ಬೆಂಬಲಿಗರು

ಶುಕ್ರವಾರ, ಸೆಪ್ಟೆಂಬರ್ 3, 2021

ಮದುವೆ ಅಂದು ಇಂದು

 

ಹತ್ತಿರದ ನೆಂಟರ ಮನೆಯ ಮದುವೆಗೆ ವಾರ ಮೊದಲೇ ತಯಾರಿ ಶುರು . ಟ್ರಂಕ್ ಒಳಗೆ ಇಟ್ಟ ,ಕಿವಿ ಕೊರಳಲ್ಲಿ ಇರುವ ಆಭರಣಗಳು ಎಲ್ಲಾ ಹೊರಬಂದು ನೊರೆ ಕಾಯಿ ಮತ್ತು ಹಳೇ ಟೂತ್ ಬ್ರಷ್ ಗಳಿಂದ ಅಭ್ಯಂಜನ ಮಾಡಿಸಿ ಕೊಂಡು ಫಳ ಫಳ ಎನ್ನುವವು . ಆಭರಣಗಳ ಕಮ್ಮಿ ಇದ್ದರೆ ಪಕ್ಕದ ಮನೆಯವರಿಂದ ,ಇಲ್ಲಾ ನೆಂಟರಿಂದ ಎರವಲು ತರುವುದು .(ಇದಕ್ಕೆ ಬಾಡಿಗೆ ಇಲ್ಲ ). ಇನ್ನು ಜಿರಳೆ ಕಾಯಿ ಪರಿಮಳದ ಪಟ್ಟೆ ಸೀರೆ ಹೊರ ತೆಗೆದು ಒಮ್ಮೆ ಒರೆಸುವುದು . ಇಸ್ತ್ರಿ ಪೆಟ್ಟಿಗೆ ಇದ್ದರೆ ಮಕ್ಕಳ ಬಟ್ಟೆಗೆ ಹಾಕಿ ಗರಿ ಗರಿ ಮಾಡುವದು .
ಮದುವೆ ಗೆ ಒಂದೆರಡು ದಿನ ಮೊದಲೇ ಸವಾರಿ .ನೆಂಟರ ಮನೆಯಲ್ಲಿ ಟಾಯ್ಲೆಟ್ ಇದೆಯೋ (ವೆಸ್ಟರ್ನ್ ,ಇಂಡಿಯನ್ ಬಿಡಿ ),ಬಾತ್ ರೂಮ್ ಎಲ್ಲಿ ,ಮಲಗುವುದು ಎಲ್ಲಿ ಇತ್ಯಾದಿ ಸಮಸ್ಯೆಗಳು ಅಸ್ತಿತ್ವ ದಲ್ಲಿಯೇ ಇರಲಿಲ್ಲ .ಎಲ್ಲಾ ತಾವಾಗಿಯೇ ಏರ್ಪಾಡು ಮಾಡಿಕೊಳ್ಳುವವು . ಹೆಣ್ಣು ಮಕ್ಕಳು ಹೂ ಕಟ್ಟುವದು ,ಅಲಂಕಾರ ಮಾಡುವುದು ಇತ್ಯಾದಿ ಕಾರ್ಯಗಳಲ್ಲಿ ಸಾಮೂಹಿಕವಾಗಿ ಪಟ್ಟಾಂಗ ಹೊಡೆದುಕೊಂಡು ತೊಡಗಿಸಿ ಕೊಂಡರೆ ಗಂಡಸರು ತರಕಾರಿ ಹಚ್ಚುವುದು , ಎಲೆ ಅಡಿಕೆ ,ಇಸ್ಪೇಟು ಆಟ ಇತ್ಯಾದಿಗಳಲ್ಲಿ ಗೌಜಿ ಮಾಡುವರು .
ಮದುವೆ ದಿನ ದಿಬ್ಬಣ ಬರುವುದಕ್ಕೆ ಮೊದಲು ತಯಾರಾಗಿ ,ಬಂದವರನ್ನು ಉಪಚರಿಸುವರು . ಪ್ರತಿಯೊಬ್ಬ ಅತಿಥಿಯೂ ಮನೆಯವರು ಮತ್ತು ಹತ್ತಿರದ ನೆಂಟರಿಂದಲೇ ಕಾಲಿಗೆ ನೀರು ,ಉಭಯ ಕುಶಲೋಪರಿ ಸ್ವಾಗತ ಪಡೆಯುವನು . ಮದುವೆ ಸಮಾರಂಭ ಆರಂಭ ದಿಂದ ಕೊನೆಯ ವರೆಗೆ ಮನೆಯವರು ತುದಿ ಕಾಲಿನಲ್ಲಿ ಇರುವರು .ಮದುವೆ ಚಪ್ಪರದ ನಡುವೆ ಮಂಟಪ . ಮುಂದುಗಡೆ ಒಂದು ಸಾಲಿನಲ್ಲಿ ಮನೆಯ ಗಂಡಸರು ;ಇನ್ನೊಂದರಲ್ಲಿ ದಿಬ್ಬಣದವರು.ಹಿಂದುಗಡೆ ಹೆಂಗಸರು . ತಾಳಿ ಯನ್ನು ಪಟ್ಟೆ ನೂಲಿನಲ್ಲಿ ಕಟ್ಟುವರು .ಆಮೇಲೆ ಉಳ್ಳವರು ಅದಕ್ಕೆ ಬಂಗಾರದ ಕರಿಮಣಿ ಮಾಡಿಸಿದರೆ ಉಳಿದವರು ಬಂದದ್ದೇ ಭಾಗ್ಯ ಎಂದು ಅದನ್ನೇ ಮುಂದುವರಿಸುವರು . ಫೋಟೋಗ್ರಾಫೆರ್ಸ್ ಗಳು ಇಲ್ಲ .ಬಂದವರು ತಮ್ಮ ಕಣ್ಣುಗಳಲ್ಲಿಯೇ ತುಂಬಿ ಕೊಳ್ಳುವರು .(ಮುಂದೆ ಮದುಮಕ್ಕಳು ಪೇಟೆಗೆ ಹೋದಾಗ ಸ್ಟುಡಿಯೋ ದಲ್ಲಿ ಒಂದು ಪಟ ತೆಗೆಸಿ ಅದನ್ನು ತಮ್ಮ ಹಾಗೂ ನೆಂಟರ ಮನೆಗಳ ಗೋಡೆಗಳಲ್ಲಿ ಅಲಂಕರಿಸುವರು .) ಅಕ್ಕಿ ಕಾಳು ಹಾಕಿ ಆಶೀರ್ವದಿಸಲು ಈಗಿನ ಹಾಗೆ ಕ್ಯೂ ಇಲ್ಲ .ಊಟಕ್ಕೆ ಹಾಕುವಾಗ ದಿಬ್ಬಾಣಿಗರಿಗೆ ಮೊದಲ ಪ್ರಾಶಸ್ತ್ಯ .ಬಡಿಸುವದು ಮನೆಯವರು ಮತ್ತು ನೆರೆಕರೆಯವರು ಆದುದರಿಂದ ಅದರಲ್ಲಿ ಒಂದು ಪ್ರೀತಿಯ ಸ್ಪರ್ಶ ಇತ್ತು .
ಇನ್ನು ಮದುವೆ ಮುಗಿಸಿ ಮನೆಗೆ ಹೋದಾಗ ಮನೆಯಲ್ಲಿಯೇ ಉಳಿದವರಿಗೆ ವಿವರ ಒಪ್ಪಿಸಬೇಕು .ಹುಡುಗ ಹೇಗಿದ್ದ .ಹುಡುಗಿಗೆ ಎಷ್ಟು ಪವನ್ ಚಿನ್ನ ಹಾಕಿದ್ದರು . ಹುಡುಗಿ ನಾಚಿಕೆ ಮಾಡಿದಳೋ ? ಊಟಕ್ಕೆ ಏನೇನು ಇತ್ತು ?ಏನಾದರೂ ಕೊರತೆ ಇತ್ತೋ ?ಹೀಗೆ ಬಂದ ಮೇಲೂ ಎರಡು ಮೂರು ದಿನ ಚರ್ಚೆ .
ಗಣರಾಜ್ಯೋತ್ಸವ ಪರೇಡ್ ಕಳಿದ ಮೇಲೆ ರಿಟ್ರೀಟ್ ಸೆರೆಮನಿ ಎಂದು ಇದೆ .ಹಾಗೆಯೇ ಪಟ್ಟೆ ಸೀರೆ ಚಿನ್ನ ಮತ್ತು ಹೋಪಲ್ಲಿಂಗೆ ಹಾಕುವ (ಸಮಾರಂಭ ಗಳಿಗೆ ಹಾಕುವ )ಬಟ್ಟೆಗಳು ಸ್ವಚ್ಛಗೊಂಡು ಟ್ರಂಕ್ ಸೇರುವವು
ಈಗಿನ ಮದುವೆಯಲ್ಲಿ ಊಟದ ಸಮಯಕ್ಕೆ ಎಲ್ಲರೂ ಬರುವರು ;ಅವರ ಭಾವ ಚಿತ್ರ ದಾಖಲೆ ಆಗುವದು ,ಮರಳುವಾಗ ಸ್ವೀಟ್ ಪೊಟ್ಟಣ . ಆದರೆ ಆಗ ನಮ್ಮ ಮನಸಿನಲ್ಲಿ ಚಿತ್ರಣ ಮತ್ತು ಸಿಹಿ ತಿಂಡಿಗೆ ಬದಲು ಸವಿ ನೆನಪುಗಳನ್ನು ಮಾತ್ರ ಒಯ್ಯುತ್ತಿದ್ದೆವು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ