ಬೆಂಬಲಿಗರು

ಮಂಗಳವಾರ, ಏಪ್ರಿಲ್ 26, 2022


 ಜಿ ಪಿ ರಾಜರತ್ನಂ ಅವರ ದಾರಿಯಲ್ಲಿಯೇ ನಡೆದ ಕನ್ನಡದ ಪರಿಚಾರಕ ಚಿ ಶ್ರೀನಿವಾಸ ರಾಜು ಅವರ ಪತ್ನಿ ಸರಸ್ವತಿ ಅವರ ಆತ್ಮ ಕಥನ ಎಂ ಆರ್ ಭಗವತಿ ಅವರ ನಿರೂಪಣೆ . ಯಾವ ಸೋಗೂ ಬೀಗೂ ಇಲ್ಲದ ಯಥಾ ಪಸ್ತುತಿ .ಬೆನ್ನುಡಿಯಲ್ಲಿ ಶ್ರೀ ಬಿ ಪಿ ಬಸವರಾಜು ಹೇಳಿರುವಂತೆ ಪ್ರಾಮಾಣಿಕತೆಯೇ ಈ ಕೃತಿಯ ಜೀವಾಳ . ಎಂ ಆರ್ ಭಗವತಿ ಆರಂಭದಲ್ಲಿ ಸರಸ್ವತಿ ಶ್ರೀನಿವಾಸರಾಜು ಎಂಬ ತುಂಬು ಜೀವನಕ್ಕೆ ಜೀವ ನೀಡಿದ ಅವರ ನೆನಪುಗಳು ನಿಮ್ಮ ಜೀವನನದ ಮತ್ತಾವುದೋ ಬಾಲ್ಯದ ನೆನಪಿಗೆ ಮಿಳಿತವಾದರೆ ತನ್ನ ಶ್ರಮ ಸಾರ್ಥಕ ಎಂದು ಕೊಂಡದ್ದು ಕೃತಿ ಓದಿದ ಬಳಿಕ ಸರಿ ಎಂಬ ಭಾವನೆ ಬರುತ್ತದೆ .

ಶ್ರೀನಿವಾಸ ರಾಜು ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ ಸ್ಥಾಪಿಸಿ ,ಹಲವು ಚಟುವಟಿಕೆಗಳ ರೂವಾರಿ ,ಇವರು ಪ್ರಕಟಿಸಿದ ಮೌಲಿಕ ಕೃತಿಗಳೆಷ್ಟು ,ಬೆಳಕಿಗೆ ತಂದ ಲೇಖಕರು ಎಷ್ಟು . ಇವರಿಗೆ ಇಬ್ಬರು ಸರಸ್ವತಿಯರು . ಮದುವೆ ಸಮಯದಲ್ಲಿ ರಾಜರತ್ನಂ  ಈ ಸರಸ್ವತಿ ಬಂದಾಗ ಆ ಸರಸ್ವತಿಯನ್ನು ಮರೆಯ ಬೇಡ ಎಂದರಂತೆ .

ಶ್ರೀನಿವಾಸ ರಾಜು ಜತೆ ಮದುವೆಯ ಮುಂಚಿನ ದಿನಗಳ ನೆನಪು ಮೊದಲ ಭಾಗದಲ್ಲಿ ಇದ್ದು ,ಹಳೆಯ ಬೆಂಗಳೂರಿನ ಚಿತ್ರಣ ಇದೆ . ಮುಂದೆ ವಿವಾಹಾನಂತರ  ರಾಜು ಮತ್ತು ತಮ್ಮ ಜೀವನದ ಬಗ್ಗೆ ವಿವರಣೆ . ರಾಜು ಎಲ್ಲರೊಡನೆ ಮೆದುವಾಗಿ ಇದ್ದು ಕೋಪವನ್ನು ಮಾತ್ರ ತನ್ನಲ್ಲಿ ತೋರಿಸಿ ಕೊಳ್ಳುತ್ತಿದ್ದುದು ,ಸ್ಕೂಟರ್ ನಲ್ಲಿ ಕುಳಿತಾಗ ಮೈ ಮೇಲೆ ಕೈಯಿಟ್ಟು ಬಹಿರಂಗ ಪ್ರೀತಿ ಪ್ರದರ್ಶನ ಇಷ್ಟ ಪಡದಿದ್ದುದು ಮತ್ತು ಹಣ ಕಾಸಿನ ವಿಚಾರದಲ್ಲಿ ಭಾರೀ ಕಟ್ಟು ನಿಟ್ಟಾಗಿ ಇದ್ದುದನ್ನು ಹಾಗೇ ಹೇಳಿ ಕೊಂಡಿದ್ದಾರೆ . ಮದುವೆಯ ನಂತರ ಗಂಡನ ಒತ್ತಾಸೆಯಿಂದಲೇ ತಾವು ವಿದ್ಯಾಭ್ಯಾಸ ಮುಂದು ವರಿಸುವಂತೆ  ಆಯಿತು ಎಂಬ ಕೃತಜ್ನತಾ ಭಾವ ಉದ್ದಕ್ಕೂ ಇದೆ . ಅವರ ಗೆಳೆಯರ ಬಳಗ . ಒಂದು ಬಾರಿ ಸ್ಕೂಟರ್ ನಲ್ಲಿ  ಪತ್ನಿಯನ್ನು ಕೂರಿಸಿ ಕೊಂಡು ಹೋಗುತ್ತಿದ್ದವರು ದಾರಿಯಲ್ಲಿ ಶ್ರೀ ಎಚ್ ಎಸ್ ರಾಘವೇಂದ್ರ ರಾಯರನ್ನು ಕಂಡು ಹೆಂಡತಿಗೆ ನೀನು ಬಸ್ಸಿನಲ್ಲಿ ಹೋಗು ಎಂದು ಮಿತ್ರನನ್ನು ಏರಿಸಿ ಕೊಂಡ ವಿಚಾರ ಹೇಳುತ್ತಾ ಅವರಿಗೆ  ತಮ್ಮ ಸ್ಕೂಟರ್ ,ಮಿತ್ರರು ಆಮೇಲೆ ನಾನು ಎಂದು ಹೇಳುತ್ತಾರೆ . 

ಚಿನ್ನದ ಸೀರೆ ಕೊಳ್ಳಲು ತನ್ನ ಜತೆ ಬಾರದಿದ್ದರೂ ಕನ್ನಡ ಸಂಘದ ಕೆಲಸಗಳಿಗೆ ಅಡವು ಇಡಲು ತನ್ನ ಚಿನ್ನವೇ ಬೇಕಾಗಿತ್ತು ಎನ್ನುತ್ತಾರೆ .  ರಾಜು ಎತ್ತರದ ವ್ಯಕ್ತಿ .ಸರಸ್ವತಿ ಅವರು ಕುಳ್ಳಿ . ಅಮಿತಾಭ್ ಜಯಾ ತರಹ .ರಾಜು ತೀರಿಕೊಂಡ  ಮೇಲೆ  ಸಿಕ್ಕ ಪತ್ನಿಯ ಬಗ್ಗೆ ಬರೆದ ಕೆಲವು ಸಾಲುಗಳು ,

  ಗಿಡ್ಡ ಹೆಂಡತಿ ಲೇಸು 

"ಗಿಡ್ಡ ಹೆಂಡತಿಯ ಗಂಡ ನಾನು 

ಸಾವಿರ ಕಣ್ಣಿಗೆ ಅಚ್ಚರಿ ನಾನು 

ಪದವಿ ಪರೀಕ್ಷೆ ಕೈ ಹತ್ತಲಿಲ್ಲ 

ಟಸ್ ಪುಸ್ ಇಂಗ್ಲಿಷ್ ಬಾಯೊಳಗಿಲ್ಲ 

ಮಾರುದ್ದ ಜಡೆಯ ನಿಲುವಿನ ಹೆಣ್ಣಲ್ಲ

ಬಯೋ ಸ್ಕೋಪ್ ಬೆಡಗಿನ ಸುಂದರಿಯಲ್ಲ 

ಆದರೂ ಇವಳೇ ನನ್ನ ಅಚ್ಚು ಮೆಚ್ಚಿನ ಬೆಲ್ಲ ದಚ್ಚು .

ಅಂದಿನ ಜೀವನ ಬಹಳ ಕಷ್ಟಕರ ಎನಿಸಿದರೂ ,ಈಗ ವಿದ್ಯಾವಂತ ಮಕ್ಕಳು ಇದ್ದಾರೆ ,ಸಾಕಷ್ಟು ಸೌಲಭ್ಯಗಳೂ ಇವೆ .ಪೆನ್ಷನ್ ಬರುತ್ತೆ .ಸ್ವಂತ ಮನೆ ಇದೆ .ಆದರೂ ಸುಖ ಇಲ್ಲ ಎನಿಸುತ್ತದೆ ಎಂದು ಬೇಸರಿಸುತ್ತಾರೆ .

ಶ್ರೀನಿವಾಸರಾಜು ಅವರ ನೆನಪುಗಳು ದಿನ ನಿತ್ಯ ನನ್ನ ಬದುಕಿನಲ್ಲಿ ಪ್ರಿಂಟ್ ಆಗುತ್ತಲೇ ಇವೆ !!ಮೂಲ ಪ್ರತಿ ಹಿಂತಿರುಗುವುದು ಯಾವಾಗ ?ಎಂಬ ಪ್ರಶ್ನೆಯೊಡನೆ ಅಂತ್ಯ ಗೊಳಿಸುತ್ತಾರೆ .

ಸರಾಗವಾಗಿ ಓದಿಸಿ ಕೊಂಡು ಹೋಗುತ್ತದೆ

ಬಾಲಂಗೋಚಿ : ನಿರೂಪಕಿಯವರ ಆಶಯ ಸಾಕಾರ ವಾಗಿದೆ . ನನ್ನ ವೈವಾಹಿಕ ಜೀವನದಲ್ಲಿ ಹಲವು ಸಾಮ್ಯತೆಗಳು ಇವೆ . (ಶ್ರೀನಿವಾಸ ರಾಜು ಮೇರು ಸಾಹಿತ್ಯ ಸೇವೆ ಯನ್ನು ಬಿಟ್ಟು ಮನೆಯಲ್ಲಿನನಡವಳಿಕೆ ಯಲ್ಲಿ ಮಾತ್ರ ) .ಇದನ್ನು ಓದಿ ನನ್ನ ಮನೆಯವರೂ ನೀವೆಲ್ಲಾ ಗಂಡಸರು ಹೀಗೆ ಎನ್ನುವುದು ಬೇಡ ಎಂದು ಪುಸ್ತಕವನ್ನು ಅಡಗಿಸಿ ಇಟ್ಟಿದ್ದೇನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ