ಬೆಂಬಲಿಗರು

ಮಂಗಳವಾರ, ಏಪ್ರಿಲ್ 19, 2022

ಅಧ್ಯಾಪಕನಾಗಿ ಕೆಲವು ಅನುಭವಗಳು

ನಾನು ವೈದ್ಯಕೀಯ ಕಾಲೇಜ್ ಗಳಲ್ಲಿ ಅಧ್ಯಾಪನ ಮಾಡಿದ್ದೇನೆ . 

ನನ್ನ ಥಿಯರೀ ತರಗತಿಗಳಿಂದ ವಿದ್ಯಾರ್ಥಿಗಳು ಬಹಳ ಕಲಿತಿರಲಿಕ್ಕಿಲ್ಲ .ಆದರೆ ಪಾಠ ಮಾಡುತ್ತಲೇ ನಾನು ವಿಷಯದ ಹಲವು ಹೊಸ ಹೊಳವುಗಳನ್ನು ಕಂಡಿದ್ದೇನೆ . ನಮ್ಮ ಗುರುಗಳು ಯು ಲರ್ನ್ ವಯ್ಲ್ ಯು ಟೀಚ್ ಎಂದು ಆಗಾಗ ಹೇಳುವರು . ವೈದ್ಯಕೀಯ ಶಾಸ್ತ್ರ ಕಲಿಸುವಿಕೆಯಲ್ಲಿ ಥಿಯರಿ ತರಗತಿ ಗಳಿಗಿಂತಲೂ  ರೋಗಿಯ ಬೆಡ್ ಸೈಡ್ ಕಲಿಸುವಿಕೆ ಬಹಳ ಮುಖ್ಯ .ವಿದ್ಯಾರ್ಥಿಗಳು ಕೇಳುವ ಕೆಲವು ಸರಳ ಪ್ರಶ್ನೆಗಳು ನಮ್ಮನ್ನೂ ಅಧ್ಯಯನ ಶೀಲರನ್ನಾಗಿ ಮಾಡುತ್ತಿದ್ದವು ,

ಇನ್ನು ನಾವು ಎಷ್ಟು ಚೆನ್ನಾಗಿ ತಯಾರು ಮಾಡಿಕೊಂಡು ಹೋದರೂ ಕೆಲವು ದಿನ ಕ್ಲಾಸ್ ಮುಗಿಯುವಾಗ ನಮ್ಮ ಅಂದಿನ ಪರ್ಫಾರ್ಮೆನ್ಸ್ ನಮಗೇ ತೃಪ್ತಿ ಕೊಡುವುದಿಲ್ಲ .ಇದು ಎಲ್ಲಾ ವೃತ್ತಿಯವರಲ್ಲಿ ಕೂಡಾ ಇರುವುದು ಉದಾ ಸಂಗೀತ ,ನಾಟಕ ಇತ್ಯಾದಿ . 

ಕೆಲವೊಮ್ಮೆ ನಮಗರಿವಿಲ್ಲದೆಯೇ ಕೆಲವು ಆಕರ್ಷಕ ನುಡಿಗಟ್ಟುಗಳು ಅನಾಯಾಸವಾಗಿ ಬರುವವು . ಒಂದು ದಿನ ನಾನು ಕಾಲರಾ ಬಗ್ಗೆ ಪಾಠ ಮಾಡುವುದಿತ್ತು .ಅದು ಕಾಮಾ (,)ಆಕಾರದ  ಬ್ಯಾಕ್ಟೀರಿಯಾ . ನಾನು ಅದನ್ನು ವಿವರಿಸುವಾಗ  ವಿಬ್ರಿಯೋ ಕಾಲರಾ ಈಸ್ ಎ ಕಾಮಾ ಶೇಪ್ಡ್ ಒರ್ಗ್ಯಾನಿಸಂ ವಿಚ್ ಹ್ಯಾಸ್ ಪುಟ್ ಪ್ರಿಮೆಚ್ಯುರ್ ಫುಲ್ ಸ್ಟಾಪ್ ಟು ಮೆನಿ ಇನ್ ಅವರ್ ಕಂಟ್ರಿ ಎಂದು ತನ್ನಿಂದ ತಾನೇ ಬಂತು .ವಿದ್ಯಾರ್ಥಿಗಳು ಅದನ್ನು ಇಷ್ಟ ಪಟ್ಟರು . 

ಅಧ್ಯಾಪಕರು ಕೂಡಾ ವಿದ್ಯಾರ್ಥಿ ಗಳಾಗಿದ್ದವರು . ಹೆಚ್ಚಿನ ಥಿಯರಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಮನಸು ಮರ್ಕಟನಂತೆ  ಎಲ್ಲೆಲ್ಲೂ ಓಡುತ್ತಿರುವುದು .ಹಿಂದೆ ಆಗಾಗ ಗುರುಗಳು ಯು  ಅಂಡರ್ ಸ್ಟ್ಯಾಂಡ್ ಯು ಅಂಡರ್ ಸ್ಟಾಂಡ್ ಎನ್ನುವಾಗ ವಿದ್ಯಾರ್ಥಿಗಳು ತಲೆ ಅಲ್ಲಾಡಿಸುವರು . ಮಕ್ಕಳು ಗಂಭೀರವಾಗಿ ಕೇಳುತ್ತಿರುವಂತೆ ನಟಿಸಿದರೆ ಸಾಕು ,ಆ ಕಡೆ ಈ ಕಡೆ ನೋಡುವುದು ,ಪಿಸು ಗುಟ್ಟುವದು ಇತ್ಯಾದಿಗಳಿಂದ ಪಾಠ ಮಾಡುತ್ತಿರುವವರ ಏಕಾಗ್ರತೆ ತಪ್ಪಿ ಅವರ ಕೆಲಸವೂ ಹಳ್ಳ ಹಿಡಿಯುವುದು . 

ಗಲಾಟೆ ಮಾಡ ಬೇಡಿ ಇಷ್ಟ ಇಲ್ಲದವರು ಹೊರಗೆ ಹೋಗಿ ,ಹಾಜರಿ ಕೊಡುತ್ತೇನೆ ಎಂದು ಕೆಲವು ಉದಾರಿ ಅಧ್ಯಾಪಕರು ಹೇಳುತ್ತಿದ್ದ ದಿನಗಳು ಇದ್ದವು .ಈಗ ಅದಕ್ಕೂ ಭಯ ;ಇಲ್ಲಿ ಹಾಜರಿ ತೋರಿಸಿ ಹೊರಗಡೆ ಹೋಗಿ ಯಾವುದಾದರೂ ಸಮಾಜ ವಿರೋಧಿ ಕೆಲಸಗಳಲ್ಲಿ ಸಿಕ್ಕಿ ಹಾಕಿ ಕೊಂಡರೆ ? 

ಬಾಲಂಗೋಚಿ :ನನ್ನ ಸಹೋದ್ಯೋಗಿ ಡಾ ಪ್ರಕಾಶ್ ಒಳ್ಳೆಯ ಅಧ್ಯಾಪಕರು .ರೌಂಡ್ಸ್ ಮಾಡುವಾಗ ಇಂಟರ್ನ್ ಅಥವಾ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಸರಿ ಉತ್ತರ ಹೇಳದಿದ್ದರೆ ವಿಚ್ ಇಡಿಯಟ್ ಹ್ಯಾಸ್ ಟಾಟ್ ದಿಸ್ ಟಾಪಿಕ್ ಟು ಯು ಇನ್ ಥಿಯರೀ ?ಎಂದು ಕೇಳುವರು (ತಾವೇ ಆ ವಿಷಯ ದ ಕ್ಲಾಸ್ ತೆಗೆದು ಕೊಂಡಿರುವುದು ತಿಳಿದಿದ್ದೂ).ಮಕ್ಕಳಿಗೆ ಉಭಯ ಸಂಕಟ ,ನೀವೇ ಅನ್ನುವಂತಿಲ್ಲ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ