ಬೆಂಬಲಿಗರು

ಶುಕ್ರವಾರ, ಜನವರಿ 7, 2022

ಪ್ರೀತಿಯ ಜಯತ್ತೆಗೆ ಶ್ರದ್ದಾಂಜಲಿ

                                               

ನಾನು ೧೯೮೭ ೯೦ ರಲ್ಲಿ ಪುತ್ತೂರಿನ ರೈಲ್ವೆ ಅರೋಗ್ಯ ಕೇಂದ್ರ ದಲ್ಲಿ ಕೆಲಸ ಮಾಡುತ್ತಿದ್ದೆ . ನಮ್ಮ ವಸತಿ ಗೃಹ ಹಾರಾಡಿಯಲ್ಲಿ  ಇತ್ತು . ನಮಗೆ ಅನೇಕ ಮಿತ್ರರು ಇದ್ದು ಜೀವನ ಸಂತೋಷ ದಾಯಕ  ಆಗಿತ್ತು . ನಮ್ಮ  ಮನೆಯ ಪಶ್ಚಿಮಕ್ಕೆ ಸ್ವಲ್ಪ ದೂರ ಒಳದಾರಿಯಲ್ಲಿ ಹೋದರೆ ಬಡೆಕ್ಕಿಲ ಡಾ ಶಂಕರ ಭಟ್ ಅವರ ಮನೆ . ಕಾಂಪೌಂಡ್ ಹೊಗ್ಗುವಲ್ಲಿ ಒಂದು ಫಲಭರಿತ ಮಾವಿನ ಮರ  . ಪೂರ್ವದಲ್ಲಿ ಅರ್ಧ ಕಿಲೋ ಮೀಟರ್ ಹೋದರೆ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಮೂಡಿತ್ತಾಯರ ಮನೆ . ಉತ್ತರಕ್ಕೆ ಅಷ್ಟೇ ದೂರದಲ್ಲಿ ಬಂಧುಗಳಾದ  ಮಹಾಲಿಂಗೇಶ್ವರ ಭಟ್ ಮತ್ತು ದುರ್ಗಾ ಮಣಿ  ಕುಟುಂಬ . ನಾವು ಅವರಲ್ಲಿ ಹೋಗುವುದು ಮತ್ತು ಅವರು ನಮ್ಮಲ್ಲಿ ಬರುವುದು . ಕಲರವ ,ಸಂತೋಷ . ಈಗ ಲೂ  ನೆನೆಸಿ ಮನಸು ಮುದ ಗೊಳ್ಳುತ್ತದೆ . 

               ನಮ್ಮ ಕಾಲೋನಿ ಗೆ ತಾಗಿ ಅತೀ ಸಮೀಪದಲ್ಲಿ ಇದ್ದುದು ಬಡೆಕ್ಕಿಲ ಶಂಕರ ಡಾಕ್ಟ್ರ ಮನೆ . ಅವರ ಪತ್ನಿ ಜಯಲಕ್ಷ್ಮಿ ಅಕ್ಕ  . ನಾವು ಜಯತ್ತೆ ಎಂದು ಕರೆಯುವುದು . ಅವರಿಗೆ ಏಳು  ಹೆಣ್ಣು ಮಕ್ಕಳು  ಸ್ವರ್ಣ ,ವಿದ್ಯಾ ,ರೇಖಾ ,ಶ್ಯಾಮಲಾ ,ಕಿರಣ ,ರಮ್ಯಾ ಮತ್ತು ಮಾಲಾ . ಎಲ್ಲಾ ಸಣ್ಣ ಸಣ್ಣವರು . ಕೆಲವರು ಬೋರ್ಡ್ ಹೈ ಸ್ಕೂಲ್ ಮತ್ತೆ ಸಣ್ಣವರು ಹಾರಾಡಿ ಶಾಲೆಗೆ . ಡಾ ಶಂಕರ ಭಟ್ ಪೊಲೀಸ್ ಸ್ಟೇಷನ್ ಬಳಿ ಕ್ಲಿನಿಕ್ ಹೊಂದಿದ್ದರು . ಬಹಳ  ಸಾಧು ಸ್ವಭಾವ ಮತ್ತು ಮಕ್ಕಳ ಮನಸ್ಸಿನವರು . ಜಯತ್ತೆ ಸ್ನೇಹ ಜೀವಿ  .   ಆಗಾಗ ಸಂಜೆ ಅವರ ಮನೆಯಲ್ಲಿ ನಮ್ಮ ಕೂಟ .ನಗು ಸಂತೋಷ . ನನ್ನ ವಿವಾಹ ಈ ಅವಧಿಯಲ್ಲಿಯೇ ನಡೆದು ,ಅವರ ಕುಟುಂಬ ನಮ್ಮ ಮನೆಯವರಂತೆಯೇ ಸಡಗರದಿಂದ ಪಾಲ್ಗೊಂಡಿದ್ದರು . ನನ್ನ ಮಗ ಹುಟ್ಟಿದ ಮೇಲೆ ಈ ಮಕ್ಕಳು ಮನೆಗೆ ಬಂದು ಅವನನ್ನು ಎತ್ತಿ ಆಡಿಸುವರು . 

 ಮುಂದೆ ನಾನು ವರ್ಗವಾಗಿ ಬೇರೆ ಕಡೆ ಹೋದ ವರ್ಷದಲ್ಲಿಯೇ  ಶಂಕರ ಡಾಕ್ಟ್ರು ತೀರಿ ಕೊಂಡ ವಾರ್ತೆ ಬಂತು .ಮಕ್ಕಳೆಲ್ಲರೂ ಬೇರೆ ಬೇರೆ ಹಂತದಲ್ಲಿ ಓದುತ್ತಿದ್ದ ಸಮಯ . ಜಯತ್ತೆ ದೃತಿ ಗೆಡದೆ ಎಲ್ಲರನ್ನೂ ವಿದ್ಯಾಭ್ಯಾಸ ಕೊಡಿಸಿ ,ಯೋಗ್ಯ ವರರನ್ನು ಹುಡುಕಿ ಮದುವೆ ಮಾಡಿಸಿ ಒಂದು ನೆಲೆಗೆ ತಂದದ್ದು ಒಂದು ಸಂತೋಷಕರ ಪವಾಡ . 

ನಮ್ಮ ಕುಟುಂಬ ಪುತ್ತೂರಿಗೆ ಪುನಃ  ಬಂದ ಮೇಲೆಯೂ ನಿರಂತರ ಸಂಪರ್ಕ ಇಟ್ಟು ಗೊಂಡಿದ್ದು ,ಅವರೂ  ಅವರ ಮಕ್ಕಳೂ  ಹಿಂದಿನ ಪ್ರೀತಿ ವಿಶ್ವಾಸ ಮುಂದುವರಿಸಿದ್ದಾರೆ . 

ನಿನ್ನೆಯಷ್ಟೇ  ಜಯತ್ತೆ ಹೃದಯಾಘಾತದಿಂದ ತೀರಿ ಕೊಂಡ ವಾರ್ತೆ ಬಂದಿದ್ದು ,ಹಳೆಯ ನೆನಪುಗಳು ಸರ ಮಾಲೆಯಾಗಿ  ಬರುತ್ತಿವೆ . ಇಂತಹ ಹಿತೈಷಿ ಗಳ ಸಂಗವೇ ನಮ್ಮ ಜೀವನದ ದೊಡ್ಡ ಸಂಪತ್ತು . 

ಜಯತ್ತೆಗೆ ಭಾವ ಪೂರ್ಣ ಶ್ರದ್ಧಾಂಜಲಿ 🙏🙏🙏🙏


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ