ಬೆಂಬಲಿಗರು

ಶನಿವಾರ, ಫೆಬ್ರವರಿ 4, 2017

ನನ್ನ ಅಪ್ಪ ಮತ್ತು ಅಡಿಕೆ ಧಾರಣೆ

              ನನ್ನ ಅಪ್ಪ ಮತ್ತು ಅಡಿಕೆ ಧಾರಣೆ 

ಸಂಜೆ  ಮನೆ ಕೆಲಸ ಎಲ್ಲಾ ಮುಗಿದ ಬಳಿಕ ಅಪ್ಪ ಅಂದಿನ ಪೇಪರ್ ನೋಡುವರು .ಚಿಮಿಣಿ ದೀಪದ ಬೆಳಕು ,ಮೂಗಿನ

ಮೇಲೆ ಜೀರ್ಣಾವಸ್ಥೆಗೆ ಬಂದ ಕನ್ನಡಕ .ಅವರ ಕುತೂಹಲ ಇಂದಿರಾಗಾಂಧಿ ಅಥವಾ ಗಾವಸ್ಕರ್ ಅಲ್ಲ .ಸೀದಾ ಪುಟ

ತಿರುವಿ  ಅಡಿಕೆ ಧಾರಣೆ ನೋಡುವರು .ಸಂತೋಷ ಅಥವಾ ಉದ್ವೇಗ ಪ್ರಕಟಣೆ ಇಲ್ಲ .

ದಿನವೂ ಅಡಿಕೆ ಧಾರಣೆ ಏಕೆ ನೋಡುತ್ತಿದ್ದರು ? ಮನೆಯಲ್ಲಿ ಅಡಿಕೆ ದಾಸ್ತಾನು ಇಲ್ಲದಿದ್ದರೂ ನೋಡುವರು ,ಇದ್ದರೂ

ನೋಡುವರು .ಪೇಟೆಯ ಮಂದಿ ಶೇರ್ ಪೇಟೆ ಸಮಾಚಾರ ,ಅರಳೆ ಪೇಟೆ ವಾರ್ತೆ ನೋಡುವಂತೆ .ಅವರ ಜೀವನದ

ಲೆಕ್ಕಗಳ ,ಕನಸುಗಳ ,ಯೋಜನೆಗಳ ಒಂದು ಅಂಗ ಈ ದಿನಚರಿ .


  ಅಡಿಕೆ ಧಾರಣೆ ಮೇಲ್ಮುಖ ಇದ್ದರೆ ಮುಂದಿನ ವರ್ಷ ಅಕ್ಕನ ಮದುವೆ ಕೊರತೆಯಿಲ್ಲದೆ ಮಾಡಬಹುದು .ಪಾರೆ ತೋಟಕ್ಕೆ

ಸ್ವಲ್ಪ ಮಣ್ಣು ಹಿಡಿಸ ಬೇಕು ,ಮೇಲಿನ ತೋಟದ ಬೇಲಿ ಎಲ್ಲಾ ಶಿಥಿಲ ಆಗಿದೆ ,ಅದನ್ನು ಸರಿಪಡಿಸಬೇಕು .ಮಕ್ಕಳಿಗೆ

ಕಾಲೇಜಿಗೆ   ಫೀಸ್ ದಂಡ ಕಟ್ಟದೆ ಕೊಡ ಬಹುದು . ಅಲ್ಲ ಈ ಮಕ್ಕಳು ಎಲ್ಲಾ ಕಲಿಯುತ್ತ  ಪೇಟೆ ಕಡೆ ಮುಖ ಮಾಡಿದರೆ

ಈ  ತೋಟ ನೋಡುವುದು ಯಾರು ? ಸ್ವಲ್ಪ ಹಣ ಉಳಿದರೆ  ಒಂದು ಸತ್ಯನಾರಾಯಣ ಪೂಜೆ ಮಾಡಿಸಿದರೆ ಹೇಗೆ ?


      ಧಾರಣೆ ಇಳಿಮುಖ ಹೋಗುತ್ತಿದ್ದರೆ  ಬ್ಯಾಂಕಿನ ಸಾಲದ ಕಂತು ಹೇಗೆ ಕಟ್ಟುವುದು ? ಹೇಗಾದರೂ ಕಟ್ಟಿ  ಬೆಳೆ ಸಾಲಕ್ಕೆ

ಅರ್ಜಿ ಹಾಕಬೇಕು .ಮಗ ಇಂಜಿನಿಯರಿಂಗ್  ಮುಗಿಸಿ ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ತಮ್ಮ ತಂಗಿಯರ ಫೀಸ್ ಸ್ವಲ್ಪ

ಕಟ್ಟಿಯಾನು .ಅಲ್ಲ ಮಕ್ಕಳ ಆದಾಯದ ಮೇಲೆ ಹೆಚ್ಚು ನಿರೀಕ್ಷೆ ಬೇಡ .ಆಚೆ ಮನೆ ಭೀಮಣ್ಣ ನಿಗೆ  ಕೊಕ್ಕೋ ಬೆಳೆಸಿ ,ಅಡಿಕೆಯಲ್ಲಿ

ಹೋದ ಮಾನ ಕೊಕ್ಕೊದಲ್ಲಿ ಬಂದಿದೆ . ನಾನೂ ಈ ಬಾಳೆ ಸಸಿ ಎಲ್ಲಾ ಕಡಿದು ಸ್ವಲ್ಪ  ಕೊಕ್ಕೋ ಸಸಿ ಹಾಕ ಬೇಕು .ಕೊಕ್ಕೋ

ಕಾಯಿ ಆದಾಗ ಕೊಯ್ದು ಒಡೆದು  ವಿಟ್ಲ ಪೇಟೆಗೆ ಕೊಂಡು ಹೋಗುವುದು ಯಾರು ?ಅದು ಆ ಮೇಲಿನ ಸಮಸ್ಯೆ ,ನೋಡುವಾ


   ಇವೆಲ್ಲಾ ಆಲೋಚನೆಗಳು  ಅಡಿಕೆ ಧಾರಣೆ ವಾಚನ ದೊಂದಿಗೆ  ತಂದೆಯವರ  ಯೋಚನಾ  ಲಹರಿಯಲ್ಲಿ ಓಡುತ್ತಿರಬೇಕು .

ಈ ಧಾರಣೆಯನ್ನು  ಅಪ್ಪ ಸ್ಥಳೀಯ ಅಡಿಕೆ ಬ್ಯಾರಿ ಯವರ ರೇಟಿಗೆ ಹೋಲಿಸಿದರೆ ,ಅವರು " ಅಣ್ಣೆರೆ ಅದು ಯಾವುದಾದರೂ

ಒಂದು ಲೋಟಿಗೆ ಸಿಕ್ಕಿರಬಹುದಾದ ರೇಟ್ ಪೇಪರ್ ನವರು ಹಾಕುವುದು .ಉಳಿದವರಿಗೆಲ್ಲಾ ನೂರು ರುಪಾಯಿ ಕಮ್ಮಿಯೇ "

ಎನ್ನುವರು ,ತಮ್ಮ ಕಮ್ಮಿ ರೇಟನ್ನು ಸಮರ್ಥಿಸಿ ಕೊಳ್ಳುತ್ತಾ .

  ಈಗ ತಂದೆಯವರು ಇಲ್ಲಾ .ಅಡಿಕೆ ತೋಟ ಮಾರಿ ವರುಷಗಳಾಗಿವೆ .ಆದರೂ ಅಡಿಕೆ ಧಾರಣೆ ಕುತೂಹಲದಿಂದ  ಓದುತಿದ್ದ

ಅಪ್ಪನ  ಚಿತ್ರ ಹಾಗೆಯೇ ಒಮ್ಮೊಮ್ಮೆ ಕಾಡುತ್ತಿದೆ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ