ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 1, 2023

 ಸಾಮೂಹಿಕ ಗಾಯ ಮಜ್ಜನ 

ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ  ರೋಗಿಗಳ ಸಂಖ್ಯೆ ಅಧಿಕ ಇರುವುದು ಸಾಮಾನ್ಯ . ವಾರ್ಡ್ ಗಳಲ್ಲಿ ಅಕ್ಯೂಟ್ ಕೇಸಸ್ ಮತ್ತು ಕ್ರಾನಿಕ್ ಕೇಸುಗಳು ಎಂದು ಎರಡು ವಿಧ . ಅಕ್ಯೂಟ್ ಅಲ್ಪ ಸಮಯದ ಇತಿಹಾಸ ಉಳ್ಳ ಕಾಯಿಲೆ . ಕ್ರಾನಿಕ್ ಎಂದರೆ ಹಲವು ದಿನ,ವಾರ ,ತಿಂಗಳು ಅಥವಾ ವರ್ಷಗಳಿಂದ ಬಳುವಳಿಯಾಗಿ ಬಂದ ರೋಗ . 

ಇದರಲ್ಲಿ ಕ್ರಾನಿಕ್ ರೋಗಿಗಳು ಪುನಃ ಪುನಃ ಆಸ್ಪತ್ರೆಗೆ ದಾಖಲು ಆಗುವರು . ಆಸ್ಫತ್ರೆಯ ಒಳ ಹೊರಗು ಅರಿತವರು . ಹೆಚ್ಚಿನವರು ಬಹಳ ಡಿಮ್ಯಾಂಡಿಂಗ್ ಟೈಪಿನವರು . ಪ್ರತಿಯೊಂದರಲ್ಲೂ ಕೊರತೆ ಕಂಡು ಹಿಡಿಯುವ ಇವರನ್ನು ಸಂಭಾಳಿಸುವುದು ಸ್ವಲ್ಪ ಕಷ್ಟ . ಹಳೆಯ ಯೋಗಿಯು ಹೊಸಾ ವೈದ್ಯನಿಂಗಿಂತ ಉತ್ತಮ ( ರೋಗದ ಬಗ್ಗೆ  ಹೆಚ್ಚು ಅರಿವು ಉಳ್ಳವನು )ಎಂಬ  ನುಡಿಗಟ್ಟು ಇದೆ . ಇವರ ಕೈಯಲ್ಲಿ ಹೊಸಾ ಹೌಸ್ ಸರ್ಜನ್ ,ನರ್ಸ್ ಸಿಕ್ಕಿದರೆ ಗೋಳು ಹೊಯ್ದು ಬಿಡುತ್ತಾರೆ . ಇಂಜೆಕ್ಷನ್ ಕುತ್ತಿದ್ದು ಸರಿಯಾಗಿಲ್ಲ ,ಮಾತ್ರೆ ಬದಲು ಆಗಿದೆ ,ಡ್ರೆಸ್ಸಿಂಗ್  ಮಾಡಿದ್ದು ತಪ್ಪಾಗಿದೆ ಇತ್ಯಾದಿ . 

ಇಂತಹ ರೋಗಿಗಳು ಒಂದು ಉಪಯೋಗಕ್ಕೆ ಬರುವರು .ಅವರನ್ನು  ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಎಕ್ಸಾಮ್ ಕೇಸ್ ಎಂದು ಇಡುವರು . ವಿದ್ಯಾರ್ಥಿಗಳು ಇವರ ರೋಗ ಇತಿಹಾಸ ಕೇಳಿ ,ಪರೀಕ್ಷೆ ಮಾಡಿ ಇಂತಹ ಕಾಯಿಲೆ ಏನು ಚಿಕಿತ್ಸೆ ಇತ್ಯಾದಿ ಹೇಳಬೇಕು . ಇಂತಹ ರೋಗಿಗಳಿಗೆ ವಿಶೇಷ ಪರೀಕ್ಷಾ ಭತ್ಯೆ ಸಿಗುವುದು ,ಕೆಲವೊಮ್ಮೆ ಅವರ ಬಾಯಿ ಸರಿಯಾಗಿ ಬಿಡಿಸಲು ಪರೀಕ್ಷಾರ್ಥಿಗಳೇ ಟಿಪ್ಸ್ ಕೊಡುವರು . ಕಾಯಿಲೆಯ ಡೈಯ ಗ್ನೋಸಿಸ್  ಕೂಡಾ ಅವರೇ ಹೇಳುವರು . ಪರೀಕ್ಷಾರ್ಥಿ ಸರಿಯಾಗಿ ಗಮನಿಸದಿದ್ದರೆ ,'ನೋಡಪ್ಪಾ ನನ್ನ ಬೆನ್ನ ಹಿಂದೆ ಒಂದು ಗಡ್ಡೆ ಇದೆ ,ಪರೀಕ್ಷಕರು ಕೇಳುವರು ,ಅದು ಲೈಪೊಮ . ಇತ್ಯಾದಿ ಹಿಂಟ್ ಕೊಡುವರು .ಕೆಲವೊಮ್ಮೆ ಇದು ತಪ್ಪು ಇರಬಹುದು . 

ಸರ್ಜಿಕಲ್ ವಾರ್ಡ್ ನಲ್ಲಿ  ಹಳೇ ಗಾಯದ  ರೋಗಿಗಳ ಸಾಲು ಇರುವುದು . ನಾವು ಹೌಸ್ ಸರ್ಜನ್ ಆಗಿದ್ದಾಗ ಮುಂಜಾನೆ ಇಂಜೆಕ್ಷನ್ ಕೊಟ್ಟಾದ ಮೇಲೆ ಸಾಮೂಹಿಕ ಗಾಯ ಸ್ನಾನ . ನಮ್ಮ ಹಿಂದೆ ಒಬ್ಬ ಡ್ರೆಸ್ಸರ್ ಒಂದು ತಳ್ಳು ಟ್ರಾಲಿ ಯಲ್ಲಿ  ಗಾಯ ತೊಳೆಯುವ ದ್ರಾವಣ ,ಪರಿಕರಗಳು ,ಮುಲಾಮು ಇತ್ಯಾದಿ ,ಇನ್ನೊಂದರಲ್ಲಿ ಕೈ ಶುದ್ಧ ಮಾಡುವ ಡೆಟಾಲ್ ದ್ರಾವಣ ಮತ್ತು ಕೈ ಒರಸುವ ಬಟ್ಟೆ ಸಹಿತ ಹಿಂಬಾಲಿಸುವರು . ಆಸ್ಪತ್ರೆಯ ಟ್ರೇಡ್ ಮಾರ್ಕ್ ವಾಸನೆ ಅಥವಾ ಪರಿಮಳ ಡೆಟಾಲ್ ಒಂದು ಕಾರಣ 

ಹಲವು ವಾರಗಳಿಂದ ಇರುವ ರೋಗಿಗಳ ನೋಟ್ಸ್ ಬರೆಯುವಾಗ  ಅಲ್ಸರ್ ರೈಟ್ ಫುಟ್  .ಕ್ಲೀನ್ ಅಂಡ್ ಡ್ರೆಸ್ ಆರಂಭದಲ್ಲಿ ಎಂದು ಆರಂಭದಲ್ಲಿ ಬರೆದರೂ ಕೊನೆ ಕೊನೆಗೆ ಶಾರ್ಟ್ ಫಾರಂ  c &d  ಎಂದು ಗೀಚುತ್ತಿದ್ದೆವು . ಅಲ್ಸರ್ ಎಂದ ಒಡನೆ ಸಿ ಅಂಡ್ ಡಿ  ಬರುತ್ತಿತ್ತು . ಒಮ್ಮೆ ಒಂದು ರೋಗಿಯು ಹಲವು ವಾರಗಳಿಂದ ಹೊಟ್ಟೆಯ ವೃಣ ಅಥವಾ ಪೆಪ್ಟಿಕ್ ಅಲ್ಸರ್ ಚಿಕಿತ್ಸೆಗೆ ಅಡ್ಮಿಟ್ ಆಗಿದ್ದರು . ಹೌಸ್ ಸರ್ಜನ್ ಆರಂಭದಲ್ಲಿ ಪೆಪ್ಟಿಕ್ ಅಲ್ಸರ್ ಎಂದು ಆರಂಭಿಸಿ ಕೊನೆಗೆ ಅಲ್ಸರ್ ಮಾತ್ರ ಬರೆಯುತ್ತಿದ್ದರು .ಹೌಸ್ ಸರ್ಜನ್ ಬದಲು ಆದಾಗ ಅವರು ಅಲ್ಸರ್  -ಕ್ಲೀನ್ ಅಂಡ್ ಡ್ರೆಸ್ ಎಂದು ಬರೆದರು ಎಂದು ಕತೆ 

ಗಾಯವನ್ನು ಸ್ವಚ್ಛ ಮಾಡಿ ಬ್ಯಾಂಡೇಜ್ ಮಾಡುವುದಕ್ಕೂ ಕ್ರಮ ಇದೆ .ತೊಳೆಯುವಾಗ ಒಳಗಿಂದ ಹೊರಕ್ಕೆ  ಎಂಬ ನಿಯಮ ಮುಖ್ಯ ,ಬ್ಯಾಂಡೇಜ್ ಗಳಲ್ಲಿ ಹಲವು ವಿಧ .ನಮಗೆ ಇದನ್ನು ಅನುಭವಿ ನರ್ಸ್ ಮತ್ತು ಡ್ರೆಸ್ಸರ್ ಗಳು ತಿಳಿಸಿ ಕೊಡುತ್ತಿದ್ದರು . 

ಈಗ ಹೌಸ್ ಸರ್ಜನ್ ಗಳು ಖಾಸಗಿ ಕಾಲೇಜು ಗಳಲ್ಲಿ ಇಂತಹ ಸಾಮೂಹಿಕ ಗಾಯ ಮಜ್ಜನ ಮಾಡುವುದು ವಿರಳ . 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ