ಬೆಂಬಲಿಗರು

ಶನಿವಾರ, ಜುಲೈ 1, 2023

 ಸಂಕಟದಲ್ಲಿರುವ ಜೀನ್ಸ್ 

ಕಳೆದ ಬಾರಿ ಅಮೇರಿಕಾ ದೇಶಕ್ಕೆ ಹೋಗಿದ್ದಾಗ  ನಾನು ಆಸ್ಪತ್ರೆಗೆ ಧರಿಸುವ  ಹಲವು ಜತೆ  ಪ್ಯಾಂಟ್ ಶರ್ಟ್ ಗಳನ್ನು ಚೆನ್ನಾಗಿ ಇಸ್ತ್ರಿ ಮಾಡಿ ಕೊಂಡು ಹೋದರೆ ಅವು ಬ್ಯಾಗಿನ ತೂಕ ಹೆಚ್ಚಿಸಿದವೇ ವಿನಃ ಉಪಯೋಗಕ್ಕೆ ಬಂದುದು ಕಡಿಮೆ . ಯಾಕೆಂದರೆ ಅಲ್ಲಿ ಪ್ಯಾಂಟ್ ಆಗ ಬೇಕು ಎಂದು ಇಲ್ಲ .ಚಡ್ಡಿಯೂ ನಡೆಯುತ್ತದೆ ..ಮಗನ ಚಡ್ಡಿಯೇ ಉಪಯೋಗಕ್ಕೆ ಬಂದಿತು .ಅಲ್ಲದೆ ಅಲ್ಲಿ ಇಸ್ತ್ರಿ ಹಾಕುವ ಅವಶ್ಯಕತೆ ಇಲ್ಲ .ತೊಳೆದ ಪ್ಯಾಂಟ್ ಅಂಗಿ ಹಾಗೇಯೇ ಹಾಕಿಕೊಂಡು ಹೋಗ ಬಹುದು .ಪಾಶ್ಚಾತ್ಯರು ನಮಗೆ ಕೋಟ್ ಟೈ ಇತ್ಯಾದಿ ಕಲಿಸಿ ತಾವು ಮಾತ್ರ ಕೆಲವರನ್ನು ಮತ್ತು ಕೆಲವು ಸಂದರ್ಭ ಬಿಟ್ಟರೆ ಸಾದಾ ಉಡುಗೆಯಲ್ಲಿ ಇರುತ್ತ್ತಾರೆ ,.ನಾವು ಮಾತ್ರ ಇಲ್ಲಿಯ ಸೆಖೆಯಲ್ಲಿಯೂ ಕೋಟ್ ಟೈ ಇತ್ಯಾದಿ ಗೆ ಜೋತು ಬಿದ್ದಿದ್ದೇವೆ . 

ಈ ಬಾರಿ ನಾನು ಎರಡು ಮೂರು ಜತೆ ಸಾದಾ ಉಡುಗೆಯಲ್ಲಿ ಸುಧಾರಿಸಿದೆ ..ಒಂದು ಬಾರಿಯೂ ಇಸ್ತ್ರೀ ಹಾಕಲಿಲ್ಲ . 

ನಾನು ಯಾವ ಫ್ಯಾಷನ್ ಗೂ ವಿರೋಧಿ ಅಲ್ಲ . ಅದು ಅವರವರ ಭಾವಕ್ಕೆ ಭಕುತಿಗೆ ಬಿಟ್ಟ ವಿಷಯ .ಆದರೆ ನಮ್ಮಲ್ಲಿಯೂ ಈಗ ವ್ಯಾಪಕವಾಗಿರುವ ಮತ್ತು ಅಮೇರಿಕಾ ದಲ್ಲಿ ಎಲ್ಲಾ ಕಡೆ ಕಾಣುವ ಹರಿದ ಬಟ್ಟೆಯ ಫ್ಯಾಷನ್ ಮಾತ್ರ ನನಗೆ ಸೋಜಿಗ ಉಂಟು ಮಾಡಿದೆ . ಹುಡುಗರು ಮತ್ತು ಹೆಚ್ಚಾಗಿ ಹುಡುಗಿಯರು ಹರಿದ ಜೀನ್ಸ್ ಪ್ಯಾಂಟ್ ಮತ್ತು ಚಡ್ಡಿ ಹಾಕಿಕೊಂಡು ವಿಜೃಂಬಿಸುವುದು . ಮೊದಲು ಮೊದಲು ಇವರು ಸಮಾಜವಾದಿಗಳು ,ಬಡ ತನದಿಂದ  ಹರಿದ ಬಟ್ಟೆ ಹಾಕಿ ಕೊಂಡಿರುವ ಜನರೊಂದಿಗೆ ತಾವೂ ಇದ್ದೇವೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡುವರು ಎಂದು ಕೊಂಡಿದ್ದೆ .ಆಮೇಲೆ ತಿಳಿಯಿತು ಅದು ಅಲ್ಲಾ ಎಂದು .ಅಂಗಾಂಗಗಳ ತುಣುಕು ತುಣುಕು ಪ್ರದರ್ಶಿಸಿ ಕುತೂಹಲ ಹುಟ್ಟಿಸುವುದು ,ಮತ್ತು ಹರಕು ಮುರುಕು ಬಟ್ಟೆಯ ಜತೆ ಹೋಲಿಸಿದಾಗ ಇರುವುದಕ್ಕಿಂತಲೂ ಸೌಂದರ್ಯ ಅಧಿಕ ಕಾಣುವದು . ಅದು ಬಿಟ್ಟು ಒಳಗೆ ಗಾಳಿಯಾಡಲಿ ಎಂದು ಇರಲಿಕ್ಕಿಲ್ಲ . ನನಗೊಂದು ಚಿಂತೆ ಈ ಉಡುಪುಗಳನ್ನು ಹೊಲಿದ ಮೇಲೆ ಹರಿಯುತ್ತಾರೋ ?ಅಲ್ಲ ಬಟ್ಟೆ ಹರಿದ ಮೇಲೆ ಹೊಲಿಯುತ್ತಾರೋ ?ಇಲ್ಲಿ ನೀವು ಕಂಡಿರಬಹುದು :ಹರಿಯುವಿಕೆಯಲ್ಲಯೂ ಒಂದು ಕ್ರಮ ಇದೆ .ಮೆಥಡ್ ಫಾರ್ ಮ್ಯಾಡ್ ನೆಸ್ ಎನ್ನುವಂತೆ . ಹರಿಯಲ್ಪಟ್ಟ ಬಟ್ಟೆಯ ಮಾರ್ಜಿನ್  ನೇರವಾಗಿ ಇರದೇ ಚಿಂದಿ ಚಿಂದಿಯಾಗಿ ಆದಷ್ಟು ಚಂದ ಎನ್ನುವರು   .ಇದನ್ನು ಡಿಸ್ಟ್ರೆಸ್ಸ್ಡ್ (ಸಂಕಟದಲ್ಲಿರುವ )ಜೀನ್ಸ್ ಬಟ್ಟೆ ಎಂದು ಕರೆಯುವರು .ಧರಿಸುವವರ ಸಂಕಟವೋ ,ನೋಡುಗರದ್ದೋ ಅಥವಾ ತಯಾರಿಸುವವರೋದ್ದೋ ನಾನರಿಯೆ .ಬಟ್ಟೆಯ  ಕೆಲವು ಭಾಗಗಳನ್ನು ಹಳತಾಗಿ ಮತ್ತು ಹರಿದಂತೆ ಮಾಡಿ ಉಡುಪು ತಯಾರು ಮಾಡುವದು . ಉಡುಪಿನ  ಕೈ ಮತ್ತು ಸೊಂಟದಲ್ಲಿ ಆಯಕಟ್ಟಿನ ಜಾಗದಲ್ಲಿ ರಂದ್ರ ಇದ್ದರೆ  ನರ್ಸ್ ನವರಿಗೆ ಇಂಜೆಕ್ಷನ್ ಕೊಡುವುದು ಸುಲಭ 

ಅಮೆರಿಕಾ ದಲ್ಲಿಯೂ ನಿರ್ಗತಿಕರು ಇದ್ದಾರೆ .ತಮ್ಮ ಹಳೇ ಉಡುಪುಗಳನ್ನು ಅವರಿಗೆ ದಾನ ಮಾಡಲು ಇಚ್ಚಿಸುವವರು  ಪೆಟ್ರೋಲ್ ಬಂಕ್ ಗಳಂತಹ  ಜಾಗಗಳಲ್ಲಿ ಇಟ್ಟಿರುವ ಪೆಟ್ಟಿಗೆಗಳಲ್ಲಿ ಅದನ್ನು ಹಾಕಿದರೆ ,.ರೋಗಾಣು ನಾಶ ಮಾಡಿ ,ತೊಳೆದು ಅರ್ಹರಿಗೆ ಕೊಡುವರಂತೆ . 

(ಚಿತ್ರಗಳು ಸಾಂಧರ್ಭಿಕ )






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ