ಬೆಂಬಲಿಗರು

ಬುಧವಾರ, ಜನವರಿ 19, 2022

ಪಿಟ್ಯೂಟರಿ ಗ್ರಂಥಿ

ನಾವು ನಮಗೆಲ್ಲಾ ಮೇಲಿನವ ಒಬ್ಬ ಇದ್ದಾನೆ ,ಅವನೆಲ್ಲಾ ನೋಡಿಕೊಳ್ಳುವನು ಎಂದು ಹೇಳುತ್ತೇವೆ . ನಮ್ಮ ಶರೀರ ಕ್ರಿಯೆಗಳನ್ನು ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪಾದಿಸುವ ಗ್ರಂಥಿಗಳನ್ನು ಬೇಕಾದಾಗ ಪ್ರಚೋದಿಸುವ ಮತ್ತು ಸಾಕೆಂದಾದ ಕುಗ್ಗಿಸುವ ಮೇಲಿನವ ಒಬ್ಬ ಪಿಟ್ಯೂಟರಿ ಗ್ರಂಥಿ . ಇದು ತಲೆ ಬುರುಡೆಯ ಒಳಗೆ ಮೆದುಳಿನ ಕೆಳಭಾಗದಲ್ಲಿ ಇದೆ . ಇದೂ ಕೂಡಾ ಮೆದುಳಿನ ಒಂದು ಮುಖ್ಯ ಭಾಗವಾದ ಹೈಪೋತಲಾಮಸ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದು ಅದರ ಪ್ರಭಾವದಲ್ಲಿ  ಕಾರ್ಯ ನಿರ್ವಹಿಸುವುದು .

 


ಪಿಟ್ಯೂಟರಿ ಗ್ರಂಥಿ ಯಲ್ಲಿ ಮುಂದಿನ ಮತ್ತು ಹಿಂದಿನ ಭಾಗ ಎಂದು ಇದೆ .ಮುಂದಿನ ಬೆಳವಣಿಗೆ ಚೋದಕ (Growth hormone) ಎಂಬ ಸ್ವತಂತ್ರ ಹಾರ್ಮೋನ್ ಉತ್ಪತ್ತಿ ಮಾಡುವುದು .ಇದು ನಖ ಶಿಖಾಂತ ಎಲ್ಲಾ ಜೀವ ಕೋಶಗಳ ಬೆಳವಣಿಗೆ ಗೆ ಅತ್ಯಾವಶ್ಯ. ಬಾಲ್ಯದಲ್ಲಿಯೇ ಇದರ ಕೊರತೆ ಇದ್ದರೆ ಕುಬ್ಜ ರಾಗುವರು.ಇನ್ನು ಸ್ತ್ರೀಯರಲ್ಲಿ ಮೊಲೆಹಾಲು ಅಭಿವೃದ್ದಿ ಪಡಿಸುವ ಪ್ರೊ ಲ್ಯಾಕ್ಟಿನ್ ಕೂಡಾ ಇಲ್ಲಿಯೇ ತಯಾರಾಗುವುದು  .ಇದಲ್ಲದೆ ಥೈರೋಯಿಡ್ ,ಅಡ್ರೆನಲ್ ಮತ್ತು ಅಂಡಾಶಯ ,ವೃಷಣಗಳ ಹಾರ್ಮೋನ್ ಉತ್ಪಾದನೆಗೂ ಸಂದೇಶ ವಾಹಕ ಹಾರ್ಮೋನ್ ಕೂಡಾ  . ಥೈರೋಯಿಡ್ ಟೆಸ್ಟ್ ನಲ್ಲಿ   ಟಿ ಎಸ್ ಎಚ್ ಎಂದು ಇದೆ .ಎಂದರೆ ಥೈರೋಯಿಡ್ ಸ್ಟಿಮ್ಯುಲೆಟಿಂಗ್ ಹಾರ್ಮೋನ್ .ಇದು ಪಿಟ್ಯೂಟರಿ ಗ್ರಂಥಿ ಉತ್ಪಾದಿಸುವ ವಸ್ತು .ಇದು ಬಡಿದೆಬ್ಬಿಸಿದರೆ ಮಾತ್ರ ಥೈರೋಯಿಡ್ ಗ್ರಂಥಿ ಕೆಲಸ ಮಾಡುವುದು .ಥೈರೋಯಿಡ್ ಗ್ರಂಥಿಯ ಕಾಯಿಲೆಯಿಂದ ಕಾರ್ಯ ವಿಮುಖವಾದರೆ ಟಿ ಎಸ್ ಎಚ್ ಅಧಿಕ ಆಗುವುದು . ಕೆಲವೊಮ್ಮೆ ಅಪರೂಪಕ್ಕೆ ಪಿಟ್ಯೂಟರಿ ಯಲ್ಲಿಯೇ  ಕಾಯಿಲೆ ಇದ್ದರೆ ಟಿ ಎಸ್ ಎಚ್ ಕಡಿಮೆ ಇರುವುದು ,ಜತೆಗೆ ಟಿ 3 ಮತ್ತು ಟಿ 4 ಎಂಬ ಥೈರೋಯಿಡ್ ಹಾರ್ಮೋನ್ ಗಳೂ . ಪಿಟ್ಯೂಟರಿ ಕಾರ್ಯ ವಿಮುಖವಾದರೆ  ಅಡ್ರಿನಲ್ ಮತ್ತು  ವೃಷಣ ,ಅಂಡಾಶಯ ಗಳಲ್ಲಿ ಇರುವ ಗ್ರಂಥಿ ಗಳೂ ಕೆಲಸ ಮಾಡವು .

ಹಿಂದಿನ ಪಿಟ್ಯೂಟರಿ ಯಿಂದ  ಒಕ್ಸಿಟೋಸಿನ್ ಮತ್ತು ವಾಸೋಪ್ರೆಸೀನ್ ಎಂಬ ಎರಡು ಮುಖ್ಯ ಹಾರ್ಮೋನ್ ಗಳು ಉತ್ಪತ್ತಿ ಆಗುತ್ತವೆ . ಮೊದಲನೆಯದು ಹೆರಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ,ಅಲ್ಲದೆ ಮೋಹ ,ಬಾಂಧವ್ಯ ಇತ್ಯಾದಿ ತನ್ಮೂಲಕ ಸಂತತಿ ಬೆಳೆಸಿ ಕಾಪಿಡುವಂತೆ ಮಾಡಿದರೆ ,ಎರಡನೆಯದು ರಕ್ತದಲ್ಲಿ ನೀರು ಮತ್ತು ಉಪ್ಪಿನ ಸಮತೋಲ ಕಾಪಾಡುವುದು .

ಉಳಿದ ಗ್ರಂಥಿಗಳ ಕಾರ್ಯ ವೈಫಲ್ಯಕ್ಕೆ ಅವು ಉತ್ಪಾದಿಸುವ ಹಾರ್ಮೋನ್ ಗಳನ್ನು ಹೊರಗಿನಿಂದ ಕೊಟ್ಟರೆ ಸಾಕು .ಆದರೆ ಮುಖ್ಯಸ್ಥನಾದ ಪಿಟ್ಯುಟರಿ ಶಕ್ತಿ  ಹೀನ ನಾದರೆ  ಅವನ ಕೃಪಾ ಕಟಾಕ್ಷದಲ್ಲಿ ಇರುವ ಥೈರಾಯಿಡ್ ,ಅಡ್ರಿನಲ್ ,ಲೈಂಗಿಕ ಚೋದಕಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಕೊಡ ಬೇಕಾಗುವುದು .

ರಕ್ತದ ಸಕ್ಕರೆ ಪ್ರಮಾಣ ನಿಯಮಿತ ಗೊಳಿಸುವ ಇನ್ಸುಲಿನ್(ಮೇದೋಜೀರಕ ಗ್ರಂಥಿ )ಮತ್ತು ಅಡ್ರಿನಲ್ ಗ್ರಂಥಿ ಯಿಂದ ಉತ್ಪತ್ತಿ ಆಗುವ ಲವಣ ನಿಯಂತ್ರಕ ದಂತಹ ಕೆಲವು ಪಿಟ್ಯುಟರಿ ಯ ನಿಯಂತ್ರಣದಲ್ಲಿ ಇಲ್ಲ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ