ಬೆಂಬಲಿಗರು

ಶನಿವಾರ, ಫೆಬ್ರವರಿ 11, 2023

ಪಯಣಿಗರ ಗಮನಕ್ಕೆ ,(ಯಾತ್ರಾಕ್ಕಾರ್ ಶ್ರದ್ಧಿಕ್ಕುಗ )



 

ತಿರುವನಂತಪುರ ಕ್ಕೆ ನಮ್ಮ ಮೋದನಲೇ ಭೇಟಿ ಆದುದರಿಂದ ನಗರದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಅಭಿಲಾಷೆ ಇದ್ದಿತು . ಇಂಟರ್ನೆಟ್ ಜಾಲಾಡಿದಾಗ ಕೇರಳ ರಾಜ್ಯ ಪ್ರವಾಸ ನಿಗಮದ ನಗರ ವೀಕ್ಷಣೆ ಬಸ್ ಇದೆ ಎಂದು ತಿಳಿದು ಅವರು ನಡೆಸುವ ಹೋಟೆಲ್ ಚೈತ್ರಂ ನಲ್ಲಿ ವಿಚಾರಿಸಲು ಕೋವಿಡ್ ಕಾಲದಲ್ಲಿ ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿದು ಬಂತು . ಅಲ್ಲೇ ಎದುರುಗಡೆ ಟ್ಯಾಕ್ಸಿ ಯವರು ತಾವು ಕರೆದು ಕೊಂಡು ಹೋಗುತ್ತೇವೆ ಎಂದು ದುಂಬಾಲು ಬಿದ್ದರು . ಇಲ್ಲಿಯ ಟ್ಯಾಕ್ಸಿ ಮತ್ತು ಆಟೋ ಚಾಲಕರಲ್ಲಿ ತಮಿಳು ಭಾಷಿಗರು ಅಧಿಕ ಕಾಣ ಸಿಗುತ್ತಾರೆ . ಪ್ರವಾಸಿಗರನ್ನು ದೋಚುವ ಮನೋಭಾವದವರು ಕಡಿಮೆ . ಅವರ ಸೇವಾ ದರಗಳೂ ನಮ್ಮ ರಾಜ್ಯದ ನಗರಗಳಿಗೆ ಹೋಲಿಸಿದರೆ ಕಡಿಮೆ . 

ಎರಡನೇ ದಿನ ಮುಂಜಾನೆ ಆರುಗಂಟೆಗೆಲ್ಲಾ ಧೋತಿ ಸೀರೆ ಉಟ್ಟು ರೆಡಿ ಆಗಿ  ಹೋಟೆಲ್  ನಿಂದ  ಆಟೋ ಹಿಡಿದು ಪ್ರಸಿದ್ಧ ಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ . ಇಲ್ಲಿ  ಡ್ರೆಸ್ ಕೋಡ್ ಇದೆ . ದಕ್ಷಿಣ ಮತ್ತು ಪೂರ್ವ ದಿಕ್ಕಿನಿಂದ ಪ್ರವೇಶ ಸಾಲುಗಳು ಇದ್ದು ತುಂಬಾ ಜನಸಂದಣಿ ಇರಲಿಲ್ಲ .ದೇವಳದ ಕೆರೆ ದೊಡ್ಡದಾಗಿ ಇದ್ದು ನೀರು ನಿರ್ಮಲವಾಗಿದೆ . ಎತ್ತರದ ಸ್ವಾಗತ ಗೋಪುರ ಗಾಂಭೀರ್ಯ ಮೆರಿದಿದೆ.ಒಳಗಡೆ ಪ್ರಾಂಗಣ ವಿಶಾಲವಾಗಿದ್ದು ಗಾಳಿ ಬೆಳಕು ಚೆನ್ನಾಗಿ ಇದೆ . ಗರ್ಭ ಗುಡಿಯ ಆವರಣ ಮಾತ್ರ ಇಕ್ಕಟ್ಟಾಗಿದ್ದು ಅಲ್ಲಿ ದೊಡ್ಡ ಸೇವೆ ಸಲ್ಲಿಸುವವರು ತುಂಬಿ ಸಾಮಾನ್ಯ ಭಕ್ತರ ನೂಕು ನುಗ್ಗಲು ಭಾಸ ವಾಯಿತು .

ನಮ್ಮನ್ನು ಒಯ್ದ ಆಟೋ ಚಾಲಕ ನಗರ ವೀಕ್ಷಣೆ ತಾನೇ ಮಾಡಿಸುವೆನು ,ಮೀಟರ್ ಚಾರ್ಜ್ ಕೊಡಿ ಎಂದು ವಿನಂತಿ ಮಾಡಿದ . ಒಳ್ಳೆಯವನಂತೆ ಕಂಡುದರಿಂದ ಒಪ್ಪಿ ಅವನ ರಿಕ್ಷಾ ದಲ್ಲಿಯೇ ಅರ್ಧ ದಿನದ  ನಗರ ಪ್ರದಕ್ಷಿಣೆ ಮಾಡಿದೆವು .ಮೊದಲಿಗೆ ಅಟ್ಟುಕಳ್ ಭಗವತಿ  ಕ್ಷೇತ್ರ .ಇದು ಬಹಳ ಪ್ರಸಿದ್ದ ಕ್ಷೇತ್ರ . ವೈದಿಕೇತರ ಆರಾಧನೆ ;ವಿಶಾಲವಾಗಿ,ನಿರ್ಮಲವಾಗಿಯೂ ಇದೆ .ಪೊಂಗಲ್ ದಿನ ಇಲ್ಲಿ ಮಹಿಳೆಯರು ಮೈಲು ಗಟ್ಟಲೆ ಸಾಲಿನಲ್ಲಿ ಕುಳಿತು ಸಾಮೂಹಿಕವಾಗಿ ಹಬ್ಬ ಅಚ್ಚರಿಸುವುದು ವಿಶೇಷ .ಇಲ್ಲಿ ಬೆಡಿ ಸೇವೆ ಎಂದು ಇದ್ದು ಅದಕ್ಕೆ ಕಾಣಿಕೆ ಹಾಕ ಬಹುದು .

ಮುಂದೆ ಶ್ರೀ ಪರಶುರಾಮ ಕ್ಷೇತ್ರ . ಇಲ್ಲಿ ಪಿತೃಗಳಿಗೆ ಸಾಮೂಹಿಕ ತರ್ಪಣ ಬಿಡುವ ವ್ಯವಸ್ಥೆ ಇದ್ದು ಪಿಂಡ ಅನ್ನ ತಿನ್ನಲು ಬರುವ ಪರಿವಾಳಗಳು ಗುಂಪು ಗುಂಪಾಗಿ ಕಾಣಿಸುತ್ತವೆ .

ಆಮೇಲೆ  ಪೂವಾರ್ ದ್ವೀಪದ ಬಳಿ ಹಿನ್ನೀರಿನಲ್ಲಿ  ಒಂದು ಗಂಟೆ ಹೊತ್ತು ಬೋಟಿಂಗ್ . ನೀರಿಗೆ ಬಾಗಿದ ಮತ್ತು ನೀರಿನಲ್ಲೇ ಬೇರೂರಿದ ವೃಕ್ಷ ರಾಜಿಗಳ ನಯನ ಮನೋಹರ ದೃಶ್ಯ ,ಅವುಗಳ ನೆರಳಿನ ತಂಪು ಆಪ್ಯಾಯಮಾನ. ಬೋಟ್ ನಡೆಸುವ ವ್ಯಕ್ತಿ ಗೆ ಸ್ಥಳ ದ ಇತಿಹಾಸ ಮತ್ತು ಭೂಗೋಳ ಜ್ನಾನ ಚೆನ್ನಾಗಿ ಇದ್ದು ,ಒಳ್ಳೆಯ ವೀಕ್ಷಕ ವಿವರಣೆ . ಹಿನ್ನೀರಿಗೆ ತಾಗಿ ಹಲವು ರಿಸಾರ್ಟ್ ಗಳು ಮತ್ತು ಸುಂದರ ಹೌಸ್ ಬೋಟ್ ಗಳು ಇವೆ .ಬೋಟ್ ಸಂಚಾರಕ್ಕೆ ಸಾವಿರದ ಐದು ನೂರು ರೂಪಾಯಿ ತೆತ್ತರೂ ಬೇಸರ ಆಗಲಿಲ್ಲ .

ಅಲ್ಲಿಂದ ಕೊವಲಮ್ ಬೀಚ್ ;ಇಲ್ಲಿ ನಮ್ಮೂರಿನ ಬೀಚ್ ನಂತೆಯೇ ಇದ್ದು ,ತಾಗಿ ಕೊಂಡು ಕೆಲವು ಐಷಾರಾಮಿ ಹೊಟೇಲ್ ಗಳು ಇವೆ .ಮರಳುವಾಗ ಪಕ್ಕದಲ್ಲಿಯೇ ಇರುವ ಕಸವು ಕೈಮಗ್ಗದ  ಬಟ್ಟೆ ಅಂಗಡಿ ಭೇಟಿ . ಶ್ರೀಮತಿಯವರು ಕೇರಳ ಸೀರೆ ಕೊಂಡು ಕೊಂಡರು. ಈ ಅಂಗಡಿ ಚೆನ್ನಾಗಿದೆ ಮತ್ತು ನಗರದ ಗಜಿಬಿಜಿಯಿಂದ ದೂರ ಇದೆ .

 ಮರಳಿ ಹೊಟೇಲ್ ಸೇರಿದಾಗ ಒಂದು ಗಂಟೆ , ಆಟೋ ಮೀಟರ್ ಒಂದು ಸಾವಿರ  ತೋರಿಸುತ್ತಿತ್ತು . ಅದಕ್ಕೆ ನಮ್ಮ ಪ್ರೀತಿಯ ಮೊತ್ತವೂ ಸೇರಿಸಿ ಕೊಟ್ಟೆವು . ಒಳ್ಳೆಯ ವ್ಯಕ್ತಿ .ಅವನ ಹೆಸರು ಅನಿಲ್ ಕುಮಾರ್ ,ಅರುವತ್ತರ ಆಸು ಪಾಸಿನವ, ಹೊರಗಿನಿಂದ ಬಂದವರಿಗೆ ಸೇವೆ ಒದಗಿಸುವ ಮನೋಭಾವ ಹೆಚ್ಚು ಇದ್ದಂತೆ ತೋರಿತು . ತಮಿಳ್  ಮಿಶ್ರಿತ ಮಲಯಾಳಂ ಮಾತು . ನಮ್ಮ ಸಂಚಾರದಲ್ಲಿ ಚೆನ್ನಾಗಿ ವಿವರಣೆ ನೀಡುವ ಗೈಡ್ ಕೂಡಾ .

ನಾವು ತಂಗಿದ್ದ ಹೊಟೇಲ್ ಆರ್ಯ ನಿವಾಸ್ ನಲ್ಲಿ ಪುಷ್ಕಳ ಕೇರಳ ಊಟ (ಆವಿಯಲ್ ,ಅಡೆ ಪಾಯಸಂ ,ರಸಂ ,ಸಾಂಬಾರ್ ,ಕುಚ್ಚಲು ಅಕ್ಕಿ ಅನ್ನ )ಮಾಡಿ ಮಧ್ಯಾಹ್ನ ಕನಕ ಕುನ್ನು ಅರಮನೆಗೆ ಮಾತೃ ಭೂಮಿ ಅಕ್ಷರ ಜಾತ್ರೆಗೆ .

 






Attukal Bhagavathy Temple Guide | Timings, Dress Code, Phone Number

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ