ಬೆಂಬಲಿಗರು

ಮಂಗಳವಾರ, ಜೂನ್ 20, 2023

ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ

ಅಮೇರಿಕಾ ವಾಸ -ಶ್ವಾನ ಮಿತ್ರ ಬೀರ 

ನನ್ನ ಮಗ ಸೊಸೆ ಇಬ್ಬರೂ ಪ್ರಾಣಿ ಪ್ರಿಯರು  . ಮನೆಯಲ್ಲಿ ಒಂದು ಸಾಕು ನಾಯಿ ಇಟ್ಟು ಕೊಂಡಿದ್ದಾರೆ . ಗೋಲ್ಡನ್ ರಿಟ್ರೀವರ್ ಜಾತಿಯ ಬಿಳಿ ಶ್ವಾನ . ಅದರ ಹೆಸರು ಬೀರ . (ಟೈಗರ್ ಜಾನಿ ಇತ್ಯಾದಿ ಇಡಲಿಲ್ಲ ). ಅದು ದ್ವಿಭಾಷಾ ನೀತಿ ಪಾಲಿಸುತ್ತಿದ್ದು . ಮೊದಲು ಟ್ರೈನರ್ ಕಳಿಸಿದ ಇಂಗ್ಲಿಷ್ ಆದೇಶ ಗಳನ್ನು ಉದಾ ಸಿಟ್ ,ಗೋ ಕೆನ್ನೆಲ್ (ಗೋಡಿಗೆ ಹೋಗು ),ಯಸ್ (ಆಹಾರ ಇಟ್ಟು ಯಸ್ ಅಂದರೆ ಅದರ ಆಹಾರ  ಮಾತ್ರ ತಿನ್ನುವುದು  .ನಮ್ಮ ದೋಸೆ ಇಡ್ಲಿ ಗೆ ಇದು ಅನ್ವಯ ಆಗುವುದಿಲ್ಲ . ಇನ್ನು ನಮ್ಮಹೋಗು  ಬಾ ಬೇಡ ಇತ್ಯಾದಿ ಕೂಡಾ ಅರ್ಥ ಆಗುವುದು . 

ಮನೆಯ ಒಳಗೆ ಒಂದು ಗೂಡು ಇದೆ .ಮತ್ತು ಸನಿಹದಲ್ಲಿ ಹೊರಗಡೆ ಒಂದು ಹಾಸಿಗೆ ಕೂಡಾ . ರಾತ್ರಿ ಮಾತ್ರ ಗೂಡಿನಲ್ಲಿ ಕೂಡಿ ಹಾಕಿ ಬೆಳಗ್ಗೆ  ಹೊರಗೆ ಬಿಡುವರು .ಮನೆಯಲ್ಲಿ ಎಲ್ಲಿ ಬೇಕಾದರೂ ಸಂಚರಿಸುವ ಸ್ವಾತಂತ್ರ್ಯ ಅದಕ್ಕೆ ಇದೆ . ಮುಂಜಾನೆ ನಾವು ಎದ್ದ  ಒಡನೆ ಅದನ್ನು ಗೂಡಿನಿಂದ ಬಿಟ್ಟು ಮನೆಯ ಹಿಂದಿನ  ಅಂಗಳಕ್ಕೆ ಬಿಡುವುದು .ಅಲ್ಲಿ ಅದು ಮೂರು ನಾಲ್ಕು ಸುತ್ತು ಹಾಕಿ ಹುಲ್ಲು ಹಾಸನ್ನು ಮೂಸಿ ನೋಡಿ ಯೋಗ್ಯ ಜಾಗದಲ್ಲಿ ಮೂತ್ರ ಸಿಂಚನ ಮಾಡುವುದು . ಮತ್ತೆ ದಿನದಲ್ಲಿ ಮೂತ್ರ ಶಂಕೆ ಆದರೆ ಮನೆಯಲ್ಲಿ ಯಾರಾದರೂ ಇದ್ದರೆ ಬೌ ಎಂದು ಒಂದೇ ಬಾರಿ ಬೊಗಳುವುದು .ಆಗ ನಾವು ಹೊರಗೆ ಕರೆದು ಕೊಂಡು ಹೋಗ ಬೇಕು .ತಪ್ಪಿಯೂ ಮನೆಯ ಒಳಗೆ ಮಾಡದು . ಇನ್ನು ಮುಂಜಾನೆ ಮತ್ತು ಸಂಜೆ ಮಕ್ಕಳು ಅದನ್ನು ವಾಯು ವಿಹಾರಕ್ಕೆ ಕೊಂಡು ಹೋಗುವರು .ಆಗ ಅದು ಕಕ್ಕ ಮಾಡುವದು ,ಅದನ್ನು ನಾವೇ ಎತ್ತಿ ಅಲ್ಲಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕುವುದು ,ಹಾಕುವ ಚೀಲ ಕೂಡಾ ಅಲ್ಲಲ್ಲಿ ಇಟ್ಟಿರುವರು .. ವಾಕಿಂಗ್ ಹೋಗವುವಾಗ ಇದರ ಮಿತ್ರರು ನಿಕ್ಕಿದರೆ ಭಾರೀ ಸಂಭ್ರಮ ,ಹಾರುವುದೇನು ?ಕುಣಿಯುವುದೇನು ?ಅದೇ ರೀತಿ ಮಿತ್ರ ನಾಯಿಯ ಧಣಿಗಳು ಮನೆಗೆ ಬಂದಾಗ ಕೂಡಾ ವಾಸನೆಯಲ್ಲಿ ಕಂಡು ಹಿಡಿದು ಸ್ವಾಗತ ಮಾಡುವುದು ,

ಮನೆಯಲ್ಲಿ ಮೊನ್ನೆ ಮೊನ್ನೆ ವರ್ಷ ದಾಟಿದ ಮೊಮ್ಮಗ ಇದ್ದಾನೆ .ಅವನದ್ದು ಮತ್ತು ಬೀರನದ್ದು ಪೀಸ್ ಫುಲ್ ಕೋ ಎಕ್ಸಿಸ್ಟೆನ್ಸ್ . ಇಬ್ಬರೂ ಅವರಷ್ಟಕ್ಕೆ ಓಡಾಡಿ ಕೊಂಡು ಇದ್ದು ,ಒಮ್ಮೊಮ್ಮೆ ಪರಸ್ಪರ ತಡವಿ ಪ್ರೀತಿ ಪ್ರಕಟಿಸುವರು .,ಮೊಮ್ಮಗ ಅವನನ್ನು ಮುಟ್ಟಿ ಪಾಪ ಎನ್ನುವನು . ನಡೆದಾಡುವಾಗ ಮಗುವಿನ ಮೇಲೆ ಕಾಲು ಉರದಂತೆ ನೋಡಿ ಕೊಳ್ಳುವುದು .ಮೊಮ್ಮಗ ಊಟದ ಕುರ್ಚಿಯಲ್ಲಿ ಕುಳಿತ ಒಡನೆ ಸಿಂಡಿಕೇಟ್ ಬ್ಯಾಂಕ್ ನಾಯಿಯಂತೆ ಬುಡದಲ್ಲಿ ಹಾಜರ್ .  ಅವನು ತನ್ನ ದೋಸೆ ಇಡ್ಲಿ ಹಣ್ಣಿನ ತುಂಡು ಕೆಳಗೆ  ಹಾಕುವುದು ,ಅದು ಗಬಕ್ಕನೇ ತಿನ್ನುವುದು .  ತಿಂದಿತೋ ಎಂದು ಬಗ್ಗಿ ಖಾತರಿ ಪಡೆದು ಕೊಳ್ಳುವನು . 

ನಾಯಿ ಬಹಳ ಸೂಕ್ಷ್ಮ ಮತಿ .ಒಂದು ಸಾರಿ ಸೊಸೆ ಲ್ಯಾಪಟಾಪ್ ನಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಅಲ್ಲಿ ಲಾಗ ಹಾಕುವ ಭರದಲ್ಲಿ ಕಪ್ ನಲ್ಲಿ ಇದ್ದ ಟೀ ಲ್ಯಾಪ್ಟಾಪ್ ಮೇಲೆ ಚೆಲ್ಲಿತು ,ತತ್ಕ್ಷಣ ಬೀರ ನನ್ನ   ಲ್ಯಾಪ್ಟಾಪ್ ಹಾಳು ಮಾಡಿದಿಯಲ್ಲೋ ಎಂದು ಬೇಸರದಲ್ಲಿ ಹೇಳಿ ಅದನ್ನು ಒಣಗ ಬಿಟ್ಟು ಏನೋ ಕೆಲಸಕ್ಕೆ ಮೇಲೆ ಹೋದರೆ ಅದೂ ಸಪ್ಪೆ ಮೋರೆ ಮಾಡಿಕೊಂಡು ಸಾರೀ ಎನ್ನುವಂತೆ ಹ್ಯಾಪ್ ಮೋರೆ ಮಾಡಿ ಹಿಂದೆಯೇ ಹೋಗಿ ,ಆಕೆ ಮೈದಡವಿ ಸರಿ ನಮಗೆ ರಾಜಿ ಎಂದ ಮೇಲೆ ಹಿಂದೆ ಬಂತು . 

        ಅದು ಬೊಗಳುವುದು ಕಡಿಮೆ .ಒಂದು ನಾನು ಮೇಲೆ ಹೇಳಿದ ಕಾರಣಕ್ಕೆ .ಇನ್ನೊಂದು ಹಿತ್ತಿಲಿಗೆ ಮೊಲ ಗಳು ಬಂದಾಗ . ನನ್ನ  ಮೊಮ್ಮಗನಿಗೆ ಮೊಲ ಕಂಡರೆ ಇಷ್ಟ .ಅದು ಹುಲ್ಲು ತಿನ್ನುವುದು ಕಂಡು ಬೆರಳು ತೋರಿಸಿ  ಮಮ್ಮಮ್ಮ ಎನ್ನುವನು .ನಾಯಿಯ ಬೊಗಳು  ಕೇಳಿ ಮೊಲ ಓಡುವುದು .ಇದೊಂದು ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನ ಮತ . 

ಮನೆಯವರು ದಿನಕ್ಕಿಂತ ಹೆಚ್ಚು ಹೊರಗಡೆ ಹೋಗುವಾಗ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವುವ ತಾಣಗಳು ಅಲ್ಲಲ್ಲಿ ಇವೆ ,ಅಲ್ಲದೆ ಅವುಗಳಿಗೆ ಅಭ್ಯಂಜನ ಮಾಡುಸುವವರೂ .ಅವರ ಜೀವನ ನೋಡಿ ನಾಯಿ ಪಾಡು ಎನ್ನುವಂತೆ ಇಲ್ಲ .



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ