ಬೆಂಬಲಿಗರು

ಮಂಗಳವಾರ, ಫೆಬ್ರವರಿ 21, 2023

ಹಲ್ಲು ಇರುವಾಗ ಸಿಗಲಿಲ್ಲ ಕಡಲೆ

 ಹಲ್ಲು ಇರುವಾಗ ಸಿಗಲಿಲ್ಲ ಕಡಲೆ 

ಈಗಿನ ತರುಣ ತರುಣಿಯರು ವಾಟ್ಸ್ ಅಪ್ ,ಇನ್ಸ್ಟಾಗ್ರಾಮ್ ಇತ್ಯಾದಿ ಮೂಲಕ ಬೇಕೆಂದಾಗ ,ನಡೆಯುತ್ತಿರಲಿ ,ಕುಳಿತಿರಲಿ ,ಮಲಗಿರಲಿ ಬಿಂದಾಸ್ ಆಗಿ  ಸಂಹವನ ಮಾಡುವದು ಕಂಡಾಗ  ನಮ್ಮ ತಲೆಮಾರಿನವರು "ಛೆ ನಮ್ಮ ಕಾಲದಲ್ಲಿ ಇವು ಇರಲಿಲ್ಲದೇ ಎಷ್ಟೆಲ್ಲಾ ಕಳೆದು ಕೊಂಡೆವು "ಎಂದು ಮನಸಿನಲ್ಲಿಯೇ ಶಪಿಸಿ ಕೊಳ್ಳುತ್ತಿರುತ್ತಾರೆ . ನಮಗೆ ಇಲ್ಲದ ಎಷ್ಟೋ ಸೌಲಭ್ಯ ಇಂದಿನವರಿಗೆ ಇದೆ . ನಾವು ಮನೆಯಲ್ಲಿ  ಅಜ್ಜ ಅಜ್ಜಿ  ತಂದೆ ತಾಯಿ  ದೊಡ್ಡಪ್ಪ ,ಚಿಕ್ಕಪ್ಪ ,ಅಣ್ಣ ,ಅಕ್ಕ ,ಶಾಲೆಯಲ್ಲಿ ಅಧ್ಯಾಪಕರಿಗೆ ಅಂಜಿ ನಡೆಯ ಬೇಕಿತ್ತು.ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ಎಂದು ಅಲ್ಲಮನೇ ಹೇಳಿದ್ದಾನೆ . . ಈಗ ಹೆತ್ತವರು ,ಗುರುಗಳು ಮಕ್ಕಳಿಗೆ ಅಂಜಿ ನಡೆಯ ಬೇಕಾದ ಪರಿಸ್ಥಿತಿ . ಅವರು ಏನನ್ನು ಬಯಸ ಬಹುದು ಎಂದು ಮೊದಲೇ ಆಲೋಚಿಸಿ  ಒದಗಿಸ ಬೇಕು .

ಇಷ್ಟೆಲ್ಲಾ ನೆನಪು ಆಗಲು ಕಾರಣ ,ದಿನ ನಿತ್ಯ ಎಂಬಂತೆ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ದಿನವೂ ಮಧ್ಯಾಹ್ನ ಊಟ ಮಾಡಿ ವಿರಮಿಸುತ್ತಿರುವ ಹೊತ್ತಿಗೆ ಸರಿಯಾಗಿ ಮೊಬೈಲ್ ಗೆ ಬರುವ ಕರೆ .(ಕರಕರೆ ). ಆ ಕಡೆಯಿಂದ ತರುಣಿಯರು ತಮ್ಮ ಇಂಪಾದ ಸ್ವರದಲ್ಲಿ ಕನ್ನಡ ,ಇಂಗ್ಲಿಷ್ ಮತ್ತು ಕೆಲವೊಮ್ಮೆ ಇಂಗ್ಲಿಷ್ ಭಾಷೆಯಲ್ಲಿ "ಸಾರ್ ನಿಮಗೆ ಸಾಲ ಕೊಡಲು ನಮಗೆ ತುಂಬಾ ಸಂತೋಷ ಆಗುತ್ತಿದೆ . ಅವಶ್ಯಕತೆ ಇದೆಯೇ ?"ಎಂದು ಕೇಳುವರು . ಅವರ ಕೆಲಸ ಅವರು ಮಾಡುವರು ,ಎಂದು ವಿನಯವಾಗಿ ನಿರಾಕರಿಸಿ ,ಆ ನುಂಬರ್ ಬ್ಲಾಕ್ ಮಾಡುವೆನು .ಮರುದಿನ ಅದೇ ಬ್ಯಾಂಕ್   ಇನ್ನೊಂದು ನಂಬರ್ ನಿಂದ ಅದೇ ಆಮಿಷ ಒಡ್ಡುವುದು. ನಾನು ಕೆಲವೊಮ್ಮೆ ತಮಾಷೆಗೆ ನನ್ನ ವಯಸು ತಿಳಿಸಿ ನನಗೆ ಸಾಲ ಕೊಟ್ಟರೆ ತೀರಿಸುವವರು ಯಾರು ?ಎಂದು ತಮಾಷೆಯಾಗಿ ಕೇಳುವುದು ಇದೆ .

  ನನಗೆ ಎಂ ಬಿ ಬಿ ಎಸ್  ಪ್ರವೇಶ ಸಿಕ್ಕಿದಾಗ ಹಣಕಾಸಿನ ತೊಂದರೆ ಇದ್ದು ಬ್ಯಾಂಕ್ ಗಳ  ಬಾಗಿಲು ತಟ್ಟಿದ್ದೆ . ಆಗ ಎಲ್ಲರೂ ಸಹಾನುಭೂತಿ ತೋರಿಸುವವರೇ ಹೊರತು ಸಹಾಯಕ್ಕೆ ಒದಗಲಿಲ್ಲ . ಜನಾರ್ಧನ ಪೂಜಾರಿಯವರ ಕಾಲಕ್ಕೆ  ವಿದ್ಯಾಭ್ಯಾಸಕ್ಕೆ ಸುಲಭ ಬಡ್ಡಿಯಲ್ಲಿ  ಸಾಲ ಕೊಡುವ ಯೋಜನೆ ಬಂತಾದರೂ ಅದು ಸಾಂಕ್ಷನ್ ಆಗಿ ಕೈಗೆ ಸಿಗಲು ಓಡಾಡಿಸಿದ್ದಕ್ಕೆ ಲೆಕ್ಕ ಇಲ್ಲ .ಈ ಬಗ್ಗೆ ನನ್ನ ಪುಸ್ತಕ ದಲ್ಲಿ ಬರೆದಿದ್ದೇನೆ . ಈ ಗ ಈ ಇಳಿ ವಯಸ್ಸಿನಲ್ಲಿ ಹಿಂದಿನ ಜನ್ಮದ ಸಾಲ ತೀರಿಸಿಯೇ ಆಗದಿರುವಾಗ ಹೊಸ ಸಾಲ ದ  ಮೋಹ ಜಾಲದಲ್ಲಿ ಏಕೆ ಬೀಳಲಿ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ