ಬೆಂಬಲಿಗರು

ಶುಕ್ರವಾರ, ಜುಲೈ 12, 2013

ನನ್ನ ಅಜ್ಜ ಮತ್ತು ಪುತ್ತೂರು ಪೇಟೆ


ಹಿಂದೆ ಹಳ್ಳಿಯಲ್ಲಿ ಆಢ್ಯ ವ್ಯಕ್ತಿಗಳು ನಗರಕ್ಕೆ ಆಗಾಗ ಭೇಟಿ ಕೊಡಲು ಒಂದೋ ಎರಡನೇ ಸಂಭಂಧ ,ಇಲ್ಲವಾದರೆ ಕೋರ್ಟ್ ಕೇಸ್

ಇಟ್ಟುಕೊಳ್ಳುತ್ತಿದ್ದರು.ಕೆಲವರಿಗೆ ಎರಡೂ ಇತ್ತು.ಆಗಿನ ಸನ್ನಿವೇಶದಲ್ಲಿ ಎರಡೂ ಅಸ್ಟು ವಿಚಿತ್ರವೆನಿಸುತತ್ರಲಿಲ್ಲ.

ನನ್ನ ಅಜ್ಜನೂ ಎರಡನೇ ವ್ಯಸನ ಇದ್ದವರು.ಕೋರ್ಟ್ ಕೇಸ್ ಗೆ ಇಲ್ಲದ ನೀರಿನ ಮೂಲವೋ ,ಬೇಡದ ನಿರುಪದ್ರವಿ ಮರದ ಮೇಲಿನ ಹಕ್ಕು

ಸಾಧನೆಯೋ ಸಾಕಾಗುತ್ತಿತ್ತು.ನಮ್ಮ ಗದ್ದೆಗೆ ತಾಗಿ ಒಂದು ನೀರಿನ ಮೂಲ ಇತ್ತು.ಅದು ನಮ್ಮದೆಂದು ಅಜ್ಜನೂ ,ಅವರದೆಂದು ಪಕ್ಕದ

ಮನೆಯವರದೂ ವಾದ .ಸರಿ ,ಪುತ್ತೂರು ಕೋರ್ಟ್ ಹತ್ತಿತು ವಿವಾದ.ಕೇಸ್ ನ ಹಿಯರಿಂಗ್ ಗೆ ಅಜ್ಜ ಹೋಗಿ ಬಂದು ರಾತ್ರಿ ಸ್ನಾನದ


ಮನೆಯಲ್ಲಿ ಅಲ್ಲಿಯ ಕತೆಗಳನ್ನು ರೋಚಕವಾಗಿ ಹೇಳುವರು.ನಾವು ಬಿಸಿ ನೀರ ಒಲೆಯ ಬಳಿ ಮೈ ಕಾಯಿಸುತ್ತಾ ಕಣ್ಣು ಬಾಯಿ ಬಿಟ್ಟು


ಕೇಳುತ್ತಿದ್ದೆವು.ಸದಾಶಿವ ರಾಯರು ಹಾಕಿದ ಪೈಂಟಿಗೆ(point) ಜಡ್ಜರು ತೆರೆದ ಬಾಯಿ ಮುಚ್ಚಲೇ ಇಲ್ಲ ಎನ್ನುವರು.ಅವರ ಲೀಗಲ್


ವೊಕ್ಯಾಬುಲರಿ ಯಲ್ಲಿ  ಹೆರಿಂಗ್ ,ಕೈಪೇತು(ಕೇವಿಯಟ್),ಕ್ರಾಸ್ (ಕ್ರಾಸ್ ಎಕ್ಷ್ಜಾಮಿನೇಶನ್),ಡಿಕ್ರೀ,ಇಂಜಕ್ಶನ್ ಇಂತಾದ ಶಬ್ದಗಳು


ಮೇಲಿಂದ ಮೇಲೆ ಬರುತ್ತಿದ್ದವು.ವಕೀಲರ ಮನೆಗೆ ಹೋಗುವಾಗ ಫೀಸಿನ ಜತೆ ಬಾಳೆಗೊನೆ ,ಮನೆಯಲ್ಲಿ ಬೆಳೆದ ತರಕಾರಿ

ಕೊಂದೊಯ್ಯುವುದೂ ಇತ್ತು.ವಕೀಲ ಕಕ್ಷಿ ಸಂಬಂಧದಲ್ಲಿ ಒಂದು ಆತ್ಮೀಯತೆ ಇತ್ತು.


ವಕೀಲ ಸದಾಶಿವ ರಾಯರ ಮನೆ ದಾರಿಯಲ್ಲಿ ಕುಂಬ್ಳೆಕಾರ್ಸ್ ಎಂಬ ಬಟ್ಟೆ ಅಂಗಡಿ ಇತ್ತು. ಅದರ ಎದುರಿಂದ ಹಾಯುವಾಗ


ಅಂಗಡಿ ಧಣಿಗಳು  ‘ಭಟ್ರೇ ಒಳ್ಳೆಯ ಕೋಮಣ ಬಟ್ಟೆ ಬಂದಿದೆ ಕೊಂಡು ಹೋಗುವಿರೋ ಎಂದು ಈಗಿನ ಮೊಬೈಲ್ ಅಂಗಡಿಯವರು


ಹೊಸ ಮಾಡೆಲ್ ಬಂದಿದೆ ಎಂದು ಗಿರಾಕಿಗಳನ್ನು ಸೆಳೆಯುವಂತೆ ಕೇಳುತ್ತಿದ್ದರು. ಕೌಪೀನ ಹಳ್ಳಿಯ ಅಧಿಕೃತ ಉಡುಪು ಆಗಿದ್ದ ಕಾಲ.


ಕೆಲವೊಮ್ಮೆ ಅಜ್ಜನ ಜೊತೆ ನಾವೂ ಪುತ್ತೂರಿಗೆ ಬರುವುದಿತ್ತು.ಬಸ್ ಸ್ಟಾಂಡ್ ನ ಎದುರು ಜನತಾ ಫುಟ್ ವೇರ್ ಅಂದಡಿಯಿತ್ತು .ಈಗಲೂ


ಇದೆ .ಅಲ್ಲಿ ಅಬ್ದುಲ್ ಖಾದರ್ ಎಂಬ ಸಜ್ಜನ ಇದ್ದರು.ಮಕ್ಕಳನ್ನು ಸುಮ್ಮನೆ ನಡೆಸುವುದು ಬೇಡ ಎಂದು ನಮ್ಮನ್ನು ಈ ಅಂಗಡಿಯಲ್ಲಿ

ಕುಳ್ಳಿರಿಸಿ ಈಗ ಬರುತ್ತೇನೆ ಎಂದು ಹೋದವರು ಗಂಟೆ ಯಾದರೂ ಬರುತ್ತಿರಲಿಲ್ಲ .ನಮಗೋ ಪೇಟೆಯವರನ್ನು ಕಂಡರೆ ಭಯ.

ಆಗ ಇಂತಹ ಅಂಗಡಿಗಳು ಹಳ್ಳಿಯವರ ಕ್ಲಾಕ್ ರೂಂ ಗಳೂ ಆಗಿರುತ್ತಿದ್ದವು.ಅಂಗಡಿಯವರು ಅಲ್ಲಿ ಇಟ್ಟ ಸಾಮಗ್ರಿಗಳನ್ನು ಯಾವುದೇ


ಫೀ ಇಲ್ಲದೆ ಜೋಪಾನ ವಾಗಿ ಇಡುತ್ತಿದ್ದರು.ಈ ಜನಾಬ್ ಅಬ್ದುಲ್ ಖಾದರ್ ಬಗ್ಗೆ ಒಂದು ಮಾತು ಹೇಳಬೇಕು .ನಾವು ರಜೆಯಲ್ಲಿ


ನೆಂಟರ ಮನೆಗೆ ಹೋಗುವ ದಾರಿಯಲ್ಲಿ ಚಪ್ಪಲಿ ಬೇಕೆನಿಸಿದರೆ ಸೀದಾ ಅವರ ಅಂಗಡಿಗೆ ಹೋಗಿ ಇಂತಹ ಚಪ್ಪಲಿ ಬೇಕೆಂದು ಆಯ್ದು


ಕಾಲಿಗೆ ಹಾಕಿ ಕೊಂಡು ಹೋಗುವುದೇ.ಹಣ ತಂದೆ ಕೊಡುತ್ತಾರೆ ಎಂದು ಹೇಳುತ್ತಿದ್ದೆವು .ನಿಮ್ಮ ತಂದೆ ಯಾರು ,ಯಾವಾಗ ಕೊಡುತ್ತಾರೆ

ಎಂದು ಅವರು ಕೇಳಿದವರಲ್ಲ.ಅದೇ ರೀತಿ ಬಸ್ ಸ್ಟಾಂಡ್ ನಲ್ಲಿ ಕಿತ್ತಳೆ ಮಾರುವ ಮಹನೀಯರಿದ್ದರು.ಹಳ್ಳಿಯವರಿಗೆ ಅವರವರಿಗೆ ಬೇಕಾದ


ಬಸ್ ತೋರಿಸುವರು.ಅವರ ಸಮಾಜ ಸೇವೆ ಸ್ಮರಿಸುವಂತಹುದು.


ನನ್ನ ಅಜ್ಜ ಇಳಿ ವಯಸ್ಸಿನಲ್ಲೂ ಕೈಯಲ್ಲಿ ಬೆತ್ತ ಹಿಡಿದು ಪುತ್ತೂರು ಪೇಟೆಯಿಡೀ ನಡೆದೇ ಹೋಗುತ್ತಿದ್ದರು.ಬಹಳ ದಿನ ಕೋರ್ಟ್

ಕೇಸ್ ಇಲ್ಲದಿದ್ದರೆ ಇಲ್ಲದ ಕಾಯಿಲೆಯನ್ನು ಊಹಿಸಿ ಕೊಂಡು ಕೋರ್ಟ್ ರಸ್ತೆಯ ಪ್ರಸಿದ್ದ್ದ ವೈದ್ಯ ಸುಂದರ ರಾಯರ ಬಳಿಗೆ ಸವಾರಿ ಇಡುತ್ತಿದ್ದರು.

 . ಡಾಕ್ಟರ್ ಅಲ್ಲಿ ಮುಟ್ಟಿ ನೋಡಿದರು ,ಇಲ್ಲಿ ಕುಟ್ಟಿ ನೋಡಿದರು ಎಂದು ವರ್ಣಮಯವಾಗಿ ವಿವರಿಸುತ್ತಿದ್ದರು.ಸುಂದರ ರಾಯರು


 ಕೊಟ್ಟ ಟಾನಿಕ್ ಶ್ರದ್ದೆಯಿಂದ ಕುಡಿಯುತ್ತಿದ್ದರು.

ಮೊಮ್ಮಕ್ಕಳನ್ನು ಹೋಟೆಲ್ ಗೆ ಕರೆದೊಯ್ದು  ಇವರಿಗೆ ಬೇಕಾದ್ದೆಲ್ಲ ಕೊಡಿ ಎಂದು ಅದೇಶಿಸುತ್ತಿದರು.

ಬಾಲಂಗೋಚಿ.:

ವಕೀಲ ಸದಾಶಿವ ರಾಯರು ಇಳಿ ವಯಸ್ಸಿನಲ್ಲಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು.ಅವರು ನಡೆದೇ

ಹೋಗುತ್ತಿದ್ದರು .ಅವರ  ನಂತರದ ತಲೆಮಾರಿನ ಬೋಳಂತ ಕೋಡಿ  ಈಶ್ವರ ಭಟ್ಟರೂ ಕನ್ನಡ ಸಂಘದ ಕಾರ್ಯ ಕೋರ್ಟ್ ಆಫೀಸ್

ಪತ್ರಿಕೋದ್ಯಮ ಕೆಲಸ ಎಂದು ನಡೆದು ಕೊಂಡೆ ಓಡಾಡಿದವರು .ಶಿವರಾಮ ಕಾರಂತರು  ಪರ್ಲಡ್ಕ ಮನೆಯಿಂದ ಪೇಟೆಗೆ ನಡೆದು


ಬಂದು ಹೋಗುತ್ತಿದ್ದರು.ಈಗ ನಮಗೆ ನಡೆಯುವುದಕ್ಕೆ ಅಭಿಮಾನ ಬಿಡುವುದಿಲ್ಲ.ಒಂದು ವೇಳೆ ಬಿಟ್ಟರೆ ರಸ್ತೆಯಲ್ಲಿ ಪಾದಚಾರಿಗಳಿಗೆ


ನಡೆಯಲು ಫುಟ್ ಪಾತ್ ಇಲ್ಲ ನಾನು ಈಗ ಎಲ್ಲಿಯಾದರೂ ಪೇಟೆಯಲ್ಲಿ ನಡೆಯುವುದು ಕಂಡ ಪರಿಚಿತರು  ಡಾಕ್ಟರ್ ಕಾರ್


ತರಲಿಲ್ಲವೆ ಎಂದು ಕೇಳುತ್ತಾರೆ ,ಕೆಲವರು ಏನು ನಡೆಯುವುದು ,ಪ್ರಾಕ್ಟೀಸ್ ಸರಿಯಾಗಿ ನಡೆಯುತ್ತ ಇಲ್ಲವೇ ಎಂದು ಪ್ರಶಿಸುತ್ತಾರೆ.

ವಿಷಯ ಎಲ್ಲಿಂದ ಎಲ್ಲಿಗೆ ಹೋಯಿತು.ನಮ್ಮ ಮತ್ತು ಅಜ್ಜನ ಸಂಭಾಷಣೆಯಂತೆ.
ಬಾಲಂಗೋಚಿ 
ಇದನ್ನು ಪೋಸ್ಟ್ ಮಾಡಿದ ಮೇಲೆ ಈಗಿನ ತಲೆಮಾರಿನ ಕೆಲವರು ಕೋಮಣ ಎಂದರೆ ಏನೂ ಎಂದು ನನ್ನಲ್ಲಿ ವಿಚಾರಿಸಿದರು .ಇದು ಆಗ ನಾವು ಮಾನ ಮುಚ್ಚಲು  ಬಳಸುತ್ತಿದ್ದ  ಬಟ್ಟೆ  ಮಕ್ಕಳು ಹಳೇ ಬಿಳಿ ಪಂಚೆಯನ್ನು ಆಯತ ಆಕಾರದಲ್ಲಿ ಕಟ್ ಮಾಡಿ ಉಡಿದಾರಕ್ಕೆ ಸಿಕ್ಕಿಸಿ ಕೊಳ್ಳುತ್ತಿದ್ದೆವು .ಹಿರಿಯರು  ಈ ಆಕಾರದ ಕೋರಾ ಬಟ್ಟೆಯ ಸಿದ್ದ ವಸ್ತ್ರ .ಮತ್ತು ಹೆಚ್ಚು ಜನಪ್ರಿಯ ಚೌಕಕಾರದ ಕೆಂಪು ಬಿಳಿ ಬಣ್ಣದ  ಕೌಪೀನ (ಸಂಸ್ಕೃತ) ಉಡುತ್ತಿದ್ದರು .
              ಕೆಳಗೆ ತೋರಿಸಿದ  ಡಿಸೈನ್ ಆಕಾರ ಚೌಕ
ಈ ಚೌಕ  ಬಟ್ಟೆ ಬಹುಪಯೋಗಿ .ಉಟ್ಟರೆ ಕೌಪೀನ ವಾದೆ ,ಕರದಲ್ಲಿ ಕರವಸ್ತ್ರ ವಾದೆ ,ತಲೆಗಿಟ್ಟರೆ ಟೋಪಿಯದೆ ,ಅಡಿಗೆ ಮನೆಯಲ್ಲಿ ಚಹಾ ,ಕಾಯಿ ಹಾಲು ಸೋಸು ವ  ಅರಿಪ್ಪೆಯಾದೆ .ನೀ ನಾರಿ ಗಾದೆಯೋ ಎಲೆ ಮನವಾ -ಇದನ್ನು ನೀನು ಅರಿಗಾದೆಯೋ ,ನೀ  ನಾರಿ(ಹೆಣ್ಣು )ಗಾದೆಯೋ ಎಂದು ಅವರವರ ಭಾವಕ್ಕೆ ಸರಿಯಾಗಿ ವಿಮರ್ಶೆ ಮಾಡುವರು.  ಕೌಪೀನ ಮತ್ತು ಮೇಲೆ ಒಂದು ತುಂಡು ಬಟ್ಟೆ ಕೃಷಿಕರಿಗೆ   ಬಹಳ ಅನುಕೂಲ .ಅದೇ  ನಮ್ಮ ಕಾಲದ ವಿ ಐ ಪಿ ,ಜೋಕಿ .ಅದನ್ನು ಉಟ್ಟು ಕೊಂಡು ನಾವು ಕ್ರಿಕೆಟ್ ,ಕಬಡ್ಡಿ ಆಡಿದ್ದೇವೆ .
ನಮ್ಮ ಅಜ್ಜಿ ಮಾಂಬಳ ಎರೆದು ಒಣಗಿಸಿ ಆಯತ  ಕೋಮಣ ರೂಪದಲ್ಲಿ ತುಂಡು ಮಾಡಿ ಶೇಖರಿಸುತ್ತಿದ್ದರು ನಾವು ಅವರನ್ನು ನನಗೊಂದು ಕೋಮಣ ನನಗೊಂದು ಎಂದು ಪೀಡಿಸುತ್ತಿದ್ದೆವು ..ನೀವು ನಮ್ಮನ್ನು ತಮಾಷೆ ಮಾಡಬೇಡಿ .ಈ ತುಂಡು ಬಟ್ಟೆ ಆಗ ನಮ್ಮ ಮಾನ ಸರಿಯಾಗಿ  ಮುಚ್ಚುತ್ತಿತ್ತು .ಈಗಿನ ಫ್ಯಾಷನ್ ಬಟ್ಟೆಗಳು ಮುಚ್ಚುವುದಕ್ಕಿಂತ ಹೆಚ್ಚು ಪ್ರದರ್ಶಿಸುತ್ತವೆ ಎಂದು ಅಜ್ಜರ ಸಂಘದ ಆರೋಪ .
ಲಂಗೋಟಿ ಬಲು ಒಳ್ಳೆದಣ್ಣ ಒಬ್ಬರ
ಹಂಗಿಲ್ಲದೆ ಮಡಿಗೆ ಒದುಗುವುದಣ್ಣ

ಬಡವರಿಗಾಧಾರವಣ್ಣ ಈ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ
ಕಡು ಕಳ್ಳರಿಗೆ ಗಂಡ, ಮಡಿ ಧೋತ್ರಗಳ ಮಿಂಡ
ನಡುಗುವ ಸಮಯಕ್ಕೆ ಮಡಿಗೆ ಒದಗುವಂಥ

ಜಿತ ಮನ ಸನ್ಯಾಸಿಗಳಿಗಿದೆ ಕೌಪೀನ
ವ್ರತವುಳ್ಳ ಬ್ರಹ್ಮಚಾರಿಗೆ ಮುಖ್ಯವು
ಅತಿಶಯವಿದು ಆಂಜನೇಯ ನಾರದರಿಗೆ
ಗತಿಯಿಲ್ಲದವರಿಗೆ ಮಿತವಾಗಿ ಇರುವಂಥ

ದುಡ್ಡು ಮುಟ್ಟದಂತೆ ದೊರಕುವ ವಸ್ತುವು
ದೊಡ್ಡ ಅರಣ್ಯದಿ ಭಯವಿಲ್ಲವು
ಹೆಡ್ಡರೆಂಬುವರೇನೊ ಲಂಗೋಟಿ ಜನರನ್ನು
ದೊಡ್ಡವರೆಂದು ವಂದಿಸುವರು ಯತಿಗಳ

ಮೋಕ್ಷಮಾರ್ಗಕೆ ಕಲ್ಪವೃಕ್ಷವೀ ಲಂಗೋಟಿ
ಭಿಕ್ಷಗಾರರಿಗೆಲ್ಲ ಅನುಕೂಲವು
ತತ್ ಕ್ಷಣದೊಳಗೆ ಕಾರ್ಯಗಳ ತೂಗಿಸಿ ಮಾನ
ರಕ್ಷಣೆಗೆ ಬಹು ರಮ್ಯವಾಗಿರುವಂಥ

ಮಡಿವಾಳರಿಗೆ ಶತ್ರು ಮಠದಯ್ಯಗಳ ಮಿತ್ರ
ಪೊಡವಿಯೊಳ್ ಯಾಚಕರಿಗೆ ನೆರವು
ದೃಢಭಕ್ತ ಬಲಿಚಕ್ರವರ್ತಿಗೋಸ್ಕರ ನಮ್ಮ
ಒಡೆಯ ಶ್ರೀ ಪುರಂದರವಿಠಲ ಧರಿಸಿದಂಥ

 

1 ಕಾಮೆಂಟ್‌: