ಬೆಂಬಲಿಗರು

ಭಾನುವಾರ, ಜೂನ್ 18, 2023

ಗುಡ್ ಸಮರಿಟನ್ ಮೋಹನ ರಾವುಗಾರು

ಅಮೇರಿಕಾ ಪ್ರವಾಸದ ಮುಖ್ಯ ಉದ್ದೇಶ ಮೊಮ್ಮಗನ ಮೊದಲನೇ ಹುಟ್ಟು ಹಬ್ಬದಲ್ಲಿ ಭಾಗಿಯಾಗುವುದು ಮತ್ತು ಮಕ್ಕಳೊಡನೆ ಕೆಲ ದಿನಗಳನ್ನು ಕಳೆಯುವುದು . ನನ್ನ ಸೊಸೆಯ ತಂದೆ ತಾಯಿ ಕೂಡಾ ಬಂದಿದ್ದರು . ನನ್ನದು ಇದು ಈ ದೇಶದ ಎರಡನೇ ಭೇಟಿ ಯಾದುದರಿಂದ ಇಲ್ಲಿಯ ರೀತಿ ರಿವಾಜು ಪರಿಚಯ ಇತ್ತು . ಮಗನ ಮನೆ ವಾಷಿಂಗ್ಟನ್ ರಾಜ್ಯ (ರಾಜಧಾನಿ ವಾಷಿಂಗ್ಟನ್ ಡಿ ಸಿ ಅಲ್ಲ ,ಅಲ್ಲಿಯೂ ನನ್ನ ತಂಗಿ ಮಗ ಇದ್ದಾನೆ ) ದ ಬಾಥೆಲ್ ಜಿಲ್ಲೆಯಲ್ಲಿ .ಇದು ರಾಜ್ಯದ ರಾಜಧಾನಿ ಸಿಯಾಟಲ್ ಗೆ ತಾಗಿ ಇದೆ . ಈ ರಾಜ್ಯವು ಹಸಿರು ರಾಜ್ಯ ಎಂದು ಕರೆಯಲ್ಪಡುತ್ತಿದ್ದು ಎಲ್ಲೆಡೆ ವೃಕ್ಷ ರಾಜಿಗಳು ಇದ್ದು ಅವನ್ನು ಜತನದಿಂದ ಕಾಪಾಡಿಕೊಂಡು ಬಂದಿರುವರು . 

ಒಂದು ನಗರ  ಸುತ್ತ ಹಲವು ಉಪನಗರ ಗಳು .ಉಪನಗರದಲ್ಲಿ  ಗೃಹ ಸಂಕುಲಗಳು (ಕಮ್ಯೂನಿಟಿ ),ಪ್ರತಿಯೊಂದಕ್ಕೆ ಒಂದು ಪಾರ್ಕ್ ,ಹಲವು ಕಮ್ಯೂನಿಟಿ ಗಳಿಗೆ ಒಂದು ಶಾಲೆ . ಬೇರೆ ಗೂಡಂಗಡಿ ,ಅಂಗಡಿ ಇತ್ಯಾದಿ ಇಲ್ಲದೆ ಸಣ್ಣ ಸಾಮಾನು ಬೇಕಾದರೂ ಐದು ಕಿಲೋಮೀಟರು ದೂರ ನಮ್ಮ ವಾಹನದಲ್ಲಿ ಹೋಗ ಬೇಕು . 

ಇಲ್ಲಿ ಹೆಚ್ಚಿನವರು ವಲಸಿಗರಾಗಿದ್ದು ಭಾರತ ದ್ದು ಸಿಂಹ ಪಾಲು . ಇವರಲ್ಲಿ ಬಹುಮತ ತೆಲುಗರದ್ದು ,ಉಳಿದಂತೆ ಕನ್ನಡಿಗರೂ ಸೇರಿ ಎಲ್ಲಾ ಭಾಷಿಗರೂ ಇರುವರು . ನಾವು ಹೋದಾಗ  ನಾಲ್ಕು ಗಂಟೆಗೆ ಸೂರ್ಯೋದಯ ವಾಗಿ  ಸಾಯಂಕಾಲ ಒಂಬತ್ತು  ಗಂಟೆಗೆ ಕತ್ತಲೆ ಆಗುವುದು .ದಿನ ದೊಡ್ಡದು .ಯಾವಾಗಲೂ ಮಬ್ಬು ಕವಿದ ವಾತಾವರಣ ,ಕೆಲವೊಮ್ಮೆ ತುಂತುರು ಮಳೆ . ಇನ್ನು ಕೆಲವು ದಿನ ಇಳಿ ಬಿಸಿಲು . ಈಗ ಹೆಚ್ಚಿನವರೂ ವರ್ಕ್ ಫ್ರಮ್ ಹೋಂ ಆದುದರಿಂದ ಹೊರಗೆ ರಸ್ತೆಯಲ್ಲಿ ಯಾರೂ ಕಾಣರು .ಒಂದು ತರಹ ಕರ್ಫ್ಯೂ ವಾತವರಣ . ರಸ್ತೆಗಳು ದಿನವಿಡೀ ಬಿಕೋ ಎನ್ನುತ್ತಿದ್ದು ಪಕ್ಕದ ಮನೆಯವರ ಜತೆ ಹರಟೆ ಹೊಡಿಯುವ ದೃಶ್ಯ ಕಾಣದು ,ಬೀದಿಗೆ ಇಳಿದ ಕೂಡಲೇ ನಮಸ್ಕಾರ ತಿಂಡಿ ಆಯ್ತಾ ಎಂದು ಕೈಯಲ್ಲಿ ಚೀಲ ಪೇಪರ್ ಹಿಡಿದು ಕೊಂಡು ಕೇಳುವ ರಾಮರಾಯರು ಶಾಮಣ್ಣ ಇಲ್ಲ . ಅಲ್ಲಲ್ಲಿ ಒಬ್ಬರು  ನಾಯಿ ಜತೆ ಅಥವಾ ಇಲ್ಲದೇ  ವಾಕಿಂಗ್ ಹೋಗುವವರು .ಇವರಲ್ಲಿ ಹಲವರು  ಭಾರತದಿಂದ ಮಕ್ಕಳ ಮನೆಗೆ ನಮ್ಮಂತೆ ಕೆಲ ತಿಂಗಳುಗಳಿಗೆ  ಅಥವಾ ಖಾಯಂ ವಾಸಕ್ಕೆ ಬಂದವರು . 

            ನಮಗೆ ಮೊಮ್ಮಗನ ಜತೆ  ಆಟ ಅಡಿ ಸಮಯ ಹೋಗ ಬೇಕು ತಾನೇ ?ಅವನು ನಿದ್ದೆ ಮಾಡಿದಾಗ ಏನು ಮಾಡುವುದು ?ನನ್ನ ಬೀಗರು ನನ್ನನ್ನು ವಾಕಿಂಗ್ ಕರೆದು ಕೊಂಡು ಅಲ್ಲಿಯ ಮಾರ್ಗಗಳ ಪರಿಚಯ ಮಾಡಿಸಿದರು . (ಅವರು ಮೊದಲು ಎರಡು ಬಾರಿ ಅಲ್ಲಿಗೆ ಬಂದಿದ್ದರು ).  ನಾವು ಮೆಚ್ಚ ಬೇಕಾದ ಪಾಶ್ಚಿಮಾತ್ಯ ದೇಶಗಳ ಒಂದು ವೈಶಿಷ್ಟ್ಯ ಅಲ್ಲಿ ಪಾದಚಾರಿಗಳಿಗೆ ಇರುವ ಪ್ರಾಶಸ್ತ್ಯ . ರಸ್ತೆ ದಾಟುವ ಸ್ಥಳ ಗಳಲ್ಲಿ ವಾಹನ ಚಾಲಕರು ನಿಲ್ಲಿಸಿ ಪಾದಚಾರಿಗಳಿಗೆ ದಯವಿಟ್ಟು ಹೋಗಿರಿ ಎಂದು ವಿನಂತಿ ಮಾಡಿ ಅವರು ದಾಟಿದ ಮೇಲೆಯೇ ಹೋಗುವರು . ನಮ್ಮಲ್ಲಿಯ ಹಾಗೆ ಎರ್ರಾ ಬಿರ್ರಿ ಹೋಗಿ ಪಾದಚಾರಿಗಳಿಗೆ ಮನೆಯಲ್ಲಿ ಹೇಳಿ ಬಂದಿದ್ದೀರಾ ಎಂದು ದಬಾಯಿಸುವದು ಇಲ್ಲವೇ ಇಲ್ಲ .ಪುತ್ತೂರಿನಲ್ಲಿ ನಾನು ಪಾದಚಾರಿಗಳಿಗೆ ನಿಲ್ಲಿಸಿದರೆ ಹಿಂದಿನ ವಾಹನ ದವರು ಇವನಿಗೆ ಮಂಡೆ ಸಮ ಇಲ್ಲ ಎಂದು ಹಾರ್ನ್ ಮಾಡುವರು ,ದ್ವಿಚಕ್ರಿಗಳು ಎಡ ಬಲ ಎಂದು ನೋಡದೆ ನನ್ನನ್ನು ಕನಿಕರದಿಂದ ನೋಡಿಕೊಂಡು ಮುನ್ನುಗ್ಗುವರು .ನಾನು ಅಮೇರಿಕಾದಲ್ಲಿ ಈ ಬಾರಿ ಇದ್ದ ಒಂದೂವರೆ ತಿಂಗಳಿನಲ್ಲಿ ನಾನು ಒಂದೇ ಒಂದು ಬಾರಿ ಹಾರ್ನ್ ಶಬ್ದ ಕೇಳಿದ್ದು . 

ವಾಕಿಂಗ್ ಹೋಗುವಾಗ ನಾನು ಗಮನಿಸಿದ್ದು ,ಸ್ಥಳೀಯರು ನಮ್ಮನ್ನು ಕಂಡರೆ ಹಾಯ್ ಗುಡ್ ಮಾರ್ನಿಂಗ್ ಎಂದು ವಿಶ್ ಮಾಡಿ ತಮ್ಮಷ್ಟಕ್ಕೆ ಹೋಗುವರು .ಭಾರತದಿಂದ ಬಂದವರು ಮುಖ ಕೂಡಾ ನೋಡರು .ಬಹುಶ ಪರವೂರಿನಲ್ಲಿ  ಅಪರಿಚಿತರ ಸಂಗ ಅಪಾಯಕಾರಿ ಎಂದು ಇರ ಬಹುದು . ಇಂತಹ ವಾತಾವರಣದಲ್ಲಿ ನಮಗೆ ಪರಿಚಯ ಆದುದು ಶ್ರೀ ಮೋಹನ ರಾವು ಅವರು .ಇವರು ಮೂಲತಃ ಆಂಧ್ರ ದವರು ,ಒರಿಸಾ ಇವರ ಕರ್ಮಭೂಮಿ .ಅಲ್ಲಿ ಕೃಷಿ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರು . ಅವರ ಪತ್ನಿ ತೀರಿ ಹೋಗಿದ್ದು ಮಗ ಸೊಸೆ ಇಲ್ಲಿ ಕೆಲಸದಲ್ಲಿ ಇರುವರು .ಜೀವನ ಬಹುಪಾಲು ನಮ್ಮ ದೇಶದಲ್ಲಿ ಕಳೆದವರಿಗೆ ಇಲ್ಲಿ ಬಹಳ ಕಷ್ಟೆ .ಇಲ್ಲಿ ಪೇಪರ್ ಇಲ್ಲ ,ಹೊರಗಡೆ ಮಿತ್ರರು ಇಲ್ಲ ,ಊರ ಮನರಂಜನಾ ಕಾರ್ಯಕ್ರಮಗಳು ಕಡಿಮೆ .ಒಂದು ತರಹ ಡಿಪ್ರೆಶನ್ ಬಂದು ಬಿಡ ಬಹುದು . 

ರಾಯರು ವಾಕಿಂಗ್ ಮುಗಿಸಿ ಮರಳುತ್ತಿದ್ದ ನಮ್ಮನ್ನು ಕರೆದು ನೀವು ಉಭಯ ಕುಶಲೋಪರಿ ಪರಿಚಯ ಮಾಡಿಕೊಂಡು ಅವರ ಕಮ್ಯೂನಿಟಿ ಯ ಪಾರ್ಕ್ ಗೆ ಆಹ್ವಾನಿಸಿದರು .ಅಲ್ಲಿ ಇವರೇ ಮುಂದಾಳು ತನ ವಹಿಸಿ ಗೆಳೆಯರ ಗುಂಪು ರಚಿಸಿ ದಿನವೂ ಎರಡು ಮೂರು ಗಂಟೆ ಸೇರಿ ಹರಟೆ ಹೊಡೆಯುವರು . ವಾರಕ್ಕೆ ಒಂದು ವಿವಾಹ ವಾರ್ಷಿಕೋತ್ಸವ ,ಹೊಸಬರಿಗೆ ಸ್ವಾಗತ ಇಲ್ಲವೇ ವಿದಾಯ ಕೂಟ . ಇಲ್ಲಿ ಎಲ್ಲಾ ಭಾರತೀಯ ಹಿರಿಯ ನಾಗರಿಕರು . ಎಂಬತ್ತು ದಾಟಿದ ಈ ಹಿರಿಯರ ನಾಯಕತ್ವ ದಲ್ಲಿ  ಬಹಳ ಚನ್ನಾಗಿ ನಡೆಯುತ್ತಿದ್ದು ನಾನು ಕೆಲ ದಿನ ಅವರ ಸ್ನೇಹ ಸಾಹಚರ್ಯ ಸಂಪಾದಿಸಿದೆನು .;ಪಾರ್ಟಿ ಯಲ್ಲಿ ಸವಿದೆನು . ಇಂತಹ ಒಂದು ಕೂಟ ಉಳಿದ ಕಮ್ಯೂನಿಟಿ ಗಳಲ್ಲಿ ಕಂಡು ಬರಲಿಲ್ಲ .ನಾನು ದೇಶಕ್ಕೆ ಮರಳುವ ಮುನ್ನಾ  ಅವರ ಮನೆ ಪಕ್ಕ ದಿನ ಹುಬ್ಬಳ್ಳಿಯ ಟಿಕಾರೆ ಎಂಬವರ ಗೃಹ ಪ್ರವೇಶ ಇದ್ದು ನನ್ನನ್ನು ಅವರೇ ಅಲ್ಲಿ ಕರೆದು ಕೊಂಡು ಹೋಗಿ ಪ್ರಸಾದ ಸಿಹಿ ತಿಂಡಿ ಕೊಡಿಸಿದರು . 

ಇಂತಹ ಮೋಹನ ರಾಯರು ಅಲ್ಲಲ್ಲಿ ಇದ್ದರೆ  ಹಿರಿಯ ನಾಗರಿಕರ ಬಾಳು ಸ್ವಲ್ಪ ಸಹನೀಯ ಆದೀತು .ಇಂದು (ಇಂಡಿಯಾ ವೂ ಸೇರಿ ).ಅವರಿಗೆ ನೂರು ನಮನಗಳು .




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ