ಬೆಂಬಲಿಗರು

ಮಂಗಳವಾರ, ಫೆಬ್ರವರಿ 28, 2023

ಮೆಚ್ಚಿದ ಒಂದು ಪುಸ್ತಕ

 


ಹೋದ ವಾರ ಎರಡು ಪುಸ್ತಕ ಗಳನ್ನು  ಒಂದೇ ಉಸಿರಿಗೆ ಎಂಬಂತೆ ಓದಿ ಮುಗಿಸಿದೆ .  ಹಿರಿಯಯರಾದ ಶ್ರೀ ಪ್ರಮೋದ್ ಕುಮಾರ್ ರೈ  ಅವರು ಕೊಟ್ಟ ನಿವೃತ್ತ ಐಎಎಸ್ ಅಧಿಕಾರಿ ವಿ ಬಾಲಸುಬ್ರಹ್ಮಣ್ಯಂ ಅವರ ವೃತ್ತಿ ಜೀವನ ಕತೆ "ಫಾಲ್ ಫ್ರಮ್  ಗ್ರೇಸ್ '  ಮತ್ತು ಸಹೋದರಿ ಶೋಭಿತಾ ಸತೀಷ್ ಪ್ರೀತಿಯಿಂದ ನೀಡಿದ ಅವರ ತಂದೆ ಶ್ರೀ ಮುರಳೀಧರ ಕಾಸರ ಗೋಡು ಅವರ  ಆತ್ಮ ಚರಿತ್ರೆ ಎನ್ನ ಬಹುದಾದ ಕೃತಿ "ಸ್ವಯಂ ಗತಂ ". 

ಸ್ವಯಂ ಗತಂ ಬಗ್ಗೆ  ನನ್ನ ಮೆಚ್ಚುಗೆ ನಿಮ್ಮಲ್ಲಿ ಹಂಚಿಕೊಳ್ಳ ಬಯಸುತ್ತೇನೆ . ಇದು ಲೇಖಕರ ಆತ್ಮ ಚರಿತ್ರೆ ಆದರೂ ಬಾಲ್ಯದ ನೆನಪುಗಳೇ ಸಿಂಹ ಪಾಲು ಪಡೆದಿವೆ . ಕಾಸರಗೋಡು (ಲೇಖಕರ ಭಾಷೆಯಲ್ಲಿ ಕಾಸ್ರೋಡು ),ಪೆರಡಾಲ ,ಬದಿಯಡ್ಕ ಮತ್ತು ಪೆರ್ಲ ಸುತ್ತಮುತ್ತಲಿನ ಅಂದಿನ ಚಿತ್ರಣ ಮುದನೀಡುವುದಲ್ಲದೆ ,ಅಪ್ಯಾಯ ಮಾನವಾಗಿ ಇವೆ . ಈ ಪರಿಸರದೊಡನೆ ನನ್ನ ಬಾಲ್ಯದ ನೆಂಟೂ  ಇರುವದು ಇದಕ್ಕೆ ಕಾರಣ ಇರ ಬಹುದು .  ನವಿರು ಹಾಸ್ಯ ,ಆಪ್ತವಾದ ಪ್ರಸ್ತುತಿ . 

ಆರಂಭವಾಗುವದು ಮಾವನವರೊಂದಿಗೆ(ಇವರೇ ನಡೆಸುತ್ತಿದ್ದ )  ಕೃಷ್ಣಾ ಟಾಕೀಸ್ ಗೆ ಹೋಗುತ್ತಿದ್ದ ನೆಪುಗಳ ಒಂದಿಗೆ . ಇವರ ಮಾವ  ಶ್ಯಾನುಭೋಗ ರು . ' ಟಾಕೀಸ್ ನಲ್ಲಿಯೂ ಸೇನೇರೆ ಮರ್ಮಾಯೆ ಎಂದು ಸ್ವಲ್ಪ ಹೆಚ್ಚಿನ ಮರ್ಯಾದೆ ಕೊಡುತ್ತಿದ್ದುದರಿಂದ ಟಾಕೀಸ್ ನನ್ನದೇ ಎನ್ನುವಷ್ಟು ಗಮೆ ತಲೆಗೆ ಅಡರಿತ್ತು ."

'ರೀಲು ಮುಗಿದು ಸ್ಫೂಲನ್ನು  ಬದಲಾಯಿಸುವ ವೇಳೆ 'ಚಿತ್ರ ಮಂದಿರದ ಒಳಗೆ ಧೂಮ ಪಾನ ನಿಷೇಧಿಸಲಾಗಿದೆ' ಎನ್ನುವ  ಒಕ್ಕಣೆಯಿದ್ದು ಉರಿಯುವ ಸಿಗರೇಟಿನ ಮೇಲೆ ಗುಣಿಸು ಚಿಹ್ನೆಯ ಸ್ಲೈಡ್ ಹಾಕುತ್ತಿದ್ದರು .ಈ ಸ್ಲೈಡ್ ಪರದೆಯ ಮೇಲೆ ಮೂಡಿದೊಡನೆ ಹೆಚ್ಚಿನ ಧೂಮ ಪಾನಿಗಳು ನೆನಪಿಸಿದುದಕ್ಕೆ ಧನ್ಯವಾದ ಎನ್ನುವಂತೆ ಕಿಸೆಗೆ ಕೈ ಹಾಕಿ ಪ್ರಕಾಶ ಬೀಡಿಯೋ ,ಬರ್ಕಲೀ  ಸಿಗರೇಟೋ  ಹೊರ ತೆಗೆದು ಸೇದಲು ಆರಂಭಿಸುತ್ತಿದ್ದರು .'

ಸಣ್ಣ ಹುಡುಗನಾಗಿ ತಮ್ಮ ವೆಂಕಟೇಶ  ಮದುವೆ ಹೋದ ನೆನಪುಗಳ ವರ್ಣನೆ ಓದಿದಾಗ ನಮ್ಮ ತಲೆಮಾರಿನ ಮದುವೆಯ ಚಿತ್ರಣ ಕಣ್ಣ ಮುಂದೆ ಬಂದು ನಿಲ್ಲುತ್ತವೆ . ಸಾಕ್ಷಾತ್ ವಿಡಿಯೋ ದ  ವೀಕ್ಷಕ ವಿವರಣೆಯಂತೆ ಇದೆ . ಉದಾ ವಾಲಗದ ವರ್ಣನೆ ಹೀಗಿದೆ . 

'ಹಿರಿಯರು ಯಾರೋ 'ವಾಲಗ ವಾಲಗ 'ಎಂದ ಕೂಡಲೇ ,ಯಾವಾಗ ಉದಲು  ಹೇಳುತ್ತಾರೋ ಎನ್ನುವಂತೆ ಕಾದಿದ್ದ ವಾಲಗದ ವ  ಪೆ ..   ಪ್ಪೇ..  ಪ್ಪೇ ಎಂದು ಪೀಠಿಕೆ ಹಾಕಿದಂತೆ ಊದಿ ,ನಿದ್ದೆ ಕೂರುತ್ತಾ ಕುಳಿತಿದ್ದ ಸಹಚರರಾದ 'ಡಗ್ಗ ಡಕ್ಕೆ 'ಕೊಟ್ಟುವವನಿಗೂ ,ಶ್ರುತಿ ಊದುವವನಿಗೂ ,ಚೈಮ್ ಚಕ್ಕ ಚೈಮ್ ಎನ್ನುತ್ತಾ ತಾಳ ಹಾಕುವವನಿಗೂ ಕಣ್ಣಿನಲ್ಲೇ ಸುರು ಮಾಡುವಂತೆ ಸೂಚನೆ ನೀಡಿದಾಗ ವಾದ್ಯ ಮೇಳ ಆರಂಭ .ಇದೆಲ್ಲವನ್ನೂ ಹತ್ತಿರದಿಂದ ನಿಂತು ನೋಡುತ್ತಿದ್ದ ನನ್ನ ನೋಟ ಪೂರ್ತಿಯಾಗಿ ಇದ್ದುದು ಮಾತ್ರ ,ಎಲ್ಲರಿಗಿಂತಲೂ ಭಿನ್ನವಾಗಿ ,ಕೆನ್ನೆ ಉಬ್ಬಿಸಿ ,ಮೂಗಿನ ಹೊರಳೆಯನ್ನು ಅರಳಿಸಿ ,ಕಣ್ಣು ಕೆಕ್ಕರಿಸುತ್ತಾ ಒಂದೇ ರಾಗದಲ್ಲಿ ಪೂ ಊ ಊ .. ಎಂದು ಊದುವವನ ಮೇಲೆಯೇ ಇತ್ತು .ಊದುವಾಗಿನ ಅವನ ಹಾವಭಾವ ,ನಿರಂತರವಾಗಿ ಉಬ್ಬಿ ತಗ್ಗುವ ಕೆಪ್ಪಟೆ ,ಏಕಪ್ರಕಾರವಾಗಿ ಅಡೆತಡೆಯಿಲ್ಲದೆ ಊದುವ ಅವನ ಸಾಮರ್ಥ್ಯ ,ಇವೆಲ್ಲವನ್ನೂ ನೋಡಿದಾಗ ವಾಲಗದವರ ಮುಖ್ಯ 'ಊದಕ 'ಇವನೇ ಆಗಿರಬೇಕು ಎಂದು ತೋರಿತ್ತು .'

ದಿಬ್ಬಣದ ಎದುರಿನಲ್ಲಿ ಗತ್ತಿನಿಂದ ನಡೆಯುತ್ತಿದ್ದ ಮನೆಯ ಗಂಡಸರು ,ಹಿಂದೆಯೇ ಕಲಪಿಲ ಮಾತಾಡುತ್ತಾ ನಡೆಯುವ ಹೆಂಗಸರು ,ಇವರೆಲ್ಲರ ನಡುವೆ ಏನು ಮಾಡ ಬೇಕೆಂದು ತಿಳಿಯದ ಮಕ್ಕಳು .ನಾನಂತೂ ಎಲ್ಲರಿಗಿಂತಲೂ ಸ್ವಲ್ಪ ಎದುರಾದ ಎದೂರಿನಲ್ಲಿ ದ್ದೆ .( ಈಗಲೂ ನಾನು ಎದೂರು ಎಂದು ಹೇಳುವುದಿದೆ )ವಾಲಗದವರ ಹಿಂದೆ ಮುಂದೆಯಾಗಿ ,ಜಾತ್ರೆಯ ವೇಳೆಯಲ್ಲಿ ಚೆಂಡೆ ವಾದ್ಯ ಮೇಳಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ,ಓಲಾಡುತ್ತಾ ಸಾಗುವ ಬೇತಾಳನಂತೆ ,ವಾಲಗದವರ ತಾಳಕ್ಕೆ ನಾನೂ ಮೆಲ್ಲ ಮೆಲ್ಲನೆ ಹಾರಿ ಕುಣಿಯುತ್ತಾ ,ಬಜಕೂಡ್ಲಿನ ಬಗ್ಗೆ ಎಲ್ಲ ಬಲ್ಲವ ಎನ್ನುವ ಹಮ್ಮು ಬಿಮ್ಮಿನೊಡನೆ ,ದಿಬ್ಬಣಿಗರ ದಾರಿ ತೋರುಗನಾಗಿ ಮುಂದೆ ಹೋಗುತ್ತಿದ್ದೆ .'

 ದೊಡ್ಡ ಶುಭಕಾರ್ಯಗಳ ಮುನ್ನಾ  ದಿನದ ವರ್ಣನೆ ನೋಡಿ .'ಅಧ್ಯಕ್ಷರಿಲ್ಲದ ಉದ್ಘಾಟಕರಿಲ್ಲದ ,ಮುಖ್ಯ ಅತಿಥಿ ಗಳಿಲ್ಲದ ,ಭಾಷಣ ಕಾರರಿಲ್ಲದ ,ಆದರೆ ಎಲ್ಲರೂ ಇರುವ ,ಎಲ್ಲರೂ ಎಲ್ಲವೂ ಆಗಿರುವ ಎಲ್ಲರೂ ಉತ್ಸಾಹದಿಂದ ಭಾಗವಹಿಸುವ ಅತ್ತಾಳ ಕೂಟ ಸಂಭ್ರಮದ ತಾಣವಾಗಿ ಬಿಡುತ್ತಿತ್ತು .ತರಕಾರಿಗಳು ಉದ್ದಕ್ಕೆ ಅಡ್ಡಕ್ಕೆ ಎಂದು ತುಂಡಾಗಿ ಬೀಳುತ್ತಿದ್ದಂತೆ ,ಮೂರುವವರ ಬಾಯಿಗಳೂ ಸುಮ್ಮನಿರದೆ ಪುಂಖಾನುಪುಂಖವಾಗಿ ರೋಚಕ ವಿಷಯಗಳು ಹೊರ ಬೀಳುತ್ತಿದ್ದವು .ಪತ್ರಿಕೆಗಳಲ್ಲಿ ಓದದ ಕಿವಿಯಾರೆ ಕೇಳಿ ಬಾಯಾರೆ ಹರಡುವ ಸುದ್ದಿಗಳ  ಮಹಾಪೂರವೇ ಹರಿದು ಬರುತ್ತಿತ್ತು .'

 ತನ್ನ ಬಾಲ್ಯ ,ಅಜ್ಜಿಮನೆ ,ನೆಂಟರ ಮನೆಯಲ್ಲಿ ಕಳೆದ ಸಂತಸದ ದಿನಗಳು ,ಅಂದಿನ ಹೋಟೆಲ್,ಜೀನಸು ಅಂಗಡಿ ,ಕ್ಷೌರಿಕ ,ಚಿನಿವಾರ ,ಟೈಲರ್ ಗಳು ,ಡ್ರೈವರ್ ಕಂಡಕ್ಟರ್ ,ಬಸ್ಸುಗಳು ,ತನ್ನ ಊರಿನ ಜಾತ್ರೆ ,ತನ್ನ ಮದುವೆ ಇತ್ಯಾದಿಗಳ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ . ನಡು ನಡುವೆ ತುಳು ,ಮಲಯಾಳ ,ಕೊಂಕಣಿ ಮತ್ತು ಹವ್ಯಕ ಭಾಷೆ ಸಮಯೋಚಿತವಾಗಿ ಬಂದಿದೆ . ತಮ್ಮದೇ ಕೆಲವು ನುಡಿಗಟ್ಟುಗಳನ್ನು ರಚಿಸಿ ಬಳಸಿರುವುದು ವಿಶೇಷ . 

ಪುಸ್ತಕ ದ  ವಿವರಗಳು  ಕ್ರೊನೊಲೊಜಿಕಲ್ ಆರ್ಡರ್ ನಲ್ಲಿ ಇಲ್ಲದಿದ್ದರೂ ಸುಲಭವಾಗಿ ಓದಿಸಿ ಕೊಂಡು ಹೋಗುತ್ತದೆ . ಶ್ರೀ ಮುರಳೀಧರ ಅವರಿಗೆ ನನ್ನ ಅಭಿನಂದನೆಗಳು . ಇದನ್ನು ನನಗೆ ತಲುಪಿಸಿ ಅವರ ಮಗಳು ಶ್ರೀಮತಿ ಶೋಭಿತಾ ದೊಡ್ಡ ಉಪಕಾರ ಮಾಡಿದ್ದಾರೆ . ಅವರಿಗೆ ಅಭಾರಿ

ಈ ಕೃತಿಯನ್ನುಲೇಖಕರ  ತಂದೆ ಕೆಲಸ ಮಾಡುತ್ತಿದ್ದ  ಮತ್ತು  ಕಾಸರಗೋಡಿನಲ್ಲಿ ಕನ್ನಡ ಉಳಿಸಿ  ಬೆಳೆಸುವಲ್ಲಿ  ಮಹತ್ತರ ಪಾತ್ರ ನಿರ್ವಹಿಸಿದ  ಸಿರಿಗನ್ನಡ ಪ್ರೆಸ್ ನಲ್ಲಿ ಮುದ್ರಿಸಿರುವುದು ಒಂದು ವಿಶೇಷ .

 

 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ