ಬೆಂಬಲಿಗರು

ಗುರುವಾರ, ಜನವರಿ 13, 2022

ಒಂದು ಚಿಂತನೆ

 

ಹಿಂದೆ ಆಸ್ಪತ್ರೆ ಅಥವಾ ಮನೆಯಲ್ಲಿ ಹಿರಿಯರು ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗಿ ಪ್ರಜ್ಞೆ ಇಲ್ಲದೆ ಮಲಗಿದ್ದರೆ ಅವರನ್ನು ಉಪಚರಿಸಲು ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ತಾ ಮುಂದು ತಾ ಮುಂದು ಎಂದು ಹೋಗುತ್ತಿದ್ದರು . ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಕೆಲವೊಮ್ಮೆ ಎರಡು ಕಣ್ಣುಗಳೂ ಒಂದೇ ದಿಕ್ಕಿಗೆ ಹೊರಳಿರುತ್ತವೆ . ತಾತ ನನ್ನನ್ನೇ ನೋಡುತ್ತಿದ್ದರು ಎಂದು ಆ ಕಡೆ ಇರುವವರು ಹೇಳಿದರೆ ನನ್ನನ್ನು ನೋಡಿ ದುಖಃ ತಡೆಯಲಾರದೆ ಆ ಕಡೆ ನೋಡಿದರು ಇನ್ನೊಂದು ಕಡೆ ಇರುವವರು ಹೇಳುವರು . ರೋಗಿಗೆ ಇದರ ಪರಿವು ಇರುವುದಿಲ್ಲ . ಇನ್ನು ಇನ್ನು ಕೆಲವು ಮೆದುಳಿನ ರಕ್ತ ಸಂಚಾರ ತೊಂದರೆಯಲ್ಲಿ (ಉದಾ ಸೂಡೋ ಬಲ್ಬಾರ್ ಪಾಲ್ಸಿ )ರೋಗಿಯು ಪ್ರಜ್ಞೆಯಲ್ಲಿ ಇದ್ದರೂ ಅನೈಚ್ಚಿಕ ವಾಗಿ ಆಳುವರು ಅಥವಾ ನಗುವರು .ಪಕ್ಕದಲ್ಲಿ ಇರುವವರು ಅದನ್ನು ತಮ್ಮ ಭಾವಕ್ಕೆ ಸರಿಯಾಗಿ ವಿಶ್ಲೇಸಿಸುವರು . ಮೊಮ್ಮಗನನ್ನು ನೋಡಿ ಅತ್ತರು ಅಥವಾ ನಕ್ಕರು ಇತ್ಯಾದಿ . ಇನ್ನು ಕೆಲವು ರೋಗದಲ್ಲಿ ಕೈ ಯ  ಚಲನೆ ಉಂಟಾಗುವದು .ನನ್ನ ಅಪ್ಪ ಕೆಳಗಿನ ತೋಟ ನಾನೇ ನೋಡಿಕೊಳ್ಳಲಿ  ಎಂದು ಕೈ ಭಾಷೆ ಮಾಡಿದರು ಎಂದು ಪಕ್ಕದಲ್ಲಿ ಇರುವ ಮಗ ಹೇಳಿಕೊಳ್ಳುವನು . 

ಈಗ ಇಂತಹ ಅರ್ಥೈಸಿ ಕೊಳ್ಳುವ ಸನ್ನಿವೇಶಗಳು ಬಹಳ ಕಡಿಮೆ .ಹಿರಿಯರು ಹಾಸಿಗೆ ಹಿಡಿದರೆ ಎಲ್ಲರಿಗೂ ತೊಂದರೆ .ಪಕ್ಕದಲ್ಲಿ ಯಾರೂ ಇರರು . ದೊಡ್ಡ ಪೆನ್ಷನ್ ಏನಾದರೂ ಬರುತ್ತಿದ್ದರೆ ಸ್ವಲ್ಪ ಉಪಚಾರ ಸಿಕ್ಕೀತು . ನಾನು ಹಿಂದೆ ಬರೆದಂತೆ ನಮ್ಮೊಳಗೆ ಇರುವ ಹಾರ್ಮೋನ್ ಗಳು ಉದಾ ಆಕ್ಸಿಟೋಸಿನ್ ರಕ್ತ ಬಂಧ ಮೋಹ ಉಂಟು ಮಾಡುವವು . ಅಕಾಲದಲ್ಲಿ ಈಸ್ಟ್ರೋಜೆನ್ ,ಟೆಸ್ಟೊ ಸ್ಟೆರೊನ್ ಗಳು  ಕಡಿಮೆ ಆಗುವಂತೆ ಇವೂ ಕಡಿಮೆಯಾಗುತ್ತಿವೆಯೋ ಏನೋ ?ಯಾವುದೇ ಆರ್ಥಿಕ ಲಾಭವಿಲ್ಲದೆ ಯಾರನ್ನೂ ಹಚ್ಚಿಕೊಳ್ಳುವ ಪದ್ಧತಿ ಈಗ ಇಲ್ಲ .ಮನೆಗಳಲ್ಲಿ ಹಿಂದಿನಂತೆ ಸಹಾಯಕ್ಕೆ ಜನರೂ ಕಡಿಮೆ .ಈಗ ಚಲನೆ ಖಾಯಂ ಆಗಿ ಯಾವಾಗ ನಿಲ್ಲುವುದೋ ಎಂದು ಕಾಯುತ್ತಿರುವವರೇ ಹೆಚ್ಚು .


ಹಿಂದೊಮ್ಮೆ ಬರೆದಂತೆ ನನ್ನ ಸಹೋದ್ಯೋಗಿ ತಮಾಷೆಗಾಗಿ ಹೇಳಿದ ಮಾತು ನೆನಪಾಗುತ್ತದೆ . "ನಮ್ಮ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ರೋಗಿ ಬದುಕಿ ಉಳಿದರು "ಎಂದು ಸಂಬಂಧಿಕರನ್ನು ಸಂತಯಿಸ ಬೇಕಾಗುತ್ತದೆ .. 

 ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
ನಿತ್ಯ ದಾನವ ಮಾಡಿ ಫಲವೇನು                       || ಪ ||

ಸತ್ಯ ಸದಾಚಾರ ಇಲ್ಲದವನು
ಜಪ ಹತ್ತುಸಾವಿರ ಮಾಡಿ ಫಲವೇನು                || ಅ.ಪ ||

ತನ್ನ ಸತಿ ಸುತರು ಬಂಧುಗಳ ನೋಯಿಸಿ
ಚಿನ್ನ ದಾನವ ಮಾಡಿ ಫಲವೇನು
ಬಿನ್ನಾಣದಿಂದಲಿ ದೇಶ ದೇಶವ ತಿರುಗಿ
ಅನ್ನ ದಾನವ ಮಾಡಿ ಫಲವೇನು                      || ೧

ತುಂಡು ಧನದಿಂದ ತಂದೆ ಮಾತು ಕೇಳದ
ತೊಂಡ ಮಗನು ಇದ್ದು ಫಲವೇನು
ಭಂಡು ಮಾಡಿ ಅತ್ತೆ ಮಾವನ ಬೈವ
ಪುಂಡು ಸೋಸೆಯಿದ್ದು ಫಲವೇನು                  || ೨ ||

ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿ ನೀರು
ಕಾನನ ದೊಳಗಿದ್ದು ಫಲವೇನು
ಆನಂದ ಮೂರುತಿ ಪುರಂದರ ವಿಠ್ಠಲನ್ನ
ನೆನೆಯದ ತನುವಿದ್ದು ಫಲವೇನು                     || ೩
||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ