ಬೆಂಬಲಿಗರು

ಸೋಮವಾರ, ಫೆಬ್ರವರಿ 13, 2023

ಮಾತೃಭೂಮಿ ಅಕ್ಷರ ಜಾತ್ರೆಯಲ್ಲಿ ಮಿಂಚಿದ ಕನ್ನಡಿಗರು


 ಶ್ರೀಮತಿ ಸುಧಾ ಮೂರ್ತಿ ದೇಶದ ಎಲ್ಲಾ ಸಾಹಿತ್ಯ ಕೂಟಗಳಲ್ಲಿ ಬೇಡಿಕೆ ಉಳ್ಳ ಲೇಖಕಿ ಮತ್ತು ಸಮಾಜ ಸೇವಕಿ . ಅವರ ಪುಸ್ತಕಗಳು ಜಗತ್ತಿನ ಹಲವು ಭಾಷೆಗಳಿಗೆ ಅನುವಾದ ಗೊಂಡಿವೆ .ಮಕ್ಕಳಿಗಾಗಿ ಸಚಿತ್ರ ಕತೆ ಪುಸ್ತಕಗಳನ್ನೂ ಬರೆದಿರುವರು . ಪ್ರವಾಸ ಪ್ರಿಯರಾದ ಅವರು ಜಗತ್ತಿನ ವಿವಿಧ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ ವಿಚಾರಗಳನ್ನು ಕುತೂಹಲದಿಂದ ನೋಡಿರುವರು . 

ಮೊನ್ನೆ ತಿರುವನಂತ ಪುರದ ಲ್ಲಿ ನಡೆದ ಮಾತೃಭೂಮೀ ಅಕ್ಷರ ಜಾತ್ರೆಯಲ್ಲಿ ಕೂಡಾ ಅವರು ಒಂದು ಸ್ಟಾರ್ ಅತಿಥಿ .ಅವರ ಟ್ರೇಡ್ ಮಾರ್ಕ್ ನಗೆ ಮತ್ತು ಸರಳ ಸೀರೆಯ ಉಡುಗೆ ,ಅಂತೆಯೇ ಅವರ ಭಾಷೆ ,ಅಲ್ಲಿ ಸರಳ ಇಂಗ್ಲಿಷ್ ನಲ್ಲಿ ಮಾತು . ಅವರದು ಎರಡು ಮೂರು ಸೆಷನ್ ಇತ್ತು . ಪ್ರೇಕ್ಷಕರ ಪ್ರಶ್ನೆಗೆ ಸರಳ ಉತ್ತರ .

ಅವರು ಹೆತ್ತವರಿಗೆ ಒಂದು ಸಲಹೆ ಕೊಟ್ಟರು .ಮಕ್ಕಳಿಗೆ ಧಾರಳವಾಗಿ ಪಾಕೆಟ್ ಮನೀ ಕೊಡ ಬೇಡಿ. ಆಗಾಗ ಉಡುಗೊರೆ ಬಹುಮಾನ,ಸಿಹಿತಿಂಡಿ ಇತ್ಯಾದಿ ಕೊಡುವ ಪ್ರವೃತ್ತಿ ಸಲ್ಲ . ಮಕ್ಕಳು ಹಬ್ಬ ಹರಿದಿನಗಳಿಗಾಗಿ ಕಾಯ ಬೇಕು . ದೀಪಾವಳಿಗೋ ಯುಗಾದಿಗೋ ಸಿಹಿತಿಂಡಿ ಮಾಡಿ ಕೊಡಿರಿ .ತಮ್ಮ ಮಕ್ಕಳನ್ನು ಇತರರ ಸಾಧನೆಗೆ ಹೋಲಿಸಿ ಅವರ ಮೇಲೆ ಒತ್ತಡ ಹೇರ ಬೇಡಿ . 

ಅಕ್ಷರ ಜಾತ್ರೆಯಲ್ಲಿ ಇನ್ನಿಬ್ಬರು ಕನ್ನಡಿಗರು ಜನಾಕರ್ಷಣೆಯ ಕೇಂದ್ರ ಆಗಿದ್ದರು . ಕ್ಯಾಪ್ಟನ್ ಗೋಪಿನಾಥ್ ಅವರೊಡನೆ ಎರಡು ಸೆಷನ್ ಇತ್ತು .ತಮ್ಮ ಮಾತಿನಲ್ಲಿ ಹಲವು ಕನ್ನಡ ಕವಿತೆಗಳನ್ನು ಗಾದೆಗಳನ್ನು ಉಲ್ಲೇಖಿಸಿದ್ದು ವಿಶೇಷ .ಅವರ ಆತ್ಮ ಚರಿತ್ರೆಯನ್ನು ಆಧರಿಸಿ ತಯಾರಾದ ಚಿತ್ರ ಸೂರೈ ಪೊಟ್ರು (ಶೂರನ ಪೊಗಳು )ದ ನಾಯಕ ನಟಿ ಅಪರ್ಣಾ ಬಾಲಮುರಳಿ ಅವರ ಜತೆಗೆ ಒಂದು ಕಾರ್ಯಕ್ರಮ . ಮಲಯಾಳಂ ನಟ ನಟಿಯರು ಬಹುಶ್ರುತರು ಮತ್ತು ಸಾಹಿತ್ಯ ಸಂಗೀತ ರಾಜಕೀಯ ಇತ್ಯಾದಿ ಜ್ಞಾನ ಉಳ್ಳವರು . 



ಮತ್ತೊಬ್ಬಬ್ಬರು ನಟ ಪ್ರಕಾಶ್ ರಾಜ್ . ಇವರ ಕಾರ್ಯಕ್ರಮ ದಲ್ಲಿಯೂ ಹಾಲ್ ತುಂಬಿ ತುಳುಕುತ್ತಿತ್ತು . ಪ್ರಕಾಶ್ ರಾಜ್ ದಕ್ಷಿಣದ ಎಲ್ಲಾ ಭಾಷೆಗಳನ್ನೂ ಚೆನ್ನಾಗಿ ಬಲ್ಲವರು . ಪ್ರೇಕ್ಷಕರ ಪ್ರಶ್ನೆಗಳಿಗೆ  ನೇರ ದಿಟ್ಟ ಉತ್ತರ . 

                             

                 ಲೇಖಕ ವಸುದೇಂದ್ರ ಅವರು ಒಮ್ಮೆ ಕಾಣ ಸಿಕ್ಕಿದರು . ಅವರ ಕತೆಗಳ ಇಂಗ್ಲಿಷ್ ಆವೃತ್ತಿ ಮಾರಾಟಕ್ಕೆ ಇಟ್ಟಿದ್ದರು .ಕನ್ನಡದ ಪ್ರಸಿದ್ಧ ಲೇಖಕರಾದ  ಶಿವರಾಮ ಕಾರಂತ ,ಭೈರಪ್ಪ ,ಜಯಂತ ಕಾಯ್ಕಿಣಿ ಮುಂತಾದವರ ಕೃತಿಗಳ ಇಂಗ್ಲಿಷ್ ಆವೃತ್ತಿ ,ಸುಧಾ ಮೂರ್ತಿ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರ ಪುಸ್ತಕಗಳು ಗಮನ ಸೆಳೆದವು . ಮಲಯಾಳಂ ಭಾಷೆಗೆ ಅನುವಾದ ಆದ ಕನ್ನಡ ಕೃತಿಗಳೂ ಇದ್ದವು . ಮಲಯಾಳಿಗಳ ಪುಸ್ತಕ ಪ್ರೇಮ ಕಂಡು ಸಂತೋಷ ಮತ್ತು ಅಸೂಯೆ ಆಯಿತು . ಎಲ್ಲರ ಕೈಯಲ್ಲೂ ಖರೀದಿಸಿದ ಪುಸ್ತಕ ಗಂಟುಗಳು . 

ಬಾಲಂಗೋಚಿ :  ಹೆತ್ತವರು ಮಕ್ಕಳಿಗೆ (ಅಥವಾ ಗಂಡ ಹೆಂಡತಿಗೆ ,ವೈಸ್ ವೆರ್ಸಾ ) ಎಷ್ಟು ಮತ್ತು ಹೇಗೆ ಪ್ರೀತಿ ತೋರಿಸ ಬೇಕು ಎಂಬುದು ಚರ್ಚಾರ್ಹ ವಿಷಯ . ಹಿಂದೆ ನಮ್ಮ ಬಾಲ್ಯದಲ್ಲಿ ಹೆಚ್ಚಿನ ಪ್ರೀತಿ ಮನಸಿನಲ್ಲಿ ಇದ್ದು ಅದರ ಒಂದು ಅಂಶ ಮಾತ್ರ ಆಗೊಮ್ಮೆ ಈಗೊಮ್ಮೆ ಪ್ರಕಟ ಆಗುತ್ತಿತ್ತು . ಕಂಡ ಕಂಡಲ್ಲಿ ಅಪ್ಪಿ ಕೊಳ್ಳುವುದು ,ಚುಂಬಿಸುವದು ,ಕೇಳಿದ್ದನ್ನೆಲ್ಲಾ ಕೊಡುವುದು ಇರಲಿಲ್ಲ . ಕೂಡು ಕುಟುಂಬದ ಮನೆಗಳಲ್ಲಿ ಎಲ್ಲರ ಅಲ್ಪ ಸ್ವಲ್ಪ ಪ್ರೀತಿ ಸೇರಿ ಮೊತ್ತ ದೊಡ್ಡ ದು ಆಗುತ್ತಿತ್ತು . ಸಿನಿಮಾ ಮತ್ತು ಧಾರವಾಹಿ ಗಳಲ್ಲಿ ಪ್ರೀತಿ ನಟಿಸಲು ಸಂಭಾವನೆ ಕೊಡುತ್ತಾರೆ .ಈಗಿನ ಮಕ್ಕಳು ಮತ್ತು ಯುವಕ ಯುವತಿಯರು ಅದನ್ನು ತಮ್ಮ ಜೀವನದಲ್ಲಿ ಕೂಡಾ ಕಾಣ ಬಯಸುವುದು ವಿಪರ್ಯಾಸ . ನನ್ನ ತಿಳುವಳಿಕೆ ಪ್ರಕಾರ ಬಹಿರಂಗ ಪ್ರೀತಿ  ಅತಿ ಪ್ರಕಟಿಸುವ ವರ ಹೃದಯ ಮತ್ತು ಮನದಲ್ಲಿ ಅದು ವಿಲೋಮ ಅನುಪಾತದಲ್ಲಿ (inverse proportion)ನಲ್ಲಿ ಇರುವುದು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ