ಬೆಂಬಲಿಗರು

ಮಂಗಳವಾರ, ಏಪ್ರಿಲ್ 5, 2022

ಕಣ್ಮರೆಯಾದ ಗೋಡೆ ಫೋಟೋ ಗಳು

 

ಲೇಖಕ ವಸುದೇಂದ್ರ ಅವರ' ರಕ್ಷಕ ಅನಾಥ ' ಎಂಬ ಪುಸ್ತಕದಲ್ಲಿ ಅದೇ ತಲೆ ಬರಹದ ಲೇಖನ ಇದೆ . ಬಳ್ಳಾರಿ ಯ ತಮ್ಮ ಮನೆಯನ್ನು ಬೆಂಗಳೂರಿಗೆ ಬದಲಿಸುವಾಗ ಎದುರಿಸಿದ ಒಂದು ಸಮಸ್ಯೆ .ಬಳ್ಳಾರಿ ಯ ಅವರ ಮನೆಯಲ್ಲಿ ,ಹಿಂದಿನ ಮನೆಗಳಂತೆ ,ಫ್ರೇಮ್ ಹಾಕಿ  ಗೋಡೆಗೆ ನೇತು ಹಾಕಿದ್ದ ಹಲವು ದೇವರ ಫೋಟೋ ಗಳನ್ನು ಬೆಂಗಳೂರಿನ ಆಧುನಿಕ ಮನೆಯಲ್ಲಿ ಎಲ್ಲಿ ಪುನರ್ವಸತಿ ಕಲ್ಪಿಸುವದು ?ಈಗಿನ ಮನೆಗಳಲ್ಲಿ ಗೋಡೆಗೆ ಮೊಳೆ ಹೊಡೆಯುವಂತಿಲ್ಲ . 

ಹಿಂದೆ ಮನೆಯ ಮುಖ್ಯವಾಗಿ ಚಾವಡಿಯ ಗೋಡೆಯಲ್ಲಿ ಲಕ್ಷ್ಮಿ ,ಸರಸ್ವತಿ ,ತಿರುಪತಿ ತಿಮ್ಮಪ್ಪ ಮತ್ತು ಮನೆ ದೇವರು ಹೀಗೆ ಹಲವು ಚಿತ್ರಗಳು ಫ್ರೇಮ್ ಹಾಕಿಸಿ ನೇತಾಡುತ್ತಿದ್ದವು . ಕೆಲವು   ಕ್ಯಾಲೆಂಡರ್ ಕಟ್ ಮಾಡಿ ಫ್ರೇಮ್ ಹಾಕಿದಂತಹವು . ಈ ಚಿತ್ರಗಳ ಆಕಡೆ ಈ ಕಡೆ ಮನೆಯ ಯಜಮಾನ ,ಅವನ ಮಕ್ಕಳು ಇವರ ಮದುವೆ ಯಾದಾಗ ಸ್ಟುಡಿಯೋ ದಲ್ಲಿ ತೆಗೆಸಿದ ಬ್ಲಾಕ್ ಅಂಡ್ ವೈಟ್ ಫೋಟೋ ಗಳು . ಶಾಲೆಯ ಸೆಂಡ್ ಆಫ್ ಗ್ರೂಪ್ ಫೋಟೋ ಗಳು (ಇವುಗಳಲ್ಲಿ ಮೊದಲ ಸಾಲಿನಲ್ಲಿ ಕೈಯ್ಯಲ್ಲಿ  ವಾಚ್ ತೋರಿಸಿ ಕೊಂಡು ನಿಂತ ಹುಡುಗಿಯರು ),ಎಳೆಯ ಮಕ್ಕಳ ಭಾವ ಚಿತ್ರ ಇತ್ಯಾದಿ . ಇವುಗಳು ಧೂಳು ಮಯವಾಗಿ ಇರುತ್ತಿದ್ದಲ್ಲದೆ ಹಿಂದುಗಡೆ ಚೇಡರ ಬಲೆ ಹುಳ ಹುಪ್ಪಟೆ ಹಲ್ಲಿ ಮರಿಗಳು ದೇವರ ಆಶ್ರಯ ದಲ್ಲಿ ನಿಶ್ಚಿಂತೆ ಯಾಗಿ ಇರುತ್ತಿದ್ದವು . ಫ್ರೇಮ್ ನಿಂದ ಕುಟ್ಟೆ ಹುಡಿ ಉದುರುದು . ದೊಡ್ಡಚಿತ್ರಗಳ ಮೇಲ್ಬಾಗ ಎದುರಿಗೆ  ಬಗ್ಗಿಸಿ  ಕಟ್ಟುತ್ತಿದ್ದರು ;ಅದರ ಹಿಂದೆ ಕನ್ನಡಕ ,ಊದು ಬತ್ತಿ ಕಟ್ಟು ಇತ್ಯಾದಿ ಇಡುವರು .

ಮನೆಗೆ ನೆಂಟರು ಬಂದರೆ ಬೆಲ್ಲ ನೀರು ಕುಡಿದು ಡ್ರೈವರ್ ಮನಸಿದ್ದರೆ ಈ ಪಟಗಳನ್ನು  ನೋಡುವರು . ಈಗಿನ ಹಾಗೆ ಟೈಮ್ ಪಾಸ್ ಆಲ್ಬಮ್ ನೋಡುವ ಪದ್ಧತಿ ಇರಲಿಲ್ಲ . 

ಇನ್ನು ಉಳಿದ ಜಾಗಗಳಲ್ಲಿ ಕ್ಯಾಲೆಂಡರ್ ಗಳು .ಡಿಸೆಂಬರ್ ತಿಂಗಳಿನಿಂದ ಅವುಗಳ ಭೇಟೆ ಆರಂಭ . ಜವುಳಿ ಶೆಟ್ಟರ ಬಳಿ ಜಯಂತಿಲಾಲ ಬ್ರದರ್ಸ್ ,ಸಾಹೇಬರ ಅಂಗಡಿಯಿಂದ ಅಗರಬತ್ತಿ ಕಂಪನಿಯ ,ಮತ್ತು ಮಂಗಳೂರಿನಿಂದ ದಕ ಕೃಷಿಕರ ಸಹಕಾರಿ ಮಾರಾಟ ಸಂಘದ ಕ್ಯಾಲೆಂಡರ್(ಹಾಗೆ ಹತ್ತು ಹಲವು ) . ದೇವರ ಪಟ ಇದ್ದರೆ ಆದ್ಯತೆ . 

ಇದರ ಜತೆ  ಕೊಡೆಯ ಕಡ್ಡಿಯನ್ನು ಬಗ್ಗಿಸಿ  ,ಅದರಲ್ಲಿ ಬಂದ ಮದುವೆ ,ಮುಂಜಿ ಮತ್ತು  ಶ್ರಾದ್ದ ಇತ್ಯಾದಿಗಳ ಆಮಂತ್ರಣ ಗಳನ್ನು ನೇತು ಹಾಕುವರು .ಪಂಚಾಂಗ ಕೂಡಾ . ಹಿಂದೆ ಹಳ್ಳಿಗಳಲ್ಲಿ (ಕರೆಂಟ್ ,ಫೋನ್ ಇತ್ಯಾದಿ ) ಬಿಲ್ಲು ಗಳ ಕಾಟ ಇರಲಿಲ್ಲ .

ಇಂತಹ ಫೋಟೋ  ಗಳು ಎಲ್ಲಾ ಧರ್ಮದವರ ಮನೆಯ್ಲಲೂ ಅವರವರ ಭಾವ ಭಕುತಿಗೆ ತಕ್ಕಂತೆ  ಇರುತ್ತಿದ್ದವು . ಬಸ್ ಗಳಲ್ಲಿ  ಮಾತ್ರ ಸರ್ವ ಧರ್ಮ ಸಮನ್ವಯತೆ ಸಾರುವಂತೆ ಡ್ರೈವರ್ ಹಿಂದೆ  ಮಧೂರು ಗಣಪತಿ ,ಜೀಸಸ್ ಮತ್ತು ಕಾಬಾದ  ಚಿತ್ರಗಳನ್ನು ಹಾಕಿ ದಿನಾಲೂ ಅದಕ್ಕೆ ಮಾಲೆ ಹಾಕಿ ಸಿಬ್ಬಂದಿ ನಮಸ್ಕರಿಸುತ್ತಿದ್ದರು . 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ