ವೈದ್ಯ ಶಾಸ್ತ್ರ ದಲ್ಲಿ ಗಮನೀಯ ಬೆಳವಣಿಗೆ ಆಗಿದ್ದರೂ ಹಲವು ನಂಬಿಕೆಗಳು ಯಾವುದೇ ವೈಜ್ನಾನಿಕ ಆಧಾರ ಇಲ್ಲದೆ ಪ್ರಚಲಿತ ವಾಗಿ ನಿಂತಿವೆ .ಅವುಗಳಲ್ಲಿ ಕೆಲವನ್ನು ಆರಿಸಿ ವಿಶ್ಲೇಷಿಸುವ ಪ್ರಯತ್ನ .
ಇತ್ತೀಚೆಗೆ ನಮ್ಮ ಊರಿನಲ್ಲಿ ಡೆಂಗ್ಯೂ ಜ್ವರದ ಹಾವಳಿ ಇತ್ತು .ಇದು ಸೊಳ್ಳೆಗಳಿಂದ ಹರಡುವ ವೈರಸ್ ಜನ್ಯ ಕಾಯಿಲೆ .ಈ ಜ್ವರದಲ್ಲಿ ರಕ್ತ ಸ್ಥಂಭಕ ಕಣಗಳಾದ ಪ್ಲಾಟೆಲೆಟ್ ಗಳು ಕಡಿಮೆ ಆಗುತ್ತವೆ .ಆದರೆ ಈ ಕಾಯಿಲೆ ಗಂಭೀರ ವಾಗುವುದು ಈ ಕಾರಣಕ್ಕೆ ಅಲ್ಲ . ಬದಲಾಗಿ ರಕ್ತ ನಾಳ ಗಳಿಂದ ದ್ರವಾಂಶ ಸೋರಿ ಹೋಗಿ ರಕ್ತದ ಒತ್ತಡ ದಿಡೀರೆಂದು ಕುಸಿಯುವುದು ;ಇದನ್ನು ಡೆಂಗ್ಯೂ ಶೋಕ್ ಎನ್ನುವರು .ಆದರೆ ಸಾಮಾಜಿಕ ಮತ್ತು ಸಮೂಹ ಮಾಧ್ಯಮ ಗಳಲ್ಲಿ ಪ್ಲಾಟೆಲೆಟ್ ಕೊರತೆಯಿಂದಲೇ ಸಾವು ಸಂಭವಿಸಿದೆ ಎಂದು ಬಿಂಬಿಸುತ್ತಾರೆ .ಡೆಂಗ್ಯೂ ಕಾಯಿಲೆಯಲ್ಲಿ ಕಡಿಮೆ ಆದ ಪ್ಲಾಟೆಲೆಟ್ ಕಣಗಳು ತಂತಾನಾಗಿಯೇ ಸರಿ ಆಗುವವು .ಅದು ಹತ್ತು ಸಾವಿರ ಕ್ಕಿಂತ ಕಡಿಮೆ ಆದರೆ (ನಾರ್ಮಲ್ 1.5 ಲಕ್ಷ ದಿಂದ 4.5 ಲಕ್ಷ ಡೆಸಿ ಲೀಟರ್ ರಕ್ತ ಕ್ಕೆ )ಅಥವಾ ರಕ್ತ ಸ್ರಾವ ದ ಲಕ್ಷಣ ಗಳು ಇದ್ದರೆ ಮಾತ್ರ ಪ್ಲಾಟೆಲೆಟ್ ಕೊಡ ಬೇಕಾಗಿ ಬರುವುದು .ಇದಕ್ಕಾಗಿ ಪ್ರತ್ಯೇಕ ಹಣ್ಣು (ದುಬಾರಿಯಾದ ಕಿವಿ ಹಣ್ಣು ,ಅಥವಾ ಪಪ್ಪಾಯಿ ಇತ್ಯಾದಿ )ತಿನ್ನುವ ಅವಶ್ಯ ಇಲ್ಲ ಮಾತ್ರವಲ್ಲ ಪ್ರತ್ಯೇಕ ಉಪಯೋಗವೂ ಇಲ್ಲ .ಯಾವುದೇ ಸುಲಭ ವಾಗಿ ಸಿಗುವ ಹಣ್ಣು ಹಂಪಲೇ ಸಾಕು .ದಿನಕ್ಕೆ ಎರಡು ಮೂರು ಭಾರಿ ರಕ್ತ ಪರೀಕ್ಷೆ ಮಾಡುವುದೂ ಬೇಕಾಗಿಲ್ಲ .
ಡೆಂಗ್ಯೂ ಕಾಯಿಲೆಯಲ್ಲಿ ರಕ್ತ ನಾಳದಿಂದ ದ್ರವಾಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಎಂದೆನಷ್ಟೆ .ಇದೇ ತರಹದ ಪರಿಣಾಮ ಡೆಂಗ್ಯೂ ಇಲ್ಲದವರಲ್ಲಿ ಶರೀರ ದಿಂದ ರಕ್ತ ಸ್ರಾವ ಆದರೆ ,ತೀವ್ರ ಅತಿಸಾರ ದಿಂದ ಆಗ ಬಹುದು .ಮತ್ತು ಹೃದಯದ ವೈಫಲ್ಯದಲ್ಲಿ ರಕ್ತ ಸಾಕಷ್ಟು ಪಂಪ್ ಆಗದೆ ಬಿ ಪಿ ಕುಸಿಯ ಬಹುದು .ಇದು ಬಿಟ್ಟು ಲೋ ಬಿ ಪಿ ಎಂಬ ಕಾಯಿಲೆ ಪ್ರತ್ಯೇಕ ಇಲ್ಲ .ನಮ್ಮ ರಕ್ತದ ಒತ್ತಡ 120/80 ಎಂದು ಇದ್ದರೂ ಹಲವರಲ್ಲಿ ಅದು 100/80 ,90/70 ಇತ್ಯಾದಿ ಇರ ಬಹುದು ಮತ್ತ್ತು ಅವರು ಯಾವುದೇ ತೊಂದರೆ ಇಲ್ಲದೆ ಓಡಾಡಿ ಕೊಂಡು ಇರುವರು .ಆದುದರಿಂದ ಅದು ಕಾಯಿಲೆ ಅಲ್ಲ .
ಅಧಿಕ ರಕ್ತದ ಒತ್ತಡ ಸಾಮಾನ್ಯ ಕಾಯಿಲೆ .ಬಹು ಮಂದಿಯಲ್ಲಿ ರೋಗ ಲಕ್ಷಣ ಇರುವುದಿಲ್ಲ .ಆದರೆ ಚಿಕಿತ್ಸೆ ಅವಶ್ಯ .ಇಲ್ಲದಿದ್ದರೆ ಹೃದಯ ,ಮೂತ್ರ ಪಿಂಡ ಮತ್ತು ಮೆದುಳಿಗೆ ಹಾನಿ ಆಗ ಬಹುದು .ಆಸ್ಪತ್ರೆಗೆ ಹೊಸದಾಗಿ ಬಂದವರ ಮೊದಲ ಬಿ ಪಿ ನಾರ್ಮಲ್ ಗಿಂತ ಸ್ವಲ್ಪ ಜಾಸ್ತಿ ಇರುತ್ತದೆ .ಆಗ ನಾವು ಸ್ವಲ್ಪ ಸಮಯ ಬಿಟ್ಟು ಪುನಃ ರಕ್ತದ ಒತ್ತಡ ನೋಡುತ್ತೇವೆ .ಮತ್ತೂ ಸಂದೇಹ ಇದ್ದರೆ ಇನ್ನೊಂದು ದಿನ ಬರ ಹೇಳುತ್ತೇವೆ .ಆಸ್ಪತ್ರೆಯ ಮೊದಲ ಭೇಟಿಯ ರಕ್ತದ ಒತ್ತಡ ಏರಿಕೆಗೆ ಬಿಳಿ ಕೋಟ್ ರಕ್ತದೊತ್ತಡ ಎನ್ನುವರು .ಇದಕ್ಕೆ ಚಿಕಿತ್ಸೆ ಬೇಡ ,ಪುನಃ ಪರಿಶೋದಿಸುವಾಗ ತೊಂದರೆ ಇದ್ದರೆ ಚಿಕಿತ್ಸೆ .ಇದಲ್ಲದೆ ಆಸ್ತಮಾ ಕಾಯಿಲೆ ,ಮೂತ್ರದ ಕಲ್ಲು . ಮೈಗ್ರೈನ್ ತಲೆ ನೋವು ಇತ್ಯಾದಿ ಜಾಸ್ತಿ ತೊಂದರೆ ಕೊಡುತ್ತಿರುವಾಗ ಬಿ ಪಿ ಪರಿಶೋದನೆ ಮಾಡಿದರೆ ಸ್ವಲ್ಪ ಜಾಸ್ತಿಯೇ ಇರುವುದು .ಮೂಲ ಕಾಯಿಲೆ ಶಮನ ಆಗುವಾಗ ಬಿ ಪಿ ತಾನೇ ಇಳಿಯುವುದು . ರಕ್ತ ಹೆಪ್ಪು ಗಟ್ಟಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆದಾಗ ರಕ್ಷಣಾತ್ಮಕ ವಾಗಿ ಬಿ ಪಿ ಏರುವುದು .ಅದನ್ನು ಕೂಡಲೇ ಕಡಿಮೆ ಮಾಡಿದರೆ ಮೆದುಳಿಗೆ ಇನ್ನಷ್ಟು ಹಾನಿ ಆಗುವುದು .
ಬಹಳ ಮಂದಿ ತಿಳಿದಂತೆ ತಲೆ ನೋವಿಗೆ ಅಧಿಕ ರಕ್ತದೊತ್ತಡ ಸಾಮಾನ್ಯ ಕಾರಣ ಅಲ್ಲ .ತಲೆ ತಿರುಗುವುದಕ್ಕೂ ಅಲ್ಲ .ಯಾವುದೇ ಸೋಂಕು ರೋಗ ಅಥವಾ ಮೆದುಳಿನ ಗಡ್ಡೆ ಇತ್ಯಾದಿಗಳನ್ನು ಹೊರತು ಪಡೆಸಿದರೆ ತಲೆನೋವಿಗೆ ಮುಖ್ಯ ಕಾರಣ ಉದ್ವೇಗ ಎರಡನೇ ಸ್ಥಾನದಲ್ಲಿ ಮೈಗ್ರೈನ್ ಇದೆ .ಕಣ್ಣಿನ ದೃಷ್ಟಿ ದೋಷವೂ ತಲೆ ನೋವು ಉಂಟು ಮಾಡುವುದು ಕಮ್ಮಿ .ತಲೆ ತಿರುಗುವುದಕ್ಕೆ ಮುಖ್ಯ ಕಾರಣ ಶರೀರದ ಸಮತೋಲನ ಕಾಪಾಡುವ ಕಿವಿ ಯೊಳಗೆ ಅಂತರ್ಗತ ಅಂಗದ ಕಾರ್ಯ ವ್ಯತ್ಯಯ .ಈ ತರಹ ತಲೆ ತಿರುಗುವಾಗ ಬಿ ಪಿ ನೋಡಿದರೆ ಸ್ವಲ್ಪ ಜಾಸ್ತಿ ಇದ್ದೀತು.ಆದರೆ ಮೊದಲ ಚಿಕಿತ್ಸೆ ಮೂಲ ರೋಗಕ್ಕೆ .
ಸಕ್ಕರೆ ಕಾಯಿಲೆ ಈಗ ಸಾಮಾನ್ಯ ಮತ್ತು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿ ಕೊಳ್ಳುವುದು .ಇದಕ್ಕೆ ಮೊದಲ ಉಪಚಾರ ಪಥ್ಯ. ಗಮನಿಸ ಬೇಕಾದ ಅಂಶ ಎಂದರೆ ನಾವು ಉಪಯೋಗಿಸುವ ಏಕ ದಳ ಧಾನ್ಯಗಳಾದ ಅಕ್ಕಿ ,ಗೋದಿ ,ರಾಗಿ ,ಜೋಳ ಇತ್ಯಾದಿಗಳ ಸಕ್ಕರೆ ಪ್ರಮಾಣದಲ್ಲಿ ಗಮನೀಯ ವ್ಯತ್ಯಾಸ ಇಲ್ಲ .ಕರುಳಿನಿಂದ ರಕ್ತಕ್ಕೆ ಸಕ್ಕರೆ ಸೇರುವ ಸಮಯ ಅಲ್ಪ ಸ್ವಲ್ಪ ಹೆಚ್ಚು ಕಡಿಮೆ ಇದ್ದೀತು .ಹಾಗಲ ಕಾಯಿ ,ಉಪ್ಪಿನ ಕಾಯಿತಿಂದರೆ ರಕ್ತದ ಸಕ್ಕರೆ ಕಡಿಮೆ ಆಗದು .ಸಕ್ಕರೆ ಕಾಯಿಲೆಗೆ ಕೊಡುವ ಮಾತ್ರೆಯ ಪವರ್ ಅದರ ಗಾತ್ರವನ್ನು ಮತ್ತು ಮಿಲ್ಲಿ ಗ್ರಾಂ ,ಗ್ರಾಂ ಗಳ ಮೇಲೆ ನಿರ್ಧಾರ ಆಗದೆ ಔಷಧಿ ಯ ಮೇಲೆ ಇರುವುದು .ಇತರ ಕಾಯಿಲೆಗಳಿಗೂ .ಉದಾಹರಣೆಗೆ ಡಯಬಿಟಿಸ್ ಗೆ ಕೊಡುವ ಮೆಟ್ ಫೋರ್ಮೀನ್ ಎಂಬ ಮಾತ್ರೆ ನೋಡಲು ದೊಡ್ಡದು ಇದ್ದು 500 ಮಿಲಿಗ್ರಾಂ 10000 ಮಿಲಿಗ್ರಾಂ ಪ್ರಮಾಣದಲ್ಲಿ ಬರುತ್ತವೆ .ಆದರೆ ಇದು ಗ್ಲಿಮಿ ಪೇರೈಡ್ ಎಂಬ 1 ಮಿಲಿಗ್ರಾಂ ನ ಸಣ್ಣ ಮಾತ್ರೆಗಿಂತ ಎಸ್ಟೋ ಕಡಿಮೆ ಪವರ್ ನದು .
ಕಾಮಾಲೆ ರೋಗ ಎನ್ನುವರು .ಆದರೆ ಕಾಮಾಲೆ ಜ್ವರ ,ತಲೆನೋವು ,ಕೆಮ್ಮು ಇವುಗಳಂತೆ ಒಂದು ರೋಗ ಲಕ್ಷಣ ಮಾತ್ರ .ಹಳದಿ ರೋಗ ಎಂಬುದು ನಮ್ಮ ಕೆಂಪು ರಕ್ತ ಕಣಗಲ ವ್ಯತ್ಯಯ ಗೊಂಡ ಉತ್ತರ ಕಾಂಡ .ಕೆಂಪು ಕಣಗಳು ಆಯುಸ್ಸು ಮುಗಿದೊಡನೆ ಜೀರ್ಣ ಗೊಂಡು ಬಿಲಿರುಬಿನ್ ಎಂಬ ಹಳದಿ ವಸ್ತು ಲಿವರ್ ,ಪಿತ್ತ ಕೋಶ ,ಪಿತ್ತ ನಾಲಗಳ ಮೂಲಕ ಕರುಳಿಗೆ ಸಾಗಿ ವಿಸರ್ಜನೆ ಗೊಳ್ಳುವುದು .ಮಲದ ಹಳದಿ ಬಣ್ಣಕ್ಕೆ ಕಾರಣ ಇದು.ಕೆಂಪು ರಕ್ತದ ಕಣಗಳು ಕೆಲವು ಕಾಯಿಲೆಗಳಲ್ಲಿ ಆಯುಸ್ಸು ಮುಗಿಯುವ ಮುಂಚೆಯೇ ಅತಿಯಾಗಿ ನಶಿಸುತ್ತವೆ .ಆಗಲೂ ರಕ್ತದಲ್ಲಿ ಬಿಲಿರುಬಿನ್ ಜಾಸ್ತಿ ಆಗಿ ಹಳದಿ ಕಾಣುವುದು .ಇನ್ನು ವಾಡಿಕೆಯಲ್ಲಿ ಕಾಮಾಲೆ ಎಂದು ಕರೆಯುವ ಕಾಯಿಲೆ ಲಿವರ್ ನ ವೈರಸ್ ಸೋಂಕು .ಹೆಪಟೈಟೀಸ್ ಎ ,ಬಿ ,ಸಿ ,ಡಿ ,ಇ ಇತ್ಯಾದಿ ವೈರಸ್ ಯಕೃತ್ (ಲಿವರ್)ಕಾಡುವ ವೈರಸ್ ಗಳು .ಎ ಮತ್ತು ಇ ನೀರು ಆಹಾರದ ಮೂಲಕ ಹರಡಿದರೆ ಬಿ ಮತ್ತು ಸಿ ರಕ್ತದ ಮೂಲಕ . ಮುಂದೆ ಲಿವರ್ ದಾಟಿ ಕರುಳಿನ ದಾರಿಯಲ್ಲಿ ಯಾವುದಾದರೂ ಗಡ್ಡೆ ಅಥವಾ ಪಿತ್ತ ನಾಳದ ಕಲ್ಲು ಬಿಲಿರುಬಿನ್ ಹರಿವಿಗೆ ತಡೆ ಒಡ್ಡಿದರೂ ಕಾಮಾಲೆ ಬರುವುದು .ಇನ್ನು ಮಲೇರಿಯಾ ,ಇಲಿ ಜ್ವರಗಳು ಲಿವರ್ ,ಕೆಂಪು ರಕ್ತ ಕಣಗಳಿಗೆ ಹಾನಿ ಮಾಡಿ ಜಾಂಡಿಸ್ ಬರ ಬಹುದು . ಇವುಗಳಿಗೆ ಎಲ್ಲಾ ಪ್ರತ್ಯೇಕ ಚಿಕಿತ್ಸೆ ಇದೆ .ವಾಡಿಕೆಯಲ್ಲಿ ಇರುವ ಕಠಿಣ ಪಥ್ಯ ವೂ ಬೇಡ .ವೈರಸ್ ನಿಂದ ಬಂದ ಸೋಂಕು ಬಹುತೇಕ ತಾನೇ ಶಮನ ಗೊಂಡರೂ ಮಲೇರಿಯಾ ,ಇಲಿ ಜ್ವರ ,ಪಿತ್ತ ನಾಳದ ಕಲ್ಲು ಇತ್ಯಾದಿ ಸಮಸ್ಯೆಗಳಿಗೆ ಅವುಗಳದೆ ಚಿಕಿತ್ಸೆ ಇವೆ ಕಾಮಾಲೆ ಎಂದು ಹಳ್ಳಿ ಮದ್ದು ಮಾಡಿ ಕುಳಿತರೆ ಅಪಾಯ .
ಹೃದಯದ ಆಘಾತ ಎಲ್ಲರೂ ಕೇಳಿದ್ದೇವೆ .ಹಠಾತ್ ರಕ್ತ ಪೂರೈಕೆ ವ್ಯತ್ಯಯ ಆಗಿ ಅಂಗ ದ ಕಾರ್ಯ ವೈಫಲ್ಯ ವೇ ಆಘಾತ .ಇಂತಹುದೇ ಸಮಸ್ಯೆ ಮೆದುಳಿನಲ್ಲಿ ಬಂದಾಗ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗುವುದು .ಇದು ಮೆದುಳಿನ ರಕ್ತನಾಳಗಳ ರಕ್ತ ಹೆಪ್ಪು ಗಟ್ಟುವಿಕೆ ಯಿಂದ ಅಥವಾ ರಕ್ತ ಸ್ರಾವದಿಂದ ಬರ ಬಹುದು ,ಎಡದ ಮೆದುಳಿನ ಆಘಾತದಿಂದ ಬಲ ದ ಕೈ ಕಾಲು ಬಲ ಹೀನ ವಾಗ ಬಹುದು ,ಮಾತು ಬೀಳ ಬಹುದು .ಇಲ್ಲಿ ಕಾಯಿಲೆ ಇರುವುದು ಮೆದುಳಿನಲ್ಲಿ ,ಆದುದರಿಂದ ಮೂಲ ಚಿಕಿತ್ಸೆ ಅದಕ್ಕೆ .ಉಪಯೋಗಿಸದೆ ಮರಗಟ್ಟುವುದನ್ನು ತಡೆಗಟ್ಟಲು ಕೈ ಕಾಲಿಗೆ ವ್ಯಾಯಾಮ ಮಾಡಿಸುವರು .ಮೆದುಳಿನ ರಕ್ತ ಹೆಪ್ಪು ಕರಗಿಸುವ ಔಷಧಿಗಳು ಲಭ್ಯವಿವೆ .ಆದರೆ ಮೂರು ನಾಲ್ಕು ಗಂಟೆಗಳ ಒಳಗೆ ಕೊಟ್ಟರೆ ಹೆಚ್ಚು ಪರಿಣಾಮ .
ಸರ್ಪ ಸುತ್ತು ಎಂದು ಕರೆಯಲ್ಪಡುವ ಕಾಯಿಲೆ ವೈರಸ್ ನರಕ್ಕೆ ಆದಾಗ ಬರುವ ಕಾಯಿಲೆ .ಇದನ್ನು ನರ ಕೋಟಲೆ ಎನ್ನುವುದು ಉತ್ತಮ .ಆಧುನಿಕ ವೈದ್ಯ ಪದ್ದತಿ ಯಲ್ಲಿ ಇದಕ್ಕೆ ಉತ್ತಮ ಔಷಧಿ ,ಇದೆ .ಆರಂಭದಲ್ಲಿಯೇ ಕೊಟ್ಟರೆ ಹೆಚ್ಚು ಪರಿಣಾಮ ಕಾರಿ .ಇದು ಸರ್ಪದೋಷ ಅಥವಾ ಯಾವುದೇ ಶಾಪದಿಂದ ಬರುವ ಜಡ್ಡು ಅಲ್ಲ .ಸರಿ ಉಪಚಾರ ಮಾಡದಿದ್ದಲ್ಲಿ ಹುಣ್ಣು ಮಾದರೂ ನೋವು ಉಳಿಯುವುದು .
ಇನ್ನು ಸಂಕ್ಷಿಪ್ತ ವಾಗಿ ಕೆಲವು ವಿಚಾರಗಳು .
ಆಸ್ತಮಾ ಕಾಯಿಲೆಗೆ ತಿನ್ನುವ ಮಾತ್ರೆಗಳಿಂತ ಸೇದುವ ಔಷಧಿ ಉತ್ತಮ .ಹೆಚ್ಚು ಪರಿಣಾಮಕಾರಿ ,ಕಡಿಮೆ ಅಡ್ಡ ಪರಿಣಾಮ .ತಿನ್ನುವ ಮಾತ್ರೆಗಳ ಸಾವಿರದ ಒಂದು ಪ್ರಮಾಣದ ಔಷದಿ ಸಾಕಾಗುವುದು .ಬಹಳ ಮಂದಿ ಸೇದುವ ಔಷಧಿ (ಇನ್ಹೇಲರ್)ಹೆಚ್ಕು ಸ್ಟ್ರಾಂಗ್ .ಒಮ್ಮೆ ಆರಂಬಿಸಿದರೆ ಅಭ್ಯಾಸ ಆಗುವುದು ,ಎಂಬಿತ್ಯಾದಿ ಅಪನಂಬಿಕೆ ಹೊಂದಿರುತ್ತಾರೆ .ಇದು ಸರಿಯಲ್ಲ .
ಆಹಾರದಲ್ಲಿ ಹಣ್ಣಿನ ರಸಕ್ಕಿಂತ ಇಡೀ ಹಣ್ಣು ತಿನ್ನುವುದು ಒಳ್ಳೆಯದು .ಹಣ್ಣಿನ ನಾರು ಕರುಳ ಚಲನೆಗೆ ಸಹಾಯಕ .ಹಣ್ಣು ತಿನ್ನುವ ಶಕ್ತಿ ಇಲ್ಲದವರು ಮಾತ್ರ ಜ್ಯೂಸ್ ಮಾಡಿ ಸೇವಿಸಿರಿ .ಕೇವಲ ಅಕ್ಕಿ ಹಾಕಿ ಮಾಡುವ ತಿಂಡಿಗಳಿಂತ ಉದ್ದು ಸೇರಿಸಿ ಮಾಡುವ ಇಡ್ಲಿ ಇತ್ಯಾದಿ ಹೆಚ್ಕು ಸಮತೂಕ .ಏಕೆಂದರೆ ದ್ವಿದಳ ಧಾನ್ಯಗಳಲ್ಲಿ ಸಸಾರ ಜನಕ ಅಧಿಕ .ಬ್ರೆಡ್ ಮತ್ತು ಎಳನೀರು ಗಳಲ್ಲಿ ಸಾಮಾನ್ಯವಾಗಿ ತಿಳಿದುಕೊಂಡಂತಾ ಆರೋಗ್ಯ ಸ್ನೇಹಿ ಅಥವಾ ರೋಗ ಪ್ರತಿ ಬಂಧಕ ಅಂಶಗಳು ಇಲ್ಲ .
ಹೆಚ್ಚಿನ ಕಾಯಿಲೆಗಳಿಗೆ ಪಥ್ಯ ಅವಶ್ಯವಿಲ್ಲ .ಸಕ್ಕರೆ ಕಾಯಿಲೆ ,ಹೃದಯ ರೋಗ ಇತ್ಯಾದಿಗಳಲ್ಲಿ ವೈದ್ಯರ ಸಲಹೆ ಮೇರೆ ಆಹಾರ ಕ್ರಮ ಬದಲಾಯಿಸ ಬೇಕು .ಬಾಳಂತಿಯರು ಸಮ ತೂಕದ ಆಹಾರ ಸೇವಿಸುವುದು ಮುಖ್ಯ .ಅವರ ಆಹಾರದಲ್ಲಿ ದ್ವಿದಳ ಧಾನ್ಯ ,ಬೀಜಗಳು ,ಮಾಂಸ ಮೀನು ಹಣ್ಣು ತರಕಾರಿ ಸೇರಿದ್ದರೆ ಉತ್ತಮ ,ನಮ್ಮಲ್ಲಿ ಅದು ನಂಜು ಇದು ನಂಜು ಎಂದು ಅವರ ಬಾಯಿ ಕಟ್ಟಿ ಬರೀ ಅನ್ನ ,ಹಾಲು ತುಪ್ಪ ಕೊಡುವರು .ಇದು ತಪ್ಪು .
ಬೊಜ್ಜು ಒಂದು ಕಾಯಿಲೆ .ಎಳವೆಯಲ್ಲಿ ಸ್ಥೂಲ ಕಾಯವು ಮುಂದೆ ಹೃದ್ರೋಗ ,ಸಂದಿ ವಾತ ,ಸಕ್ಕರೆ ಕಾಯಿಲೆ, ಮನೋ ಖಿನ್ನತೆ ಮತ್ತು ಕೆಲವೊಮ್ಮೆ ಕಾನ್ಸರ್ ಗೂ ಕಾರಣ ವಾಗ ಬಲ್ಲುದು. ಕಾಳಿದಾಸನು ಕಮಲೇ ಕಮಲೋತ್ಪತ್ತಿ ಎಂದಂತೆ ಸ್ಥೂಲ ಕಾಯೆ ಸ್ಥೂಲ ಕಾಯೋತ್ಪತ್ತಿ ಎನ್ನ ಬಹುದು .ಒಮ್ಮೆ ಬೊಜ್ಜು ಬಂದರೆ ವ್ಯಾಯಾಮ ಕಷ್ಟವೆನಿಸುವುದು .ಇನ್ನಷ್ಟು ಬೊಜ್ಜು ಬರುವುದು .ತಪ್ಪಿದ ಆಹಾರ ಕ್ರಮ ಅಥವಾ ಕ್ರಮ ವಿಲ್ಲದ ಆಹಾರ ,ಇಲ್ಲದ ವ್ಯಾಯಾಮ ಇದಕ್ಕೆ ಮೂಲ ಕಾರಣ .ನಡೆಯುವುದು ಮತ್ತು ಶ್ರಮ ಜೀವನ ಪ್ರತಿಷ್ಟೆಗೆ ಕುಂದು ಎಂಬ ಮನೋಭಾವ ಮತ್ತು ಇದರಿಂದ ವಾಹನ ಅವಲಂಬನೆ ಅಪಾಯಕಾರಿ .
ಮಂಜು ಎಂದರೆ ಹವೆ ತಂಪು ಆದಾಗ ವಾತಾವರಣದ ನೀರಾವಿ ಸಾಂದ್ರ ಗೊಂಡು ಭಾರವಾಗಿ ಕೆಳಗೆ ಇಳಿಯುವುದು .ಅದಷ್ಟೇ ಆದರೆ ಅಡ್ಡಿಯಿಲ್ಲ ,ಆದರೆ ಅದು ತನ್ನೊಡನೆ ಧೂಳು ,ವಾಹನ ಗಳ ಹೊಗೆಯ ರಸಾಯನಿಕಗಳು ಇತ್ಯಾದಿಗಳನ್ನು ಜತೆಗೆ ತರುವುದರಿಂದ ಅಲ್ಲರ್ಜಿ ಮತ್ತು ಶೀತ ಇತ್ಯಾದಿ ಆಗುವುದು .ಅದಕ್ಕೆ ತಲೆಗೆ ಟೊಪ್ಪಿ ಇಟ್ಟರೆ ಪ್ರಯೋಜನ ಇಲ್ಲ ,ಮಾಸ್ಕ್ ಹಾಕ ಬಹುದು .ಅದರಂತೆ ಬಹಳ ಮಂದಿ ತಾವು ಯಾವುದೋ ಸಮಾರಂಭದಲ್ಲಿ ಶರಭತ್ ಕುಡಿದು ಅಥವಾ ಐಸ್ ಕ್ರೀಂ ತಿಂದು ಕೆಮ್ಮು ಬಂತು ಎನ್ನುವರು .ಇಲ್ಲಿ ಶ್ವಾಸ ಸಂಬಂಧಿ ರೋಗಗಳು ಬಹುತೇಕ ಗಾಳಿಯಲ್ಲಿ ಹರಡುವಂತವು.ಶೀತ ಕೆಮ್ಮು ಇರುವವರ ಬಳಿ ಮಾತನಾಡುವುದರಿಂದ ಮತ್ತು ಅವರ ಸೀನು ಕೆಮ್ಮು ವಿನ ವೈರಸ್ ಗಳು ಕಲ್ಯಾಣ ಮಂಟಪದಲ್ಲಿ ಯಥೇಚ್ಛ ಇರುವುವು .
Sharirada sahaja aarogya dha"MOUDHYA"dinda horage baralu tumba olleya mahithi
ಪ್ರತ್ಯುತ್ತರಅಳಿಸಿThanks for the mahithi
Sharirada sahaja arogyadha bagegina "MOUDHYA" dinda
ಪ್ರತ್ಯುತ್ತರಅಳಿಸಿhorabaralu thumba upayuktha mahithi