ಕಾರ್ಮಿಕರ ಮಕ್ಕಳ ಸಂಕಟ ನೋಡಿ ಹುಟ್ಟಿತು :
1953ರಲ್ಲಿ ಪುತ್ತೂರಿನ ಎ ಸಿ ಕೋರ್ಟಿನಲ್ಲಿ ಬೆಂಚ್ ಕ್ಲಕ್ ಆಗಿದ್ದ ಬಪ್ಪನಾಡು ಲಕ್ಷ್ಮಿನಾರಾಯಣ ರಾವ್. ರಾಯರು ಕಚೇರಿಗೆ ಹೋಗುವ ದಾರಿಯಲ್ಲಿ ರಸ್ತೆಗೆ ಡಾಮರು ಹಾಕುವ ಕಾರ್ಮಿಕರ ಇಬ್ಬರು ಮಕ್ಕಳು ಜಲ್ಲಿ ಮೇಲೆ ಮಲಗಿರುವುದನ್ನು ಕಂಡು ಮರುಗಿದರು. ಕೊಯಮುತ್ತೂರು ಮೂಲದ ದಂಪತಿಯ ಮಕ್ಕಳನ್ನು ತಮ್ಮ ಮಕ್ಕಳಂತೆ ಸಾಕಿ ಸಲಹಿದ ಬಿ.ಎಲ್. ರಾಯರೇ ರಾಮಕೃಷ್ಣ ಸೇವಾ ಸಮಾಜದ ಸ್ಥಾಪಕರು. ಆಗಿನ ಹಿರಿಯ ನ್ಯಾಯವಾದಿ ಎಂ. ಸದಾಶಿವ ರಾಯರು ಬಿ.ಎಲ್. ರಾಯರ ಜೊತೆ ಸೇರಿ ಸಮಾಜಕ್ಕೆ ವಿಶಿಷ್ಟ ರೂಪು ನೀಡಿದರು. ಸದಾಶಿವ ರಾಯರು ಸ್ಥಾಪಕಾಧ್ಯಕ್ಷರಾಗಿ ಮತ್ತಷ್ಟು ಅನಾಥ ಮಕ್ಕಳನ್ನು ಸಾಕಿದರು. ಇಬ್ಬರೂ ಸೇರಿ ಅಕ್ಕಿ, ತರಕಾರಿ, ಬೇಳೆಕಾಳುಗಳನ್ನು ದಾನಿಗಳಿಂದ ಸಂಗ್ರಹಿಸಿ ಮೊದಲ ಹಂತದಲ್ಲಿ ಒಂಬತ್ತು ಮಕ್ಕಳನ್ನು ಸಾಕಿದರೆ, ಸಂಸ್ಥೆಗೆ ತಾಯಿಯ ರೂಪದಲ್ಲಿ ಬಂದವರು ಮಂಜಕ್ಕೆ ಎಂಬವರು. 1957ರಲ್ಲಿ ಬಿ.ಎಲ್. ರಾಯರು ಆಶ್ರಮದ ಮಕ್ಕಳನ್ನು ಕೊಯ್ಲಕ್ಕೆ ಪಿಕ್ನಿಕ್‌ಗೆ ಕರೆದುಕೊಂಡು ಹೋದಾಗ ನೀರಿನಲ್ಲಿ ಮುಳುಗಿ ಮೃತಪಟ್ಟರು.
55 ವರ್ಷಗಳ ಹಿಂದೆ ಉದಾತ್ತ ಆದರ್ಶಗಳನ್ನು ಇಟ್ಟುಕೊಂಡು ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹಾಗೂ ಅಗತ್ಯವಾಗಿದ್ದ ನಮ್ಮ ಒಟ್ಟು ಸಮಾಜದ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ಯೋಗ್ಯವಾದ ಮೌಲ್ಯಾಧಾರಿತ, ವಿದ್ಯಾಭ್ಯಾಸ, ಪೋಷಣೆ, ಆರೋಗ್ಯ ನೀಡಿ ಅವರನ್ನು ಯೋಗ್ಯ ಪ್ರಜೆಗಳನ್ನಾಗಿ ರೂಪಿಸಲು ಹಾಗೂ ನೆರವು ನೀಡಲು ಹುಟ್ಟಿಕೊಂಡ ಶ್ರೀ ರಾಮಕೃಷ್ಣ ಸೇವಾ ಸಮಾಜ’ ಮುಂದೆ ನಡೆದು ಬಂದಂತಹ ದಾರಿ ಸುಲಭದ್ದಾಗಿರಲಿಲ್ಲ. ಇದರ ಹಿಂದೆ ನೂರಾರು ಮಂದಿ ಸೇವಾ ಮನೋಭಾವದ ಹಿರಿಯರ ಶ್ರದ್ಧೆ, ನಿಷ್ಠೆ, ತ್ಯಾಗ ಮನೋಭಾವ ಇಲ್ಲಿ ತುಂಬಾ ಕೆಲಸ ಮಾಡಿದೆ. ಈ ಸಂಸ್ಥೆ ಸ್ಥಾಪಿಸಲು ಪ್ರಥಮದಲ್ಲಿ ತೊಡಗಿಸಿಕೊಂಡವರು ನಮ್ಮ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ದಿ| ಎಂ. ಸದಾಶಿವ ರಾವ್ ಹಾಗೂ ದಿ| ಬಿ.ಎಲ್.ರಾವ್ ಇವರ ಕನಸಿನ ಕೂಸು ನಮ್ಮ ಈ ಸಮಾಜ ಆಗಿರುತ್ತದೆ. ನಂತರ ಇವರೊಂದಿಗೆ ಕೈಜೋಡಿಸಿ ದುಡಿದವರಲ್ಲಿ ಈಗ ನಮ್ಮೊಂದಿಗೆ ಇಲ್ಲದ ದಿ|ಪಿ. ವಿಠ್ಠಲ್ ಪೈ ಮತ್ತು ದಿ| ಎಂ. ಮಾಧವ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಣಾರ್ಹ .ಆನಂದ ಆಶ್ರಮ ಸ್ಥಾಪಕಿ ಡಾ ಗೌರಿ ಪೈ ಈ ಸಂಸ್ಥೆಯಲ್ಲಿ ಕೂಡಾ ಕ್ರಿಯಾಶೀಲೆ . ಕೊಳತ್ತಾಯ ಅವರು ಇದನ್ನು ಉಲ್ಲೇಖ ಮಾಡಿ ಅವರ ಸೇವಾ ಮನೋಭಾವ ಮತ್ತು ಸಂಘಟನಾ ಚತುರತೆ ಕೊಂಡಾಡಿದರು.
ಸಮಾಜವು ಆರ್ಥಿಕವಾಗಿ ತೀರಾ ದುರ್ಬಲರು ಹಾಗೂ ತಂದೆ/ತಾಯಿ ಇಲ್ಲದ ಅನಾಥ ಮಕ್ಕಳನ್ನು ಪೋಷಿಸಿ ಅವರಿಗೆ ರಕ್ಷಣೆ, ವಿದ್ಯೆ, ಊಟ-ಉಪಚಾರ, ವಸತಿ, ಉಡುಗೆ-ತೊಡುಗೆ, ಔಷಧಿ ಇತ್ಯಾದಿಗಳನ್ನು ಉಚಿತವಾಗಿ ನೀಡಿ ಇಂತಹ ಮಕ್ಕಳನ್ನು ನಾಗರಿಕ ಸಮಾಜದ ಮುಖ್ಯವಾಹಿನಿಗೆ ಸೇರಿಸಿಕೊಳ್ಳುವಂತೆ ಹಾಗೂ ಮುಂದಕ್ಕೆ ಯೋಗ್ಯ ಪ್ರಜೆಗಳಾಗಿ ಬೆಳೆಯಲು ಅನುಕೂಲವಾಗುವಂತೆ ಅವರಿಗೆ ಎಲ್ಲಾ ವ್ಯವಸ್ಥೆಯನ್ನು ಈ ಸಮಾಜದಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡು ಇದರ ಜೊತೆಗೆ ಉದ್ಯೋಗಸ್ಥ ಮಹಿಳೆಯರಿಗೋಸ್ಕರ ಒಂದು ವಸತಿ ಗೃಹವನ್ನು ನಿರ್ಮಿಸಿ ಹಾಗೂ ನಮ್ಮ ಸಮಾಜದ ಇತರ ಪೂರಕ ಚಟುವಟಿಕೆಗಳನ್ನು ಕೈಗೊಂಡು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಇದಕ್ಕೆ ಪೂರಕವಾಗಿ ಈ ಕೆಳಗಿನ ಸಹಸಂಸ್ಥೆಗಳನ್ನು ನಾವು ನಡೆಸುತ್ತಾ ಬರುತ್ತಿದ್ದಾರೆ .
1. ಸ್ವಾಮಿ ವಿವೇಕಾನಂದ ಗ್ರಂಥಾಲಯ:
2. ಮಾ ಶಾರದಾಮಣಿ ಅನಾಥಾಲಯ :
3. ಮಂಜಕ್ಕ ನಿರ್ಗತಿಕ ಕುಠೀರ:
4. ಕಸ್ತೂರ್ಬಾ ಉದ್ಯೋಗಸ್ಥ ಮಹಿಳೆಯರ ವಸತಿಗೃಹ:
ಪುತ್ತೂರಿನ ಏಳಿಗೆಯಲ್ಲಿ ಪರವೂರಿನ ಗಣ್ಯರ ಪಾತ್ರ ಬಹಳ ಹಿರಿದು .ಮೊಳ ಹಳ್ಳಿ ಶಿವ ರಾವ್ , ಶಿವರಾಮ ಕಾರಂತ ,ಮಾಯಿರ್ಪಳ್ಳಿ ಸದಾಶಿವ ರಾವು ,ಮಾಯಿರ್ಪಳ್ಳಿ ಸುಂದರ ರಾವ್ ,ಬೈಂದೂರು ಪ್ರಭಾಕರ ರಾವ್ ಹೀಗೇ ಪಟ್ಟಿ ಮಾಡುತ್ತಲೇ ಹೋಗ ಬಹುದು .
ಕೃಶ ಕಾಯರಾದಸದಾಶಿವ ರಾಯರು ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಟ್ರೇಡ್ ಮಾರ್ಕ್ ಖಾದಿ ಶರಟು ಮತ್ತು ಧೋತಿ ಉಡುಗೆಯಲ್ಲಿ ಮನೆಯಿಂದ ಆಶ್ರಮ ಕ್ಕೆ ನಡೆದು ಹೋಗುವುದನ್ನು ದಶಕಗಳ ಹಿಂದೆ ನೋಡಿದ್ದೆ . ಮೇಲೆ ಉಲ್ಲೇಖಿಸಿದವರು ಪುತ್ತೂರಿನ ಪುಣ್ಯ ಪುರುಷರು .
ಹಿರಿಯರಾದ ಶ್ರೀ ಚೆಟ್ಟಿಯಾರ್ ,ಕೇಶವ ಭಟ್ ,ವಿದುಷಿ ನಯನ ರೈ ಶ್ರೀಮತಿ ಶಂಕರಿ ಶರ್ಮ ಇಲ್ಲಿ ಮಕ್ಕಳಿಗೆ ವಿದ್ಯಾದಾನ ಕೈಂಕರ್ಯ ಮಾಡುತ್ತಿದ್ದಾರೆ. ಇನ್ನೂ ಹಲವರ ಹೆಸರು ಉಲ್ಲೇಖವಾಯಿತು .
ವಿವೇಕಾನಂದ ರಾಮಕೃಷ್ಣ ರ ಆದರ್ಶದಲ್ಲಿ ಹುಟ್ಟಿದ ಸಂಸ್ಥೆ .ವಿವೇಕಾನಂದ ಅವರು ದರಿದ್ರ ದೇವೋ ಭವ (ಬಡವರಲ್ಲಿ ದೇವರ ಕಾಣು )ಎಂದು ಸಾರಿದವರು .ಇಲ್ಲಿ ನಡೆಯುತ್ತಿರುವುದು ಪ್ರತಿಫಲ ಮತ್ತು ಪ್ರಚಾರ ಅಪೇಕ್ಷೆ ಇಲ್ಲದ ದೇವಕಾರ್ಯ ಎಂದು ಕೊಂಡೆನು.ವಾರ್ಷಿಕೋತ್ಸವದಲ್ಲಿ ಪುಟಾಣಿಗಳ ಹಾಡು ಕುಣಿತ ,ನಟನೆ ನೋಡಿ ಮನಸು ಮುದವಾಯಿತು . ದೊಡ್ಡ ಕೂಡು ಕುಟುಂಬದ ಸಂತೋಷವನ್ನು ಅವರು ಅನುಭವಿಸುತ್ತಿರುವಂತೆ ಕಂಡು ಬಂತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ