ಬೆಂಬಲಿಗರು

ಭಾನುವಾರ, ಜನವರಿ 16, 2022

ಮುಟ್ಟು ನಿಲ್ಲುವುದು

                Menopause Symptoms and Perimenopause Symptoms | Everyday Health

ನನ್ನ ಅಜ್ಜ ಮಹಾಭಾರತದ ಒಂದು ಕತೆ ಹೇಳುತ್ತಿದ್ದರು. ಮಹಾಭಾರತ ಯುದ್ಧ ಕೊನೆ ಗೊಂಡು ರಥಾವರೋಹಣ ಮಾಡುವಾಗ ಶ್ರೀಕೃಷ್ಣ ಅರ್ಜುನಿಗೆ ಮೊದಲು ಇಳಿಯುವಂತೆ ಹೇಳುತ್ತಾನೆ . ಅದರಂತೆ ಮೊದಲು ಅರ್ಜುನ ,ಆಮೇಲೆ ಶ್ರೀಕೃಷ್ಣ ಮತ್ತು ರಥದ ಧ್ವಜದಲ್ಲಿ  ಇರುವ ಮಾರುತಿ . ಕೃಷ್ಣ ಮತ್ತು ಮಾರುತಿ  ಇಳಿದ ಕೂಡಲೇ ರಥ ಉರಿದು ಭಸ್ಮ ವಾಯಿತು . ಅರ್ಜುನನಿಗೆ ಆಶ್ಚರ್ಯ . ಕೃಷ್ಣ ನನ್ನು ಕೇಳಲು ,ಭೀಷ್ಮ ,ದ್ರೋಣ ,ಕರ್ಣರ ಬಾಣಗಳ ಪ್ರಭಾವದಿಂದ ಎಂದೋ ಉರಿದು ಹೋಗ ಬೇಕಿತ್ತು ,ಮಾರುತಿ ಮತ್ತು ನನ್ನ ಉಪಸ್ಥಿತಿ ಯಿಂದ ಹಾಗೆ ಆಗಲಿಲ್ಲ ಎಂದನಂತೆ . ಜಯದ  ಹೆಮ್ಮೆಯಿಂದ ಬೀಗುತ್ತಿದ್ದ ಅರ್ಜುನ ನಿಗೆ  ತನ್ನ ಶಕ್ತಿಯ ಮೂಲದ ಜ್ಞಾನೋದಯ ಆಯಿತು . 

        ಕ್ಷಮಯಾ ಧರಿತ್ರಿ ಎಂದು ಸ್ತ್ರೀ ಯನ್ನು ಹೇಳುವರು . ಈ ಕ್ಷಮೆ ಮತ್ತು ಇನ್ನಿತರ ಕೆಲವು ಪ್ರತ್ಯೇಕ ಶಕ್ತಿಗಳಿಗೆ ಶ್ರೀಕೃಷ್ಣ ನಂತೆ  ಇರುವ ಇಸ್ಟ್ರೋಜನ್ ಮತ್ತು ಒಕ್ಸಿಟೋಸಿನ್ ಹಾರ್ಮೋನ್ . 

ಋತು ಚಕ್ರ ನಿಲ್ಲುವುದಕ್ಕೆ  ಮೆನೋಪಾಸ್ ಎನ್ನುವರು . ಹನ್ನೆರಡು ತಿಂಗಳು ಮುಟ್ಟಾಗದೇ ಇದ್ದ ಹಿರಿಯ ಮಹಿಳೆ ಈ ಹಂತಕ್ಕೆ ಬಂದಿದ್ದಾರೆ ಎಂದು ತಿಳಿಯ ಬಹುದು . ಹೆಚ್ಚು ಮಕ್ಕಳ ಹೆತ್ತು ,ಮೊಲೆ  ಹಾಲು ಉಣಿಸಿದವರಲ್ಲಿ ಅಕಾಲದಲ್ಲಿ ಇದು ಆಗುವುದು ಕಡಿಮೆ . ಮೈ ಬಿಸಿ ಬಿಸಿ ಆಗುವುದು ,ಬೆವರುವುದು ,ಸಣ್ಣ ಸಣ್ಣ ವಿಷಯಕ್ಕೂ ಕಿರಿ ಕಿರಿ ಆಗುವುದು ,ನಿದ್ರಾಹೀನತೆ ,ಖಿನ್ನತೆ ,ಮೂಳೆಗಳ ಸಾಂದ್ರತೆ ಕಡಿಮೆ ಆಗುವದು ಮತ್ತು ಹೃದ್ರೋಗದಿಂದ (ಗಂಡಸರಿಗೆ ಇಲ್ಲದ )ಮೀಸಲಾತಿ ಕೊನೆ ಗೊಳ್ಳುವುದು . ಗರ್ಭ ಕೋಶ (ಫೈಬ್ರಾಯ್ಡ್ ಗಡ್ಡೆಯೂ ಸೇರಿ )ಕುಗ್ಗುವದು ,ಜನನಾಂಗ ಮತ್ತು  ಸುತ್ತಲಿನ ಮಾಂಸ ಖಂಡಗಳು ಶಿಥಿಲ ವಾಗುವವು . ಇವಕ್ಕೆಲ್ಲಾ ಮುಖ್ಯ ಕಾರಣ ಇಸ್ಟ್ರೋಜನ್ ಹಾರ್ಮೋನ್ ಕೊರತೆ .

 ಹಿಂದೆ ಇದು ಇರಲಿಲ್ಲವೇ ?ಇತ್ತು ಈಗಿನಷ್ಟು ಬೇಗ ಬರುತ್ತಿರಲಿಲ್ಲ . ಹಿರಿಯರಿಗೆ ಕುಟುಂಬದಲ್ಲಿ ಗೌರವ ಸ್ಥಾನ ಇದ್ದು ,ಮನೆ ತುಂಬಾ ಮಕ್ಕಳು ಮರಿ ಮಕ್ಕಳು ಇದ್ದು ಅವರ ಏಳಿಗೆ ,ಚುಟುವಟಿಕೆ ,ಆಟ ಪಾಟ ಇತ್ಯಾದಿಗಳ ಗೌಜಿಯಲ್ಲಿ ಅದು ಗೌಣವಾಗಿ ಹೋಗುತ್ತಿರಬೇಕು . 

 ಮೇಲೆ ಹೇಳಿದ ಲಕ್ಷಣಗಳು ಮುಟ್ಟು ನಿಲ್ಲುವುದಕ್ಕೆ ಕೆಲವು ವರ್ಷಗಳು ಮೊದಲೇ ಕಾಣಿಸಿಕೊಂಡು ,ನಂತರ ಕೂಡಾ ಹಲವು ವರ್ಷಗಳ ಕಾಲ ತೊಂದರೆ ಕೊಡುವುದು . ಅಂಡಾಶಯ ಕಾಲ  ಕ್ರಮೇಣ ಕುಗ್ಗಿ  ಕ್ರಿಯಾ ಹೀನವಾಗುವುದು  . ಆದರೆ  ಶ್ರೀಕೃಷ್ಣ ರಥದಿಂದ ಇಳಿದ ಕೂಡಲೇ ಆದ ಹಾಗೆ ಇಲ್ಲಿ ಆಗದು .ಯಾಕೆಂದರೆ  ಇಸ್ಟ್ರೋಜನ್ ಹಾರ್ಮೋನ್ ಸಣ್ಣ ಪ್ರಮಾಣದಲ್ಲಿ  ಅಡ್ರಿನಲ್ ಗ್ರಂಥಿ ,ಲಿವರ್ ,ಚರ್ಮ ಮತ್ತು ಅದರ ಅಡಿಯ ಕೊಬ್ಬಿನಲ್ಲಿ ಉತ್ಪತ್ತಿ ಆಗುತ್ತಿರುವುದು . ಇದರಿಂದ ಮುಟ್ಟು ನಿಂತ ಮೇಲೂ ಮಹಿಳೆ  ಸ್ತ್ರೀತ್ವ ಕಾಯ್ದು ಕೊಳ್ಳುವಳು .

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ