ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 1, 2021

ನೀನಾಸಮ್ ಸಾಂಸ್ಕೃತಿಕ ಶಿಬಿರ

  ನೀನಾಸಮ್ ಸಾಂಸ್ಕೃತಿಕ ಶಿಬಿರ 

                  Ninasam Offers Summer Theatre Workshop - Careerindia

ನಾನು ಬಹು ವರ್ಷಗಳಿಂದ ನೀನಾಸಂ  ವಾರ್ಷಿಕ ಸಾಂಸ್ಕೃತಿಕ ಶಿಬಿರದಲ್ಲಿ ಭಾಗವಸಿಸುವ ಅಸೆ ಇಟ್ಟು ಕೊಂಡಿದ್ದು ಮೂರು ವರ್ಷಗಳ ಹಿಂದೆ ಅದು ನೆರವೇರಿತು . 

ಪ್ರತಿನಿಧಿ ಶುಲ್ಕ ಪಾವತಿಸಿ ಅವರು ಹೆಗ್ಗೋಡಿನಲ್ಲಿ ವಸತಿ ಏರ್ಪಡಿಸಿದ್ದರೂ ಸಾಗರದ ಅಗ್ರಹಾರ ವೃತ್ತದ ಬಳಿ  ಹೋಟೆಲ್ ನಲ್ಲಿ ತಂಗಿ ದಿನವೂ ಬಸ್ ನಲ್ಲಿ ಹೋಗಿ ಬರುತ್ತಿದ್ದೆ . ನಾನು ಬಸ್ಸಿಗೆ ಕಾಯುತ್ತಿರುವಾಗ "ತರುಣ" ಅಶೋಕ ವರ್ಧನರು ತಮ್ಮ ಬೈಕಿನಲ್ಲಿ ಪತ್ನಿ ಸಮೇತ   'ಎ  ಪಿ ಭಟ್ರೇ (ಬೈಕಿನಲ್ಲಿ )ಜಾಗ ಇಲ್ವಲ್ಲಾ ಎಂದು ಹೇಳುತ್ತಾ ಹೋಗುತ್ತಿದ್ದರು . 

ಮೊದಲ ದಿನ ಹೆಗ್ಗೋಡಿನಲ್ಲಿ ಇಳಿದೊಡನೆ ಬಾಗಲಕೋಟೆಯಿಂದ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರು ನಾನು ಯಾರೋ ದೊಡ್ಡ ಲೇಖಕ ಎಂದು ತಿಳಿದು ಸುತ್ತು ಹಾಕಿದರು .ಸಾರ್ ನಿಮ್ಮ ಜತೆ ಫೋಟೋ ತೆಗೆದು ಕೊಳ್ಳಲೇ ಎಂದು ಮೊಬೈಲ್ ನಲ್ಲಿ ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಂಡರು .ಆಮೇಲೆ ನೀವು ಯಾವ ಪುಸ್ತಕ ಬರೆದಿದ್ದೀರಿ ಎನ್ನಲು 'ಚಿಕ್ಕಂದಿನಲ್ಲಿ ಮಗ್ಗಿ ಮತ್ತು  ಕೋಪಿ ಮತ್ತು ಈಗ ಲೆಕ್ಕ ಪುಸ್ತಕ "ಎನ್ನಲು ನಿರಾಶೆ ಗೊಂಡರು .ಆಮೇಲೆ ಸೀರಿಯಸ್ ಆಗಿ ನೀವು ಯಾಕೆ ಸಾಹಿತ್ಯ ಓದುತ್ತೀರಿ ,ಇತ್ಯಾದಿ ಗಂಭೀರ ಪ್ರಶ್ನೆ ಹಾಕಿದರು . ಅವರ ಜೀವನೋತ್ಸಾಹ ,ನಾನು ಪ್ರೀತಿಸುವ ಉತ್ತರ ಕರ್ನಾಟಕ ಭಾಷೆ ಯಲ್ಲಿ ಸಂಭಾಷಣೆ ನನ್ನ ಮಾರ್ಗಾಯಾಸವನ್ನು ಪರಿಹರಿಸಿತು .ಈ ಮಕ್ಕಳು ಶಿಬಿರದಲ್ಲಿ ಮುಂದೆ ಕುಳಿತುಕೊಂಡು  ಪ್ರಶ್ಶ್ನೋತ್ತರಗಳಲ್ಲಿ ಯಾವುದೇ ಭಿಡೆ ಇಲ್ಲದೆ ಭಾಗವಹಿಸುತ್ತಿದ್ದರು . 

ಐದು ದಿನಗಳ ಶಿಬಿರದಲ್ಲಿ ದಿನವೂ ಸಾಹಿತ್ಯ ,ನೃತ್ಯ ,ಸಂಗೀತ ಮತ್ತು ಸಿನಿಮಾ ಇತ್ಯಾದಿಗಳ ಬಗ್ಗೆ ಗಂಭೀರ ಸಂವಹನ ನಡೆಯುತ್ತಿತ್ತು .ದೇಶದ ಬೇರೆ ಬೇರೆ ಊರುಗಳಿಂದ ತಮ್ಮ ತಮ್ಮ ರಂಗಗಳಲ್ಲಿ ಪ್ರಖ್ಯಾತರಾದ ಹಲವು ಭಾಷಣ ಕಾರರು  ಮತ್ತು ಸಂಪನ್ಮೂಲ ವ್ಯಕ್ತಿಗಳು ಬರುವರು . ಪ್ರಾತ್ಯಕ್ಷಿಕೆ ಕೂಡಾ ಇರುವುದು . ಬೆಳಿಗಿನಿಂದ ಸಂಜೆ ಸಮಯ ಹೋದುದೇ ತಿಳಿಯದು .ಸಂಜೆ ಆ ವರ್ಷದ ತಿರುಗಾಟದ ನಾಟಕದ ಮೊದಲ ಪ್ರದರ್ಶನ . ಉಳಿದ ದಿನಗಳು ಬೇರೆ ನಾಟಕಗಳು . ಪ್ರದರ್ಶನದ ಮರುದಿನ ಮುಂಜಾನೆ ಅದರ ವಿಮರ್ಶೆ ನಡೆಯುವದು . ಇದು ನಾಟಕಕಾರರಿಗೂ ,ಪ್ರೇಕ್ಷಕರಿಗೂ ಕಲಿಕೆಗೆ ಅನುಕೂಲ ..ಕೊನೆಯ ದಿನ ರಾತ್ರಿ ಯಕ್ಷಗಾನ ಬಯಲಾಟ . ಆ ವರ್ಷ ತೆಂಕು ತಿಟ್ಟಿನ "ದಕ್ಷಾಧ್ವರ "ಪ್ರಸಂಗ ಇತ್ತು . 

ನೀನಾಸಂ ಕ್ಯಾಂಪಸ್ ಹಳ್ಳಿಯ ನಡುವೆ ಇದೆ . ಇಲ್ಲಿ ನಾಟಕ ತರಬೇತಿ ಶಾಲೆ ಮತ್ತು ಶಿವರಾಮ ಕಾರಂತ ರಂಗ ಮಂದಿರ ಇದೆ . ಕೆ ವಿ ಸುಬ್ಬಣ್ಣ ಸ್ಥಾಪಿಸಿದ ಇದರ ಈಗಿನ ರೂವಾರಿ ಕೆ ವಿ ಅಕ್ಷರ . 

ಶಿಬಿರದಲ್ಲಿ ಊಟ ತಿಂಡಿ ವ್ಯವಸ್ಥೆ ,ಪುಸ್ತಕ ಪ್ರದರ್ಶನ  ಮಾರಾಟ ಮತ್ತು ಹೊರಗಡೆ ಬೇರೆ ಬೇರೆ ಸಹಕಾರ ಸಂಘಗಳ ಖಾದಿ ,ಗೃಹೋತ್ಪನ್ನಗಳ ಮಾರಾಟ ಮಳಿಗೆಗಳು ಇದ್ದುವು . ನಾನು ಕೇವಲ ಓದಿ ಕೊಂಡಿದ್ದ ಲೇಖಕ ರಂಗ ಕರ್ಮಿ ಪ್ರಸಾದ ರಕ್ಷಿದಿ ಯವರ ಪರಿಚಯ ಆದುದು ಲಾಭ .  ಮೂಡಂಬೈಲು ಶಾಲೆಯ ಉತ್ಸಾಹಿ ಅಧ್ಯಾಪಕ ಅರವಿಂದ ಕುಡ್ಲ ಐದೂ ದಿನವೂ ಸ್ವಯಮ್ ಸೇವಕರಾಗಿ ದುಡಿಯುತ್ತಿದ್ದವರು ಸ್ನೇಹಿತರಾದರು . ಶ್ರೀ ಅಶೋಕ ವರ್ಧನ ,ದೇವಕಿ ಅಕ್ಕ ,ಹಿರಿಯರಾದ ಲಕ್ಷ್ಮೀಶ ತೋಲ್ಪಾಡಿ  ಮತ್ತು ಕುಟುಂಬ ಎಲ್ಲಾ ದಿನಗಳೂ ಜತೆಗೆ ಸಿಗುತ್ತಿದ್ದರು . ರಾಜ್ಯದಾದ್ಯಂತ ಮೂಲೆ ಮೂಲೆಗಳಿಂದ ಬಂದ ಆಸಕ್ತರೊಡನೆ ಹರಟೆ ಮತ್ತು ವಿಚಾರ ವಿನಿಮಯ . 

ಇನ್ನೊಮ್ಮೆ ಹೋಗಬೇಕು ಎಂದರೆ ಕೋವಿಡ್ ಕಾರಣ ನಂತರ ವಾರ್ಷಿಕ ಶಿಬಿರ ಆಗೇ ಇಲ್ಲ

.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ