ಬೆಂಬಲಿಗರು

ಮಂಗಳವಾರ, ಜನವರಿ 18, 2022

ಬೊಂಬೆಯಾಟವಯ್ಯ

                      ಬೊಂಬೆಯಾಟವಯ್ಯ 

ಕಳೆದ ಎರಡು ದಿನ ತಾಯಂದಿರ ಬೆಳವಣಿಗೆ ಬಗ್ಗೆ ಬರೆದಿದ್ದೆ . ನೀವು ಗಮನಿಸ ಬೇಕಾದ ಅಂಶ ಎಂದರೆ ಮುಟ್ಟು ನಿಲ್ಲುವ ವರೆಗೆ ಸ್ತ್ರೀಯರ ಶರೀರದಲ್ಲಿ ಪುರುಷರಿಗಿಂತ ಅಧಿಕ ಹಾರ್ಮೋನ್ ಗಳು ಕ್ರಿಯಾ ಶೀಲ ವಾಗಿರುತ್ತವಲ್ಲದೆ ,ತಿಂಗಳ ಆದ್ಯಂತ ಒಂದೇ ತರಹ ಇಲ್ಲದೆ  ಒಂದು ನಿರ್ಧಾರಿತ ಗತಿಯಲ್ಲಿ ಲಯ ಬದ್ಧ ವಾಗಿ ಬದಲಾಗುತ್ತಾ ಇರುತ್ತವೆ . ಒಂದು ಹೆಣ್ಣಿನ ಒಟ್ಟಾರೆ ನಡವಳಿಕೆ ಪರಿಸರ ಮತ್ತು ಈ ಚೋದಕಗಳ ಪ್ರಭಾವದಲ್ಲಿ ನಡೆಯುತ್ತಲಿರುತ್ತವೆ . ಇವು ವ್ಯಕ್ತಿಯ ಮನಸ್ಥಿತಿ (Mood )ಯ ಮೇಲೂ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಪರಿಣಾಮ ಬೀರುತ್ತದೆ . ಹೆಣ್ಣು ಚಂಚಲೆ ಇತ್ಯಾದಿ ಕರೆಯಲ್ಪಡುವುದಕ್ಕೆ ಇದೂ ಒಂದು ಕಾರಣ . ದೇಹದ ನಾರ್ಮಲ್ ಉಷ್ಣಾಂಶ ಕೂಡಾ ಒಂದೇ ತರಹ ಇರದೇ ಋತು ಮಧ್ಯದಲ್ಲಿ ಅಧಿಕ ಇರುತ್ತದೆ . 

ಮುಟ್ಟು ನಿಂತ ಮೇಲೆ ಈ  ಸ್ತ್ರೀ ಹಾರ್ಮೋನ್ ಗಳು  ಕಡಿಮೆಯಾದಾಗ ಅವುಗಳ ಒಳ್ಳೆಯ ಪರಿಣಾಮಗಳು ಕಡಿಮೆಯಾಗಿ ದುಷ್ಪರಿಣಾಮ ಗಳು ಮಾತ್ರ ತೊಂದರೆ ಕೊಡುತ್ತವೆ . ಮನಸಿನಲ್ಲಿ ಕಿರಿ ಕಿರಿ ,ನಿದ್ರಾಹೀನತೆ ,ಖಿನ್ನತೆ ಇತ್ಯಾದಿ . ಈ ಪರಿಸ್ಥಿತಿ ಗಂಡಂದಿರಿಗೆ ಕೆಲವೊಮ್ಮೆ ಅರ್ಥವಾಗುವುದಿಲ್ಲ . ಇವಳು ಯಾಕೆ ವಯಸ್ಸಾದ ನನ್ನನ್ನು ಕ್ಯಾರೇ ಮಾಡುವುದಿಲ್ಲ ?ಯಾವಾಗ ನೋಡಿದರೂ ತಪ್ಪೇ ಕಂಡು ಹಿಡಿಯುವಳು ?ಎಂದು ಅವರು ತಿಳಿಯುವರು . ಗಂಡಸರಲ್ಲೂ ಆಂಡ್ರೋ ಪಾಸ್ (Andropause )ಎಂದು ಇದೆ. ಆದರೂ ಹೆಂಗಸರ ಮೆನೋಪಾಸ್ ನಷ್ಟು ಗಮನಾರ್ಹ ಬದಲಾವಣೆ ಇರುವುದಿಲ್ಲ . 

ಮನಷ್ಯರು ರೂಪ ದರ್ಶಿ ಗಳಲ್ಲಿ ಕಾಣುವಂತೆ ಬೊಂಬೆಗಳಲ್ಲ . ಹಲವು ರಾಸಾಯನಿಕಗಳು ,  ಜೀನ್ ಗಳಲ್ಲಿ ಬಂದ ವಂಶಪಾರಂಪರ್ಯ ಗುಣಗಳು ಮತ್ತು ಪರಿಸರ ಇವುಗಳೆಲ್ಲಾ ಸೇರಿ ಆಡಿಸುವ ಗೊಂಬೆಯಾಟ . 

ಪುರುಷರಲ್ಲಿ ಸ್ತ್ರೀ ಪ್ರಧಾನ ಹಾರ್ಮೋನ್ ಗಳು ಮತ್ತು ಸ್ತ್ರೀಯರಲ್ಲಿ ಪುರುಷ ಹಾರ್ಮೋನ್ ಗಳು ಸಣ್ಣ ಪ್ರಮಾಣದಲ್ಲಿ ಉತ್ಪತ್ತಿ ಆಗುತ್ತವೆ ;ಅದರಿಂದ ಎಲ್ಲರೂ ನಾರೀಶ್ವರರೆ .

ಇವುಗಳಿಂದ ಆಗುವ ಸಾಮರಸ್ಯದ ಕೊರತೆಗೆ  ಅವಿವಾಹಿತ ಜ್ಞಾನಿಗಳ ಪ್ರವಚನಗಳು ಸಹಾಯಕಾರಿ ಆಗುವದು ಕಡಿಮೆ . ಅನುಭವಿಸಿದ ಮತ್ತು ವೈಜ್ಞಾನಿಕ ವಾಗಿ  ವಿಶ್ಲೇಸಿ ಸುವವರ ಮಾತು ಕೇಳ ಬಹುದು . 

ಬಾಲಂಗೋಚಿ : ವಯಸ್ಸಾದ ಮೇಲೆ ಹೆಂಡತಿ ಗಂಡನ ಯಾವುದೋ ತಪ್ಪು(ತಪ್ಪು ಇರಬಹುದು ಇಲ್ಲದೆ ಇರಬಹುದು ;ಇದ್ದರೂ ಸಣ್ಣ ತಪ್ಪು ಇರ ಬಹುದು )ಎತ್ತಿ ಹಿಡಿದು  ಟೀಕಿಸಿದಾಗ ಅಥವಾ ಜಗಳ ಕೆರೆದು ಬಂದರೆ ಟಾಪಿಕ್ ಬದಲಿಸಿ ಶಾಂತಿ ಸ್ಥಾಪಿಸಲು ಹೊರಟರೆ ಅವರಿಗೆ ಸಿಟ್ಟು ಇನ್ನೂ ಏರಬಹುದು . ನೀವು ವಿಷಯ ಬದಲಿಸುವದು ಬೇಡ ಎಂದು ಅವರು ತಮ್ಮ ತಯಾರು ಮಾಡಿದ ವಾದ ಮುಂದುವರಿಸುವಾಗ ಸ್ವಲ್ಪ ಪ್ರತಿರೋಧ ತೋರಿಸಿರಿ .ಸುಮ್ಮನಿದ್ದರೂ ,ಸಾರಾಸಗಟು ತಿರಸ್ಕರಿಸಿದರೂ ಬೈಗಳು ತಪ್ಪಿದ್ದಲ್ಲ . ವಯಸ್ಸಾದ ಮೇಲೆ' ಗಂಡ ಹೆಂಡಿರ ಜಗಳ ಮಲಗಿ(ನಿದ್ದೆಮಾಡಿ)ಏಳುವತನಕ.'

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ