ಬೆಂಬಲಿಗರು

ಗುರುವಾರ, ಜೂನ್ 22, 2023

 ಅಮೆರಿಕಾ ಪ್ರವಾಸ ಕೊನೆಯ ಕಂತು 

ನನಗೆ  ಇದು ಎರಡನೇ ಬಾರಿ ಅಮೇರಿಕಾ ಪ್ರವಾಸ .ಮೊದಲನೇ ಸಲದ ಕುತೂಹಲ ಮತ್ತು ಸಂಭ್ರಮ ಈ ಬಾರಿ ಏಕೋ ಇರಲಿಲ್ಲ .ಮೊಮ್ಮಗನ ಜತೆ ಕೆಲ ವಾರಗಳನ್ನು ಕಳೆಯುವ ಅಸೆ ಮಾತ್ರ ಇತ್ತು . ಅದು ಈಡೇರಿತು . 

ಇನ್ನು ಅಮೆರಿಕಾ ದೇಶ ದ  ಬೇರೆ ಬೇರೆ ಭಾಗದಲ್ಲಿ ವಾಸಿಸುತ್ತಿರುವ ನೆಂಟರ ಪೈಕಿ ಕ್ಯಾಲಿಫೋರ್ನಿಯಾ ದಿಂದ ನನ್ನ ಸೋದರ ಭಾವ ಸಂಗೀತಾಭಿಮಾನಿ ಮತ್ತು ಕಲಾವಿದ ರವಿ ಜೋಶಿ ಮತ್ತು  ನ್ಯೂಯೋರ್ಕ್ ಪಕ್ಕ ಇರುವ ನನ್ನ ಪತ್ನಿಯ ಚಿಕ್ಕಮ್ಮನ ಮಗಳು ನನ್ನ ಫೇಸ್ಬುಕ್ ಫ್ರೆಂಡ್ ಲಲಿತಾ ಜಯರಾಮ್ ತಮ್ಮಲ್ಲಿಗೆ ಬರುವಂತೆ ಅಹ್ವಾನ ಕೊಟ್ಟಿದ್ದರು .ಜತೆಗೆ ಕೆನಡಾ ದಲ್ಲಿ ನನ್ನ ತಮ್ಮನ ಮಗ ಪವನ್ ಮತ್ತು ಸೊಸೆ ಸ್ವೀಕೃತಾ ಅಲ್ಲಿಗೆ ಭೇಟಿ ನೀಡುವಂತೆ  ಬಹು ಪ್ರೀತಿಯಿಂದ ಉತ್ತಾಯ ಮಾಡಿದ್ದರು ಅಲ್ಲದೆ ನಮ್ಮಲ್ಲಿ ಕೆನಡಾ ವೀಸಾ ಕೂಡಾ ಇತ್ತು ..ಆದರೆ ನನ್ನ ಅರೋಗ್ಯ ದೃಷ್ಟಿಯಿಂದ ಎಲ್ಲಿಗೂ ಹೋಗದೆ ಮಗನ ಮನೆಯಲ್ಲೇ ಇದ್ದೆವು . 

ಇಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಆಗಿ ಹಕ್ಕಿಗಳ ಚಿಲಿಪಿಲಿ ಆರಂಭ ಆಗುವುದು .ಎದ್ದು ಓಡಾಡಿದರೆ ಇಡೀ ಮನೆಯಲ್ಲಿ ಅಜನೆ ಆಗುವುದು ಏಕೆಂದರೆ ಇಲ್ಲಿ ಎಲ್ಲಾ ಮರದ ಮನೆಗಳು .ಮಕ್ಕಳು ಮೊಮ್ಮಗುವಿನ ನಿದ್ರೆಗೆ ತೊಂದರೆ ಆಗುವುದು .ಆದುದರಿಂದ ಸುಮಾರು ಆರೂವರೆ ಗಂಟೆಗೆ ಎದ್ದು ಕೆಳಗೆ ಚಾವಡಿಗೆ  ಹೋಗುವುದು .ಮೊದಲು ಬೀರನನ್ನು ಹೊರಬಿಟ್ಟು ಒಳಗಡೆ ಮಾಡುವದು . ಆಮೇಲೆ ಒಂದು ಗಂಟೆ ವಾಕಿಂಗ್ ,ಕೆಲವೊಮ್ಮೆ ತಿಂಡಿ ಆದ ಮೇಲೆ . ಮಗು ನಿದ್ದೆ ಮಾಡುತ್ತಿದ್ದ ವೇಳೆ ಟಿವಿ ಯಲ್ಲಿ ಯೌಟ್ಯೂಬ್ ಮೂಲಕ ಸಂಗೀತ ಮತ್ತು ಯಕ್ಷಗಾನ ನೋಡುವುದು ,ಕೇಳುವುದು .ಮಗು ಚಾವಡಿಗೆ ಬಂದಮೇಲೆ ಟಿವಿ ಕಡ್ಡಾಯ ಬಂದ್ .(ಇದು ನಿಜಕ್ಕೂ ಒಳ್ಳೆಯದು )

        ಮಗು ಎದ್ದು ಬಂದಾಗ ಅವನ ಜತೆ ಆಡುವುದು .ಮಧ್ಯಾಹ್ನ ಭರ್ಜರಿ ಊಟ ,ನಿದ್ದೆ .ಸಾಯಂಕಾಲ ಚಹಾ ಆದಮೇಲೆ ಮಗು ನಾಯಿ ಬೀರ ಮತ್ತು ಕುಟುಂಬದ ಸರ್ವರೂ ಸೇರಿ ವಾಕಿಂಗ್ .ರಾತ್ರಿ ಊಟ ,ನಿದ್ದೆ . ವಾರಾಂತ್ಯ ರಜೆಯಲ್ಲಿ ಮಕ್ಕಳು  ನಮ್ಮನ್ನು ವಿಹಾರಕ್ಕೆ ಪಾರ್ಕ್ ಗಳಿಗೆ ಕರೆದು ಕೊಂಡು ಹೋಗುವರು .ವಾಷಿಂಗ್ಟನ್ ರಾಜ್ಯದಲ್ಲಿ ಮೂರು  ನ್ಯಾಷನಲ್ ಪಾರ್ಕ್ ಗಳು ಇವೆ .ಅವುಗಳಲ್ಲಿ ಪ್ರಸಿದ್ದವಾದ ಮೌಂಟ್ ರೈನಿಯರ್ ಗೆ ಕಳೆದ ಬಾರಿ ಹೋಗಿದ್ದ ನೆನಪು .ಈ ಸಲ ನಾರ್ತ್ ಕ್ಯಾಸ್ಕೇಡ್ ನ್ಯಾಷನಲ್ ಪಾರ್ಕ್ ಮತ್ತು ಅದಕ್ಕೆ ತಾಗಿ ಇರುವ ಡಯಾಬ್ಲೊ ಸರೋವರ ಕ್ಕೆ ಹೋದೆವು .ಇದು ನಮ್ಮ ಲಡಾಕ್ ತರಹ ಇದೆ ಎಂದು ಅಲ್ಲಿಗೂ ಹೋಗಿದ್ದ ನನ್ನ ಬೀಗರು ಹೇಳಿದರು . ಈ ರಾಜ್ಯದಲ್ಲಿ ಉದ್ದುದ್ದಕೆ ಬೆಳೆದಿರುವ ಪೈನ್ ವೃಕ್ಷ ಗಳನ್ನೇ ಕಂಡುದು ಹೆಚ್ಚು .ಅವುಗಳ ಹೂ ಪರಾಗ ಗಾಳಿಯಲ್ಲಿ ಹತ್ತಿಯಂತೆ ತೇಲುತ್ತಿದ್ದು ,ನನಗೆ ಅದರ ಅಲ್ಲರ್ಜಿ ಎಂಬ ಸಂದೇಹ ಉಂಟಾದುದರಿಂದ ಮಾಸ್ಕ ಹಾಕಿಕೊಂಡೇ ಸಂಚಾರ . 

ಒಂದು  ಸಂಜೆ ಟ್ಯೂಲಿಪ್ ಹೂ ತೋಟಕ್ಕೆ ಹೋಗಿ ಅಲ್ಲಿ ಯ ವಿಶಾಲ ವರ್ಣರಂಜಿತ ಪುಷ್ಪರಾಜಿ ಯನ್ನು ಕಣ್ಣು ತುಂಬಿ ಕೊಂಡೆವು

ಬೇರೆ ಬೇರೆ ತರಹದ ಆಹಾರ ವನ್ನು ಸವಿಸಿದರು . ನನ್ನ ಮೊಮ್ಮಗನ ಸಂಗೀತ ಶಾಲೆಗೆ ಸೊಸೆ ಕರೆದು ಕೊಂಡು ಹೋದಳು . ಟೀಚರ್ ಬ್ರೆನ್ನಾ  ತುಂಬಾ ಉತ್ಸಾಹ ಭರಿತ ಮತ್ತು ಪುಟ್ಟ ಮಕ್ಕಳ ಆಸಕ್ತಿ ಕುದುರಿಸುವ ,ಸ್ನೇಹ ಮಯಿ ವ್ಯಕ್ತಿ . 

ಮೊಮ್ಮಗನ ಹುಟ್ಟಿದ ಹಬ್ಬದ ಆಚರಣೆ ಗೌಜಿಯಾಗಿ ಒಂದು ಪಾರ್ಕ್ ಸಭಾಂಗಣ ದಲ್ಲಿ ನಡೆಯಿತು .ನಮ್ಮ ದೇಶದ ಮತ್ತು ರಾಜ್ಯದ  ಹಲವು ಮಿತ್ರರು ಭಾಗವಹಿಸಿ ಶುಭ ಕೋರಿದರು . ಒಂದು ದಿನ ಮನೆಯಲ್ಲಿ ಸತ್ಯನಾರಾಯಣ ಪೂಜೆ ಆಚರಣೆ ;  ಪುತ್ತಿಗೆ ಮಠದ  ಪುರೋಹಿತರು . ಸಜ್ಜನರು .ಒಂದು ದಿನ ಮಠ ಕ್ಕೂ ಆಹ್ವಾನಿಸಿ ಪ್ರಸಾದ ಕೊಟ್ಟು ಹರಸಿದರು .

ಇದರ ಹೊರತಾಗಿ ಭಾರತದಲ್ಲಿ ಜೀವಮಾನ ಬಹುಪಾಲು ಕಳೆದ ನಮ್ಮಂತಹವರಿಗೆ ಅಲ್ಲಿ ಸಮಯಾಲಾಪನೆ ಸ್ವಲ್ಪ ಕಷ್ಟವೇ . ಮಕ್ಕಳು ಶಕ್ತಿ ಮೀರಿ ನಮ್ಮನ್ನು ಖುಶಿಯಾಗಿ ಇಡಲು ಶ್ರಮಿಸಿದರು . 

ಹೀಗೆ ಒಂದೂವರೆ ತಿಂಗಳು ಕಳೆದು ಹೋದ ದಾರಿಯಲ್ಲೇ ಅದೇ ಕಂಪನಿ ವಿಮಾನ ದಲ್ಲಿ ವಾಪಾಸು .ವಿಮಾನ ನಿಲ್ದಾಣದಲ್ಲಿ ಪತ್ನಿ ಮಗ ಸೊಸೆ ಮತ್ತು ಮುಖ್ಯವಾಗಿ ಮೊಮ್ಮಗ ವಿಮಾನದ ಬಾಗಿಲಿನ ವರೆಗೆ ಬಂದು ಬೀಳ್ಕೊಟ್ಟರು .ಮೊಮ್ಮಗನಿಗೆ ಟಾಟಾ ಮಾಡುವಾಗ ಹೃದಯ ಭಾರವಾಯಿತು . (ಸಿಯಾಟಲ್ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಕೊಂಡು ಒಳಗೆ ಹೋಗುವ ಅವಕಾಶ ಇದೆ . ನಮ್ಮಲ್ಲಿ ಇದು ಇಲ್ಲ ). 






 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ