ಬೆಂಬಲಿಗರು

ಶುಕ್ರವಾರ, ಏಪ್ರಿಲ್ 1, 2022

ರಕ್ತ ದಾನ

                                   Blood components separated after spin-down in a collection tube. Blood... |  Download Scientific Diagram

 

ಅನ್ನದಾನಂ ಪರಂ ದಾನಂ ವಿದ್ಯಾದಾನಮತಃ ಪರಮ್| ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ವಿದ್ಯಯಾ|| - ದಾನಗಳಲ್ಲಿ ಅನ್ನದಾನವು ಶ್ರೇಷ್ಠವಾದ ದಾನವಾಗಿದೆ. ಆದರೆ ವಿದ್ಯಾದಾನವು ಅನ್ನದಾನಕ್ಕಿಂತಲೂ ಮಿಗಿಲಾಗಿದೆ. ಏಕೆಂದರೆ ಅನ್ನದಿಂತ ಸಿಗುವ ತೃಪ್ತಿಯು ಕ್ಷಣಿಕವಾದುದಾದರೆ, ವಿದ್ಯೆಯಿಂದ ಜೀವನವಿಡೀ  ದೊರೆಯುತ್ತದೆ. 

ಎಂಬ  ಸುಭಾಷಿತ ನಮಗೆ ಶಾಲೆಯಲ್ಲಿ ಹೇಳಿ ಕೊಡುತ್ತಿದ್ದರು .ಭಹುಶಃ  ಈ ಶ್ಲೋಕ  ರಚನೆ ಆದಾಗ  ರಕ್ತ ದಾನ ಇದ್ದಿರಲಿಕ್ಕಿಲ್ಲ .ಇದ್ದರೆ ಅದಕ್ಕೆ  ಪ್ರಾಶಸ್ತ್ಯ ಕೊಡುತ್ತಿದ್ದರು .

ಮನುಷ್ಯ ಮನುಷ್ಯರೊಳಗೆ  ಜಾತಿ ಮತ ದ್ವೇಷ  ಹುಟ್ಟು ಹಾಕಿ ಸಂತೋಷ ಪಡುವವರಿಗೆ ಆಸ್ಪತ್ರೆಯಲ್ಲಿ ರಕ್ತ ತೆಗೆದು ಕೊಳ್ಳುವಾಗ ಜಾತಿ ನೋಡುತ್ತೇವೆಯೇ ಎಂಬ  ವೇದಾಂತ ನಿಜಕ್ಕೂ ಸರಿ . ಆದರೆ ರಕ್ತದಲ್ಲಿಯೇ ಗುಂಪುಗಾರಿಕೆ ಮತ್ತು ಜಾತಿ ಇದೆಯೆಂದು ಕಾರ್ಲ್  ಲ್ಯಾಂಡ್  ಸ್ಟೀನರ್ ಎಂಬ ವಿಜ್ಞಾನಿ  ೧೯೦೦ ರಲ್ಲಿ  ಕಂಡು ಹಿಡಿದನು . ಇದರಿಂದ ರಕ್ತದಾನ ದ ಕ್ರಾಂತಿಯೇ ಆಗಿ  ರಕ್ತಸ್ರಾವ ಇತ್ಯಾದಿ ಕಾರಣಗಳಿಂದ ಮೃತ್ಯು ದವಡೆಗೆ ಹೋಗಿದ್ದ ಹಲವು ಜೀವಗಳು ಉಳಿದವು . ರಕ್ತ ಕೊಡುವಾಗ ರಕ್ತ  ಜಾತಿ ಹೊಂದಾಣಿಕೆ ನೋಡಿಯೇ ಕೊಡುವರು . ಇದನ್ನು ಗ್ರೂಪಿಂಗ್ ಮತ್ತು ಕ್ರಾಸ್ ಮ್ಯಾಚಿಂಗ್ ಎನ್ನುವರು . 

ರಕ್ತದಲ್ಲಿ ಕೆಂಪು ರಕ್ತ  ಕಣ  ಬಿಳಿ ರಕ್ತ ಕಣ ,ಪ್ಲಾಟಿಲೆಟ್ ಎಂಬ ಮುಖ್ಯ ಕಣಗಳೂ ಪ್ಲಾಸ್ಮಾ ಎಂಬ ದ್ರವವೂ ಸೇರಿದೆ . 

ಮುಖ್ಯ ರಕ್ತ ಗುಂಪುಗಳ ಹಣೆಪಟ್ಟಿ ಕೆಂಪು ರಕ್ತ ಕಣಗಳಲ್ಲಿ  ಇರುವುದು .  ಸಾಮಾನ್ಯವಾಗಿ ರಕ್ತ ಕೊಡುವುದು ಕೆಂಪು ರಕ್ತ ಕಣಗಳ  ಮರು ಪೂರಣೆಗೆ . ನಖ ಶಿಖಾಂತ್ಯ  ಪ್ರಾಣ ವಾಯು ಸಾಗಿಸುವುದು ಅವು ತಾನೇ . 

 

ಹಿಂದೆ  ಇಡೀ ರಕ್ತ ಕೊಡುತ್ತಿದ್ದೆವು .ಈಗ ಅದರಿಂದ  ಕೆಂಪು ರಕ್ತ ಕಣಗಳನ್ನು ಬೇರ್ಪಡಿಸಿ ಕೊಡುವರು ,ಇದನ್ನು ಪ್ಯಾಕ್ಡ್ ಸೆಲ್ಸ್ ಎಂದು ಕರೆಯುತ್ತಾರೆ .ಇದರಿಂದ ಕಡಿಮೆ ವಾಲ್ಯೂಮ್ ನಲ್ಲಿ ಹೆಚ್ಚು ರಕ್ತ ಕಣ ಪೂರಣ ಆಗುವುದು ,ದ್ರವ ದ  ಓವರ್ ಲೋಡ್ ಆಗದು .ಮತ್ತು ರಕ್ತ ದ್ರವ ಅಥವಾ ಪ್ಲಾಸ್ಮಾ ದಲ್ಲಿ ರಕ್ತ ಹೆಪ್ಪು ಗಟ್ಟಿಸುವ ರಾಸಾಯನಿಕಗಳು ಇರುವುದರಿಂದ  ಅದನ್ನು ಶೀತಲೀಕರಿಸಿ ರಕ್ತ ಸ್ರಾವದ ಸಂದರ್ಭ ಫ್ರೆಶ್ ಫ್ರೋಜನ್ ಪ್ಲಾಸ್ಮಾ ಎಂಬ ಹೆಸರಿನಿಂದ ಬಳಸುವರು . ಕೆಂಪು ರಕ್ತ ಕಣದ ಆಯುಸ್ ೧೨೦ ದಿನಗಳು , ಒಂದು ಯೂನಿಟ್ ನಲ್ಲಿ ಶೇಖರಿಸಿದ ಕಣಗಳ  ಸರಾಸರಿ ಆಯು ಕಮ್ಮಿ ಇರುವುದರಿಂದ  ೪೨ ದಿನಗಳ ವರೆಗೆ ಉಪಯೋಗಿಸುವರು . 

 ಇನ್ನು ಬಿಳಿ ರಕ್ತ ಕಣಗಳ ಆಯು ಕೆಲವೇ ಗಂಟೆಗಳು ಇರುವುದರಿಂದ ಅವುಗಳ  ಪೂರಣ ಮಾಡುವದು ಅಪರೂಪ .ಬದಲಿಗೆ  ಅವಶ್ಯ ಬಿದ್ದಾಗ ಅವಗಳ ಉತ್ಪಾದನೆ ಪ್ರಚೋದಿಸುವ ಔಷಧಿಗಳನ್ನು ಕೊಡುವರು . (ಕಾಲೋನಿ ಸ್ಟಿಮ್ಯುಲೇಟಿಂಗ್ ಫ್ಯಾಕ್ಟರ್ ). 

ಇನ್ನು ಪ್ಲಾಟಿಲೆಟ್ ಗಳು . ಇವು ರಕ್ತ ಸ್ರಾವ ತಡೆಗಟ್ಟುವ ಪ್ರಾಥಮಿಕ ಸಾಧನಗಳು . ಸರಾಸರಿ ಆಯುಸ್ಸು ಒಂದು ವಾರ . ಇದನ್ನು ಬೇರೆ ದಾನಿಗಳ ರಕ್ತ ದಿಂದ ಬೇರ್ಪಡಿಸಿ ಅಥವಾ ಒಬ್ಬನೇ ದಾನಿಯ ರಕ್ತವನ್ನು  ಪ್ಲೇಟೆಲೆಟ್ ಮಾತ್ರ  ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಿ ಉಳಿದ ರಕ್ತವನ್ನು ಅವನ ಶರೀರಕ್ಕೇ  ಸೇರಿಸುವ ವಿಧಾನದಿಂದ ಸಂಗ್ರಹಿಸುವರು . ಡೆಂಗೂ  ಕಾಯಿಲೆಯಿಂದ ಈ ಕಣಗಳು  ಪ್ರಸಿದ್ದಿ ಹೊಂದಿದವು .ಪ್ಲಾಟಿಲೆಟ್ ಕಣಗಳು ೫೦೦೦ ದಿಂದ ಕಡಿಮೆ ಆದಾಗ ಅಥವಾ  ಕಣಗಳ ಕೊರತೆಯಿಂದ ರಕ್ತ ಸ್ರಾವ ಇದ್ದರೆ ಮಾತ್ರ ಕೊಡುವರು . ಜಾಗತಿಕ ಅರೋಗ್ಯ ಸಂಸ್ಥೆ ಕೂಡಾ ಡೆಂಗೂ  ಜ್ವರದಲ್ಲಿ ೧೦೦೦೦ ಕ್ಕಿಂತ ಕಡಿಮೆ ಆದರೆ ಅಥವಾ ರಕ್ತ ಸ್ರಾವ ಇದ್ದರೆ ಪ್ಲಾಟಿಲೆಟ್ ಕೊಡಿರಿ ,ಸುಮ್ಮ ಸುಮ್ಮನೆ ಕೊಟ್ಟರೆ ತೊಂದರೆಯೇ ಜಾಸ್ತಿ ಎಂದು ಎಚ್ಚರಿಕೆ ನೀಡಿದೆ . ಮೇಲಾಗಿ ಈ ಕಾಯಿಲೆಯಲ್ಲಿ ಪ್ಲಾಟೇಲೆಟ್ ಕೊರತೆಯಿಂದ ಮರಣ ಸಂಭವಿಸುವುದು ಕಡಿಮೆ . 

     ಹಿಂದೆ ದಾನಿಯ ರಕ್ತ ವನ್ನು ಕ್ರಾಸ್ ಮ್ಯಾಚ್ ಮಾಡಿ ಕೂಡಲೇ ಕೊಡುತ್ತಿದ್ದರು .ಆದರೆ ಈಗ  ದಾನಿಯ ರಕ್ತದಲ್ಲಿ ಎಚ್ ಐ ವಿ ,ಹೆಪಟೈಟಿಸ್ ಬಿ ಮತ್ತು ಸಿ ,ಸಿಫಿಲಿಸ್ ರೋಗ ಇಲ್ಲವೆಂದು  ಪರೀಕ್ಷೆಯ ಮೂಲಕ ಖಾತರಿ ಪಡಿಸಿ ಕೊಡುವರು . ಇದರಿಂದಲೇ ರಕ್ತ ಉಚಿತ ಆದರೂ ಬ್ಲಡ್ ಬ್ಯಾಂಕ್ ನವರು  ಸ್ವಲ್ಪ ದರ ನಿಗದಿ ಪಡಿಸಿರುವರು . 

                    ರಕ್ತ ಪೂರಣ ಮಾಡುವಾಗ ಸಣ್ಣ ಜ್ವರ ,ತುರಿಕೆಯಿಂದ ಹಿಡಿದು ಅಪರೂಪಕ್ಕೆ ಅಪಾಯಕಾರಿ ರಿಯಾಕ್ಷನ್ ಆಗುವುದು ಉಂಟು . ಅದನ್ನು ಚಿಕಿತ್ಸೆ ಮಾಡುವುದಲ್ಲದೆ ,ಬ್ಲಡ್ ಬ್ಯಾಂಕ ಗೆ ವಿವರಗಳನ್ನು ಕೂಡಲೇ ಕಳುಹಿಸುವರು . 

 ತೆಗೆದು ಕೊಳ್ಳುವಾಗ  ರಕ್ತ ಸಂಬಂಧಿಗಳ  ರಕ್ತ ವೈಜಾನಿಕವಾಗಿ ಒಳ್ಳೆಯದಲ್ಲ .ಸಂಬಂಧಿಗಳಲ್ಲದವರ  ರಕ್ತವನ್ನು ಕೊಟ್ಟರೆ ಒಳ್ಳೆಯದು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ