ನಮ್ಮ ಆಸ್ಪತ್ರೆ ಕ್ಯಾಂಟೀನ್ ಹರೀಶಣ್ಣ ಒಂದು ಮಾತು ಹೇಳಿದರು . ರೋಗಿಗಳು ಮತ್ತು ಸಂಬಂದಿಕರು ಬದನೆ ಕಾಯಿ ಮತ್ತು ಕ್ಯಾಬೇಜ್ ಸುತರಾಂ ಇಷ್ಟ ಪಡುವುದಿಲ್ಲ ಮತ್ತು ಮೂಗು ಮುರಿಯುತ್ತಾರೆ .ಆದುದರಿಂದ ಅವುಗಳ ಪದಾರ್ಥ ಮಾಡುವುದೇ ಇಲ್ಲ . ತರಕಾರಿ ಬೆಲೆ ಗಗನಕ್ಕೆ ಏರಿರುವ ಈ ದಿನಗಳಲ್ಲಿ ಇವು ನಿಜಕ್ಕೂ ಆಪತ್ ಬಾಂಧವರು . ಈ ಎರಡು ತರಕಾರಿಗಳು ಪೂರ್ವಗ್ರಹ ದಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಅಪಪ್ರಚಾರಕ್ಕೆ ಒಳಗೆ ಆಗಿವೆ .ಯಾವಾಗಲೂ ಅಸತ್ಯ ಬೇಗ ಹರಡುವುದು ಮತ್ತು ಜನ ಮಾನಸದಲ್ಲಿ ಗಟ್ಟಿಯಾಗಿ ನಿಲ್ಲುವುದು .ನನ್ನ ಮಾತಿನಲ್ಲಿ ವಿಶ್ವಾಸ ಇಲ್ಲದಿದ್ದರೆ ಇಂಟರ್ನೆಟ್ ಗೆ ಹೋಗಿ ಈ ತರಕಾರಿಗಳ ಬಗ್ಗೆ ಜಾಲಾಡಿರಿ .ಏನಾದರೂ ಸಿಕ್ಕಿದರೆ ತಿಳಿಸಿರಿ .
ಕ್ಯಾಬೇಜ್ ನಮ್ಮ ಊರಿಗೆ ಬಂದುದು ನನಗೆ ಒಂದು ಹತ್ತು ಹನ್ನೆರಡು ವರ್ಷ ಪ್ರಾಯ ವಾದ ಮೇಲೆ . ಅಪರೂಪಕ್ಕೆ ಅದನ್ನು ತರುತ್ತಿದ್ದು ಅದರ ಸಾಂಭಾರ್ ಮತ್ತು ಪಲ್ಯ ಎಲ್ಲರಿಗೂ ಇಷ್ಟ ವಾಗಿತ್ತು .ಈಗೀಗ ಅದರ ಬಜ್ಜಿ ಮತ್ತು ಪತ್ರೊಡೆ ಕೂಡಾ ಮಾಡುವರು . ಈಗ ಮನೆಯಲ್ಲಿ ನಿತ್ಯಕ್ಕೆ ಮತ್ತು ಸಮಾರಂಭಗಳಲ್ಲಿ ಅದು ಕಾಣೆಯಾಗಿದೆ . ಅಲ್ಲದೆ ಯಾವುದೇ ಕೆಲಸ ಗೋಜಲು ಮಾಯವಾಗಿ ಮಾಡಿದರೆ ಅವನು ಅದನ್ನು ಕ್ಯಾಬೇಜ್ ಮಾಡಿದಾ ಮಾರಾಯ ;ಪೇಷಂಟ್ ಆ ಆಸ್ಪತ್ರೆಗೆ ಹೋಗಿ ಈಗ ಕ್ಯಾಬೇಜ್ ಆಗಿದ್ದಾನೆಯ ಇತ್ಯಾದಿ ಅನ್ನುವರು
ಇನ್ನು ಬದನೆ ;ಇದನ್ನು ಮನೆಗಳಲ್ಲಿ ಈಗಲೂ ಮಾಡಿದರೂ ರೋಗಿಗಳಿಗೆ ಮತ್ತು ಬಾಳಂತಿಯರಿಗೆ ನಂಜು ಎಂದು ಕೊಡರು . ಈ ತರಕಾರಿಯ ಮೇಲೆ ಸುಖಾ ಸುಮ್ಮನೇ ನಂಜು ಕಾರಿದವರು ಯಾರು ?
ನನಗೆ ತರಕಾರಿ ಎಂದರೆ ಬಹಳ ಇಷ್ಟ .ಪಲ್ಯ ಮತ್ತು ಸಾಂಬಾರು ಹೋಳುಗಳನ್ನು ಪುನಃ ಪುನಃ ಹಾಕಿಸಿ ಕೊಳ್ಳುವೆನು .ಬಾಲ್ಯದಲ್ಲಿ ನಾನು ಊಟಕ್ಕೆ ಕುಳಿತಾಗ ಅಮ್ಮ ಎಚ್ಚರಿಸುತ್ತಿದ್ದರು 'ಮೇಲಾರ ಬಾಗ ಎಲ್ಲಾ ಮನಾರ ಮಾಡ ಬೇಡ ಮಗಾ ;ಯಾರಾದರೂ ನೆಂಟರು ಬಂದರೆ ಅವರಿಗೆ ಸ್ವಲ್ಪ ಇರಲಿ "ಆಗಿನ ಕಾಲದಲ್ಲಿ ಮನೆಯಲ್ಲಿ ಹಠಾತ್ ಆಗಮಿಸ ಬಹುದಾದ ನೆಂಟರಿಗಾಗಿ ಯಾವತ್ತೂ ಅನ್ನ ಮತ್ತು ಪದಾರ್ಥ ತೆಗೆದು ಇಟ್ಟು ಕೊಳ್ಳುತ್ತಿದ್ದರು .ಒಂದು ವೇಳೆ ಬರದಿದ್ದರೆ ಮರುದಿನಕ್ಕೆ ತಮಗೇ . ಇನ್ನು ಕೆಲವೊಮ್ಮೆ ನನ್ನ ಅಕ್ಕ ,ಅತ್ತಿಗೆ ನಾನು ಊಟಕ್ಕೆ ಕುಳಿತಾಗ ಒಳಗೆ ಸಾಕಷ್ಟು ಶೇಖರಿಸಿಟ್ಟು ಉಳಿದುದನ್ನು ಮಾತ್ರ ನನ್ನ ಎದುರು ಇಡುವರು .ಅದಕ್ಕೆ ಪ್ರತೀಕಾರ ವಾಗಿ ನಾನು ಈಗ ದಿನಾಲೂ ಅರ್ಧ ಕಿಲೋ ಪಲ್ಯ ಮಾಡಿ ಗುಳು೦ಕಾಯಿಸುವೆನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ