುಗಿ ಮಾತನಾಡಲು ಬಿಡುತ್ತಿದ್ದರು .ಆಕೆ ಎಕನಾಮಿಕ್ಸ್ ಎಂ ಎ . ಆದುದರಿಂದ ನಾನು ಸಮೀಪದಲ್ಲಿ ಓದಿದ್ದ  ಕೆನ್ನೆತ್ ಗಾಲ್ಬ್ರೈಟ್ಚ್ ಪುಸ್ತಕದ  ಬಗ್ಗೆ ಕೇಳಿದೆ(ಇಂಪ್ರೆಸ್ ಮಾಡಲು ) . ಅವಳಿಗೆ ಅದು ಗೊತ್ತಿರಲಿಲ್ಲ . ಎಂತಹ ಅರಸಿಕ ಇವ ಎಂದು ತಿಳಿದುಕೊಂಡಿರಬೇಕು . 

ಮಲಯಾಳ ಸಿನೆಮಾ ಒಂದರಲ್ಲಿ ಹುಡುಗಿ ನೋಡಲು ಬಂದ  ನಾಯಕ ಹುಡುಗಿಯ ಬಳಿ "ರಾಧೆ ನಿನ್ನ ಹೆಸರೇನು "ಎಂದು ಹುಡುಗಿ ರಾಧೆಯ ಬಳಿ ಕೇಳುವನು .ಆಮೇಲೆ ತನ್ನ ತಪ್ಪಿನ ಅರಿವಾಗಿ" ಮದುವೆಯಾಗುವುದು ಮೊದಲನೇ ಸಲ ;ಅದರಿಂದ ಒಂದು ಟೆನ್ಶನ್ 'ಎನ್ನುವನು . ಹುಡುಗಿ ಅಥವಾ ಹುಡುಗ ನೋಡುವುದು ಹೇಗೆ ಎಂದು ಒಂದು ಕೋರ್ಸ್ ಮಾಡುವುದು ಉತ್ತಮ . 

ಮಲಯಾಳಂ ಸಿನೆಮಾ "ಸಂದೇಶಂ ' ನಲ್ಲಿ ಒಂದು ಪ್ರಸಿದ್ಧ ಕನ್ಯಾ ಪರೀಕ್ಷೆಯ ಸೀನು ಇದೆ . ಎಡ ಪಕ್ಷದ ಕಾರ್ಯಕರ್ತ (ವಕೀಲ ಕೂಡಾ ) ಹೆಣ್ಣು ನೋಡಲು ಹೋಗುವ ದೃಶ್ಯ.ನೋಡಲು  ಕೆಳಗೆ ಕೊಟ್ಟ ಲಿಂಕ್ ಒತ್ತಿರಿ . 

https://youtu.be/IcYuV1Rwmhs

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ