ಬೆಂಬಲಿಗರು

ಬುಧವಾರ, ಜೂನ್ 14, 2023

 ಕೋಳಿ ಕೂಗದೇ ಬೆಳಗಾಗದೇ ?

ನನ್ನ ಮೊಮ್ಮಗನ ಪ್ರಥಮ ಹುಟ್ಟು ಹಬ್ಬ ಆಚರಣೆ ಮತ್ತು ಕೆಲ ದಿನ ಅವನ  ಬಾಲ ಲೀಲೆಗಳನ್ನು ಸಂತೋಷಿಸುತ್ತಾ ಕಳೆಯಲು ನಾನೂ ನನ್ನ ಮನೆಯವರು  ಅಮೇರಿಕಾ ದೇಶದ ಸಿಯಾಟಲ್ ನಗರಕ್ಕೆ ಹೋಗಿದ್ದೆವು . ನನ್ನ ಲ್ಯಾಪ್ಟಾಪ್ ಕೊಂಡು ಹೋಗಿಲ್ಲದ ಕಾರಣ  ಫೇಸ್ ಬುಕ್ ನಲ್ಲಿ ನಮ್ಮ ನಿಮ್ಮ ಭೇಟಿ ಒಂದೂವರೆ ತಿಂಗಳು ಇಲ್ಲದಾಗಿದ್ದಕ್ಕೆ ಬೇಸರ ಇದೆ . ಅಲ್ಲಿಯ ಬಗ್ಗೆ ಬರೆಯುವೆ .

ಇನ್ನು ವಾಪಸು ಬರುವಾಗ ನನ್ನ ಧರ್ಮ ಪತ್ನಿ ಅಲ್ಲೇ ಉಳಿದು ಕೊಂಡ ಕಾರಣ ನಾನು ಒಬ್ಬನೇ . ತಾಯಂದಿರು ಗಂಡ ಅಥವಾ ಮೊಮ್ಮಗ ನಲ್ಲಿ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದರೆ  ಬಹುಪಾಲು ಮೊಮ್ಮಗನನ್ನೇ ಆಯ್ಕೆ ಮಾಡಿಕೊಳ್ಳುವರು . 

ಸರಿ ,ನಾನೊಬ್ಬನೇ ಬರುವುದು ಆದ ಕಾರಣ ನನ್ನವರಿಗೆ ಟೆನ್ಶನ್ .ಈಗಿನ ಪಿ ಯು ಸಿ ಪರೀಕ್ಷೆ ಬರೆಯಲು ಮಕ್ಕಳು ಹೋಗುವಾಗ ತಾಯಂದಿರಿಗೆ ಇರುವಂತೆ . ಪ್ರಶ್ನೆಗಳನ್ನು  ಸರೀ ಓದು ,ಗಡಿಬಿಡಿ ಬೇಡ , ಇತ್ಯಾದಿ ಇತ್ಯಾದಿ ಉಪದೇಶ ಪುನಃ ಪುನಃ ಕೊಟ್ಟು ಮಕ್ಕಳ ತಲೆ ಚಿಟ್ಟು ಹಿಡಿಯುವುದು . ಹಾಗೇ ನನಗೂ ನನ್ನಾಕೆ ,"ಮನೆಯನ್ನು ದಿನವೂ ಗುಡಿಸಿ ,ಬಲೆ ತೆಗೆಯಿರಿ ,ಡಬ್ಬಿಯಲ್ಲಿ ಅವಲಕ್ಕಿ ಇದೆ ,ಉಪ್ಪಿನಕಾಯಿ ಕಪಾಟಿನಲ್ಲಿ ಇದೆ ,ಆದರೆ ಜಾಸ್ತಿ ತಿನ್ನ ಬೇಡಿ . ಹೂವಿನ ಗಿಡಗಳಿಗೆ ನೀರು ಸರಿಯಾಗಿ ಹಾಕಿ ಇತ್ಯಾದಿ ಹತ್ತು ಹನ್ನೆರಡು ಸಲಹೆ (ಆರ್ಡರ್ ?)ಕೊಟ್ಟಾಗ ನಾನು ಕೋಲೆ ಬಸವನಂತೆ ತಲೆ ಆಡಿಸುವೆ ."ನೀವು ಸುಮ್ಮನೇ ತಲೆ ಆಡಿಸ ಬೇಡಿ .ನಾನು ಬರುವಾಗ ಮನೆ ಆರೂಪ ಆದ್ರೆ ನೋಡಿ "ಎಂಬ ಎಚ್ಚರಿಕೆ ." ಅವಳು ತಿಳಿದು ಕೊಂಡಿದ್ದಾಳೆ ತಾನು ಇದ್ದರೆ ಮಾತ್ರ ಮನೆ ನಡೆಯುವುದು . ಕೋಳಿ ತಾನು ಕೂಗಿದರೆ ಮಾತ್ರ ಬೆಳಗು ಆಗುವುದು ಎಂದು ಕೊಂಡಿತಂತೆ "ಎಂದು ಮನಸಿನಲ್ಲೇ ನಕ್ಕೆ . 

 ಬೆಳ್ಳಂ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ದಿಂದ ಮನೆಗೆ ಬರುವಾಗ ದಾರಿಯಲ್ಲಿ ಒಂದು ಲೀಟರ್ ಹಾಲು ಕೊಂಡು ಕೊಂಡೆ ಚಹಾ ಮಾಡಿ ಕುಡಿಯಲು . ಬಾಗಿಲು ತೆರೆದು ಮನೆ ಪ್ರವೇಶಿಸದಾಗ ನೆಲ ,ಪೀಠೋಪಕರಣ ಗಳಲ್ಲಿ ಧೂಳು ,ಅಲ್ಲಲ್ಲಿ ಜೇಡರ ಬಲೆ ,ಕ್ರಿಮಿ ಕೀಟ ,ಜಿರಳೆಗಳು ಸ್ವಚ್ಚಂದ ವಾಗಿ ಓಡಾಡುತ್ತಿದ್ದು ,ನನ್ನನ್ನು ಆಗಂತುಕ ನೆಂದು ಸ್ವಾಗತಿಸಿದವು . ಗೋಡೆ ಗಡಿಯಾರ ನಿಂತಿತ್ತು . ಶೀತ ಪ್ರದೇಶ ದಿಂದ ಬಂದವನಾದುದರಿಂದ ಸಿಕ್ಕಾ ಬಟ್ಟೆ ಸೆಖೆ ,ಫ್ಯಾನ್ ಹಾಕಿದರೆ ಧೂಳು ಏಳುವುದು . ರಣರಂಗಕ್ಕೆ ಹೊಕ್ಕ ಉತ್ತರ ಕುಮಾರ ನಂತೆ ಆಯಿತು . ತಂದ ಸೂಟ್ಕೇಸ್ ತೆರೆದು ಬಟ್ಟೆ ಬರೆ ಇತ್ಯಾಗಿ ಹೊರ ಬಂದಾಗ ಇವುಗಳನ್ನು ತೊಳೆಯುವದು ಎಂದು ಕೊಂಡೆ ,ಆದರೆ ಒಂದು ಚಹಾ ಕುಡಿದರೆ ಶಕ್ತಿ ಬಂದೀತು ಎಂದು ಹಾಲು ಒಲೆಯಲ್ಲಿ ಇಟ್ಟೆ . ವಾಲ್ ಕ್ಲಾಕ್ ಗೆ ಬ್ಯಾಟರಿ ಹೊಸತು ಹಾಕುವಾ ಎಂದು ಹುಡುಕಾಡಿ ಹಾಕಿ ಗಂಟೆ ಸರಿ ಮಾಡಿ ಅಡಿಗೆ ಮನೆಗೆ ಬಂದರೆ ಹಾಲು ಉಕ್ಕಿ ಚೆಲ್ಲಿತ್ತು .  ಸಮುದ್ರ ಲಂಘಿಸಿದ ತಪ್ಪಿಗೆ ಎರಡನೇ ಗೃಹ ಪ್ರವೇಶ  ಎಂದು ಕೊಂಡು ಚೆಲ್ಲಿದ್ದನು ಒರಸಿ ,ಉಳಿದ ಹಾಲಿನಲ್ಲಿ ಚಹಾ ಮಾಡಿ ಕುಡಿದಾಗ ಸ್ವಲ್ಪ ಶಕ್ತಿ ಬಂತು . ಇನ್ನು ಖಾಲಿಯಾದ ಸೂಟ್ಕೇಸ್ ಅಟ್ಟದಲ್ಲಿ ಇಡಲು ಹೋದರೆ ಅಲ್ಲಿ ಶೇಖರಿಸಿ ಇಟ್ಟಿದ್ದ ಹಳೇ ಮಯೂರ ,ಅನಿಕೇತನ  ಮಾಸಿಕಗಳು ಧೂಳು ಮಯವಾಗಿ ಇರುವುದ ಕಂಡು ಅವುಗಳನ್ನು ಕೊಡಹಿ ,ಇವುಗಳನ್ನು ನಾಳೆ ಆಸ್ಪತ್ರೆಗೆ ಕೊಂಡು ಹೋಗಿ ಸಿಸ್ಟೆರ್ ಗಳಿಗೆ ಕೊಟ್ಟರೆ ಅವರು ಓದಿಯಾರು ಅಥವಾ ರೋಗಿಗಳ ಜತೆಗೆ ಇರುವವರಿಗೆ ಕೊಡ ಬಹುದು ಎಂದು  ಒಂದು ಚೀಲದಲ್ಲಿ ಹಾಕಿ ಕೊಂಡೆ . ಅಟ್ಟಣಿಗೆ ಬಾಗಿಲು ತಾಟಿ ಮೊಳಕೈ ಗಾಯ ವಾಯಿತು . ಅದಕ್ಕೆ ಮುಲಾಮು ಹಚ್ಚಿ ,ಜೆಟ್ ಲ್ಯಾಗ್ ನಿಂದ ತೂಗುತ್ತಿದ್ದ ನಿದ್ದೆಯ ಮಂಪರಿನಲ್ಲಿ ಇನ್ನೇನು ಮಾಡುವುದು ?ಗುಡಿಸಿ ಒರೆಸಲೇ ,ಅಲ್ಲ ನಾಳೆಗೆ ಇಡಲೇ ?ಎಂದು ಗಾಢ ವಾಗಿ ಯೋಚಿಸುತ್ತಾ ಸೋಫಾ ದಲ್ಲಿ ಕುಳಿತೆ ..ಟಿವಿ ಸರಿ ಉಂಟಾ ನೋಡ ಬೇಕು ,ರಾತ್ರಿ ಊಟಕ್ಕೆ ಹೋಟೆಲ್ ಗೆ ಹೋಗ ಬೇಕು ;ನಾಳೆ ಅಡ್ವಾನ್ಸ್ ಟ್ಯಾಕ್ಸ್ ,ಕರೆಂಟ್ ,ಫೋನ್ ಬಿಲ್ ಇತ್ಯಾದಿ ಪಾವತಿಸ ಬೇಕು ಎಂದು  ಪ್ಲಾನ್ ಹಾಕಿದ್ದವನಿಗೆ ತೂಕಡಿಕೆ ಬಂತು . 

ಎಚ್ಚರ ವಾಗಿ ನೋಡುತ್ತೇನೆ ರಾತ್ರಿ ಒಂಬತ್ತು ಗಂಟೆ .ಮಧ್ಯಾಹ್ನ ಊಟವೂ ಇಲ್ಲ ,ರಾತ್ರಿಯೂ ಉಪವಾಸವೇ ಎಂದು ಸ್ವಲ್ಪ ಅವಲಕ್ಕಿ ನೀರಲ್ಲಿ ಚಂಡಿ ಮಾಡಿ ಉಪ್ಪಿನಕಾಯಿ ಜತೆ ತಿಂದು ಸ್ನಾನ ಮಾಡಿ ಧೂಳು ತುಂಬಿದ ಹಾಸಿಗೆಯಲ್ಲಿ ಪವಡಿಸುವಾಗ ಹೆಂಡತಿಯೊಬ್ಬಳು ಮನೆಯೊಳಗಿಗಿದ್ದರೆ ಎಂಬ ಕವನ ನೆನಪಾಯಿತು


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ