ಬೆಂಬಲಿಗರು

ಮಂಗಳವಾರ, ಏಪ್ರಿಲ್ 12, 2022

ನಿಮಗೆ ಹಣ ಮಾಡಲು ಬರುವುದಿಲ್ಲ

 ನಿಮಗೆ ಹಣ ಮಾಡಲು ಬರದು 

 

ನನ್ನ ಅಣ್ಣನ ಮಗ ಮುರಳಿ ಬಾಲ್ಯದಲ್ಲಿ ಕೆಲವೊಮ್ಮೆ ನನ್ನೊಡನೆ ಆಸ್ಪತ್ರೆಗೆ ಬರುತ್ತಿದ್ದ .(ಆಗ ನಾನು ರೈಲ್ವೆ ಸೇವೆಯಲ್ಲಿ ಇದ್ದೆ .) ಅವನು ಒಂದು ಮೂಲೆಯಲ್ಲಿ ಕುಳಿತು ಎಲ್ಲಾ ಗಮನಿಸುತ್ತಿದ್ದು ಮರಳಿ ಮನೆಗೆ ಹೋಗುವಾಗ "ಅಪ್ಪಚ್ಚಿ ನೀವು ಪೇಷಂಟ್ ಗಳಿಂದ ಹಣ ತೆಗೆದು ಕೊಳ್ಳುವುದಿಲ್ಲ ಯಾಕೆ ?ಎಲ್ಲರಿಂದಲೂ ಪೇಪರ್ ಪೈಸೆ (ನೋಟ್ )ತೆಗೊಳ್ಳ ಬೇಕು .ನನ್ನ ಅಪ್ಪನಂತೆ ನಿಮ್ಮಲ್ಲಿ ಹಣ ಆಗ ಬೇಡವೇ ?ಎಂದು  ಆತಂಕ ಮತ್ತು ಮುಗ್ಧತೆ ಯಿಂದ ಪ್ರಶ್ನಿಸುತ್ತಿದ್ದನು . 

ಸರ್ವಿಸ್ ನಲ್ಲಿ ಇರುವಾಗ ನಿಗದಿತ ಸಂಬಳ . ಅದು ಕಾಲಿಗೆ ಎಳೆದರೆ ತಲೆಗೆ ಇಲ್ಲ ,ತಲೆಗೆ ಎಳೆದರೆ ಕಾಲಿಗೆ ಇಲ್ಲ . ಅದರ ಮೇಲಿಂದ ಒಂದು ಗಮನಾರ್ಹ ಮೊತ್ತ ನನ್ನ ಪುಸ್ತಕ ಮತ್ತು ಪತ್ರಿಕಾ ಖರೀದಿಗೆ ಹೋಗುತ್ತಿತ್ತು .ಮುಂದೆ ನಾನು ಸರಕಾರಿ ಸೇವೆಗೆ ರಾಜೀನಾಮೆ ಕೊಟ್ಟ ಮೇಲೆ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಇಲ್ಲ . ನನ್ನ ಹೆಂಡತಿ ,ಅಕ್ಕ ಮುಂತಾದ ಹಿತೈಷಿಗಳು ಒಂದು ನಿರ್ಧಾರಕ್ಕೆ ಬಂದಿದ್ದರು ."ಇವನಿ(ರಿ )ಗೆ ಹಣ ಮಾಡಲು ಬರುವುದಿಲ್ಲ " 

ಹೆಂಡತಿ ಹೇಳಲು ಕಾರಣ ಇದೆ .ನಾನು ಅವಳು ಏನು ಬೇಡಿಕೆ ಸಲ್ಲಿಸಿದರೂ ಅಕೌಂಟ್ಸ್ ಆಫೀಸರ್ ನಂತೆ ಕಡಿತ ಮಾಡಿಯೇ ಮಂಜೂರು ಮಾಡುತ್ತಿದ್ದೆ . ಉದಾ ಒಂದೂವರೆ ಸಾವಿರ ರೂಪಾಯಿಯ ಹೊಸ ಸೀರೆ ಕೊಳ್ಳಬೇಕು ಎಂದರೆ 'ನೀನು ಮೊನ್ನೆ ಮೊನ್ನೆ ಕೊಂಡದ್ದಲ್ಲವೇ ,ಈಗ ಯಾಕೆ ,ಬೇಕಾದರೆ  ಸಾವಿರದ ಒಳಗಿಂದು ಒಂದು ತೆಗೋ "ಎಂದು ಹೇಳುವೆನು . ಅವಳು ಇಂತಹ ಒರೆಂಜಾಟದಿಂದ "ಮಡುತ್ತು " ಹೋಗಿ ಆಗಾಗ ಮೇಲಿನ ಉದ್ಘಾರ ಮಾಡುವರು . 

ವೈದ್ಯರು ರೋಗಿಗಳಿಂದ ಮತ್ತು ವಕೀಲರು ಕಕ್ಷಿಗಳಿಂದ ಫೀಸು ವಸೂಲು ಮಾಡುವುದು ಒಂದು ಕಲೆ .ನನಗೆ ಅದು ಸಿದ್ಧಿಸಿಯೇ ಇಲ್ಲ ಎನ್ನ ಬಹುದು .ಕುರುಕ್ಷೇತ್ರದಲ್ಲಿ ಅರ್ಜುನನಿಗೆ 'ಎಲ್ಲರೂ ಬಂಧು ಬಾಂಧವರು ಯಾರೊಡನೆ ಹೋರಾಡುವುದು "ಎಂಬ ವೈರಾಗ್ಯ ಭರಿತ ಜಿಜ್ಞಾಸೆ ಬಂದಂತೆ ನಮಗೂ ಎಲ್ಲರೂ ಬಂಧು ಮಿತ್ರರು ,ಇನ್ನು ಕೆಲವರು ಬರೀ ಬಡವರು ಯಾರೊಡನೆ ಎಷ್ಟು ಫೀಸು ತೆಗೆದು ಕೊಳ್ಳುವುದು ?ಎಂಬ  ಗೊಂದಲ .

ಇನ್ನು ಬಂದ ಹಣದ  ಖರ್ಚಿಗೆ ನೂರಾರು ದಾರಿಗಳು ತನ್ನಿಂದ ತಾನೇ ಹುಟ್ಟಿ ಕೊಳ್ಳುತ್ತವೆ . ಬಹಳ ಮಂದಿ ಇವನು ಡಾಕ್ಟ್ರು ಭಾರೀ ಸಂಪತ್ತು ಇರಬೇಕು ಎಂದು ನಾನಾ ಕಾರಣಕ್ಕೆ ಡೊನೇಷನ್ ಗೆ ಬರುವರು .ಹಲವರಿಗೆ ನಾನು ನಯವಾಗಿ ನಿರಾಕರಿಸಿದಾಗ ಕೋಪ ಬರುವುದು. ಆದರೂ ಹಲವು ಸಂತ್ರಸ್ತರನ್ನು ಹುಡುಕಿ ಕೊಂಡು ಹೋಗಿ ಸಹಾಯ ಮಾಡಿದ ತೃಪ್ತಿ ಇದೆ . ಅದನ್ನು ದುರುಪಯೋಗ ಪಡಿಸಿಕೊಂಡವರು ಇದ್ದರೂ ಅವರ ಸಂಖ್ಯೆ ಕಡಿಮೆ .ನಾನು ಕೆಲಸ ಮಾಡಿ ಕೊಂಡಿದ್ದ ಆಸ್ಪತ್ರೆಯ  ಉದ್ಯೋಗಿ ಒಬ್ಬರು ಒಂದು ದಿನ ಬಂದು 'ಸಾರ್ ನಮ್ಮ ಹೊಸ ಮನೆಯ ಕೆಲಸ ಸ್ವಲ್ಪ ಬಾಕಿ ಇದ್ದು ಹಣದ ಕೊರತೆ .ಸ್ವಲ್ಪ ಸಾಲ ಬೇಕಿತ್ತು 'ಎಂದರು .ನಾನು ಪಾಪ ಎಂದು ಪರ್ಸ್ ನಲ್ಲಿ ಇದ್ದ ಹಣವನ್ನು ಎಲ್ಲಾ  ಕೈಗಿತ್ತು ಸಾವಕಾಶ ಹಿಂತಿರುಗಿಸಿ "ಎಂದೆ .ಕೆಲವು ದಿನಗಳ ನಂತರ ವ್ಯಕ್ತಿ  ಕಾಣೆ ;ಕೆಲಸ ಬಿಟ್ಟು ಹೋದ ಸುದ್ದಿ ಸಿಕ್ಕಿತು .ಹೋಗುತ್ತೇನೆ ಎಂದು ಹೇಳಲೂ ಇಲ್ಲ ,ವಿಚಾರಿಸಲು ಹೀಗೆ ಹಲವರಿಂದ ಸುಮ್ಮ ಸುಮ್ಮನೆ ಹಣ ತೆಗೆದು ಕೊಂಡ ವಿಚಾರ ತಿಳಿಯಿತು . ಇಲ್ಲಿ ನನಗೆ ಹಣ ಹೋದ ಬೇಸರ ಸ್ವಲ್ಪವೂ ಇಲ್ಲ .,ಆದರೆ ವಿಶ್ವಾಸ ದ್ರೋಹ ಮಾಡಿಸಿ ಕೊಂಡ ಅನೇಕರು ಮತ್ತೆ ಯಾರನ್ನೂ ನಂಬದ ಸ್ಥಿತಿ ಬರುವದು . 

ನಾನು ಸಮಾಜದ ದೃಷ್ಟಿಯಲ್ಲಿ ಧನವಂತ ಆಗದಿದ್ದರೂ ಸಂತುಷ್ಟ . ಆದರೂ ಹಿತೈಷಿಯಗಳು ನೀವು ಡಾಕ್ಟರ್ ಆಗಿಯೂ ಏನೂ ಮಾಡಲಾಗಲಿಲ್ಲ ಎಂದು  ಹಿತೈಷಿಗಳು  ಪುನಃ ಪುನಃ ಹೇಳುವಾಗ ನಿಜ ಇರ ಬಹುದು ಎನಿಸುವುದು . ಪರೀಕ್ಷಾರ್ಥಿಗಳಿಗೆ ಹೆದರ ಬೇಡಿ ಹೆದರ ಬೇಡಿ ಎಂದು ಎಲ್ಲರೂ ಹೇಳುವಾಗ ಧೈರ್ಯ ಇದ್ದವರೂ ಹೆದರುವಂತೆ .

ಬಾಲಂಗೋಚಿ : ವರ್ಷಗಳ ಹಿಂದೆ ನಾನು ಪಾಪ ಪುಣ್ಯ ನೋಡಿ ಬಹಳ ಕಡಿಮೆ ಚಾರ್ಜ್ (ಕೆಲವೊಮ್ಮೆ ಫ್ರೀ )ಮಾಡುತ್ತಿದ್ದೆ .ಹಾಗೆ ಉಪಕೃತರು ಹಲವರು ಇವನು ನಿಜವಾಗಿಯೂ ಕ್ವಾಲಿಫೈಡ್ ಸ್ಪೆಷಲಿಷ್ಟು ಇರಲಿಕ್ಕಿಲ್ಲ ,ಸಾಧಾರಣ ಡಾಕ್ಟರರು ಇರಬೇಕು ಎಂದು ಕೊಂಡಿದ್ದರು . ಒಂದು ಗಂಭೀರ ಕೇಸ್ ನಾನು ಮುತುವರ್ಜಿಯಿಂದ ಚಿಕಿತ್ಸಿಸುತ್ತಿರುವಾಗ , ಡಾಕ್ಟ್ರೇ ಸ್ಪೆಷಲಿಸ್ಟ್ ಹತ್ರ ತೋರಿಸಿದರೆ ಹೇಗೆ ?ಎಂದು ಕೇಳಿದ ವಿದ್ಯಾವಂತ ಸಂಪನ್ನರು ಇದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ