ನನ್ನ ಮಾತಪಿತ ರಿಗೆ ಹತ್ತು ಮಕ್ಕಳು .ಮೊದಲನೇ ಮಗನಿಗೆ ಮನೆ ಅಜ್ಜನ ಹೆಸರು ಮಹಾಬಲ . ಅಜ್ಜಿ,ತಾಯಿ ಮತ್ತು ಚಿಕ್ಕಮ್ಮ ಅಜ್ಜನ ಹೆಸರು ಹೇಳುವಂತಿಲ್ಲ ವಾದುದರಿಂದ ಅವನನ್ನು ಮಾಣಿ ಎಂದು ಕರೆಯುತ್ತಿದ್ದರು.ನಾವು ಕಿರಿಯರು ದೊಡ್ಡಣ್ಣ ಎಂದು .ನಂತರ ನನ್ನ ಅಕ್ಕ . ಆಕೆಗೆ ಮನೆ ಅಜ್ಜಿಯ ಹೆಸರು ಪರಮೇಶ್ವರಿ ಎಂದು ,ನಮ್ಮನ್ನು ಸಹಿತ ಹಿರಿ ಕಿರಿಯರು ಎಲ್ಲರೂ ಅಕ್ಕ ಎನ್ನುವರು . ಇಲ್ಲಿ ಕೂಡಾ ತಾಯಿ ಚಿಕ್ಕಮ್ಮ ಅತ್ತೆ ಹೆಸರು ಹೇಳುವಂತಿಲ್ಲ ತಾನೇ . ನಂತರದವರು ಅಣ್ಣ.ಅವರಿಗೆ ಅಜ್ಜನ ಮನೆ ಅಜ್ಜನ ಹೆಸರು ಕೃಷ್ಣ ಎಂದು .ಅಜ್ಜನ ಮನೆ ಅಜ್ಜಿ ಮತ್ತು ಅಮ್ಮ ಮಾತ್ರ ಅವರನ್ನು ಮೇಲೆ ಹೇಳಿದ ಕಾರಣ ಕ್ಕಾಗಿ ಮುದ್ದು ಎಂದು ಕರೆದರೆ ಉಳಿದವರು ಹೆಸರು ಹಿಡಿದು ಕರೆಯುತ್ತಿದ್ದರು .ಕಿರಿಯರಿಗೆ ಅವರು ಪುಟ್ಟಣ್ಣ . ನಮ್ಮ ಪೈಕಿ ಬುದ್ದಿಶಾಲಿ ಯೂ ,ಮಿತ ಭಾಷಿಯೂ ಆಗಿದ್ದು ಸುರತ್ಕಲ್ ನಲ್ಲಿ ಇಂಜಿನೀರಿಂಗ್ ಮಾಡಿ ಜಗತ್ತಿನೆಲ್ಲೆಡೆ ಕೆಲಸ ಮಾಡಿ ಈಗ ಸುರತ್ಕಲ್ ನಲ್ಲಿಯೇ ನೆಲೆಸಿರುವರು.ಆಮೇಲೆ ಅಣ್ಣ ಗಣಪತಿ ಭಟ್ . ನಾವೆಲ್ಲಾ ಕುಞ್ಞಣ್ಣ ಎಂದು ಕರೆಯುವೆವು , ಮೊದಲಿನವರು ನಮಗಿಂತ ವಯಸಿನಲ್ಲಿ ತುಂಬಾ ದೊಡ್ಡವರು ಆದುದರಿಂದ ನಮಗೆ ಬಹಳ ಸಲುಗೆ ಮತ್ತು ಕ್ಲೋಸ್ ಆಗಿ ಇರಲಿಲ್ಲ ಎಂದೇ ಹೇಳ ಬಹುದು .ಪ್ರೀತಿ ,ಭಯ ಭಕ್ತಿ ಇದ್ದುವು . ಕುಞ್ಞಣ್ಣ ನನಗೆ , ಚಿಕ್ಕಪ್ಪನ ಮಕ್ಕಳೂ ಸೇರಿ ಕಿರಿಯರಿಗೆನಾಯಕ . ಶಾಲೆಗೆ ಹೋಗುವಾಗ ನಮ್ಮ ಮಕ್ಕಳ ಸೈನ್ಯ ಅವನ ಅಂಕೆಯಲ್ಲಿ .ಪೇಟೆಯಲ್ಲಿ ಏನಾದರೂ ನಮಗೆ ಕೊಳ್ಳ ಬೇಕಿದ್ದರೆ ದುಡ್ಡು ಅವನ ಬಳಿ ಕೊಡುತ್ತಿದ್ದರು .ನಾವು ಏನಾದರೂ ಮಂಗ ಬುದ್ದಿ ಮಾಡಿದರೆ ಮನೆಯಲ್ಲಿ ಅವನು ರಿಪೋರ್ಟ್ ಮಾಡಬೇಕಿತ್ತು . ಅವನು ಹೇಳಿಕೊಟ್ಟ ಕೆಲವು ಈಗಲೂ ನೆನಪಿವೆ .ಉದಾ ಉಪಕಾರೋಪಿ ನೀಚಾನಮ್ ಅಪಕಾರಾಯ ಕಲ್ಪತೆ ಪಯಪಾನಾಮ್ ಭುಜಂಗಮ್ ಕೇವಲ ವಿಷ ವರ್ಧನಮ್ (ಪಂಚತಂತ್ರ ದಶ್ಲೋಕ ; ನೀಚರಿಗೆ ಉಪಕಾರ ಮಾಡಿದರೆ ಅಪಕಾರವನ್ನೇ ಮಾಡುವರು . ಹಾವಿಗೆ ಹಾಲು ಎರೆದರೂ ವಿಷವು ಏರುವಂತೆ .),ಇನ್ನೊಂದು ಶ್ಲೋಕ ಅವನಿಗೆ ಅರ್ಥವಾಗದ ಕಾರಣ ತಾನೇ ಅದನ್ನು ಮಾರ್ಪಡಿಸಿ ಹೇಳುತಿದ್ದನು . ಅದು ನಹಿ ಜ್ಜ್ನಾನೇನ ಸದೃಶಮ್ (ಮೈಸೂರ್ ವಿಶ್ವವಿದ್ಯಾಲಯ ಲಾಂಛನ ದಲ್ಲಿ ಇದೆ ).ಅದನ್ನು ಆತನು ನಹಿ ಜ್ಜ್ನಾನೇನ ಮೃಗ ಸದೃಶಮ್ ಎಂದರೇ ಜ್ನಾನ ಹೀನನು ಪಶು ಸಮಾನ ಎಂದು ವಿವರಿಸುತ್ತಿದ್ದನು .ಮೂಲ ಶ್ಲೋಕದ ಅರ್ಥ ಅರಿವಿಗೆ ಸಮಾನವಾದ್ದು ಇಲ್ಲ ಎಂದು ಆಗ ಬೇಕು ಎಂದು ತೋರುತ್ತದೆ .ಈತನೇ ನಮ್ಮ ಕೊತ್ತಣಿಕೆ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಕಮ್ ಅಂಪೈರ್ .ಅವನ ಬಳಿ ಒಂದು ಬೀಗ ಹಾಕುವ ಡೆಸ್ಕ್ ಇತ್ತು.ಅದರಲ್ಲಿ ಮಸ್ತ್ ಎಂಬ ಸೋಡಾ ಮಾತ್ರೆ ಇದ್ದು ಅದನ್ನು ನೀರಿಗೆ ಹಾಕಿದಾಗ ಬುಳುಬುಳು ಎಂದು ಗ್ಯಾಸ್ ಬಂದು ಶರ್ಬತ್ ಆಗುವದು ,ಅದನ್ನು ಕುಡಿಯುವುದು .ನಾವೆಲ್ಲಾ ನಮಗೊಂದು ಕೊಡು ಎಂದು ದುಂಬಾಲು ಬೀಳುತ್ತಿದ್ದೆವು .ಈತನ ಕೈಬರಹ ಬಹಳ ಛಂದ(ನನ್ನದು ಕಾಗೆ ಕಾಲು ).ಲೆಕ್ಕ ಪತ್ರಗಳು ಚೊಕ್ಕ ಮತ್ತು up to date . ಮನ ಬಿಚ್ಚಿ ಕೈಕರಣ ಮಾಡಿ ಮಾತನಾಡುವನು . ಕ್ಯಾಮ್ಕೋ ಉದ್ಯೋಗಿಯಾಗಿ ನಿವೃತ್ತನಾಗಿ ನನ್ನ ಮನೆಯ ಸಮೀಪ ವಾಸವಿರುವನು. ಈಗಲೂ ನನ್ನ ಗಾರ್ಡಿಯನ್ ಆಗಿದ್ದು ನನಗೆ ಪಕ್ಕದಲ್ಲಿ ಅಣ್ಣ ಇದ್ದಾನೆ ಎಂಬ ಧೈರ್ಯ .ಅವನ ಪತ್ನಿ ಸುಬ್ಬು ಲಕ್ಷ್ಮಿ ಅಧ್ಯಾಪಕಿ ಯಾಗಿ ಉಳ್ಳೆಯ ಹೆಸರು ಗಳಿಸಿ ಈಗ ನಿವೃತ್ತ ಜೀವನ .ನೆಹರೂ ನಗರದಿಂದ ಪುತ್ತೂರು ಪೇಟೆಗೆ ನೆಡೆದು ಕೊಂಡೇ ಹೋಗುವರು . ಮುಂಜಾನೆ ವಾಕಿಂಗ್ ಸಮಯ ನಮ್ಮ ಭೇಟಿ ಆಗುವುದು .ಅವನಿಗೆ ದಾರಿಯಲ್ಲಿ ಸಿಗುವ ಎಲ್ಲರೂ ಮಿತ್ರರು . ಅವರೊಡನೆ ಉಭಯ ಕುಶಲೋಪರಿ ಮಾಡಿಯೇ ಮುಂದುವರಿಯುವುದು .
ಆಮೇಲೆ ನನ್ನ ಅಕ್ಕ ಭಾಗ್ಯ ಲಕ್ಷ್ಮಿ .ಅಜ್ಜನ ಮನೆ ಅಜ್ಜಿ ಹೆಸರು .ಎಲ್ಲರೂ ಒಪ್ಪಕ್ಕ ಎಂದು ಕರೆಯುವುದು .ಇವರ ಬಗ್ಗೆ ಹಿಂದೆ ಬರೆದಿದ್ದೇನೆ .ನನ್ನಿಂದಲೇ ಅಕ್ಕ ಆದ ಕಾರಣ ನನ್ನಲ್ಲಿ ಬಳಕೆ ಹೆಚ್ಚು .ಎರಡು ಜಡೆ ಹಾಕಿಕೊಂಡು ನನ್ನ ಕೈ ಹಿಡಿದು ಜೋಪಾನವಾಗಿ ಹೆಮ್ಮೆಯಿಂದ ಶಾಲೆಗೆ ಕರೆದು ಕೊಂಡು ಹೋಗುತ್ತಿದ್ದ ಚಿತ್ರಣ ಮಸುಕು ಮಸುಕಾಗಿ ಯಾದರೂ ಆಪ್ತವಾಗಿ ನೆನಪಿದೆ . ಆಕೆಗೆ ಒತ್ತಿನ ನಾನು ಪದ್ಮನಾಭ ..ಹಿರಿಯರು ಪದ್ಮ ಎಂದೂ ಕಿರಿಯರು ಪದ್ದನ್ನ ಎಂದೂ ಕರೆಯುವರು .ಶಾಲೆಯಲ್ಲಿ ಅಂಕ ಕಡಿಮೆ ಬಂದರೆ ಪೆದ್ದಣ್ಣ ಎನ್ನುವರು ,ಈಗ ನಾನು ಎ ಪಿ ಭಟ್ ಆಗಿದ್ದೇನೆ . ಪಠ್ಯೇತರ ಪುಸ್ತಕಗಳನ್ನು ಓದುವ ಹುಚ್ಚು ಇದ್ದ ನಾನು ಮನೆಗೆ ಮತ್ತು ಮನೆಯವರಿಗೆ ಆಗಿ ಬಂದದ್ದು ಕಡಿಮೆ .
ನನ್ನ ತಮ್ಮ ಲಕ್ಷ್ಮಿ ನಾರಾಯಣ .ಕರೆಯುವುದು ನಾರಾಯಣ ಎಂದು ,ಕಿರಿಯರಿಗೆ ನಾನೆಣ್ಣ . ತುಂಬಾ ಧೈರ್ಯ ಶಾಲಿ ಮತ್ತು ಪ್ರಾಣಿ ಪ್ರಿಯ . ವ್ಯವಹಾರ ಜಾಣ .ಎಂಜಿನೀರ್ ಆಗಿ ಉಡುಪಿಯಲ್ಲಿ ಇದ್ದು ,ನನ್ನ ಸಾಕು ನಾಯಿ ಬಗ್ಗೆ ಪುಸ್ತಕ ಬರೆದಿದ್ದು ಅದು ಆಸಕ್ತರ ಮೆಚ್ಚುಗೆ ಗಳಿಸಿದೆ .. ಕೊನೆಯ ತಮ್ಮ ಶ್ರೀನಿವಾಸ .ಎಲ್ಲರೂ ತಮ್ಮ ಎಂದು ಕರೆಯುವರು ,ಅಕ್ಕಂದಿರ ಮಕ್ಕಳು ತಮ್ಮ ಮಾವ ಎಂದು ಕರೆಯುವರು !. ನಾವು ಎರಡು ಅಣ್ಣಂದಿರಿಗಿಂತ ಮೊದಲೇ ಕೆಲಸಕ್ಕೆ ಸೇರಿದವನು ಮಾತ್ರವಲ್ಲ ನನಗೆ ವಾಹನ ಖರೀದಿಸಲು ಹಣ ಸಹಾಯ ಮಾಡಿದ್ದಲ್ಲದೇ ನನಗೆ ಬೈಕ್ ಸವಾರಿ ಕಲಿಸಿಕೊಟ್ಟವನು . ಸಾಧು ಸ್ವಭಾವ ,ಏಲ್ಲರಿಗೂ ಸಹಾಯ ಹಸ್ತ . ಬೆಂಗಳೂರಿನಲ್ಲಿ ನೆಲೆಸಿದ್ದು ದುರದೃಷ್ಟ ವಶಾತ್ ಅನಾರೋಗ್ಯದಿಂದ ನಮ್ಮನ್ನು ಅಗಲಿದ .ಅವನ ಸರ್ ನೇಮ್ ಮೂರ್ತಿ . ಮನೆಯಲ್ಲಿ ಮತ್ತು ಬಳಗದಲ್ಲಿ ಬಹಳ ಮಂದಿ ಮೂರ್ತಿ ಎಂದು ಕರೆಯುತ್ತಿದ್ದರು .
ಕೊನೆಗೆ ಇಬ್ಬರು ತಂಗಿಯರು ,ಪದ್ಮಾವತಿ ಮತ್ತು ವೀಣಾ . ಪದ್ಮಾವತಿ ಯ ಗಂಡ ಮುಂಬೈ ಯಲ್ಲಿ ವಿದ್ಯುತ್ ಇಲಾಖೆಯಲ್ಲಿ ಇದ್ದು ಅಲ್ಲಿನ ಪ್ರತಿಷ್ಠಿತ ಬಾಂದ್ರಾ ರಿಕ್ಲ ಮೇಷನ್ ಬಳಿ ವಸತಿ ಗೃಹದಲ್ಲಿ ಇದ್ದರು .ಮುಂಬೈ ಗೆ ಹೋದ ಅನೇಕರಿಗೆ ಉಪಚಾರ ಮಾಡಿರುವರು .ಈಗ ಪುತ್ತೂರಿನಲ್ಲಿ ನೆಲೆಸಿರುವರು . ಕೊನೆಯವಳು ವೀಣಾ ವಿಜ್ಞಾನಿ ಯಾಗಿ ಬೆಂಗಳೂರಿನಲ್ಲಿ ವಾಸ .ಇವರಿಬ್ಬರೂ ತಮ್ಮ ಹೆಸರಿನಿಂದ ಕರೆ ಯಲ್ಪಡುವರು .
ಇದನ್ನೆಲ್ಲಾ ಬರೆಯಲು ಕಾರಣ ಇಂದು ಮುಂಜಾನೆ ಜಡಿ ಮಳೆಗೆ ಕುಞ್ಞಣ್ಣ ಮನೆಯಲ್ಲಿ ಮಾಡಿದ ಬಿಸಿ ಬಿಸಿ ಹಲಸಿನ ಹಣ್ಣಿನ ಕೊಟ್ಟಿಗೆ (ಕಡುಬು )ತಮ್ಮನಿಗೆ ಎಂದು ತಂದು ಕೊಟ್ಟುದು ,ಅದನ್ನು ತಿನ್ನುವಾಗ ಪರಿಮಳದೊಂದಿಗೆ ಹಳೇ ನೆನಪುಗಳು ಬಂದವು ..ಕೆಳಗೆ ಇರುವುದು ಅವನ ಚಿತ್ರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ