ಬೆಂಬಲಿಗರು

ಶನಿವಾರ, ಏಪ್ರಿಲ್ 23, 2022

ಮಾತ್ರಾ ಗಣ

 ಮಾತ್ರಾ ಗಣ (ಕ )ಈಗ ಹಲವರು ಮಧ್ಯ ವಯಸ್ಸು ಸಮೀಪಿಸಿದ ಕೂಡಲೇ  ಅನಾರೋಗ್ಯಕ್ಕೆ ತುತ್ತಾಗಿ  ದಿನ ನಿತ್ಯ ಹಲವು ಔಷಧಿಗಳನ್ನು ಸೇವಿಸ ಬೇಕಾಗುತ್ತದೆ . ನನ್ನ ಒಬ್ಬ ಮಿತ್ರ ಸಕ್ಕರೆ ಕಾಯಿಲೆಗೆ ಎರಡು ತರದ ಮಾತ್ರೆ ದಿನಕ್ಕೆ ಎರಡು ಬಾರಿ ,ಬಿ ಪಿ ಗೆ ಎರಡು ಮಾತ್ರೆ ದಿನಕ್ಕೆ ಒಂದು ಬಾರಿ ,ಹೃದ್ರೋಗ ತಡೆಗಟ್ಟಲು ಎರಡು ಮಾತ್ರೆ ,ಸಕ್ಕರೆ ಕಾಯಿಲೆ ಜನ್ಯ ನರ ನೋವಿಗೆ ಒಂದು , ನಿತ್ರಾಣಕ್ಕೆ ಒಂದು ಬಿ ಕಾಂಪ್ಲೆಕ್ಸ್ ,ಪ್ರೊಸ್ಟ್ರೇಟ್ ತೊಂದರೆಗೆ ಒಂದು ಮತ್ತು ಇವುಗಳಿಗೆಲ್ಲಾ ಕಳಶ ವಿಟ್ಟಂತೆ ಒಂದು ಗ್ಯಾಸ್ಟ್ರಿಕ್ ಮಾತ್ರೆ ಇದೆ .ಇವನ  ಪ್ರಿಸ್ಕ್ರಿಪ್ಷನ್ ಕುಡುಮಿ ವಿದ್ಯಾರ್ಥಿಯ ಪರೀಕ್ಷಾ ಉತ್ತರ ಪತ್ರಿಕೆಯಂತೆ ಒಂದು ಪುಟ ಮೀರಿ ಅಡಿಷನಲ್ ಶೀಟ್ ಗೆ ವಿಸ್ತರಿಸಿದೆ .  

ನಾನು ಇಂತಹ ಪ್ರಿಸ್ಕ್ರ್ರಿಪ್ಷನ್ ಗಳನ್ನು ನೋಡಿದಾಗ ಹೇಗಾದರೂ ಇವುಗಳನ್ನು ನೆನಪು ಇಟ್ಟು ಕೊಂಡು ತಿನ್ನುವರು ಎಂದು ಚಿಂತಿಸುತ್ತೇನೆ . ಇಷ್ಟು ಮದ್ದುಗಳು ಸಾಲದೆಂದು ಜಾಹಿರಾತು ಗಳಲ್ಲಿ ಬರುವ (ಹೆಸರು ಬೇಡ )ಹಲವು ಔಷಧಿಗಳು ಅನಧಿಕೃತವಾಗಿ  ಸೇರಿಕೊಂಡಿರುತ್ತವೆ . 

ರೋಗಗಳ ಉಪಚಾರದಲ್ಲಿ ಬಹಳ ಕಟ್ಟು ನಿಟ್ಟು ಬೇಕಾದುದು ಅಪಸ್ಮಾರದ ಚಿಕಿತ್ಸೆಯಲ್ಲಿ .ಇಲ್ಲಿ ಒಂದು ಹೊತ್ತಿನ ಮಾತ್ರೆ ತಪ್ಪಿದರೂ ಫಿಟ್ಸ್ ಬರ ಬಹುದು ಅಲ್ಲದೆ ಫಿಟ್ಸ್ ಬರುವಾಗ ನೀರು ,ಬೆಂಕಿ ಯ ಬಳಿ ಇದ್ದರೆ ಅನಾಹುತ ಆದೀತು . ಹೆಚ್ಚಾಗಿ ಅಪಸ್ಮಾರ ರೋಗಿಗಳು ಚಿಕಿತ್ಸೆಯಲ್ಲಿ ಇರುವಾಗ ಫಿಟ್ಸ್ ಬರುವುದು ಮಾತ್ರೆ ತೆಗೆದು ಕೊಳ್ಳುವುದು ಮರೆತು . ತಾನು ತಿಂದು ಆಗಿದೆ ಎಂದು ಅವರು ಭಾವಿಸಿರುತ್ತಾರೆ ,ವಾಸ್ತವದಲ್ಲಿ ತಿಂದಿರುವುದಿಲ್ಲ . ದಿನಾಲೂ ಮಾತ್ರೆ ತಿಂದ ಕೂಡಲೇ ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿಕೊಳ್ಳ ಹೇಳುವೆನು . ಮಹಾಭಾರತದಲ್ಲಿ ಬರುವ ಅಜ್ಞಾತ ವೇಷ ಕಾಲದಲ್ಲಿ ಕಂಡು ಹಿಡಿಯಲ್ಪಟ್ಟರೆ ಪುನಃ ಹನ್ನೆರಡುವರ್ಷ ವನವಾಸ ಮಾಡ ಬೇಕಾದಂತೆ ಅಪಸ್ಮಾರ ಚಿಕಿತ್ಸೆಯಲ್ಲಿ ಫಿಟ್ಸ್ ಬಂದರೆ ಪುನಃ ಹೊಸ ಲೆಕ್ಕದ ಅವಧಿಗೆ ಔಷಧೋಪಚಾರ ಮಾಡ ಬೇಕಾಗುತ್ತದೆ . 

  ಇನ್ನು ಕೆಲವರು ತಮ್ಮ ಪ್ರತಿಯೊಂದು ಅಂಗಕ್ಕೂ ಸ್ಪೆಷಲಿಸ್ಟ್ ಬಳಿ ಹೋಗುವ ಅಭ್ಯಾಸ ಇಟ್ಟುಕೊಂಡು ,ತತ್ಪರಿಣಾಮ ಅವರ ಬಳಿ ಹಲವು ಪ್ರಿಸ್ಕ್ರಿಪ್ಷನ್ ಗಳು ಏಕ ಕಾಲಕ್ಕೆ ಇರುತ್ತವೆ . ಅವುಗಳಲ್ಲಿ ಒಂದೇ ಔಷಧಿ (ಉದಾ ವಿಟಮಿನ್ ಗಳು , ಗ್ಯಾಸ್ಟ್ರಿಕ್ ಔಷಧಿ ಗಳು )ಗಳು ಬೇರೆ ಬೇರೆ (ಕಂಪನಿ ಹೆಸರು ಬೇರೆ ಇರುವುದು )ಪಟ್ಟಿಗಳಲ್ಲಿ ಏಕ ಕಾಲಕ್ಕೆ ಇರುವುದು . ಸಾಮಾನ್ಯ ಕುಟುಂಬ ವೈದ್ಯರಲ್ಲಿ ಹೋಗುವುದು  ಮರ್ಯಾದೆಗೆ ಕಮ್ಮಿ ಎಂದು ಕೆಲವರು ಭಾವಿಸುತ್ತಾರೆ .ಇದರಿಂದ ತಮ್ಮ ವಿವಿಧ ಪದ್ದತಿಯ ಬೇರೆ ಬೇರೆ  ವೈದ್ಯರ ಔಷಧಿ ಸಲಹೆಗಳನ್ನು  ವಿಶ್ಲೇಷಿಸಿ         ಪ್ರಾ ಯೋಗಿಕ ಮತ್ತು ವೈಜ್ಞಾನಿಕ ನಿರ್ಧಾರಕ್ಕೆ ಬರುವುದು ಕಷ್ಟ .  

ತಿನ್ನುವ ಮಾತ್ರೆಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾದಲ್ಲಿ  ಎರಡು ಮೂರು ಔಷಧಿಗಳನ್ನು ಸೇರಿಸಿ ಒಂದೇ ಮಾತ್ರೆಯ ರೂಪದಲ್ಲಿ ತಯಾರು ಮಾಡಿ ಕೊಡುವ ಪ್ರಯತ್ನ ಮಾಡುತ್ತಾರೆ .ಉದಾಹರಣೆಗೆ ಪಾಲಿ ಕ್ಯಾಪ್ ಎಂಬ ಕ್ಯಾಪ್ಸುಲ್ ನಲ್ಲಿ  ಬಿ ಪಿ ಹೃದ್ರೋಗ ಸಂಬಂಧಿ ಐದು ಬೇರೆ ಬೇರೆ ಔಷಧಿಗಳು ಇವೆ . 

ಹಲವು ಮಾತ್ರೆಗಳನ್ನು ,ಅದೂ ವಯೋ ವೃದ್ಧರಿಗೆ ಕೊಡುವುದನ್ನು ಪಾಲಿ ಫಾರ್ಮಸಿ ಎಂದು ಕರೆಯುತ್ತಾರೆ ಮತ್ತು ಅದರ ಸಾಧಕ ಬಾಧಕಗಳ ಬಗ್ಗೆ  ವೈದ್ಯಕೀಯ ಕ್ಷೇತ್ರದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ