ಬೆಂಬಲಿಗರು

ಬುಧವಾರ, ಡಿಸೆಂಬರ್ 13, 2023

ರೋಗಿ ತಾನೇ ಮೊದಲ ಗುರುವು

 


ಸರ್ ವಿಲಿಯಂ ಒಸ್ಲರ್ ಅವರನ್ನು ಆಧುನಿಕ ವೈದ್ಯ ಶಾಸ್ತ್ರದ ತಂದೆ ಎಂದು ಕರೆಯುತ್ತಾರೆ . ವೈದ್ಯಕೀಯ ಶಿಕ್ಷಣ ವನ್ನು  ನಾಲ್ಕು ಗೋಡೆಗಳ ಕ್ಲಾಸ್ ರೂಮ್ ಗಳಿಂದ  ರೋಗಿಗಳ ಬಳಿಗೆ ,ಬೆಡ್ ಸೈಡ್ ಕ್ಲಿನಿಕಲ್ ಪಾಠಗಳ ಮೂಲಕ ವಿಸ್ತರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ . "ಪಠ್ಯ ಪುಸ್ತಕಗಳಿಲ್ಲದೆ ವೈದ್ಯ ಶಾಸ್ತ ಅಧ್ಯಯನ ,ನಕ್ಷೆಯಿಲ್ಲದ ಸಮುದ್ರ ಯಾನದಂತೆ ; ನಿಜ ರೋಗಿಗಳ ಪರೀಕ್ಷಾ ಅಧ್ಯಯನ ಸಮುದ್ರಕ್ಕೇ  ಹೋಗದಂತೆ "( He who studies medicine without books sails an uncharted sea, but he who studies medicine without patients does not go to sea at all”)

ಒಳ್ಳೆಯ ವೈದ್ಯನಾಗಿ ರೂಪಿತನಾಗಲು ವಿದ್ಯಾರ್ಥಿ ದೆಸೆಯಲ್ಲಿ  ವಿಧ ವಿಧದ ರೋಗಗಳ ರೋಗಿಗಳನ್ನು ನೋಡಿರ ಬೇಕು . ಮನವರಿಯದ್ದು  ಕಣ್ಣು  ಕಾಣದು ಎಂಬ ನುಡಿ ಗಟ್ಟು ಇದೆ . ಹಿಂದೆ ಕಂಡ ಕಾಯಿಲೆಗಳ ಪತ್ತೆ ಹಚ್ಚುವುದು ಸುಲಭ .  ಪುಸ್ತಕದಲ್ಲಿ ಓದಿದ್ದರೂ ಕಂಡಿರದ ಕಾಯಿಲೆಗಳ  ಡಯಾ ಗ್ನೋಸಿಸ್  ಸುಲಭವಲ್ಲ . 

ಸರಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಈ ವಿಷಯದಲ್ಲಿ ಅದೃಷ್ಟ ವಂತರು . ಅಲ್ಲಿ  ಹಣ ತೆತ್ತು ಚಿಕಿತ್ಸೆ ಪಡೆಯುವವರು ಕಡಿಮೆ . ಉಚಿತ ಚಿಕಿತ್ಸೆ ಪಡೆಯುವ ರೋಗಿಗಳು ವಿದ್ಯಾರ್ಥಿ ಗಳು ಪರೀಕ್ಷೆ ಮಾಡುವುದಕ್ಕೆ ಆಕ್ಷೇಪ ಮಾಡುವುದು ಕಡಿಮೆ . ರೋಗದ ವಿವಿಧ ಲಕ್ಷಣಗಳು ಇರುವ ಪೇಷಂಟ್ ಇದ್ದರೆ ಎಲ್ಲಾ ವಿದ್ಯಾರ್ಥಿಗಳೂ ಅವನ ಬಳಿ ಬಂದು ರೋಗ ಚರಿತ್ರೆ ಕೇಳುವರು .ಪರೀಕ್ಷೆ ಮಾಡುವರು .ಹೇಳಿದ್ದನ್ನೇ ಹೇಳಿ ಹೇಳಿ ಅವರೂ ಸುಸ್ತು ಆಗುವುದು ಉಂಟು .ಅಲ್ಲದೆ ಪರೀಕ್ಷಕರ ಸ್ಪರ್ಶ ,ಮರ್ದನ ಇತ್ಯಾದಿ ಗಳಿಗೆ ಒಳಗಾಗ ಬೇಕಾಗುವುದು . ಕೆಲವು ರೋಗಿಗಳು ತಪ್ಪಿಸಲು ಬಾತ್ ರೂಮ್ ನಲ್ಲಿ ಅಡಗುವರು ,ಇನ್ನು ಕೆಲವರು ತೀವ್ರ ಅಸೌಖ್ಯ ನಟಿಸುವರು . 

ವಿಶ್ವ ವಿದ್ಯಾಲಯ ಪರೀಕ್ಷೆಗೆ ಕೆಲ ದಿನ ಮೊದಲು ಪರೀಕ್ಷಾರ್ಥಿ ವಿದ್ಯಾರ್ಥಿಗಳಿಗೆ ವಾರ್ಡ್ ಗೆ ಪ್ರವೇಶ ನಿಷೇಧ(Out of Bounds ) .ಪರೀಕ್ಷೆಗೆ ಇಡುವ ರೋಗಿಗಳ ವಿವರ ತಿಳಿಯದಿರಲಿ ಎಂಬ ಉದ್ದೇಶ .ಆದರೆ ರಾತ್ರೋ ರಾತ್ರಿ ವಿದ್ಯಾರ್ಥಿಗಳು ಕಣ್ಣು ತಪ್ಪಿಸಿ ಹೋಗಿ ಪರೀಕ್ಷಾ ಕೇಸ್ ಗಳನ್ನು ನೋಡುವುದುಂಟು . ಹೌಸ್ ಸರ್ಜನ್ ,ಪಿ ಜಿ ಗಳು ಇಂತಿಂತಹ ಕೇಸ್ ಇದೆ ಎಂಬ ಸೂಚನೆ ಕೊಡುವರು .ಕೆಲವೊಮ್ಮೆ ಈ ಮುನ್ಸೂಚನೆಗಳು ತಪ್ಪಾಗಿ ಪರೀಕ್ಷಾ ರ್ಥಿ  ಗಳು ಪೇಚಿಗೆ ಸಿಗುವದು ಉಂಟು . ಉದಾಹರಣೆಗೆ ಒಂದು ಸಾರಿ  ಪರೀಕ್ಷೆಗೆ ಬಲ ಬದಿಯ ಪಾರ್ಶ್ವ ವಾಯು ಕೇಸ್ ಇಟ್ಟಿದ್ದರು . ಮುನ್ಸೂಚನೆ ಕೊಡುವ ಹಿರಿಯರು ಪರೀಕ್ಷಾರ್ಥಿಗಳಿಗೆ 'ಬಲ ಬದಿ ಪಾರ್ಶ್ವ ವಾಯು ರೋಗಿಗೆ ಹೈಡ್ರೋಸೀಲ್(ವೃಷಣ ಚೀಲದ ನೀರು ) ಕೂಡಾ ಇದೆ . ತಪ್ಪಿದರೆ ಫೇಲ್ ಆದೀತು .; ಎಂಬ ಎಚ್ಚರಿಕೆ ಕೊಟ್ಟರು . ಅವರ ಮಾತು ಕೇಳಿ ಪರೀಕ್ಷಾರ್ಥಿ  ಮುಖ್ಯ ರೋಗವಾದ ಪಾರ್ಶ್ವ ವಾಯು ಗಿಂತಲೂ ಹೈಡ್ರೊ ಸೀಲ್ ನ್ನೇ ಹುಡುಕಿ ಸಿಗದೇ (ರಾತ್ರೋ ರಾತ್ರಿ ರೋಗಿಯನ್ನು ಬದಲಿಸಿದ್ದರು ) ಪರೀಕ್ಷಕರು  ಡಯ ಗ್ನೋಸಿಸ್ ಕೇಳಿದಾಗ   ರೈಟ್ ಸೈಡ್ ಹೆಮಿಪ್ಲಿಜಿಯ (ಪಾರ್ಶ್ವ ವಾಯು )ವಿಥ್ ಔಟ್ ಹೈಡ್ರೊ ಸೀಲ್ ಎಂದಾಗ ಪರೀಕ್ಷಕರಿಗೆ ಸೋಜಿಗ . 

ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು ಎಂಬಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೂ ,ವೈದ್ಯರಿಗೂ ರೋಗಿಯೇ ಮೊದಲ ಗುರು . ರೋಗಿಯಿಂದ ಪಾಠ ಕಲಿತ ವೈದ್ಯರು ಮತ್ತು ಅವರಿಂದ ಚಿಕಿತ್ಸೆ ಪಡೆಯುವವರು ಧನ್ಯರು  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ