ಬೆಂಬಲಿಗರು

ಬುಧವಾರ, ಫೆಬ್ರವರಿ 8, 2017

ವಾಲಿ ಸುಗ್ರೀವ ಕಾಳಗ ಮತ್ತು ಕ್ಯಾನ್ಸರ್ ಚಿಕಿತ್ಸೆ

ರಾಮಾಯಣದಲ್ಲಿ ವಾಲಿ ಸುಗ್ರೀವರ ಕತೆ ಬರುತ್ತದೆ .ಸೀತಾನ್ವೇಶಿ ರಾಮ ಲಕ್ಸ್ಮಣ 

ರಿಗೆ  ಕಿಷ್ಕಿಂಧೆಯಲ್ಲಿ ಸುಗ್ರೀವ ನ ಪರಿಚಯ ಆಗುತ್ತದೆ .ಅಣ್ಣ ವಾಲಿ 

ಬಲಾತ್ಕಾರವಾಗಿ ತನ್ನನ್ನು ರಾಜ್ಯಬಾಹಿರ ಮಾಡಿದ ವಿಚಾರ ರಾಮನಿಗೆ ತಿಳಿಸಿ 

ತನ್ನ  ಸಹಾಯಕ್ಕೆ ಬರುವಂತೆ ಇದಕ್ಕೆ ಪ್ರತಿಯಾಗಿ ಸೀತೆಯನ್ನು ಹುಡುಕುವ 

ಕಾರ್ಯದಲ್ಲಿ  ತಾನೂ ತನ್ನ ಸಹಚರ ಕಪಿಗಳು  ಸಹಕರಿಸುವುದಾಗಿ ಒಪ್ಪಂದ 

 ಸುಗ್ರೀವ  ಮಾಡಿಕೊಂಡನು.ಅದರ ಪ್ರಕಾರ  ಸುಗ್ರೀವ ಕಾಲು ಕೆರೆದು ಅಣ್ಣನನ್ನು 

ಯುದ್ದಕ್ಕೆ ಕರೆಯುತ್ತಾನೆ .ರಾಮ ಮರೆಯಲ್ಲಿ ನಿಂತು  ವಾಲಿ ಮೇಲೆ  ಬಾಣ 

ಪ್ರಯೋಗ ಮಾಡಬೇಕೆನ್ನುವಾಗ  ಅಣ್ಣ ತಮ್ಮಂದಿರು ಒಂದೇ ತರಹ ಇದ್ದಾರೆ .

ಇದರಲ್ಲಿ ಯಾರು ವಾಲಿ ಯಾರು ಸುಗ್ರೀವ ಎಂದು ಸಂಶಯದಿಂದ ಎಂದು 

ಸುಮ್ಮನಿದ್ದು ಸುಗ್ರೀವ ಪೆಟ್ಟು ತಿಂದು ಕೋಪದಿಂದ ಹಿಂದೆ ಬರುತ್ತಾನೆ .ಅದಕ್ಕೆ 

ಉಪಾಯವಾಗಿ  ಇನ್ನೊಂದು ಸಾರಿ ಯುದ್ದಕ್ಕೆ ಹೋಗುವಾಗ  ಸುಗ್ರೀವನ ಕೊರಳಿಗೆ 

ತುಳಸಿ ಮಾಲೆ ಹಾಕಿ ಕಳುಹಿಸುವನು .ಈ ಬಾರಿ  ಮಾಲಾರಹಿತ ವಾಲಿ 

ರಾಮಬಾಣಕ್ಕೆ ಗುರಿಯಾಗುವನು .

               ಕ್ಯಾನ್ಸರ್ ರೋಗಕ್ಕೆ  ಉಪಯೋಗಿಸುವ ಔಷಧಿಗಳಿಗೂ ಇದೇ ಸಮಸ್ಯೆ .

ಯಾವುದು ಅರ್ಭುಧ ರೋಗ ಪೀಡಿತ ಜೀವಕೋಶ ,ಯಾವುದು ಆರೋಗ್ಯವಂತ 

ಕೋಶ ಎಂಬ ಜಿಜ್ಞಾಸೆ ಕನ್ಫ್ಯೂಷನ್ .ಅದಕ್ಕೆ ಈಗ ವೈಜ್ಞಾನಿಕವಾಗಿ ಈ 

ಜೀವಕೋಶಗಳಿಗೆ ಗುರುತಿನ  ಮಾರ್ಕರ್ ಗಳನ್ನು ಕೊಟ್ಟು ಅದಕ್ಕೆ ಅನುಗುಣ

ವಾದ ಔಷಧಿ ಗಳನ್ನು ಸಿದ್ದ್ದ ಪಡಿಸಿದ್ದಾರೆ .ಇವನ್ನು ಮಾನೋಕ್ಲೋನಲ್ ಆಂಟಿ

ಬಾಡಿಸ್ (ಪ್ರತಿವಿಷ)ಎನ್ನುವರು .ಹಲವು ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ 

ಇವು ಕ್ರಾಂತಿಯನ್ನೇ ಉಂಟು ಮಾಡಿವೆ 

ಮಂಗಳವಾರ, ಫೆಬ್ರವರಿ 7, 2017

ನೀರೊಳಗಿರ್ದೂ ಬೆಮರ್ತನ್

ರನ್ನನ ಗದಾ ಯುದ್ದ ಕಾವ್ಯದ ಸಾಲು  ,ಭೀಮನ ಮಾತುಗಳನ್ನು ಕೇಳಿ ದ್ವೈಪಾಯನದ ಸರೋವರದಲ್ಲಿ

ಧುರ್ಯೋಧನ ನೀರೊಳಗಿದ್ದೂ ಬೆವರಿದನು .ಹೆದರಿ ಬೆವ ರಿದನೋ ,ಕೋಪದಿ ಬೆವರಿದನೋ ?ಒಟ್ಟಿನಲ್ಲಿ ಕೌರವನ

ಸಿಂಪೆತೆಟಿಕ್ ನರಮಂಡಲ  ಕ್ರಿಯಾಶೀಲವಾಗುವ ಪರಿಸ್ಥಿತಿ ಉಂಟಾಗಿತ್ತು .


               ನಮ್ಮ ಶರೀರದ  ನರ ವ್ಯವಸ್ಥೆಯಲ್ಲಿ ನಮ್ಮ ನಿಯಂತ್ರಣದಲ್ಲಿ ಇರುವ ನರಗಳು  ಮತ್ತು ಸ್ವಾಯತ್ತ ನರಗಳು ಎಂಬ

ಮುಖ್ಯ ಪ್ರಭೇಧಗಳು .ಅಧೀನ ನರಗಳ ಮೇಲೆ ನಮಗೆ ಹತೋಟಿ ಇದೆ .ಉದಾ ಕೈ ಎತ್ತ ಬೇಕೆಂದು ನಮಗೆ ತೋರಿದಾಗ

ನಾವು ಎತ್ತಬಹುದು .ಆದರೆ  ಸ್ವಾಯತ್ತ ನರಮಂಡಲ ನಮ್ಮ ಅಧೀನ ದಲ್ಲಿ ಇಲ್ಲ .ಸ್ವಾಯತ್ತ ವ್ಯವಸ್ತೆಯಲ್ಲಿ  ಎರಡು ಗುಂಪುಗಳು


ಒಂದು   ಸಿಂಪತೆಟಿಕ್ ಮತ್ತು ಇನ್ನೊಂದು ಪಾರಾಸಿಂಪತೆಟಿಕ್. ಸಿಂಪತೆಟಿಕ್ ವ್ಯವಸ್ತೆಯು  ಜೀವಕ್ಕೆ ಅಪಾಯ ಬಂದಾಗ

ಎದುರಿಸಲು ಅಥವಾ ಓಡಿ ರಕ್ಷಣೆ ಪಡೆಯಲು  ತಯಾರಿ ಮಾಡುವ ವ್ಯವಸ್ತೆ .ಇನ್ನು  ಪಾರಾಸಿಂಪತೆಟಿಕ್ ವಿಶ್ರಾಂತಿ ,ಆಹಾರ

ಸೇವನೆ ,ಪಚನ ಮತ್ತು  ವಂಶ ವೃದ್ದಿ ಕಾರ್ಯದಲ್ಲಿ  ಮುಖ್ಯ ಪಾತ್ರ ನಿರ್ವಹಿಸುವುದು .ಇವೆರಡು ಬೇರೆ ಬೇರೆ ಆದರೂ

ಒಂದಕ್ಕೊಂದು  ಪೂರಕ.

                              ಇನ್ನು ಬೆವರಿಗೆ ಬರೋಣ .ನಮ್ಮ ಶರೀರದಲ್ಲಿ  ಸ್ಥಿರ ಉಷ್ಣತೆ ಕಾಪಾಡಿ ಕೂಂಡು ಬರುವ ವ್ಯವಸ್ತೆ

ಇದೆ .ಬಿಲ್ಟ್ ಇನ್ ಸ್ಟೆಬಿಲೈಸರ್ ತರಹ .ಶರೀರದ ತಾಪ ಹೆಚ್ಚಾದ ಹಾಗೆ ಮೆದುಳಿನ ಹೈಪೋ ತಲಾಮಸ್ ಎಂಬ ಭಾಗ

ಅದನ್ನು ಗ್ರಹಿಸಿ  ಬೆವರ ಗ್ರಂಥಿ ಗಳನ್ನು ಸಿಂಪತೆಟಿಕ್ ನರಗಳ ಮೂಲಕ ಪ್ರಚೋದಿಸಿ  ಹೆಚ್ಚು ಹೆಚ್ಚು  ಬೆವರು

ಉತ್ಪಾದಿಸುವಂತೆ ಮಾಡುತ್ತದೆ .ಬೆವರ ಹನಿ ಆವಿಯಾಗುವ ಪ್ರಕ್ರಿಯೆಯಲ್ಲಿ  ಚರ್ಮದ  ಉಷ್ಣಾಂಶ ಕುಸಿದು ಶರೀರದ

ಶಾಖದ ನಿಯಂತ್ರಣ ಆಗುವುದು .ಭಯದ ,ಉದ್ವೇಗದ ,ಅಪಾಯದ ಸಂಧರ್ಭದಲ್ಲಿ  ಕೂಡ  ಸಿಂಪತೆಟಿಕ್ ನರಗಳು

 ಪ್ರಚೋದನೆ ಗೊಂಡು ಬೆವರುವುದು .ಹೃದಾಯಾಘಾತ,ಸಕ್ಕರೆ ಕಾಯಿಲೆಯವರಲ್ಲಿ  ಸಕ್ಕರೆ ಅಂಶ ತೀವ್ರ ಕುಸಿದರೆ ಕೂಡ

ಬೆವರುವುದು .ಕೆಲವರಿಗೆ  ಮುಖ್ಯವಾಗಿ  ಸಕ್ಕರೆ ಕಾಯಿಲೆ ರೋಗಿಗಳಿಗೆ  ಬೆವರುವಿಕೆ ಮಾತ್ರ ಹೃದಾಯಾಘಾತದ ಲಕ್ಷಣ

ವಾಗಿರುವುದು .

ಸೋಮವಾರ, ಫೆಬ್ರವರಿ 6, 2017

ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್

ನೃಪತುಂಗನು ಕನ್ನಡಿಗರ ಹಿರಿಮೆಯ ಕುರಿತು ಬರೆದ ಪ್ರಸಿದ್ದ  ವಾಕ್ಯ .ಯಾವುದೇ ವಿಷಯದಲ್ಲಿ ಹೆಚ್ಚು ಓದಿಕೊಳ್ಳುವ  ಅವಶ್ಯ

ಇಲ್ಲದೆ  ಕಾವ್ಯ ರಚನೆ  ಮಾಡಲು  ಬೇಕಾದ  ಜ್ಞಾನ ಭಂಡಾರ ಇವರಲ್ಲಿ ಇತ್ತು ಎಂಬುದು ಭಾವಾರ್ಥ .ಕುಮಾರ ವ್ಯಾಸ

ನಂತೂ ಹಲಗೆ ಬಳಪವ ಹಿಡಿಯದೆ ಉಪಯೋಗಿಸಿದ ಪದವನ್ನು ಪುನಃ ಬಳಸದೆ  ಕಾವ್ಯ ರಚನೆ ಮಾಡಿದೆನೆಂದು ಹೆಮ್ಮೆ

ಪಡುತ್ತಾನೆ .

ಆದರೆ  ಈಗೀಗ  ಕನ್ನಡಿಗರು  ನೃಪತುಂಗನ  ಮಾತಿನ ಶಬ್ದಾರ್ಥ ಕ್ಕೆ  ಅನುಗುಣವಾಗಿ ನಡೆದು ಕೊಳ್ಳುತ್ತಿರುವ ಸಂದೇಹ

ಬರುತ್ತಿದೆ .ಯಾವುದೇ ವಿಷಯ ಇರಲಿ  ದೃಶ್ಯ ಮತ್ತು ಮುದ್ರಣ ಮಾಧ್ಯಮ ,ಸಭೆ ಸಮಾರಂಭ ಇರಲಿ  ಕುರಿತೋದದೆಯೇ

ಮಾತನಾಡುವ ಇಲ್ಲವೇ ಬರೆಯುವವರ  ಸಂಖ್ಯೆ  ಹೆಚ್ಚುತ್ತಿದೆ .ಓದದೆಯೇ ಡಿಗ್ರಿ  (ಎಂ ಬಿ ಬಿ ಎಸ ಸೇರಿ ),ಡಾಕ್ಟರೇಟ್


ಪಡೆವರ್.ಸಕಲ ಬಲ್ಲವರೂ ಎಲ್ಲಾ ಸಭೆಗಲ್ಲಿ  ಇರಲೇ ಬೇಕಾದ  ಸರ್ವಾಂತರ್ಯಾಮಿ ಜನ ಪ್ರತಿನಿಧಿಗಳು

ಯಾವುದೇ ವಿಷಯದ ಬಗ್ಗೆ  ಪೂರ್ವ ತಯಾರಿ ಇಲ್ಲದೆ  ಮಾತನಾಡ ಬಲ್ಲರು .

                                               ಇದಕ್ಕೆ  ಕೆಲವು ಅಪವಾದ ಇವೆ .ಕೆಲವು ವರ್ಷಗಳ ಹಿಂದೆ ಮಂಜೇಶ್ವರ ಗೋವಿಂದ ಪೈ

ಗಳ  ಸ್ಮಾರಕ  ಗಿಳಿವಿಂಡು  ವಿಗೆ  ಅಡಿಗಲ್ಲು  ಹಾಕುವ  ಕಾರ್ಯಕ್ರಮಕ್ಕೆ  ಹೋಗಿದ್ದೆ .(ಇತ್ತೀಚಿಗೆ ಅದರ ಉದ್ಘಾಟನೆಯೂ

ನಡೆಯಿತು).ಈ  ಸಮಾರಂಭದಲ್ಲಿ  ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು  ಕೇರಳ ರಾಜ್ಯದ  ಆಗಿನ ಶಿಕ್ಷಣ ಸಚಿವ

ಎಂ ಎ  ಬೇಬಿ  ಹಾಜರಿದ್ದರು  .ಇಬ್ಬರೂ  ಗೋವಿಂದ ಪೈಗಳ  ಸಾಹಿತ್ಯದ  ಅಧ್ಯಯನ  ಮಾಡಿ  ಬಂದಿದ್ದರು .ಎಂ ಎ ಬೇಬಿ

 ಪೈ ಸಾಹಿತ್ಯದ ಬಗ್ಗೆ  ಮಲಯಾಳಂ ಬಾಷೆಯಲ್ಲಿ ನೀಡಿದ  ಪಾಂಡಿತ್ಯ ಪೂರ್ಣ ಭಾಷಣ  ಕನ್ನಡಿಗನಾದ ನನಗೇ ಹೊಸ

ಬೆಳಕನ್ನು ನೀಡಿತು .೧೯೭೯ರ  ಧರ್ಮಸ್ಥಳ  ಸಾಹಿತ್ಯ ಸಮ್ಮೇಳನದಲ್ಲಿ  ಆಗಿನ ಮುಖ್ಯಮಂತ್ರಿ ದೇವರಾಜ ಅರಸರು ಮಾಡಿದ

ಬಾಷಣ  (ಬಹು ಪಾಲು ಅಶು ಭಾಷಣ ) ಪಾಂಡಿತ್ಯ ಪೂರ್ಣ ವಾಗಿತ್ತು .ಈಗಿನ ಜನ ಪ್ರತಿನಿಧಿಗಳಲ್ಲಿ  ವೈ ಎಸ ವಿ ದತ್ತ .

ಎಚ್  ವಿಶ್ವನಾಥ  ಮತ್ತು ಬಿ ಎಲ್ ಶಂಕರ್ ಯಾವುದೇ  ವಿಷಯ  ವನ್ನು  (,ಸಾಹಿತ್ಯವೂ ಸೇರಿ ) ಅಧ್ಯಯನ ಮಾಡಿ

ಮಾತನಾಡುವರು .

ಕುರಿತೋದಯೇ  ಮಾತನಾಡುವುದು ಜನಪ್ರತಿನಿಧಿ ಗಳು  ಮಾತ್ರ ಎಂದು ತಿಳಿಯುವುದು ಬೇಡ.ಪ್ರಾಧ್ಯಾಪಕರು

ವೈದ್ಯರು  ,ವಕೀಲರು ಮತ್ತು  ಮನೆಯಲ್ಲಿ  ಹಿರಿಯರು  ಇದಕ್ಕೆ  ಹೊರತಲ್ಲ .ಮಕ್ಕಳು ಕೇಳಿದ ಪ್ರಶ್ನೆಗಳಿಗೆ  ಉತ್ತರ

ತಿಳಿಯದಿದ್ದಲ್ಲಿ ಓದಿ ತಿಳಿಸುವೆ ಅಥವ  ತಿಳಿದವರನ್ನು   ಕೇಳಿ ತಿಳಿಸುವೆ ಎನ್ನುವ  ವ್ಯವಧಾನ ನಮ್ಮಲ್ಲಿ ಕಮ್ಮಿ  .ತೋಚಿದ

ಉತ್ತರ ನೀಡುವುದೇ ಹೆಚ್ಚು




s

ಭಾನುವಾರ, ಫೆಬ್ರವರಿ 5, 2017

ಹೈ ಕೋರ್ಟ್ ಬೆಂಚ್ ಮತ್ತು ಅಗ್ಗ ಆಂಟಿಬಯೋಟಿಕ್ ಲಭ್ಯತೆ

ಉತ್ತರ ಕರ್ನಾಟಕದಲ್ಲಿ  ಹೈ ಕೋರ್ಟ್ನ ಒಂದು  ಬೆಂಚ್ ಸ್ಥಾಪನೆ ಆಗಬೇಕೆಂದು ಉಗ್ರ ಹೋರಾಟ ನಡೆಯಿತು .ಉತ್ತರ  

ಕರ್ನಾಟಕದಲ್ಲಿ  ಎಷ್ಟೊಂದು ಸಮಸ್ಯೆಗಳಿದ್ದವು .ನೀರಾವರಿ ,ವಿದ್ಯಾ ಸಂಸ್ಥೆಗಳು ಮತ್ತು  ಆಸ್ಪತ್ರೆ ಇವುಗಳಿಗಾಗಿ  ಹೋರಾಟ

ಮೊದಲ  ಆದ್ಯತೆ .ಹೈ ಕೋರ್ಟ್ ಬೆಂಚ್ ಯಾಕೆ ? ಇಲ್ಲಿ ಖಟ್ಲೆಗಳು  ಜಾಸ್ತಿ  ಎಂದೇ ? ಕರಾವಳಿ ಮತ್ತು ಹೈದರಾಬಾದ್

ಕರ್ನಾಟಕದ ಮಂದಿ ಇಲ್ಲಿನ  ಜನರಷ್ಟು  ಕಾನೂನು  ಗಳ  ಸರಿ ವ್ಯಾಖ್ಯಾನ  ಬಯಸುತ್ತಿಲ್ಲವೇ ? ಏನೇ ಇರಲಿ  ನನ್ನ

ಚಿಂತೆ  ಅದಲ್ಲ .ಹೈ ಕೋರ್ಟ್ ಬೆಂಚ್ ನೆರೆಯಲ್ಲಿ  ಬಂದೊಡನೆ  ಮಾತುಕತೆಯಲ್ಲಿ  ಬಗೆಹರಿಸ ಬಹುದಾದ ಅಥವಾ ಹಾಗೆಯೇ

ಅವಗಣಿಸಿ ಬಿಡ ಬಹುದಾದ  ವಿಚಾರಗಳೂ  ಹೈ ಕೋರ್ಟ್ ಗೆ  ಅಪೀಲ್  ಹೋಗುವ ಸಾಧ್ಯತೆಗಳು ಹೆಚ್ಚು .ಇದರಿಂದ ಯಾರಿಗೆ

ಲಾಭ ? ಸಾಹಿತಿ ಚಂಪಾ ಹೇಳುತ್ತಿರುತ್ತಾರೆ ,ನನ್ನ ಧಾರವಾಡ ಮನೆಯ ಬಳಿ ಪೋಲಿಸ್ ಸ್ಟೇಷನ್ .ಇದರಿಂದ ನಮಗೆ ಕಳ್ಳರ

ಭಯವಿರಲಿಲ್ಲ  ಆದರೆ  ಪೋಲಿಸರದೇ ಭಯ  ಎಂದು .ನ್ಯಾಯಾಲಯ ಸಮೀಪ  ಆದಷ್ಟು   ಕಟ್ಲೆಗಳು  ಉದ್ದ  ಎಳೆಯಲ್ಪಡುವ

ಭಯ .


                       ಮೆಡಿಕಲ್ ರೆಪ್ರೆಸೆಂಟೇಟಿವ್ ಬಂದು  ಡಾಕ್ಟ್ರೆ  ನಿಮಗೊಂದು ಸಂತಸದ ಸುದ್ದಿ .ಇದುವರೆಗೆ  ಗಗನ ಕುಸುಮ

ಆಗಿದ್ದ  ನಮ್ಮ  ಈ ಆಂಟಿಬಯೋಟಿಕ್ ಬೆಲೆ  ಈಗ  ಬಹಳ  ಕಮ್ಮಿಯಾಗಿದೆ .ನೀವು  ಇನ್ನು  ಭಯವಿಲ್ಲದೆ  ಬರೆಯಬಹುದು .

ಎಂದು  ಹೇಳಿದಾಗ  ನನಗೆ ಸಂತಸ ಆಗುವುದಿಲ್ಲ . ಯಾಕೆಂದರೆ  ಈಗಾಗಲೇ ಅನಾವಶ್ಯಕ ವಾಗಿ  ಸಾಮಾನ್ಯ ಶೀತ ಜ್ವರ

ಇತ್ಯಾದಿ  ಕಾಯಿಲೆಗಳಿಗೆ  ಇವುಗಳನ್ನು  ಸೇವಿಸಿ  ಬೇಕಾದ ಸಮಯದಲ್ಲಿ  ಪರಿಣಾಮ ಬೀರದಂತೆ ಆಗಿವೆ.ಅಗ್ಗದ

ಆಂಟಿಬಯೋಟಿಕ್ಗಳು ಔಷಧಿ ಅಂಗಡಿಗಳಲ್ಲಿ  ಡಾಕ್ಟರ್ ಅವರ  ಚೀಟಿ ಇಲ್ಲದೆಯೂ ಸಿಗುತ್ತಿವೆ. ಮಗುವಿಗೆ  ಒಂದು ದಿನದ

ವೈರಲ್  ಜ್ವರ ಇದ್ದರೂ ಅಮೊಕ್ಷ್ಯ್ಕಿಲ್ಲಿನ್ , ಸೆಫಿಕ್ಷಿಮ್  ಅಂತಹ ಆಂಟಿಬಯೋಟಿಕ್ ಹೆತ್ತವರು  ಕೊಡುತ್ತಾರೆ .ಇದರಿಂದ

ಮಗುವಿನ   ಧಾರಣಾ ಶಕ್ತಿ  ಇನ್ನೂ ಕುಗ್ಗುವುದು .ಅಲ್ಲದೆ  ಔಷಧಿ ಕ್ರಮೇಣ ತನ್ನ  ಹರಿತ  ಕಳೆದು ಕೊಳ್ಳುವುದು .ಕೆಲವು

ಔಷಧಿಗಳು  ಇನ್ನೂ ಸ್ವಲ್ಪ ತುಟ್ಟಿಯಾಗಿ ಇರುವುದರಿಂದ  ಅವುಗಳನ್ನು  ಉಪಯೋಗಿಸಲು  ಯೋಚಿಸುವರು .ಅವುಗಳೂ

ಅಗ್ಗವಾದರೆ    ದುರುಪಯೋಗ  ಆಗುವ ಸಾಧ್ಯತೆ  ಜಾಸ್ತಿ .ಎಂದು  ಔಷಧಿ  ಅಗ್ಗವಾಗಿದೆ ಎಂದು  ರೆಪ್ರೆಸೆಂಟೇಟಿವ್ ಹೇಳಿದಾಗ

ಅವನು  ನಿರೀಕ್ಷಿಸಿದ   ಸಂತೋಷದ  ಪ್ರತಿಕ್ರಿಯೆ ನನ್ನಿಂದ  ಬರುವುದಿಲ್ಲ 

ಶನಿವಾರ, ಫೆಬ್ರವರಿ 4, 2017

ಸಂಗೀತ ಮತ್ತು ದೇವರು

ಹಿರಣ್ಯಕಶಿಪು ಪ್ರಹ್ಲಾದನನ್ನು  ತೋರಿಸು ನಿನ್ನ  ದೇವರನು , ಅಲ್ಲಿರುವನೋ ಇಲ್ಲಿರುವನೋ ,ಕಂಬದಲ್ಲಿ ಇರುವನೋ  ಎಂದು

ಕೇಳಿದಾಗ  ಬಾಲಕನ ಮನದಲ್ಲಿ  ಯಾವ  ಉತ್ತರಗಳು ಹೊಳೆದವೋ ತಿಳಿದಿಲ್ಲ .ಆದರೆ ನಮ್ಮ ಜೀವನದಲ್ಲಿ  ಹಲವು ಬಾರಿ

ನಮ್ಮ  ಮನಸಿನಲ್ಲಿ   ಹಿರಣ್ಯಕಶಿಪು ಹಾದು  ಹೋಗುವುದುಂಟು .


     ಮುಂಜಾವು  ,ಹಕ್ಕಿಗಳ ಇಂಚರ ,ಮಂದ ಮಾರುತ ಕೆಲವೊಮ್ಮೆ ನಮಗೆ ದೈವೀ ಶಕ್ತಿಯ ಸಾಕಾರ  ಎಂದೆನಿಸುವುದು .

ಗಾಳಿಯಲ್ಲಿ  ತೇಲಿ ಬರುತ್ತಿರುವ  ಸುಮಧುರ  ಶ್ರುತಿ ಬದ್ಧ  ಸಂಗೀತ  ಹಲವು  ಬಾರಿ  ಭಗವಂತನ  ಸ್ವರೂಪ . .


ತ್ಯಾಗರಾಜರು   ನಾದಾ ತನುಮನಿಸಂ ಶಂಕರಂ ಎಂದಿದ್ದಾರೆ .ಎಂದರೆ ಶಿವನ ತನು ಮನ ಎಲ್ಲಾ ಸಂಗೀತವೆ .ಭಕ್ತಿಯಿಂದ

ಸಂಗೀತವನ್ನು  ಹಾಡಬೇಕು.ಎಂದರೆ ಸಂಗೀತದ ಮೇಲೆ ಭಕ್ತಿ .ಸಂಗೀತ ಜ್ಞಾನಮು  ಭಕ್ತಿ ವಿನಾ ಎಂದಿದ್ದಾರೆ ತ್ಯಾಗರಾಜರು .


ಇಲ್ಲಿ ಭಕ್ತಿಯಿಲ್ಲದೆ  ಡಂಬಾಚಾರ ದ ಸಂಗೀತದಲ್ಲಿ  ದೈವ ಶಕ್ತಿ ಇಲ್ಲಾ ಎಂದು ಅರ್ಥ .ತಾಳ ಮೇಳಗಳಿದ್ದು  ಪ್ರೇಮವಿಲ್ಲದ ಗಾನ

ಕೇಳನೋ ಹರಿ ತಾಳನೋ ಎಂದು ಪುರಂದರದಾಸರು ಹೇಳಿದ್ದಾರೆ.

ತನ್ಮಯತೆ ಮತ್ತು ಭಕ್ತಿ ಕೂಡಿದ ಗಾನ ದೇವರು .


ಅಂತೆಯೇ   ತನ್ಮಯತೆಯಿಂದ  ಮೈಮುರಿದು  ಮಾಡುವ  ಕೆಲಸದಲ್ಲಿಯೂ  ದೇವರು  ಇರುವನು .ಬಸವಣ್ಣ ಕಾಯಕವೇ

ಕೈಲಾಸ  ಎಂದದ್ದೂ  ಇದನ್ನೇ .ದುಡಿಮೆಯಿಲ್ಲದೆ  ಉಂಡು  ಕಂಡ ದೇವರನು  ಗುಡಿಯಲ್ಲಿ  ಹುಡುಕಿದರೆ  ಎಲ್ಲಿ ಸಿಗುವನು ?

ನನ್ನ ಅಪ್ಪ ಮತ್ತು ಅಡಿಕೆ ಧಾರಣೆ

              ನನ್ನ ಅಪ್ಪ ಮತ್ತು ಅಡಿಕೆ ಧಾರಣೆ 

ಸಂಜೆ  ಮನೆ ಕೆಲಸ ಎಲ್ಲಾ ಮುಗಿದ ಬಳಿಕ ಅಪ್ಪ ಅಂದಿನ ಪೇಪರ್ ನೋಡುವರು .ಚಿಮಿಣಿ ದೀಪದ ಬೆಳಕು ,ಮೂಗಿನ

ಮೇಲೆ ಜೀರ್ಣಾವಸ್ಥೆಗೆ ಬಂದ ಕನ್ನಡಕ .ಅವರ ಕುತೂಹಲ ಇಂದಿರಾಗಾಂಧಿ ಅಥವಾ ಗಾವಸ್ಕರ್ ಅಲ್ಲ .ಸೀದಾ ಪುಟ

ತಿರುವಿ  ಅಡಿಕೆ ಧಾರಣೆ ನೋಡುವರು .ಸಂತೋಷ ಅಥವಾ ಉದ್ವೇಗ ಪ್ರಕಟಣೆ ಇಲ್ಲ .

ದಿನವೂ ಅಡಿಕೆ ಧಾರಣೆ ಏಕೆ ನೋಡುತ್ತಿದ್ದರು ? ಮನೆಯಲ್ಲಿ ಅಡಿಕೆ ದಾಸ್ತಾನು ಇಲ್ಲದಿದ್ದರೂ ನೋಡುವರು ,ಇದ್ದರೂ

ನೋಡುವರು .ಪೇಟೆಯ ಮಂದಿ ಶೇರ್ ಪೇಟೆ ಸಮಾಚಾರ ,ಅರಳೆ ಪೇಟೆ ವಾರ್ತೆ ನೋಡುವಂತೆ .ಅವರ ಜೀವನದ

ಲೆಕ್ಕಗಳ ,ಕನಸುಗಳ ,ಯೋಜನೆಗಳ ಒಂದು ಅಂಗ ಈ ದಿನಚರಿ .


  ಅಡಿಕೆ ಧಾರಣೆ ಮೇಲ್ಮುಖ ಇದ್ದರೆ ಮುಂದಿನ ವರ್ಷ ಅಕ್ಕನ ಮದುವೆ ಕೊರತೆಯಿಲ್ಲದೆ ಮಾಡಬಹುದು .ಪಾರೆ ತೋಟಕ್ಕೆ

ಸ್ವಲ್ಪ ಮಣ್ಣು ಹಿಡಿಸ ಬೇಕು ,ಮೇಲಿನ ತೋಟದ ಬೇಲಿ ಎಲ್ಲಾ ಶಿಥಿಲ ಆಗಿದೆ ,ಅದನ್ನು ಸರಿಪಡಿಸಬೇಕು .ಮಕ್ಕಳಿಗೆ

ಕಾಲೇಜಿಗೆ   ಫೀಸ್ ದಂಡ ಕಟ್ಟದೆ ಕೊಡ ಬಹುದು . ಅಲ್ಲ ಈ ಮಕ್ಕಳು ಎಲ್ಲಾ ಕಲಿಯುತ್ತ  ಪೇಟೆ ಕಡೆ ಮುಖ ಮಾಡಿದರೆ

ಈ  ತೋಟ ನೋಡುವುದು ಯಾರು ? ಸ್ವಲ್ಪ ಹಣ ಉಳಿದರೆ  ಒಂದು ಸತ್ಯನಾರಾಯಣ ಪೂಜೆ ಮಾಡಿಸಿದರೆ ಹೇಗೆ ?


      ಧಾರಣೆ ಇಳಿಮುಖ ಹೋಗುತ್ತಿದ್ದರೆ  ಬ್ಯಾಂಕಿನ ಸಾಲದ ಕಂತು ಹೇಗೆ ಕಟ್ಟುವುದು ? ಹೇಗಾದರೂ ಕಟ್ಟಿ  ಬೆಳೆ ಸಾಲಕ್ಕೆ

ಅರ್ಜಿ ಹಾಕಬೇಕು .ಮಗ ಇಂಜಿನಿಯರಿಂಗ್  ಮುಗಿಸಿ ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ತಮ್ಮ ತಂಗಿಯರ ಫೀಸ್ ಸ್ವಲ್ಪ

ಕಟ್ಟಿಯಾನು .ಅಲ್ಲ ಮಕ್ಕಳ ಆದಾಯದ ಮೇಲೆ ಹೆಚ್ಚು ನಿರೀಕ್ಷೆ ಬೇಡ .ಆಚೆ ಮನೆ ಭೀಮಣ್ಣ ನಿಗೆ  ಕೊಕ್ಕೋ ಬೆಳೆಸಿ ,ಅಡಿಕೆಯಲ್ಲಿ

ಹೋದ ಮಾನ ಕೊಕ್ಕೊದಲ್ಲಿ ಬಂದಿದೆ . ನಾನೂ ಈ ಬಾಳೆ ಸಸಿ ಎಲ್ಲಾ ಕಡಿದು ಸ್ವಲ್ಪ  ಕೊಕ್ಕೋ ಸಸಿ ಹಾಕ ಬೇಕು .ಕೊಕ್ಕೋ

ಕಾಯಿ ಆದಾಗ ಕೊಯ್ದು ಒಡೆದು  ವಿಟ್ಲ ಪೇಟೆಗೆ ಕೊಂಡು ಹೋಗುವುದು ಯಾರು ?ಅದು ಆ ಮೇಲಿನ ಸಮಸ್ಯೆ ,ನೋಡುವಾ


   ಇವೆಲ್ಲಾ ಆಲೋಚನೆಗಳು  ಅಡಿಕೆ ಧಾರಣೆ ವಾಚನ ದೊಂದಿಗೆ  ತಂದೆಯವರ  ಯೋಚನಾ  ಲಹರಿಯಲ್ಲಿ ಓಡುತ್ತಿರಬೇಕು .

ಈ ಧಾರಣೆಯನ್ನು  ಅಪ್ಪ ಸ್ಥಳೀಯ ಅಡಿಕೆ ಬ್ಯಾರಿ ಯವರ ರೇಟಿಗೆ ಹೋಲಿಸಿದರೆ ,ಅವರು " ಅಣ್ಣೆರೆ ಅದು ಯಾವುದಾದರೂ

ಒಂದು ಲೋಟಿಗೆ ಸಿಕ್ಕಿರಬಹುದಾದ ರೇಟ್ ಪೇಪರ್ ನವರು ಹಾಕುವುದು .ಉಳಿದವರಿಗೆಲ್ಲಾ ನೂರು ರುಪಾಯಿ ಕಮ್ಮಿಯೇ "

ಎನ್ನುವರು ,ತಮ್ಮ ಕಮ್ಮಿ ರೇಟನ್ನು ಸಮರ್ಥಿಸಿ ಕೊಳ್ಳುತ್ತಾ .

  ಈಗ ತಂದೆಯವರು ಇಲ್ಲಾ .ಅಡಿಕೆ ತೋಟ ಮಾರಿ ವರುಷಗಳಾಗಿವೆ .ಆದರೂ ಅಡಿಕೆ ಧಾರಣೆ ಕುತೂಹಲದಿಂದ  ಓದುತಿದ್ದ

ಅಪ್ಪನ  ಚಿತ್ರ ಹಾಗೆಯೇ ಒಮ್ಮೊಮ್ಮೆ ಕಾಡುತ್ತಿದೆ




ಶುಕ್ರವಾರ, ಮಾರ್ಚ್ 18, 2016

ರಾಜಕಾರಿಣಿಗಳಲ್ಲೊಬ್ಬ ಅಪರಂಜಿ ಮಧು ದಂಡವತೆ



ಹಿಂದೆ ರೈಲ್ವೆ ಎರಡನೇ ತರಗತಿಯ ಬೋಗಿಗಳಲ್ಲಿ  ಕೂರಲು ಮತ್ತು ಮಲಗಲು 

ಮರದ ಸ್ಲೀಪರ್ ಗಳು ಇದ್ದವು .ಸಮಾಜವಾದಿ ಹಿನ್ನಲೆಯಿಂದ ಬಂದ ರೈಲ್ವೆ ಮಂತ್ರಿ 

ಮಧು ದಂಡಾವತೆ ಎಲ್ಲಾ ಸ್ಲೀಪರ್ ಗಳಿಗೂ ಮೆತ್ತೆ (ಕುಶನ್)ಇರುವ ಮಾರ್ಪಾಡು 

ಮಾಡಿದರು .ತಮ್ಮ ಈ ಕ್ರಮಕ್ಕೆ ಅಧಿಕಾರಿಗಳು ಎರಡನೇ ದರ್ಜೆ ಪ್ರಯಾಣಿಕರು 

ಮೆತ್ತೆಯನ್ನು ಹರಿಯುವ ಭಯ ವ್ಯಕ್ತ ಪಡಿಸಿ ವಿರೋಧಿಸಿದರೆಂದೂ ತಾನು ಅವರನ್ನು 

ಒಪ್ಪಿಸಿದೆಂದೂ ಅವರು ಬರೆದಿದ್ದಾರೆ .

ಅದೇ ತರಹ ಕೆಲವು ಮಾರ್ಗಗಳಲ್ಲಿ  ಪ್ರಯಾಣಿಕರ ದಟ್ಟನೆ ಜಾಸ್ತಿ ಇರುವುದನ್ನು 

ಕಂಡ ದಂಡಾವತೆ  ತಾವು ಜರ್ಮನಿಯಲ್ಲಿ ಕಂಡ ಎರಡು ಇಂಜಿನ್ ಅಳವಡಿಸಿ 

ಹೆಚ್ಚು ಬೋಗಿಗಳನ್ನು ಸೇರಿಸುವ  ಪ್ರಸ್ತಾವ ಮುಂದೆ ಇಟ್ಟಾಗ  ತಾಂತ್ರಿಕ 

ಸಮಸ್ಯೆಗಳನ್ನು  ಅಧಿಕಾರಿಗಳು ಎತ್ತಿ ತೋರಿಸಿದರು .ಆದರೆ ಫಿಸಿಕ್ಸ್  ಪ್ರೊಫೆಸರ್ 

ಆಗಿದ್ದ ದಂಡಾವತೆ  ಅದಕ್ಕೆಲ್ಲಾ ವೈಜ್ಞಾನಿಕ ಭಾಷೆಯಲ್ಲಿಯೇ ಉತ್ತರ ಕೊಟ್ಟು

ಅವರ ಭಯ ನಿವಾರಿಸಿದರು .

ತಮ್ಮ ಪುಸ್ತಕ  ಡಯಲಾಗ್ ವಿಥ್ ಲೈಫ್ ನಲ್ಲಿ ಅವರು ಕೆಲ ಅನುಭವಗಳನ್ನು  ಹಂಚಿ 

ಕೊಂಡಿದ್ದಾರೆ .ಜೀವನದಲ್ಲಿ ತಮ್ಮ ಅತ್ಯಂತ ಬಲಶಾಲಿಯಾದ  ಎದುರಾಳಿಯೂ 

ಶತ್ರುವಲ್ಲ ಎಂಬ ತತ್ವ ತಮ್ಮದು ಎಂದು ಕೊಂಡಿದ್ದಾರೆ .

ಇವರು  ಮೊರಾರ್ಜಿ ಸಂಪುಟದಲ್ಲಿ  ರೈಲ್ವೆ ಮಂತ್ರಿ ಆಗಿದ್ದಾಗ  ಇಂದಿರಾಗಾಂಧಿ 

ವಿರೋಧ ಪಕ್ಷದಲ್ಲಿ ಇದ್ದರು .ಒಮ್ಮೆ ಪಾರ್ಲಿಮೆಂಟ್ ಬಳಿ ಎದುರಾದಾಗ  ಇಂದಿರಾ 

'ದಂಡವತೆ ಜಿ ನೀವು ಒಳ್ಳೆಯ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವಿರಿ .ನನ್ನ 

ಮಂತ್ರಿ ಮಂಡಲದಲ್ಲಿ ನಿಮ್ಮನ್ನು ಹೊಂದುವ ಭಾಗ್ಯ ನನಗಿಲ್ಲದಾಯಿತು ' ಎಂದರು 

ಅದಕ್ಕೆ ದಂಡವತೆ ನಿಮ್ಮ ಸಂಪುಟ ಸೇರಲು ಅವಕಾಶ ಸಿಗದಿದ್ದುದೇ ನನ್ನ ಭಾಗ್ಯ 

ಎಂದರು .ಇಂದಿರಾ ಅವರು ಈ ಉತ್ತರ ಕೇಳಿ ನಕ್ಕರು.

ಇನ್ನೊಮ್ಮೆ ಮೊರಾರ್ಜಿಯವರು ದಂಡವತೆವತೆಯವರಿಗೆ ನೀವೂ ಮೂತ್ರ ಚಿಕಿತ್ಸೆ 

ಮಾಡಿರಿ ,ಬಹುಕಾಲ ಬದುಕುವಿರಿ ಎಂದು ಸಲಹೆ ಇತ್ತರು .ಅದಕ್ಕೆ  ದಂಡವತೆ 

ಮೊರರ್ಜಿಭಾಯ್  ನನಗೆ ಬಹುಕಾಲ ಬದುಕುವ ಆಸೆಯಿದೆ ಆದರೆ ಒಳ್ಳೆಯ 

ರುಚಿಯೊಂದಿಗೆ ಎಂದರಂತೆ.

ಇನ್ನೊಮ್ಮೆ  ವಿರೋಧ ಪಕ್ಷದ ವತಿಯಿಂದ ಇವರು ಮಾತನಾಡುವಾಗ ಸ್ಪೀಕರ್ 

ಜಾಕಡ್ ಅವರು 'ಪ್ರೊಫೆಸರ್ ಅವರೇ ನೀವು ಶಕ್ತಿಯುತ ಭಾಷಣ 

ಮಾಡುತ್ತಿದ್ದೀರಿ.ಆದರೆ ತಮ್ಮ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಗದ್ದಲ 

ಮಾಡುತ್ತಿರುವರು.ನೀವು ಎಂದೂ ಹಾಗೆ ಮಾಡುವುದಿಲ್ಲ .' ಎಂದರಂತೆ .ಅದಕ್ಕೆ 

ದಂಡವತೆ ತನಗೆ ಈಜಲು ಬರುವುದಿಲ್ಲವಲ್ಲಾ ಎಂದಾಗ ಸದನ ತುಂಬಾ ನಗು .

   ಜಯಪ್ರಕಾಶ ನಾರಾಯಣ ಅವರು  ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದಾಗ 

ತಮ್ಮ  ಮೂತ್ರಪಿಂಡ ದಾನ ಮಾಡುವುದಾಗಿ ದಂಡವತೆ  ಮುಂದೆ ಬಂದಿದ್ದರು .

ಅಲ್ಲದೆ ಅವರ ಮರಣಾನಂತರ   ಅವರ ಇಚ್ಚೆಯಂತೆ  ಶರೀರವನ್ನು ವೈದ್ಯಕೀಯ 

ಕಾಲೇಜ್ ಗೆ ದಾನ ಮಾಡಲಾಯಿತು .

  ಇವರು  ವಿ ಪಿ ಸಿಂಗ್ ಮಂತ್ರಿ ಮಂಡಲದಲ್ಲಿ ಅರ್ಥ ಸಚಿವ ರಾಗಿದ್ದಾಗ  ಚಿನ್ನ 

ಕಂಟ್ರೋಲ್ ಕಾನೂನು ರದ್ದು ಪಡಿಸಿದರು .ಕೊಂಕಣ್ ರೈಲ್ವೆ  ಆರಂಬಿಸಲು 

ಜೋರ್ಜ್ ಫೆರ್ನಾಂಡಿಸ್  ಎಷ್ಟು ಕಾರಣವೋ  ಅಷ್ಟೇ ದಂಡಾವತೆ ಸಹಾ.