ಬೆಂಬಲಿಗರು

ಸೋಮವಾರ, ಸೆಪ್ಟೆಂಬರ್ 27, 2021

ಹೀಗೆ ಒಂದು ಕತೆ

 ಹೀಗೆ ಒಂದು ಕತೆ

ಹಿಂದೆ ಕರಾವಳಿ ಪ್ರದೇಶದಿಂದ ಘಟ್ಟಕ್ಕೆ ಕೆಲಸ ಹುಡುಕಿ ಹೋಗುತ್ತಿದ್ದರು . ಇಲ್ಲಿ ಭತ್ತ ಜಾಸ್ತಿ ಬೆಳೆಯುತ್ತಿದ್ದ ಸಮಯ . ಕಾರ್ಮಿಕರ ಅವಶ್ಯಕತೆ ಸೀಸನ್ ಮೇಲೆ ಹೊಂದಿ ಕೊಂಡು . ಮಲೆನಾಡಿನಲ್ಲಿ ಮಲೇರಿಯಾ ಹಾವಳಿ ಕರಾವಳಿಗಿಂತ ಜಾಸ್ತಿ ಇತ್ತು .ವಾಣಿಜ್ಯ ಬೆಳೆಗಳು ಅಧಿಕ .ಜತೆಗೆ ಬ್ರಿಟಿಷರು ಆರಂಭಿಸಿದ ಪ್ಲಾಂಟೇಶನ್ ಗಳ ಆಕರ್ಷಣೆ . ಕುವೆಂಪು ಅವರ ಕಾದಂಬರಿಗಳಲ್ಲಿ ಕನ್ನಡ ಜಿಲ್ಲೆಯ ಆಳುಗಳು ಮತ್ತು ಸೇರೆಗಾರರ ಚಿತ್ರಣ ಯಥೇಚ್ಚ ಬರುತ್ತದೆ .ಇಲ್ಲಿಂದ ವಲಸೆ ಹೋದ ಕಾರ್ಮಿಕರು ತಮ್ಮ ಜತೆಗೆ ಇಲ್ಲಿಯ ಭೂತಗಳನ್ನು ,ಆಚರಣೆಗಳನ್ನು ಮತ್ತು ಯಕ್ಷಗಾನ ಪ್ರೇಮವನ್ನು ತಮ್ಮೊಡನೆ ಒಯ್ದರು .ಈಗ ರಿವರ್ಸ್ ಮೈಗ್ರೇಶನ್ ಅಥವಾ ಹಿಮ್ಮುಖ ವಲಸೆ ನಡೆಯುತ್ತಿದೆ .ನಮ್ಮಲ್ಲಿ ಕೂಲಿ ಕಾರ್ಮಿಕರು ಸಿಗುವುದಿಲ್ಲ . ಘಟ್ಟದ ಮೇಲಿಂದ ,ಉತ್ತರ ಕರ್ನಾಟಕದಿಂದ  ಅದೃಷ್ಟ ಅರಸಿ ಬರುವ ಜನರನ್ನು ಮತ್ತು ಇತ್ತೀಚಿನ ವರ್ಷಗಳಲ್ಲಿ ಉತ್ತರ ಮತ್ತು ಈಶಾನ್ಯ ಭಾರತ ದ ಕೆಲಸಗಾರರು ಎಲ್ಲೆಲ್ಲೂ . ಸಾರ್ವಜನಿಕವಾಗಿ ಇಂತಹ ಕೆಲಸ ಗಾರರನ್ನು  ಅತಿಯಾಗಿ ಟೀಕಿಸುವವರೂ ತಮ್ಮಲ್ಲಿ  ಇವರನ್ನು ಇಟ್ಟು ಕೊಂಡಿರುವರು . ಕಾರ್ಮಿಕ ವ್ಯವಸ್ಥೆ ಶತ  ಶತಮಾನಗಳಿಂದ ಹೀಗೆಯೇ ನಡೆದಿದೆ .ನೀರು ಮಟ್ಟವನ್ನು ನೋಡಿ ಹರಿದಂತೆ ;ಯಾರು ಎಷ್ಟೇ ಬೊಬ್ಬೆ ಹಾಕಿದರೂ ಇದನ್ನು ನಿಲ್ಲಿಸುವುದು ಕಷ್ಟ. 

ಒಂದು ಕಾಲದಲ್ಲಿ ಕುಟುಂಬಗಳು ದೊಡ್ಡದು ಇದ್ದವು . ಹುಡುಗಿಯರಿಗೆ ಗಂಡು ಹುಡುಕಿ ಮದುವೆ ಮಾಡುವುದು ಹೆಚ್ಚಿನವರಿಗೆ ಹರ ಸಾಹಸ .ಅದರಲ್ಲೂ ಹೆಣ್ಣು ಮಕ್ಕಳೇ ಜಾಸ್ತಿ ಇದ್ದರೆ ಮುಗಿಯಿತು . ಹುಡುಗಿ ವಯಸ್ಸಿಗೆ ಬಂದಂತೆಲ್ಲಾ ಹೆತ್ತವರ ಕೊರಳಿಗೆ ಕಟ್ಟಿದ ಭಾರ .  ಹವ್ಯಕರಲ್ಲಿ ಕುಂಬಳೆ ,ವಿಟ್ಲ ಮತ್ತು ಪುತ್ತೂರು ಸೀಮೆಯ ಹಲವು ಹುಡುಗಿಯರನ್ನು ಘಟ್ಟದ ಮೇಲೆ ಶಿರಸಿ ಸಿದ್ದಾಪುರ ,ಸಾಗರ ಕಡೆಗೆ ಮದುವೆ ಮಾಡಿ ಕೊಡುತ್ತಿದ್ದರು .ಆಗ  ಸಾರಿಗೆ ಸಂಪರ್ಕ ದುರ್ಗಮ . ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬುದು ಅಕ್ಷರಶಃ ಸತ್ಯ ವಾಗುತ್ತಿತ್ತು . ತಾಯಿ ಮಗಳನ್ನು ಪುನಃ ನೋಡುವುದು ಮತ್ತು ವೈಸ್ ವರ್ಸಾ ಅಪರೂಪ . 

ಇನ್ನು ಕೆಲವು ತಂದೆ ತಾಯಿ ಎರಡನೇ ಸಂಬಂಧ ಕ್ಕೆ ಅಥವಾ ವಯಸ್ಸಾದ ವರನಿಗೆ ಮಗಳನ್ನು ಕೊಡ ಬೇಕಿತ್ತು .ಹೀಗೆ ಮದುವೆ ಆದವರೂ ಹಲವರು ಮೇಲ್ನೋಟಕ್ಕೆ  ಸುಖವಾಗಿ ಇದ್ದರೆನ್ನಿ . ಹಲವು ಗಂಡಸರು ಮಕ್ಕಳಾಗಲಿಲ್ಲ ,ಇನ್ನು ಕೆಲವರು ಗಂಡು ಮಕ್ಕಳು ಇಲ್ಲ ಎಂದು ಎರಡು ಮೂರು ಮದುವೆ ಆಗುತ್ತಿದ್ದರು . 

ಮಾಸ್ತಿ ಯವರ ಜೀವನ ಚರಿತ್ರೆ 'ಭಾವ 'ದಲ್ಲಿ ಒಂದು ಪ್ರಸಂಗ ಬರುತ್ತದೆ . ಬಾಲ್ಯದಲ್ಲಿ ಕೆ ಆರ್  ಪೇಟೆಯ ಅವರ  ಶಾಲೆಯ ಹೆಡ್ ಮಾಸ್ಟರ್ ಆಗಿದ್ದ ವರದ ರಾಜಯ್ಯ ನವರು ಒಂದು ದಿನ ಬೆಂಗಳೂರಿನಲ್ಲಿ ಇವರ ಮನೆಗೆ ಮಗಳ ಜತೆ (ಮಂಗಳಾ ಅವಳ ಹೆಸರು ) ಬಂದು ತಮ್ಮಿಂದ ಒಂದು ಸಹಾಯ ಆಗ ಬೇಕಿತ್ತು  ಎಂದು ಒಬ್ಬ ಹಿರಿಯ ವಕೀಲರ ಹೆಸರು ಹೇಳಿ ,ಅವರ ಹೆಂಡತಿ ತೀರಿ ಹೋಗಿದ್ದ ಸಮಾಚಾರ ತಿಳಿಯಿತು .;ನಿಮ್ಮ ಮಿತ್ರರಾದ ಅವರಿಗೆ ಹೇಳಿ ನನ್ನ ಮಗಳನ್ನು ಮದುವೆಗೆ ಪರಿಗಣಿಸುವಂತೆ ಶಿಫಾರಸು ಮಾಡ ಬಹುದೇ ?ಎಂಬುದು ಗುರುವಿನ ಬೇಡಿಕೆ .  ಹುಡುಗಿ ಇನ್ನೂ ಹದಿನಾರು ವರ್ಷದವಳು ಆ ವಕೀಲರಾದರೋ ಅವಳ ತಂದೆಯ ಪ್ರಾಯದವಳು . ಮಾಸ್ತಿಯವರು ಒಲ್ಲದ ಮನಸಿನಿಂದ ನೋಡುವಾ ಎಂದು ಸಾಗ ಹಾಕುವರು . ಗೇಟಿನ ವರಗೆ ಆ ನಡೆಯುತ್ತಾ ಗುಟ್ಟಾಗಿ ಹುಡುಗಿಗೆ ಈ ವಯಸ್ಸಿನ  ಅಂತರ ದ  ಬಗ್ಗೆ ಆಕ್ಷೇಪ ಇಲ್ಲವೇ ಎಂದು ಕೇಳುವರು . ಇಲ್ಲ ಎಲ್ಲಾ ಸೆಟ್ಲ್ ಮಾಡಿದ್ದೇನೆ ಎನ್ನುವರು ಅತಿಥಿ . ಮೆಟ್ಟಲು ಇಳಿಯುವಾಗ ಹುಡುಗಿ ತಂದೆಯೊಡನೆ ಗುಟ್ಟಾಗಿ ಏನೋ ಕೇಳುವಳು .ಅವರು ಪ್ರತಿಯಾಗಿ ಬೇಡ ಬೇಡ ಈಗ ಅದೆಲ್ಲ ಎನ್ನುವರು .ಮಾಸ್ತಿಯವರು ಈ ಹುಡುಗಿ ಸಂಬಂಧ ಬೇಡ ಎಂದು ಹೇಳುತ್ತಿರಬೇಕು ಎಂದು ಕೊಂಡು ಕುತೂಹಲದಿಂದ ಏನಂತೆ ಅವಳಿಗೆ ಎಂದು ಕೇಳುತ್ತಾರೆ . "ಇಲ್ಲಾ ನಿಮ್ಮ ಮರದಿಂದ ಸ್ವಲ್ಪ ಸಂಪಿಗೆ ಹೂ ತೆಗೆದು ಕೊಳ್ಳಲೇ ಎಂದು ಕೇಳುತ್ತಿರುವಳು 'ಎಂದರು .ಮುಂದಿನ ಮಾತುಗಳನ್ನು ಮಾಸ್ತಿಯವರ ಶಬ್ದ ಗಳಲ್ಲಿಯೇ ಓದಿರಿ . 

 

ನನ್ನ ಯೋಚನೆಯೆಲ್ಲಿ ?ಈ ಎಳೆ ಉಸಿರಿನ ಯೋಚನೆ ಎಲ್ಲಿ ?ಈ ಸಣ್ಣ ಹುಡುಗಿ ಅಷ್ಟು ವಯಸ್ಸಾದವನನ್ನು ಮದುವೆ ಆಗುವುದೇ ಎಂದು ನನ್ನ ಚಿಂತೆ .ಇಷ್ಟ ರಾದವರ ಮನೆಗೆ ಬಂದಿದ್ದೇವೆ ,ಆ ಮನೆಯ ಸಂಪಿಗೆ ಮರದ ತುಂಬಾ ಹೂ ಇದೆ ,ನಾಲ್ಕು ಹೂ ತೆಗೆದು ಕೊಳ್ಳೋಣ ಎಂದು ಅವಳ ಯೋಚನೆ .ಆ  ಹುಡುಗಿಯನ್ನು ನೋಡಿ ನನಗೆ ತುಂಬಾ ಮರುಕ ಆಯಿತು .''ಪಾಪ ಸಣ್ಣ ಹುಡುಗಿ ಹೂ ಬೇಕು ಅಂದರೆ ಬೇಡ ಅಂತ ಯಾಕಂತೀರಿ ?ಇರು ತಾಯಿ  ಎಂದು ಅಳನ್ನು ಕರೆದು ಅವಳ ಕೈ ತುಂಬಾ ಹೂ ತುಂಬಿ ಕಳುಹಿಸಿದೆನು "

ಬಾಲಂಗೋಚಿ :ಇದರಲ್ಲಿ ನಾನು ಯಾರನ್ನೂ ಉದ್ದೇಶ ಪೂರ್ವಕ ತಪ್ಪು ಮಾಡಿದವರು ಎಂದು ಹೇಳಲಾರೆ ,ಆಗಿನ ಕಾಲ ,ಸಾಮಾಜಿಕ ವ್ಯವಸ್ಥೆಯಲ್ಲಿ  ಎಲ್ಲರೂ ದಾಳಗಳು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ