ಬೆಂಬಲಿಗರು

ಶನಿವಾರ, ಜೂನ್ 17, 2023

ವೈದ್ಯರು ರೋಗಿಗಳ ಜತೆ ವೃತ್ತಿ ಪರ ಸಂಬಂಧ  ಇಟ್ಟು ಕೊಳ್ಳುತ್ತಾರಲ್ಲದೆ ತೀರಾ ಧೈರ್ಯ ವೈಯುಕ್ತಿಕ ಭಾವನಾತ್ಮಕ ವಾಗಿ ಬಹಳ ಕಡಿಮೆ . ಕೆಲವೊಮ್ಮೆ ತೀರಾ ಆಪ್ತರಾದವರು ಗತಿಸಿದಾಗ ಆದ ನೋವನ್ನು ನಾನು ಹಂಚಿಕೊಂಡಿದ್ದನ್ನು ನೀವು ಗಮನಿಸಿರಬಹುದು . 

           ಶ್ರೀಮತಿ ಜೋಹರಾಬಿ ನನ್ನ ಆರೈಕೆಯ ಪರಿಧಿಯಲ್ಲಿ ಇದ್ದವರು ಊರಲ್ಲಿ ನನ್ನ ಅನುಪಸ್ಥಿತಿ ವೇಳೆ ಕೊನೆಯುಸಿರು ಎಳೆದರು .ತೀರಾ ಸಂಕಟದ ವೇಳೆ ಕೂಡಾ ನನ್ನನ್ನು ಒಮ್ಮೆ ನೋಡಬೇಕು ಎಂದು ಬಯಸಿದರಂತೆ .  

ವರ್ಷದ ಹಿಂದೆ ಅವರ ಮಗ ಬಂದು ತನ್ನ ತಾಯಿಗೆ ವಾಸಿಯಾಗದ ಉದರ ಸಂಬಂಧಿ ಕಾಯಿಲೆ ಇದೆ ಎಂದು ಮಂಗಳೂರಿನ ತಜ್ಞ ವೈದ್ಯರು ತಿಳಿಸಿರುವರು ,ಅವರಿಗೆ ನೋವು ಅಶಕ್ತಿ ಜಾಸ್ತಿ ಆದಾಗ ನಿಮ್ಮಲ್ಲಿ ಬಂದು ತಾತ್ಕಾಲಿಕ ಶಮನ ಕ್ಕೆ ಉಪಚಾರ ಮಾಡಿಸಿ ಕೊಳ್ಳ ಬಹುದೇ ?ಎಂದು ವಿಚಾರಿಸಿದರು . ಇಂತಹ ಸಂದರ್ಭ ನಾವು ಪಾಲಿಯೇಟಿವ್ ಕೇರ್ ಅಥವಾ ಶಮನ 

ಉಪಚಾರ ಕೊಡುತ್ತೇವೆ . ಆದಷ್ಟು ಧೈರ್ಯ ತುಂಬುತ್ತೇವೆ . ವೈಯುಕ್ತಿಕವಾಗಿ ನನಗೆ ಇಂತಹವರ ಬಗ್ಗೆ ಕಾಳಜಿ ಅಧಿಕ . ನಾನು ಕೂಡಲೇ ಅದಕ್ಕೆ ಸಮ್ಮತಿಸಿ ನಮ್ಮ ಸಿಬ್ಬಂದಿಗಳಿಗೆ ಯಾವುದೇ ಸಮಯ ಅವರು ಬಂದರೂ ಅವರನ್ನು ದಾಖಲು ಮಾಡಿಕೊಂಡು ಕೊಡ ಬೇಕಾದ ಚಿಕಿತ್ಸೆ ಬಗ್ಗೆ  ತಿಳಿ ಹೇಳಿದೆ .ಹೀಗೆ ಅವರು ೨೦ ಕ್ಕೂ ಜಾಸ್ತಿ ಬಂದಿರ ಬಹುದು . ಅವರ ಮಕ್ಕಳು  ಪ್ರತಿ ಬಾರಿಯೂ ಯಾವುದೇ ಸಿಡಿ ಮಿಡಿ ಇಲ್ಲದೆ ಪ್ರೀತಿಯಿಂದ ಅವರನ್ನು ಕರೆತಂದು ಅವರ ಜತೆ ಇರುವರು . ದಿನವೂ ಸಾಯುವವರಿಗೆ ಅಳುವವರು ಯಾರು ಎಂದು  ಒಂದೆರಡು ಸಂದರ್ಭದ ನಂತರ ಮನೆಯವವರು ಉದಾಸೀನ ತೋರುವುದು ಈಗಂತೂ ಸಾಮಾನ್ಯ ..ಇವರ ಬಂಧುಗಳು ಇದಕ್ಕೆ ಅಪವಾದ . ಅಲ್ಲದೆ ಪುನಃ ಪುನಃ ಆಸ್ಪತ್ರೆಗೆ ಬರುವವರು ಸಿಬ್ಬಂದಿ ಜತೆ ಮನಸ್ತಾಪ ಮಾಡಿಕೊಳ್ಳುವುದು ಸಾಮಾನ್ಯ . ಕೊನೆಯ ವರೆಗೂ ನಮ್ಮ ನರ್ಸ್ ಮತ್ತು ಇತರರ ಮೇಲೆ ಯಾವುದೇ ತಕರಾರು ಇರಲಿಲ್ಲ ಮಾತ್ರ ಪರಸ್ಪರ ಸ್ನೇಹ ಕಾಳಜಿ ಉಳಿಸಿ ಕೊಂಡಿದ್ದರು .. 

ನಾನು ರೌಂಡ್ಸ್ ನಲ್ಲಿ ಅವರ ಜತೆ ಕುಶಲೋಪರಿ ವಿಚಾರಿಸುವೆನು .ಅವರು ತಮ್ಮ ತೀವ್ರ ತರ ನೋವನ್ನು ಪ್ರಕಟ ಪಡಿಸದೆ ಹಸನ್ಮುಖ ರಾಗಿ ಇರುವರು .ಇಂತಹ ಪಕ್ವತೆ ಬಹಳ ಕಡಿಮೆ ಮಂದಿಯಲ್ಲಿ ಕಂಡಿರುವೆನು . ನಡುವೆ ನಾನು ಕಾಯಿಲೆ ಬಿದ್ದು ಗುಣಮುಖನಾದ ವಿಷಯ ಅವರಿಗೆ ತಿಳಿದು ,ಪ್ರತಿ ಭಾರಿ ಅವವನ್ನು ನೋಡ ಹೋದಾಗ ನೀವು ಹೇಗಿದ್ದೀರಿ ಡಾಕ್ಟ್ರೇ ಎಂದು ಕಾಳಜಿಯಿಂದ ಕೇಳುವರು ..ನಾನು ಅವರಿಗೆ ಸಮಾಧಾನ ಹೇಳುವೊದೋ ಅವರು ನನಗೋ ?ಎಂದು ಗಲಿಬಿಲಿ ಆಗುತ್ತಿತ್ತು . 

ಇಲ್ಲಿ ಅವರ ಮಕ್ಕಳು (ಕಲ್ಲಡ್ಕ ದಲ್ಲಿರುವ ಮಗಳೂ ಸೇರಿ )ಅವರನ್ನು ನೋಡಿಕೊಂಡ ಪರಿ ಇತ್ತೀಚಿಗೆ ಅಪರೂಪವಾಗುತ್ತಿಯುವ ಸೇವೆ . ಅವರಿಗೆ ಒಳ್ಳೆಯದಾಗಲಿ . ಪಡುತ್ತಿದ್ದ ಕಷ್ಟ ದೇವರು ಕೊನೆಗಾಣಿದರೂ ಕಷ್ಟ ಸುಖಗಗಳನ್ನು ,ಲೋಕ ಬಂಧಗಳನ್ನು ಮೀರಿ ಯೋಗಿಯಂತೆ  ಇದ್ದ ಒಬ್ಬ ಸಹೋದರಿಯನ್ನು ನಾನು ಕಳೆದು ಕೊಂಡ ಭಾವನೆ . 

(ಇಲ್ಲಿ ಅವರ ಹೆಸರು ಬಳಸಲು ಅನುಮತಿ ನೀಡಿದ ಮಗಳಿಗೆ ಪ್ರತ್ಯೇಕ ಧನ್ಯವಾದ )


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ