ಬೆಂಬಲಿಗರು

ಬುಧವಾರ, ಸೆಪ್ಟೆಂಬರ್ 22, 2021

ಯುರೇಕಾ

                                 ಯುರೇಕಾ 

                   

ನನಗೆ ಒಂದು ರೋಗ ಇದೆ ;ಯಾವುದಾದರೂ ವಿಷಯ ಓದುವಾಗ ,ಬರೆಯುವಾಗ ಮತ್ತು ಆಲೋಚಿಸುವಾಗ  ಹಿಂದೆ ನನ್ನ ಜ್ಞಾನದ ಪರಿಧಿಗೆ ಬಂದ  ವಿಷಯ ಜ್ಞಾಪಕಕ್ಕೆ ಬರದಿದ್ದರೆ ಅದರ ಬಗ್ಗೆಯೇ ಮೆಲುಕು ಹಾಕಿ ಕಂಡು ಹಿಡಿಯಲು ಯತ್ನಿಸುವುದು .ಕೆಲವೊಮ್ಮೆ ನಡು  ರಾತ್ರಿ ಎದ್ದು ಪುಸ್ತಕಗಳಲ್ಲಿ ಹುಡುಕಿದ್ದು ಇದೆ . ಇದು ಜೀವ ಹೋಗುವ ವಿಚಾರ ಅಲ್ಲದಿದ್ದರೂ ಮರೆವು ನನ್ನನ್ನು ಗೆಲ್ಲಲು ಬಿಡಬಾರದು ಎಂಬ ಹಠ . 

 ಕೆಲವು ದಿನಗಳ ಹಿಂದೆ ಜಿ ಪಿ  ರಾಜರತ್ನಂ ಬಗ್ಗೆ ಬರೆದಿದ್ದೆನಷ್ಟೆ . ಆಗ ಅವರ ಬಗ್ಗೆ ಅವರ ಶಿಷ್ಯರೊಬ್ಬರು ಬರೆದ ಸಂಭವ ನೆನಪಿಗೆ ಬಂತು .ಆದರೆ ಅದು ಯಾವ ಪುಸ್ತಕ ;ಬರೆದ ಶಿಷ್ಯ ಯಾರು ಎಂದು ಎಷ್ಟು ತಲೆಕೆರೆದು ಕೊಂಡರೂ ನೆನಪಿಗೆ ಬರದು .ಶಿವರುದ್ರಪ್ಪ ಇರ ಬಹುದು ಎಂದು ಕೊಂಡೆ .ಆದರೆ ಪುರಾವೆ ಇಲ್ಲದ ಕಾರಣ ನನ್ನ ಬರಹದಲ್ಲಿ ಅದನ್ನು ಉಲ್ಲೇಖ ಮಾಡಲಿಲ್ಲ . 

ಈವತ್ತು ಅದು ಪರಿಹರಿಯಿತು .ಅವರು ಬೇರೆ ಯಾರೂ ಅಲ್ಲ .ಕನ್ನಡಿಗರು ಎಲ್ಲರೂ ನೆನೆಪಿನಲ್ಲಿ ಇಟ್ಟು ಕೊಳ್ಳ ಬೇಕಾದ ರಸಾಯನ ಶಾಸ್ತ್ರ ಪ್ರಾಧ್ಯಾಪಕ ಮತ್ತು ಕನ್ನಡದಲ್ಲಿ ವಿಜ್ಞಾನ ಶಿಕ್ಷಣ ಪ್ರಸಾರಕ್ಕೆ ದೊಡ್ಡ ಕೊಡುಗೆ ನೀಡಿದ ದಿ .ಜೆ ಆರ್ ಲಕ್ಷ್ಮಣ ರಾವ್ . ಅವರು ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ವಿದ್ಯಾರ್ಥಿಯಾಗಿ ಎರಡು ವರ್ಷ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಡಿಗ್ರಿ ತರಗತಿಯಲ್ಲಿ ಎರಡು ವರ್ಷ ಜಿ ಪಿ ರಾಜರತ್ನಂ ಅವರ ವಿದ್ಯಾರ್ಥಿ .ತಮ್ಮ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದ ರಾಜರತ್ನಂ  ಜೆ ಆರ್ ಲಕ್ಷ್ಮಣ ರಾಯರನ್ನು ಲೇಖಕ ಮಾಡುವುದರಲ್ಲಿಯೂ ಪಾತ್ರ ವಹಿಸಿದವರು . 

ನಾನು ನೆನಪಿಸಿ ಕೊಂಡ ಪ್ರಸಂಗ ಹೀಗಿದೆ .ತುಮಕೂರು ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಲೆಕ್ಚರರ್ ಆಗಿ ಲಕ್ಷಣ ರಾಯರು ಸೇರಿಕೊಂಡಾಗ ರಾಜರತ್ನಂ ಕೂಡಾ ಅಲ್ಲಿ ಪ್ರಾಧ್ಯಾಪಕರು ..ಲಕ್ಷ್ಮಣ ರಾಯರು ತಿಂಗಳ ಮೊದಲ ದಿನ ಸಂಬಳ ತೆಗೆದು ಕೊಳ್ಳಲು ಆಫೀಸ್ ಗೆ ಹೋದಾಗ ಸಂಬಳ ರಿಜಿಸ್ಟರ್ ನಲ್ಲಿ ರಾಜ ರತ್ನಮ್ ಆಗಲೇ ಸಹಿ ಮಾಡಿ ಹಣ ಪಡೆದು ಹೋಗಿದ್ದರು .ಆದರೆ ಅವರ ಸಂಬಳ ರೂಪಾಯಿ ಅರುವತ್ತು ,ಅವರ ಶಿಷ್ಯ ಈಗ ತಾನೇ ಸೇರಿಕೊಂಡ ತನಗೆ ಎಪ್ಪತ್ತೈದು . ರಾಜರತ್ನಂ ಪ್ರಕಾಂಡ ಪಂಡಿತರೂ ,ಲೇಖಕರೂ ಆಗಿದ್ದರೂ ಅವರಿಗೆ ಎಂ ಎ   ಪದವಿ ಇರದೇ ಪಂಡಿತ ಮಾತ್ರ ಆಗಿದ್ದುದು ಕಾರಣ .ಶಿಷ್ಯನಿಗೆ ಬೇಸರ ಮತ್ತು ಮುಜುಗರ .ಗುಮಾಸ್ತೆಯ ಬಳಿ "ಇನ್ನು ಮುಂದೆ ನಾನು ಮೊದಲ ದಿನ ಸಂಬಳ ತೆಗೆದು ಕೊಳ್ಳದೆ ಎರಡನೇ ಇಲ್ಲ ಮತ್ತೆ ತೆಗೆದು ಕೊಳ್ಳುವೆ .ಗುರುಗಳ ಎದುರು ನಾನು ಹೆಚ್ಚು ಸಂಬಳ ಎಣಿಸುವುದು ಸರಿಯಲ್ಲ . "ಎಂದರಂತೆ .ಹ್ಯಾಗೋ ಇದು ರಾಜರತ್ನಂ ಅವರಿಗೆ ಗೊತ್ತಾಗಿ ಇವರನ್ನು ಹಾಗೆ ಮಾಡ ಬೇಡ ಎನ್ನುವರು .ಕೆಲ ತಿಂಗಳುಗಳ ತರುವಾಯ  ಉಪಕುಲಪತಿಯಾಗಿ ಬಂದ ಸಿಂಗಾರ ವೇಲು ಮೊದಲಿಯಾರ್ ಈ ತಾರತಮ್ಯ ಸರಿ ಪಡಿಸಿ ರಾಜರತ್ನಂ ಅವರನ್ನೂ ಲೆಕ್ಚರರ್ ಆಗಿ ಪರಿಗಣಿಸಿ ಸಂಬಳವನ್ನು ೯೦ ರುಪಾಯಿಗೆ ನಿಗದಿ ಪಡಿಸಿತು .ಹಿಂದಿನ ಬಾಕಿ ಕೂಡಾ ಸಿಕ್ಕಿರಬೇಕು .ರಾಜರತ್ನಂ ಲಕ್ಷ್ಮಣ ರಾಯರನ್ನು ಕರೆದು ನೀನು ಇನ್ನು ಅಡಗ ಬೇಕಿಲ್ಲ ,ಎಂದು ಹೋಟೆಲ್ ಗೆ ಕರೆದು ಕೊಂಡು ಹೋಗಿ ಜಿಲೇಬಿ ತಿನಿಸಿದರು . ಸಣ್ಣ ಸಣ್ಣ ಸೂಕ್ಷ್ಮ ವಿಚಾರಗಳು .ದೊಡ್ಡ ಮನಸು . 

ಜೆ ಆರ್ ಎಲ್ ಅವರ ಆತ್ಮ ಚರಿತ್ರೆ " ನೆನಪಿನ ಅಲೆಗಳು ' ನಾನು ಮೆಚ್ಚಿದ ಕೃತಿಗಳಲ್ಲಿ ಒಂದು .ನೀವೂ ಓದಿರಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ