ಬೆಂಬಲಿಗರು

ಶುಕ್ರವಾರ, ಜೂನ್ 23, 2023

ಏಕ್ ದೊ ತೀನ್ ಚಾರ್

 ಅಮೇರಿಕಾದಲ್ಲಿ ಮಗನ ಮನೆಯ ಹತ್ತಿರ ಒಂದು  ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇದ್ದು ನಾನು ಪ್ರತಿನಿತ್ಯ  ಅವುಗಳ ಸುತ್ತ ವಾಕಿಂಗ್ ಹೋಗುತ್ತಿದ್ದೆ .ಶಾಲಾ  ಸಮಯದಲ್ಲಿ ಕಾಂಪೌಂಡ್ ಪ್ರವೇಶಿಸ ಬಾರದು ಎಂದು ತೆಲುಗು ತಮಿಳು ಹಿಂದಿ ಚೈನೀಸ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಬೋರ್ಡ್ ಹಾಕಿರುವರು . ಉಳಿದಂತೆ ಅಲ್ಲಿ ಒಳಗೆ ಹೋಗ ಬಹುದು .ಆಟದ ಮೈದಾನದಲ್ಲಿ ಆಟ ವಾಡ ಬಹುದು .ಕ್ರೀಡೆ ಸಂಗೀತ ಮತ್ತು ನಾಟಕ ಗಳಿಗೆ ಬಹಳ ಮಹತ್ವ ನೀಡುವಂತೆ ಕಾಣುತ್ತದೆ .ಹೈ ಸ್ಕೂಲ್ ಆವರಣದಲ್ಲಿ ಶಾಲೆಯ  ನಾಮಫಲಕ ಕಂಡೆ .ಪ್ರೈಮರಿ ಯಲ್ಲಿ ಇಲ್ಲ . ಶಾಲೆಗೆ ತಾಗಿಕೊಂಡು  ರಸ್ತೆ ಬದಿಯಲ್ಲಿ ಬೇಸ್ ಬಾಲ್ ,ಫುಟ್ ಬಾಲ್ ತರಬೇತಿ ಕೊಡಲಾಗುವುದು ಸಂಪರ್ಕಿಸಿರಿ ಎಂದು ಬಹಳ ಸಣ್ಣ ಜಾಹಿರಾತು ಫಲಕಗಳನ್ನು ಕಂಡೆ . ಇಂಗ್ಲಿಷ್ ,ಗಣಿತ ,ಸಿಈ ಟಿ ಇತ್ಯಾದಿ ಟ್ಯೂಷನ್ ಗಳ ಬಗ್ಗೆ ಒಂದೂ ಕಾಣಿಸಲಿಲ್ಲ . 

ಆಟದ ಮೈದಾನದಲ್ಲಿ ಪಿ ಟಿ ಟೀಚರ್ ಒನ್ ಟೂ ಥ್ರೀ ಫೋರ್ ಎಂದು ಡ್ರಿಲ್ ಮಾಡಿಸುವಾಗ ಬಾಲ್ಯ ನೆನಪಾಯಿತು . ನಮ್ಮ  ಪಿ ಟಿ ಮಾಷ್ಟ್ರು ರಾಮರಾಯರು ಏಕ್ ದೋ ತೀನ್ ಚಾರ್ ಎಂದು ಮಾಡಿಸುತ್ತಿದ್ದರು.(ಇದನ್ನೇ ಅನುಕರಿಸಿ ನಾವು ಏಕ್ ದೋ ತೀನ್ ಚಾರ್ ಇತ್ತೆ  ಪೋಪುನೆ ಕಾಣಿಚಾರ್ ಎಂದು ಶಾಲೆಯಿಂದ ಕಾಣಿಚಾರ್ ಬೈಲು ಮೂಲಕ ಅಂಗ್ರಿಗೆ ಹೋಗುವಾಗ ಹೇಳುತ್ತಿದ್ದೆವು ) .ಅರೇಬಿಯಾದಲ್ಲಿ ನನ್ನ ಮನೆಯ ಹಿಂದೆ ಇದ್ದ ಶಾಲೆಯಲ್ಲಿ 'ವಾಹದ್ ಇತನೇನ್  ತಾಲತಾ ಅರ್ಬಾ 'ಎಂದು ಅವರ ಭಾಷೆಯಲ್ಲಿ ಮಾಡಿಸುತ್ತಿದ್ದರು . ಕನ್ನಡಲ್ಲಿ ಒಂದು ಎರಡು ಮೂರು ನಾಲ್ಕು ಎಂದು ಮಾಡಿಸಿದ್ದನ್ನು ಕಾಣೆ . 

ಶಾಲೆ ಬಳಿ ತಿಂಡಿ ಕಡಲೆ ಮಾರುವ ಅಂಗಡಿಗಳು ಇಲ್ಲ .ಯಾಕೆ ಸನಿಹದಲ್ಲಿ ಯಾವುದೇ ಅಂಗಡಿಗಳು ಕಾಣೆ .ಏನಾದರೂ ಬೇಕಾದರೆ  ನಾಲ್ಕು ಕಿಲೋಮೀಟರು ಹೋಗ ಬೇಕು . ಅಧ್ಯಾಪಕರು ಹೆಚ್ಚಿನವರು ಕಾರಿನಲ್ಲಿ ಬರುತ್ತಾರೆ .ವಿದ್ಯಾರ್ಥಿಗಳು ನಡೆದು ಕೊಂಡು ,ಬೈಸಿಕಲ್ ಮತ್ತು ಕಾರ್ ನಲ್ಲಿ .ಹಳದಿ ಬಣ್ಣದ ಶಾಲಾ ಬಸ್ ಕೂಡಾ ಇದ್ದು ಅದರ ಡ್ರೈವರ್ ಮಹಿಳೆ ಆಗಿದ್ದಾರೆ .ಮಕ್ಕಳನ್ನು ಪ್ರೀತಿಯಿಂದ ಜೋಪಾನವಾಗಿ ಕೊಂಡೊಯ್ಯಲು  ಸ್ತ್ರೀ ಯರೇ ಒಳ್ಳೆಯದು ಎಂಬ ಉದ್ದೇಶ ಇರ ಬಹುದು . 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ