ಬೆಂಬಲಿಗರು

ಗುರುವಾರ, ಆಗಸ್ಟ್ 13, 2020

ಕೋವಿಡಾಯಣ

 ಮಿತ್ರರು  ಒಬ್ಬರು  ನೀವು ವೈದ್ಯರಾಗಿ  ಕೋವಿಡ್ಬಗ್ಗೆ  ಸ್ವಲ್ಪ ಬರೆಯಿರಿ ಎಂದು ಕೋರಿದ್ದಾರೆ .ಈಗಾಗಲೇ  ಮಾಧ್ಯಮ ಗಳಲ್ಲಿ  ಇದರ ಬಗ್ಗೆ  ಅಜೀರ್ಣ ವಾಗುವಷ್ಟು ಮಾಹಿತಿ ಬಂದಿರುವುದರಿಂದ  ನನ್ನದೂ ಸ್ವಲ್ಪ ಇರಲಿ ಎಂದು  ಗೊತ್ತಿರುವುದನ್ನು ಗೊತ್ತಿಲ್ಲದುದನ್ನೂ ಸೇರಿಸಿ  ಗೊಂದಲ ಉಂಟು ಮಾಡುವುದು ಬೇಡ ಎಂದಿದ್ದೇನೆ .ಆದರೂ ಸರಳವಾದ ಕೆಲವು ವಿಚಾರ ಹಂಚಿ ಕೊಳ್ಳುವೆನು .

       ಕೋವಿಡ್ 19 ವೈರಸ್ ಕಾಯಿಲೆ .ವೈರಸ್ ಗೆ ಜೀವ ಕೋಶ ಇಲ್ಲ .ಜೀವ ತಂತು ಮಾತ್ರ .ಬ್ಯಾಕ್ಟೀರಿಯಾ ಗೆ ಜೀವ ಕೋಶ ಇದೆ .

ಆದುದರಿಂದ  ವೈರಸ್ ಆತಿಥೇಯ ಇಲ್ಲದೆ ಬದುಕದು .ಇದು ಹೊಸ ವೈರಸ್ ಅಲ್ಲ .ಕೋರೋನಾ ಜಾತಿಯ ಹಲವಾರು ವೈರಸ್ ಗಳು ಮೊದಲೂ ಇದ್ದವು . ಮನುಷ್ಯರಲ್ಲಿ ಶೀತ ಜ್ವರ ಇತ್ಯಾದಿ ಉಂಟು ಮಾಡುತ್ತಿದ್ದ  ಸುಮಾರು ಏಳು ವಿಧದ  ಈ ಜಾತಿಯ ವೈರಸ್ ಇದ್ದುವು .ಮನುಷ್ಯರಂತೆ ಇವೂ ದೇವರ  ಸೃಷ್ಟಿ. ಇವು ಮನುಷ್ಯ ಜೀವಿಯನ್ನು ಆಕ್ರಮಣ ಮಾಡಿದಾಗ  ಜೈವಿಕ ಹೋರಾಟ ನಡೆಯುತ್ತದೆ .ದೇಹದಲ್ಲಿ ರಕ್ಷಣಾತ್ಮಕ ವಾಗಿ ಪ್ರತಿ ವಿಷ ಅಥವಾ ಅಂಟಿಬೋಡಿ ಉತ್ಪತ್ತಿ ಆಗುವುದು .ಅಗ್ನಿ ಅಸ್ತ್ರಕ್ಕೆ ವಿರುದ್ದ ವರುಣಾಸ್ತ್ರ ಇದ್ದಂತೆ .ಈ ಆತಿಥೇಯ ಅಥವಾ ಅತಿಥಿ ಯಾರೂ ಗೆಲ್ಲ ಬಹುದು ,ಸೋಲ ಬಹುದು .ಅದು ದೈವೇಚ್ಛೆ .ಪುನಃ ಪುನಃ ಸೋತು ಹೋದರೆ ಈ  ವೈರಸ್ ಗಳು  ಪರಾಭವ ಗೊಂಡ ರಾಕ್ಷಸ ಅಥವಾ ದೇವತೆಗಳಂತೆ  ಈಶ್ವರ ತಪಸ್ಸು ಮಾಡುವವು .ಸುಪ್ರೀತ ನಾದ ಈಶ್ವರನು  ಈಗಾಗಲೇ  ಮನುಷ್ಯರಲ್ಲಿ ಇರುವ  ಆಯುಧಗಳು ಗುರುತು ಹಿಡಿಯದಂತೆ  ಅವುಗಳ ಆಕರ ಸ್ವಲ್ಪ ಬದಲಾವಣೆ ಮಾಡುವನು .ಇದನ್ನು ಅಂಟಿಜೆನಿಕ್ ಡ್ರಿಫ್ಟ್ ಎನ್ನುವರು . ಅಲ್ಲದೇ ಇನ್ನೂ ಕೆಲ ಹೊಸ ಮಾರಕ ಆಯುಧ ಪ್ರಧಾನ ಮಾಡುವನು .ಇದರಿಂದ  ಶಕ್ತನಾದ  ಅಸುರನಂತೆ  ವೈರಸ್ ಸಮಯ ನೋಡಿ ಆಕ್ರಮಿಸುವುದು .

ಇದು  ಹೊಸ ರೂಪದ ವೈರಿ .ಇದನ್ನು  ನಮಗೆ ಮೊದಲೇ ಪರಿಚಯ ,ನಮ್ಮ ಕೈಯ್ಯಲ್ಲಿ ಸಿದ್ದ  ಔಷಧಿ ಇದೆ ಎಂದು ಹೇಳುವುದು ರಾಮಾಯಣ ಕಾಲದಲ್ಲಿಯೇ  ವಿಮಾನ ಇತ್ತು ಎಂದು ಹೇಳಿದಂತೆ ಆಗುವುದು . ಇದರ ಚಿಕಿತ್ಸೆ ಮತ್ತು  ತಡೆ ಗಟ್ಟುವಿಕೆ  ಬಗ್ಗೆ ವೈಜ್ನಾನಿಕ  ಮತ್ತು  ವೈಚಾರಿಕ ಸಮುದ್ರ ಮಥನ ನಡೆಯುತ್ತಿದೆ .ಅಮೃತ  ಔಷಧಿ ರೂಪದಲ್ಲಿ  ಅಥವಾ ಲಸಿಕೆ ರೂಪದಲ್ಲಿ ಬಂದೀತು .

 ಆಧುನಿಕ ವೈದ್ಯ ಶಾಸ್ತ್ರದಲ್ಲಿ  ಒಂದು ಔಷಧಿಯನ್ನು  ಪ್ರಯೋಗಿಸಲು  ಬಹಳ ಹಂತಗಳಿವೆ .ಈ ವಿಚಾರ ಬರೆದು ನಿಮ್ಮ ತಲೆ ತಿನ್ನುವುದಿಲ್ಲ .ಕೆಲವು ಮಂದಿಗೆ ಒಂದು ಔಷಧಿ ಕೊಟ್ಟು ಗುಣಮುಖರಾದರು ಎಂದರೆ ಕಾಕತಾಳಿಯವೂ ಇದ್ದೀತು. ಸಕ್ಕರೆ ಕಾಯಿಲೆ  ಮತ್ತು ಇನ್ನೂ ಕೆಲವು  ಸಾಂಕ್ರಾಮಿಕ ರೋಗಗಳಿಗೆ ತನ್ನ ಔಷಧಿ ರಾಮ ಬಾಣ ಎಂದು ಹಲವರು ಹೇಳಿಕೊಳ್ಳುವರು .ಅದನ್ನು ನಂಬುವುದು ಬಿಡುವುದು  ಅವರವರಿಗೆ ನಮ್ಮ ದೇಶದಲ್ಲಿ ಬಿಟ್ಟಿರುವರು .ಇಂತಹ ವೈರಸ್ ಕಾಯಿಲೆಗಳು   ಯಾವುದೇ ಉಪಚಾರ ಇಲ್ಲದೆ ಉಪಶಮನ ಹೊಂದುವುದು ಹೆಚ್ಚು .

ನಮ್ಮ ದೇಶದಲ್ಲಿ ಮರಣ ಸಂಖ್ಯೆ ಕಮ್ಮಿ ಇರುವುದಕ್ಕೆ  ನಮ್ಮ ಶರೀರ ರಚನೆ ,ಮತ್ತು ಸ್ವಲ್ಪ ಮಟ್ಟಿಗೆ ಆಗಾಗ ಕೆಮ್ಮು ಶೀತ  ವೈರಸ್ ಗಳ ವಿರುದ್ದ ನಮ್ಮ ಶರೀರದಲ್ಲಿ  ಈಗಾಗಲೇ  ಇರುವ ಪ್ರತಿ ವಿಷ ಕಾರಣ ಇರ ಬಹುದು .(ಇದನ್ನು ಕ್ರೋಸ್ ಇಮ್ಮುನಿಟಿ ಎನ್ನುವರು )ಇದಲ್ಲದೆ ಈ ವೈರಸ್ ಆಕ್ರಮಿಸಿದ ಹಲವರಿಗೆ  ರೋಗವೇ ಬಂದಿಲ್ಲ .ಅಂದರೆ ಕಾಳಗದಲ್ಲಿ ಅತಿಥೇಯರೆ  ಜಯಶಾಲಿ .ಮೊದಲೇ ಕೆಲವು ಕಾಯಿಲೆ ಇದ್ದು ಶಿಥಿಲ ವಾದ  ವೈರಿ ಎಂದರೆ  ವೈರಸಿನ ಕಾರ್ಯ ಸಲೀಸು .ರಥ ದ  ಗಾಲಿ ಮುರಿದ ಕರ್ಣನ ಎದುರಿಸಿದ ಅರ್ಜುನನಂತೆ .

ಮುಂಬೈ ನಗರದ ಧಾರವಿ  ಸ್ಲಮ್ ನಲ್ಲಿ  ಅಂತರ ಕಾಯುವುದು ,ಮಾಸ್ಕ್ ಉಪಯೋಗ ಇತ್ಯಾದಿ ಕಷ್ಟ .ಅಲ್ಲಿ  ಬಹಳ ಜನ  ರಲ್ಲಿ 

ವೈರಸ್ ಇದ್ದರೂ ರೋಗ ಬಂದಿಲ್ಲ ವಂತೆ .ವಿಜ್ನಾನಿಗಳು ವೈರಸ್  ಸೋಂಕು ಆಹ್ವಾನಿಸಿ ನೈಸರ್ಗಿಕ  ಪ್ರತಿವಿಷ  ಉತ್ಪಾದಿಸುವ ಇದು ಸರಿಯೇ ತಪ್ಪೇ ಎಂಬುದಾಗಿ  ಚರ್ಚಿಸುತ್ತಿದ್ದಾರೆ .

2 ಕಾಮೆಂಟ್‌ಗಳು: