ದಶಕಗಳ ಹಿಂದೆ ನಡೆದ ಘಟನೆ . ಒಂದು ಬಡ ಕುಟುಂಬ .ಅಲ್ಲಿ ಒಬ್ಬಳು ಹೆಣ್ಣು ಮಗಳು .ಆಕೆ ನನ್ನ ಪೇಷಂಟ್ . ಕಾಯಿಲೆ ಅಸ್ತಮಾ . ಚಳಿಗಾಲದಲ್ಲಿ ಜಾಸ್ತಿ . ಔಷದೋಪಚಾರ ಗಳಿಂದ ಹತೋಟಿಯಲ್ಲಿ ಇತ್ತು . ತಂದೆ ತಾಯಿ ಹುಡುಗನನ್ನು ನೋಡಿ ,ಶಕ್ತಿ ಮೀರಿ ಖರ್ಚು ಮಾಡಿ ಮದುವೆ ಮಾಡಿ ಕೊಟ್ಟರು . ಪತಿ ಗೃಹದಲ್ಲಿ ಇವಳಿಗೆ ಆಸ್ತಮಾ ಕಾಯಿಲೆ ಇರುವುದು ಕಂಡು ಗಂಡನೂ ಸೇರಿ ಎಲ್ಲರೂ ಸಿಟ್ಟಿಗೆದ್ದರು . ಶುರುವಾಯಿತು ಕಾಟ ,ರೋಗವನ್ನು ಮುಚ್ಚಿ ಬಿಟ್ಟು ಮದುವೆ ಮಾಡಿದ್ದಾರೆ . ಹೇಗೆ ಇವಳನ್ನು ಓಡಿಸುವುದು ?ಕೂತಲ್ಲಿ ನಿಂತಲ್ಲಿ ಸಹಸ್ರ ನಾಮ .ಹೊಗೆ ಒಲೆಯ ಬುಡದ ಕೆಲಸ ಇವಳೇ ಮಾಡುವಂತೆ ತಾಕೀತು ..ತಣ್ಣಿರಿನಲ್ಲಿಯೇ ಸ್ನಾನ ಮಾಡ ಬೇಕು ಇತ್ಯಾದಿ .ಬದುಕು ಅಸಹನೀಯ ಆದಾಗ ತವರು ಮನೆಗೆ ಓಡಿ ಬಂದಳು . ವರ್ಷಗಳ ನಂತರ ಒಂದು ದಿನ ಎಲ್ಲೋ ಪ್ರಯಾಣ ಮಾಡುತ್ತಿರುವಾಗ ಬಸ್ಸಿನಲ್ಲಿ ಸಿಕ್ಕಿದಳು . ಬೇರೊಂದು ಹುಡುಗನ ಜತೆ ಮದುವೆ ಆಗಿತ್ತು . ನಡುವಿನ ಮತ್ತು ನಂತರದ ಕತೆ ನನಗೆ ತಿಳಿದಿಲ್ಲ . ಸಂತೋಷವಾಗಿ ಇರಲಿ ಎಂಬ ಹಾರೈಕೆ ಮಾತ್ರ .
ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆ ಇದೆ . ಇದರಲ್ಲಿ ಸುಳ್ಳು ಹೇಳದಿದ್ದರೂ ಸತ್ಯವನ್ನು ಬಚ್ಚಿಡುವುದು ಕೂಡಾ ಸೇರಿದೆ . ವಿವಾಹ ಬಂಧ ಮಾತುಕತೆ ಆಗುವಾಗ ಏನೆಲ್ಲಾ ಹೇಳ ಬೇಕು ?ಏನೆಲ್ಲಾ ಬಾರದು ?ಇದು ದೊಡ್ಡ ಪ್ರಶ್ನೆ . ಮೇಲೆ ಉಲ್ಲೇಖಿಸಿದ ಆಸ್ತಮಾ ಕಾಯಿಲೆ ದೊಡ್ಡ ದೇನೂ ಅಲ್ಲ .ಅದಕ್ಕೆ ಒಳ್ಳೆಯ ಔಷಧಿ ಕೂಡಾ ಇದೆ . ಅಪಸ್ಮಾರ ,ಸಕ್ಕರೆ ಕಾಯಿಲೆ ,ಮಾನಸಿಕ ಕಾಯಿಲೆ , ಮದ್ಯ ಇತ್ಯಾದಿ ವ್ಯಸನ ಇದ್ದರೆ ಮೊದಲೇ ಹೇಳ ಬೇಕೆ ?ಈ ವಿಚಾರ ಮುಚ್ಚಿಟ್ಟು ಅನೇಕ ಮದುವೆಗಳು ಮುರಿದಿವೆ .ವಿವಾಹ ಮೊದಲೇ ಇದ್ದ ಪ್ರೇಮ ಸಂಬಂಧ ಗಳನ್ನೂ ಸೇರಿಸ ಬಹುದು . ಈಗಂತೂ ಎಲ್ಲಾ ಸರಿ ಇದ್ದು ಆದ ವಿವಾಹ ಬಂಧಗಳೆ ಮುರಿದು ಬೀಳುತ್ತಿವೆ ,.
ಈಗ ನನ್ನ ಸಮಸ್ಯೆಗೆ ಬರೋಣ . ಮೊನ್ನೆ ಒಬ್ಬರು ಬಂದಿದ್ದರು.ಅವರ ಕುಟುಂಬ ನನ್ನ ಬಳಿಗೆ ವೈದ್ಯಕೀಯ ಸಲಹೆ ಗೆ ನನ್ನ ಬಳಿಗೆ ಬರುವುದು . ಅವರು ಒಬ್ಬ ಹುಡುಗನ (ಸ್ಥಿತಿ ವಂತನೆ )ಬಗ್ಗೆ ವಿಚಾರಿಸಿ ಅವನಿಗೆ ಆರೋಗ್ಯ ಸಮಸ್ಯೆ ಇದೆಯೇ ? ಪೊದು ಮಾತನಾಡಿಸ ಬಹುದೇ ?ಎಂದು ವಿಚಾರಿಸಿದರು .ಅವನ ಬಗ್ಗೆಯೂ ನನಗೆ ಮಾಹಿತಿ ಇದೆ .ಆದರೆ ವೈದ್ಯಕೀಯ ವೃತ್ತಿಯಲ್ಲಿ ನಾವು ಇದನ್ನು ಅನ್ಯರ ಬಳಿ ಹೇಳ ಬಾರದು.ಅದು ಗಂಭೀರ ಕಾಯಿಲೆ ಅಲ್ಲದಿದ್ದರೂ . ಆಸ್ಪತ್ರೆಯಲ್ಲಿ ನನ್ನ ಅರಿವಿಗೆ ಬಂದ ನಮ್ಮ ಸಂಬಂದಿಕರ ಅನಾರೋಗ್ಯ ಬಗ್ಗೆ ಕೂಡಾ ನಾನು ಮನೆಯಲ್ಲಿ ಕೂಡಾ ಪ್ರಸ್ತಾಪ ಮಾಡುವುದಿಲ್ಲ .
ಅರೋಗ್ಯ ವಿಮೆ ಮಾಡುವಾಗ ಇದ್ದ ಕಾಯಿಲೆಗಳನ್ನು ಘೋಷಿಸ ಬೇಕು ಎಂಬ ಷರತ್ತು ಇರುವುದು ಮತ್ತು ಒಂದು ಅವಧಿಯ ವರೆಗೆ ಆ ಕಾಯಿಲೆಗಳು ವಿಮಾತೀತ ಆಗಿರುತ್ತವೆ . ಅದೇ ರೀತಿ ಮದುವೆ ಸಂಬಂಧ ಏರ್ಪಡಿಸುವಾಗ ಉಭಯ ತರರೂ ಗಂಭೀರ ಅರೋಗ್ಯ ಸಮಸ್ಯೆ ಇದ್ದರೆ ಹೇಳಿ ಕೊಳ್ಳುವುದು ಉತ್ತಮ . ಇದರಲ್ಲಿ ವಂಶ ಪಾರಂಪರ್ಯ ಕಾಯಿಲೆಗಳನ್ನೂ ಸೇರಿಸ ಬಹುದು .
ಇಷ್ಟೆಲ್ಲಾ ಇದ್ದರೂ ಮದುವೆ ಪಶ್ಚಾತ್ ಮೊದಲೇ ಇದ್ದ ಕಾಯಿಲೆ ಬಗ್ಗೆ ತಿಳಿದು ಬಂದರೂ ,ಅನ್ಯೋನ್ಯವಾಗಿ ಇರುವ ದಂಪತಿ ಗಳನ್ನೂ ಕಂಡಿದ್ದೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ